ಕೊರೋನಾವನ್ನು ಯಾರೂ ಕಡೆಗಣಿಸಬೇಡಿ. ಮನೆಯಲ್ಲಿರುವ ಹಿರಿಯರ ಬಗ್ಗೆ ಹೆಚ್ಚು ಗಮನ ಕೊಡಿ. ಅವರನ್ನು ಯಾವ ಕಾರಣಕ್ಕೂ ಹೊರಗಡೆ ಓಡಾಡಲು ಬಿಡಬೇಡಿ. ನಮ್ಮ ಸಿನಿಮಾ ತಂಡದವರು ಕೂಡಾ ಒಟ್ಟಿಗೆ ಸೇರಲು ಆಗದ ಸಂದರ್ಭವಿದು.
ಕೊರೋನಾ ಅನ್ನೋ ಪೀಡೆ ಅಡ್ಡಗಾಲಾಕದಿದ್ದರೆ ಈ ಹೊತ್ತಿಗೆ ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿರುವ ʻಸಲಗʼ ಚಿತ್ರ ರಿಲೀಸಾಗಿಬಿಡುತ್ತಿತ್ತು. ಎಲ್ಲವೂ ಅಂದುಕೊಂಡಂತೇ ಆಗುತ್ತಿದೆ, ಇನ್ನೇನು ಸಲಗ ಬಂದೇಬಿಡ್ತು ಎನ್ನುವ ಹೊತ್ತಿಗೆ ಕೊವಿಡ್ ಕೋವಿ ಸಿಡಿದಿತ್ತಲ್ಲಾ… ಹೀಗಾಗಿ ಕರಾರುವಕ್ಕಾದ ಪ್ಲಾನುಗಳೆಲ್ಲವೂ ಕದಲಿಹೋಯ್ತು. ಆದರೂ ಜನ ಕೊರೋನಾ ಕೊನೆಗೊಂಡು ಸಲಗ ಥೇಟರಿಗೆ ಬಂದರೆ ಸಾಕು ಅಂತಾ ಕಾದಿದ್ದಾರೆ.
ʻʻವಿಪರೀತ ಶ್ರಮಪಟ್ಟು ʻಸಲಗʼ ತಯಾರಿಸಿದ್ದೀವಿ. ಎಲ್ಲರಿಗೂ ಗೊತ್ತಿರುವಂತೆ ಟಗರು ಸಿನಿಮಾವನ್ನು ನಿರ್ಮಿಸಿದ ಕೆ.ಪಿ.ಶ್ರೀಕಾಂತ್, ನಾಗಿ ಸೇರಿ ನಿರ್ಮಿಸಿರುವ ಸಿನಿಮಾ ಇದು. ಪ್ರಪಂಚಕ್ಕೆ ಎದುರಾಗಿರುವ ಸಂಕಷ್ಟದಿಂದ ಸಿನಿಮಾ ತೆರೆಗೆ ಬರೋದು ಸ್ವಲ್ಪ ಮುಂದೆ ಹೋಗಿದೆ. ಆದಷ್ಟು ಬೇಗ ಸಲಗ ನಿಮ್ಮ ಮುಂದೆ ಬರಲಿದೆ. ಸಲಗ ಚಿತ್ರದ ಉಳಿದ ಹಾಡುಗಳನ್ನೂ ಇಷ್ಟರಲ್ಲೇ ರಿಲೀಸ್ ಮಾಡುತ್ತೇವೆ. ಕೊರೋನಾವನ್ನು ಯಾರೂ ಕಡೆಗಣಿಸಬೇಡಿ. ಮನೆಯಲ್ಲಿರುವ ಹಿರಿಯರ ಬಗ್ಗೆ ಹೆಚ್ಚು ಗಮನ ಕೊಡಿ. ಅವರನ್ನು ಯಾವ ಕಾರಣಕ್ಕೂ ಹೊರಗಡೆ ಓಡಾಡಲು ಬಿಡಬೇಡಿ. ನಮ್ಮ ಸಿನಿಮಾ ತಂಡದವರು ಕೂಡಾ ಒಟ್ಟಿಗೆ ಸೇರಲು ಆಗದ ಸಂದರ್ಭವಿದು. ಮೊದಲೆಲ್ಲಾ ಮನೆಯಲ್ಲಿ ಸೇರಿ ಚರ್ಚೆ ನಡೆಸುತ್ತಿದ್ದೆವು. ಈಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಒಬ್ಬರನ್ನೊಬ್ಬರು ಮೀಟ್ ಮಾಡುತ್ತಿಲ್ಲ… ಎಲ್ಲರೂ ಆರೋಗ್ಯವನ್ನು ಕಾಪಾಡಿಕೊಳ್ಳಿʼʼ ಎಂದು ಸ್ವತಃ ದುನಿಯಾ ವಿಜಯ್ ವಿನಂತಿಸಿದ್ದಾರೆ.
