ಇಡೀ ವಿಶ್ವ ಎಲ್ಲಿ ವೈರಸ್ಸು ತಗುಲಿಕೊಳ್ಳುತ್ತೋ ಅನ್ನೋ ಭಯದಲ್ಲಿ ಬೆಚ್ಚಿಬಿದ್ದಿದೆ. ಆದರೆ ಡಿ ಬಾಸ್ ಅಭಿಮಾನಿಗಳು ಮಾತ್ರ ನೆಚ್ಚಿನ ನಟನ ಹಾಡನ್ನು ವೈರಲ್ ಮಾಡಿದ್ದಾರೆ. ಬಹದ್ದೂರ್ ಚೇತನ್ ಕುಮಾರ್ ಬರೆದಿರುವ, ಅರ್ಜುನ್ ಜನ್ಯ ಸಂಗೀತ ನಿರ್ದೇಶನದಲ್ಲಿ ಬಂದಿರುವ ‘ರಾಬರ್ಟ್’ ಚಿತ್ರದ ದೋಸ್ತಾ ಕಣೋ ಹಾಡನ್ನು ದಿನದೊಪ್ಪತ್ತಿನಲ್ಲಿ ಮೂರು ಮಿಲಿಯನ್ನಿಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ.
ಈಗಾಗಲೇ ಬಿಡುಗಡೆಯಾಗಿರುವ ರಾಬರ್ಟ್ ಚಿತ್ರದ ಬಾಬಾಬಾಬಾ ನಾ ರೆಡೀ ಮತ್ತು ಜೈ ಶ್ರೀರಾಮ ಹಾಡುಗಳು ಹಿಟ್ ಆಗಿವೆ. ಆ ಎರಡೂ ಹಾಡುಗಳನ್ನು ಕವಿರತ್ನ ಡಾ. ವಿ. ನಾಗೇಂದ್ರ ಪ್ರಸಾದ್ ರಚಿಸಿದ್ದರು. ಈಗ ಚೇತನ್ ಕುಮಾರ್ ಬರೆದಿರುವ, ಹೇಮಂತ್ ಮತ್ತು ವಿಜಯ್ ಪ್ರಕಾಶ್ ಹಾಡಿರುವ ಹಾಡು ಕೂಡಾ ಜನರನ್ನು ಸೆಳೆದಿದೆ.
ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಸಿನಿಮಾ ಕನ್ನಡದ ಬಹುನಿರೀಕ್ಷಿತ ಸಿನಿಮಾವಾಗಿದೆ. ಪ್ಲಾನಿನ ಪ್ರಕಾರವೇ ಆದರೆ ಏಪ್ರಿಲ್ ೯ನೇ ತಾರೀಖಿನಂದು ತೆರೆಗೆ ಬರಬಹುದು. ಸದ್ಯ ಕರೋನಾ ಮಾರಿ ಎಲ್ಲೆಡೆ ಆವರಿಸಿ ಥೇಟರು, ಮಾಲುಗಳೆಲ್ಲಾ ಬಂದ್ ಆಗಿವೆ. ೯ರ ಒಳಗೆ ಎಲ್ಲವೂ ತಿಳಿಯಾದರೆ ರಾಬರ್ಟ್ ಥೇಟರಿಗೆ ಬರಲಿದೆ. ಇಲ್ಲದಿದ್ದಲ್ಲಿ ಸಹಜವಾಗಿಯೇ ಬಿಡುಗಡೆ ಮುಂದಕ್ಕೆ ಹೋಗಲಿದೆ. ಚಿತ್ರಮಂದಿರಗಳು ತೆರೆಯುತ್ತಿದ್ದಂತೇ ತೆರೆಮೇಲೆ ರಾಬರ್ಟ್ ರಾರಾಜಿಸಲಿದ್ದಾನೆ.