ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ʻರಾಬರ್ಟ್ʼ ಸಿನಿಮಾ ಆರಂಭಗೊಂಡ ದಿನದಿಂದ ಈತನಕ ನಿರಂತರ ಸುದ್ದಿಯಲ್ಲಿದೆ. ತರುಣ್ ಸುಧೀರ್ ನಿರ್ದೇಶನದ ಈ ಚಿತ್ರವನ್ನು ಉಮಾಪತಿ ಫಿಲಂಸ್ ಲಾಂಛನದಲ್ಲಿ ಉಮಾಪತಿ ಶ್ರೀನಿವಾಸಗೌಡ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಶಿವರಾತ್ರಿಯ ಈ ದಿನ ತೆರೆಮೇಲೆ ರಾಬರ್ಟ್ ಮಹಾದರ್ಶನವಾಗಿದೆ.
ನಿರೀಕ್ಷೆಗೆ ಕಾರಣ: ದರ್ಶನ್ ನಟನೆಯಲ್ಲಿ ಬಿಡುಗಡೆಯಾಗುವ ಯಾವುದೇ ಸಿನಿಮಾ ಕರ್ನಾಟಕದ ಪ್ರೇಕ್ಷಕರಲ್ಲಿ ನಿರೀಕ್ಷೆ ಹುಟ್ಟಿಸಿರುತ್ತದೆ. ಈ ಬಾರಿ ಕರ್ನಾಟಕವನ್ನು ಮೀರಿ ಜಗತ್ತಿನಲ್ಲಿರುವ ಎಲ್ಲ ಭಾರತೀಯರ ಕುತೂಹಲ ನೆಟ್ಟಿದೆ. ರಾಬರ್ಟ್ ಚಿತ್ರದಲ್ಲಿ ದರ್ಶನ್ ತೀರಾ ಹೊಸ ಗೆಟಪ್ಪಿನಲ್ಲಿ ಕಾಣಿಸಿಕೊಂಡಿರುವುದು. ಹಾಡುಗಳು ಮತ್ತು ಟ್ರೇಲರ್ ಹಿಟ್ ಆಗಿರುವುದು. ತೆಲುಗಿನಲ್ಲಿ ಮಂಗ್ಲಿ ಹಾಡಿರುವ ʻಕಣ್ಣೇ ಅದಿರಿಂದಿʼ ಹಾಡು ವೈರಲ್ ಆಗಿರುವುದು ʻರಾಬರ್ಟ್ʼ ಸಿನಿಮಾದ ಬಗ್ಗೆ ಇಡೀ ಭಾರತದ ಸಿನಿಮಾ ಪ್ರಿಯರ ನಿರೀಕ್ಷೆ ಹೆಚ್ಚಿಸಿದೆ.
ಕಥೆ ಶುರುವಾಗುವುದು ಲಕ್ನೋದಲ್ಲಿ. ತೊದಲು ನುಡಿಯ ಸಮಸ್ಯೆ ಇರುವ ಹುಡುಗ. ಅದೇ ಸಮಸ್ಯೆಯ ಅಪ್ಪ. ಅಡುಗೆ ಮಾಡೋದು ವೃತ್ತಿ. ಭಟ್ಟ ಅಂತಾ ಯಾರಾದರೂ ಬಾಲ ಬಿಚ್ಚಿದರೆ ಸೈಲೆಂಟಾಗಿ ಚಟ್ಟ ಕಟ್ಟುವ ಕಲಿವೀರ. ರಾಘವನ ಮುಖ ಹೊತ್ತ ದಶಮುಖ ರಾವಣ. ಮಚ್ಚು ಹಿಡಿದು ಸ್ಕೆಚ್ಚು ಹಾಕೋರಿಗೆ ಭಯಾನಕವಾಗಿ ಬಡಿದು ನಡುಕ ಹುಟ್ಟಿಸೋ ಈ ಬಾಣಸಿಗ ಪಕ್ಕಾ ಹಳೇ ಕೇಡಿ..