ಅದ್ಯಾವ ಘಳಿಗೆಯಲ್ಲಿ ಸಲಗ ಅನ್ನೋ ಶೀರ್ಷಿಕೆ ಅನೌನ್ಸಾಯಿತೋ ಅವತ್ತಿನಿಂದಲೇ ಈ ಸಿನಿಮಾದ ಬಗ್ಗೆ ಟಾಕ್ ಶುರುವಾಗಿಬಿಟ್ಟಿತ್ತು. ಫಸ್ಟ್ ಲುಕ್ ಮತ್ತು ಟೀಸರ್ ಇತ್ಯಾದಿಗಳು ಬಂದ ಮೇಲಂತೂ ಕ್ರೇಜ಼ು ಮತ್ತಷ್ಟು ಹೆಚ್ಚಿದೆ. ಎಲ್ಲೆಂದರಲ್ಲಿ ಈಗ ಸೂರಿ ಅಣ್ಣಾ ಎನ್ನುವ ಹಾಡೇ ಕೇಳಿಸುತ್ತಿದೆ. ಪಡ್ಡೆ ಹುಡುಗರ ಪಾಲಿಗಂತೂ ಈ ಹಾಡು ಜನಗಣಮನವಾಗಿಬಿಟ್ಟಿದೆ.
ಕೆ.ಪಿ. ಶ್ರೀಕಾಂತ್ ಸದ್ಯ ಕನ್ನಡ ಚಿತ್ರರಂಗದ ಲಕ್ಕಿ ನಿರ್ಮಾಪಕ ಕೆ.ಪಿ. ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ ಅಂತಾ ಗಾಂಧಿನಗರದ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ. ಮೇಲ್ನೋಟಕ್ಕೆ ಇದು ಅದೃಷ್ಟದಂತೆ ಕಾಣಿಸಿದರೂ ಇದರ ಹಿಂದೆ ಅವರ ಶ್ರಮ, ಕರಾರುವಕ್ಕಾದ ಪ್ಲಾನು, ಯಾವ ಸಿನಿಮಾ ಮಾಡಿದರೆ ಲಾಭ ಮಾಡಬಹುದು ಅನ್ನೋ ವ್ಯಾಪಾರಿ ಮನಸ್ಥಿತಿಗಳೇ ಕಾರಣ. ವಿಜಯ್ ಕೂಡಾ ಹಸಿದ ಹುಲಿಯಂತಾಗಿದ್ದರು. ಹಳೆಯ ಕೆಲವು ಬೇಸರದಿಂದ ಸಿಡಿದೆದ್ದವರಂತೆ ಈ ಸಲ ಸ್ವತಃ ತಾವೇ ನಿರ್ದೇಶಕರಾಗಿ ವಿಜಯ್ ಸಲಗವನ್ನು ರೂಪಿಸಿದ್ದಾರೆ. ತಮ್ಮಿಡೀ ಬದುಕಿನಲ್ಲಿ ಕಲಿತ ವಿದ್ಯೆಗಳನ್ನೆಲ್ಲಾ ಇಲ್ಲಿ ಬಸಿದಿದ್ದಾರೆ. ವಿಜಯ್ ಮೂಲತಃ ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ಸ್ಲಮ್ಮು, ರೌಡಿಸಮ್ಮು, ಅಲ್ಲಿನ ಬದುಕಿನ ರೀತಿಗಳನ್ನೆಲ್ಲಾ ಹತ್ತಿರದಿಂದ ಬಲ್ಲವರು. ಅವನ್ನೆಲ್ಲಾ ಒಂದು ಕಡೆ ಸೇರಿಸಿ ಅಚ್ಚುಕಟ್ಟಾದ ಸಿನಿಮಾ ರೂಪಿಸಿದ್ದಾರೆ. ವೈರಸ್ಸಿನಿಂದ ಗಲಿಬಿಲಿಯಾಗಿರುವ ವಾತಾವರಣ ಸಹಜ ಸ್ಥಿತಿಗೆ ಬರುತ್ತಿದ್ದಂತೇ ವಿಜಯ್ ಮತ್ತು ಶ್ರೀಕಾಂತ್ ಜೋಡಿಯ ಸಲಗ ದೊಡ್ಡ ಮಟ್ಟದಲ್ಲಿ ಸೌಂಡು ಮಾಡೋದು ಗ್ಯಾರೆಂಟಿ ಅನ್ನೋ ಸುದ್ದಿ ಈಗ ಎಲ್ಲೆಡೆ ಹಬ್ಬಿದೆ. ಅದು ನಿಜವಾಗಲಿ.