ನಾನಾ ಮತ್ತು ಸರ್ಕಾರ್ ಎಂಬ ಇಬ್ಬರು ಡಾನ್ ಗಳ ನಡುವಿನ ಕಾಳಗ. ನಾನಾಗೆ ರಾಬರ್ಟ್ ಮತ್ತು ರಾಘವ ಎಂಬ ಎರಡು ಗೂಳಿಗಳ ಕಾವಲು. ಸರ್ಕಾರ್ ಎದೆಯಲ್ಲಿ ದಿಗಿಲು. ನಾನಾ ಮತ್ತು ಸರ್ಕಾರ್ ನಡೆಸುವ ಯುದ್ಧದಲ್ಲಿ ಯಾವ ಗೂಳಿ ಉಸಿರುಚೆಲ್ಲುತ್ತದೆ? ರಾಘವನಿಗೂ ರಾಬರ್ಟ್ ಗೂ ಏನು ಸಂಬಂಧ? ಅಸಲಿಗೆ ಮಗು ಯಾರದ್ದು? ಯಾಕಾಗಿ ಅಡುಗೆಯವನ ವೇಶದಲ್ಲಿ ಬಾಸು ತಲೆಮರೆಸಿಕೊಂಡಿರ್ತಾರೆ ಅನ್ನೋದೆಲ್ಲಾ ಹಂತ ಹಂತವಾಗಿ ತೆರೆಮೇಲೆ ಅನಾವರಣವಾಗುತ್ತದೆ.
ಸ್ನೇಹ, ಪ್ರೀತಿ, ಬಂಧ, ಅನುಬಂಧ, ರೌಡಿಸಮ್ಮು, ರಿವೇಂಜು, ವಿಲನುಗಳ ಮಸಲತ್ತು, ಹೀರೋ ತಾಕತ್ತು, ಮಾಫಿಯಾ, ರಾಜಕೀಯ, ಗುನ್ನ, ಗನ್ನು ಎಲ್ಲವೂ ಒಂದೇ ಕಥೆಯಲ್ಲಿ ಅಡಕವಾಗಿವೆ. ಮಾತು ಕಳೆದುಕೊಂಡವರ ಬಿಕ್ಕಳಿಕೆ, ಸಮಾಜದ ಬಾಯಲ್ಲಿ ‘ಗೇ’ ಅನ್ನಿಸಿಕೊಂಡವರ ಒಳಬಾಧೆಗಳೂ ಇಲ್ಲಿವೆ. ಇಷ್ಟೆಲ್ಲಾ ಇದ್ದೂ ಎಲ್ಲೂ ಗೊಂದಲವಾಗದಂತೆ ನಿರೂಪಿಸಿದ್ದಾರೆ ತರುಣ್. ಹಾಡಾಗಲಿ ಫೈಟಾಗಲಿ ಯಾವುದೂ ಅನಗತ್ಯ ಅನ್ನಿಸಿಕೊಳ್ಳದೇ ಸಂದರ್ಭಗಳ ಪ್ರಾಮುಖ್ಯತೆ ಉಳಿಸಿದೆ.
ನಗಿಸಿ, ಅಳಿಸಿ, ಬಡಿದು ಬೆಚ್ಚಿಬೇಳಿಸಿ, ಕುಣಿದು ಕುಪ್ಪಳಿಸುತ್ತಲೇ ರಂಜಿಸುವ ಜವಾಬ್ದಾರಿ ನಿಭಾಯಿಸಿದವರನ್ನು ಪರಿಪೂರ್ಣ ನಟ ಅಥವಾ ಹೀರೋ ಅನ್ನಬಹುದು. ದರ್ಶನ್ ಇಲ್ಲಿ ಅಕ್ಷರಶಃ ಅದನ್ನು ಸಾಧಿಸಿದ್ದಾರೆ. ನವರಸಗಳನ್ನೂ ಲೀಲಾಜಾಲವಾಗಿ ಅಭಿವ್ಯಕ್ತಿಗೊಳಿಸಿರುವ ದರ್ಶನ್ ಅವರ ನಟನೆ ಎಂಥವರನ್ನೂ ಸೆಳೆಯುತ್ತದೆ. ಎಲ್ಲ ಬಗೆಯ ಅಂಶಗಳನ್ನೂ ಬೆರೆಸಿ ಕಮರ್ಷಿಯಲ್ ಸಿನಿಮಾ ಕಟ್ಟಿಕೊಡುವುದು ತ್ರಾಸದ ಕೆಲಸ. ʻರಾಬರ್ಟ್ʼ ನೋಡಿದರೆ ಜನಪ್ರಿಯ ಧಾಟಿಯಲ್ಲಿ ಸಿನಿಮಾ ಕಟ್ಟಿಕೊಡುವುದು ನಿರ್ದೇಶಕ ತರುಣ್ ಸುಧೀರ್ ಅವರಿಗೆ ಬಲು ಸಲೀಸು ಅನ್ನಿಸುತ್ತದೆ. ʻಪ್ರೇಕ್ಷಕರ ನಾಡಿಮಿಡಿತʼ ಅನ್ನುತ್ತಾರಲ್ಲಾ… ಅದನ್ನು ತರುಣ್ ಕರಾರುವಕ್ಕಾಗಿ ಹಿಡಿದಿಟ್ಟುಕೊಂಡಿದ್ದಾರೆ. ಇಂಡಿಯಾದ ಮಟ್ಟಿಗೆ ಸೂಪರ್ ಸ್ಟಾರ್ ನಟರು ಹಿಂಡಿದಷ್ಟೂ ಸಿಹಿ ನೀಡಬಲ್ಲ ಕಬ್ಬಿನ ಜಲ್ಲೆ ಇದ್ದಂತೆ. ʻರಾಬರ್ಟ್ʼ ಪಾತ್ರದಲ್ಲಿ ದರ್ಶನ್ ಅವರ ಪ್ರತಿಭೆ ನಿಜಕ್ಕೂ ಆಲೆಮನೆಯಲ್ಲಿ ಬೆಂದ ಬೆಲ್ಲದಚ್ಚಿನಂತೆ ಶೋಭಿಸುತ್ತಿದೆ. ಬೇಬಿ ಡ್ಯಾನ್ಸು ಫ್ಲೋರು ರೆಡಿ ಹಾಡಿನ ರಿದಮ್ಮಿಗೆ ತಕ್ಕಂತೆ ದರ್ಶನ್ ಹಾಕಿರುವ ಮಜಬೂತಾದ ಸ್ಟೆಪ್ಪನ್ನು ದೊಡ್ಡ ಪರದೆಯಲ್ಲಷ್ಟೇ ನೋಡಿ ಎಂಜಾಯ್ ಮಾಡಲು ಸಾಧ್ಯ.
ಅರ್ಜುನ್ ಜನ್ಯ ಕೂಡಾ ನಿರ್ದೇಶಕ ತರುಣ್ ಕಂಡ ಕನಸನ್ನು ಛಾಯಾಗ್ರಾಹಕ ಸುಧಾಕರ್ ಎಸ್. ರಾಜ್ ತಮ್ಮ ಕ್ಯಾಮೆರಾದಲ್ಲಿ ಯಥಾವತ್ತಾಗಿ ಸೆರೆ ಹಿಡಿದುಕೊಟ್ಟಿದ್ದಾರೆ. ಅರ್ಜುನ್ ಜನ್ಯ ಸಂಗೀತದ ಧ್ಯಾನಕ್ಕೆ ಕುಳಿತು ಟ್ಯೂನುಗಳನ್ನು ಹೊಸೆದುಕೊಟ್ಟಿದ್ದಾರೆ. ಜನ್ಯಾ ನೀಡಿರುವ ಹಾಡುಗಳಲ್ಲಿ ಯಾವುದು ಹೆಚ್ಚು, ಯಾವುದು ಕಡಿಮೆ ಅನ್ನುವಂತೆಯೇ ಇಲ್ಲ. ಹರಿಕೃಷ್ಣ ಹಿನ್ನೆಲೆ ಸಂಗೀತ ಹಾರ್ಟ್ ಬೀಟಿನಂತೆಯೇ ಸದ್ದುಮಾಡಿದೆ.
ಆಶಾ ಭಟ್, ಸೋನಾಲ್ ಮಾಂಟೆರೊ, ಜಾನ್ಸನ್ ಡಿಸೋಜ, ಜಗಪತಿ ಬಾಬು, ದೇವರಾಜ್, ವಿನೋದ್ ಪ್ರಭಾಕರ್, ರವಿಕಿಶನ್, ರವಿಶಂಕರ್, ಅಶೋಕ್, ಅವಿನಾಶ್, ದಿಲೀಪ್ ಶೆಟ್ಟಿ, ರವಿಚೇತನ್, ಶ್ರೀಧರ್ ರಾವ್, ಹರ್ಷ, ಸುಚೀಂದ್ರ ಪ್ರಸಾದ್, ಚಿಕ್ಕಣ್ಣ, ಚಂದು ಗೌಡ, ಈಟಿವಿ ಶ್ರೀಧರ್, ಯೂಟರ್ನ್ ಕೃಷ್ಣ, ತೇಜಸ್ವಿನಿ ಮುಂತಾದವರ ದೊಡ್ಡ ತಾರಾಬಳಗದ ಈ ಸಿನಿಮಾದಲ್ಲಿ ಎಲ್ಲ ಕಲಾವಿದರೂ ಕಥೆ ಬೇಡಿದಷ್ಟು ನಟಿಸಿದ್ದಾರೆ. ದ್ವಿತೀಯಾರ್ಧದಲ್ಲಿ ಮರಿ ಟೈಗರ್ ವಿನೋದ್ ಕೂಡಾ ಹೀರೋ ಆಗಿ ನಿಲ್ಲುತ್ತಾರೆ. ಜಗಪತಿ ಬಾಬು ಅವರ ಅದ್ಭುತ ನಟನೆಯನ್ನು ಕೆಲವು ಕಡೆ ಅವರದ್ದೇ ದನಿ ತಿಂದು ಹಾಕಿರುವುದು ರಾಬರ್ಟ್ ಗೆ ದೃಷ್ಟಿ ಬೊಟ್ಟಿಟ್ಟಂತಿದೆ!
ಕೆ.ಎಂ.ಪ್ರಕಾಶ್ ಸಂಕಲನ ಎಂದಿನಂತೆ ಅಚ್ಚುಕಟ್ಟು, ಮೋಹನ್ ಬಿ. ಕೆರೆ ಕಲಾ ನಿರ್ದೇಶನ ಲವ್ಲಿಯಾಗಿದೆ. ರಾಮ್ – ಲಕ್ಷ್ಮಣ್, ಅನ್ಬು – ಅರಿವು, ವಿನೋದ್ ಸಾಹಸ ರೋಮಾಂಚನಗೊಳಿಸುತ್ತದೆ. ಭೂಷಣ್, ಸಂತೋಷ್ ಅವರ ಕೊರಿಯೋಗ್ರಫಿ ವಾಹ್ ಎನಿಸುತ್ತದೆ. ರಾಜಶೇಖರ್ ಹಾಗೂ ಚಂದ್ರಮೌಳಿ ಸಂಭಾಷಣೆ ಸಿನಿಮಾದ ಜೀವಾಳ…ಜೀವಾಳ
ಕೊರೋನಾದ ಕಡುಗಷ್ಟವನ್ನು ಅತಿ ಹೆಚ್ಚು ಅನುಭವಿಸಿದ ಕನ್ನಡ ಚಿತ್ರರಂಗವನ್ನು ಕೈ ಹಿಡಿದು ಮೇಲೆತ್ತಲು ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾವೊಂದು ತೆರೆಗೆ ಬರಬೇಕಾದ ಅನಿವಾರ್ಯವಿತ್ತಲ್ಲಾ… ಅಕ್ಷರಶಃ ರಾಬರ್ಟ್ ಆ ಅಗತ್ಯವನ್ನು ಯಶಸ್ವಿಯಾಗಿ ಪೂರೈಸಿದೆ. ಮಾಸ್ ಪ್ರೇಕ್ಷಕರು ಮಾತ್ರವಲ್ಲದೆ, ಫ್ಯಾಮಿಲಿ ಆಡಿಯನ್ಸನ್ನು ರಾಬರ್ಟ್ ಸೆಳೆಯುವುದು ಶತಸಿದ್ಧ.
Leave a Reply
You must be logged in to post a comment.