ಐಟಿ ವಲಯದಿಂದ ಬಂದ ಸಂತೋಷ್ರ ಮೊದಲ ಸಾಹಸಗಾಥೆ!
ಲಂಡನ್ ನಲ್ಲಿ ಲಂಬೋದರ ಚಿತ್ರದ ಮೂಲಕ ಸಂತೋಷ್ ಎಂಬ ನವನಾಯಕನ ಆಗಮನವಾಗಿದೆ. ನಿನ್ನೆ ತೆರೆಕಂಡ ಈ ಚಿತ್ರದ ಮೂಲಕ ನಿರ್ದೇಶಕ ರಾಜ್ ಸೂರ್ಯ ಸೇರಿದಂತೆ ಒಂದು ಯುವ ಪ್ರತಿಭಾವಂತರ ತಂಡವೇ ಪ್ರೇಕ್ಷಕರನ್ನು ಮುಖಾಮುಖಿಯಾಗಲಿದೆ. ಅವರೆಲ್ಲರ ಪಾಲಿಗೂ ಸಿನಿಮಾ ಎಂಬುದು ಕನಸು. ಕುಂತಲ್ಲಿ ನಿಂತಲ್ಲಿ ಕೈ ಜಗ್ಗುವ ಧ್ಯಾನ. ನಾಯಕ ನಟನಾಗಬೇಕೆಂಬ ಕನಸನ್ನು ಹಾಗೆಯೇ ಧ್ಯಾನವಾಗಿಸಿಕೊಂಡಿರೋ ಸಂತೋಷ್ ಕಡೆಗೂ ಈ ಚಿತ್ರದ ಮೂಲಕವೇ ನಾಯಕನಾಗಿದ್ದಾರೆ. ಈ ಚಿತ್ರ ತನ್ನ ಕನಸಿಗೆ ಮಹತ್ತರವಾದ ಸಾಥ್ ನೀಡುತ್ತದೆಯೆಂಬ ನಂಬಿಕೆಯನ್ನೂ ಹೊಂದಿದ್ದಾರೆ.
ಸಂತೋಷ್ ಪಾಲಿಗೆ ಅವರೇ ಥ್ರಿಲ್ ಆಗುವಂಥಾ ಪಾತ್ರ ಲಂಡನ್ ನಲ್ಲಿ ಲಂಬೋದರ ಚಿತ್ರದಲ್ಲಿ ಸಿಕ್ಕಿದೆ. ಆದರೆ ಒಂದೊಳ್ಳೆ ಪಾತ್ರದ ಮೂಲಕವೇ ನಾಯಕನಾಗಿ ಲಾಂಚ್ ಆಗಬೇಕೆಂಬ ಆಸೆ ಹೊಂದಿದ್ದ ಸಂತೋಷ್ ಅದಕ್ಕಾಗಿ ಸಾಕಷ್ಟು ಪರಿಶ್ರಮ ಪಟ್ಟಿದ್ದರು. ಹುಡುಕಾಟವನ್ನೂ ನಡೆಸಿದ್ದರು. ಈ ಬಗ್ಗೆ ಸಮಯ ಸಿಕ್ಕಾಗಲೆಲ್ಲಾ ಬಾಲ್ಯದ ಗೆಳೆಯರಾದ ಈ ಚಿತ್ರದ ಸಂಗೀತ ನಿರ್ದೇಶಕರೂ ಆಗಿರುವ ಪ್ರಣವ್ ಅವರ ಜೊತೆಗೂ ಈ ಬಗ್ಗೆ ಚರ್ಚೆ ನಡೆಸುತ್ತಿದ್ದರಂತೆ. ಕಡೆಗೂ ನಿರ್ದೇಶಕ ರಾಜ್ ಸೂರ್ಯ ಬಯಸಿದ್ದಂಥಾದ್ದೇ ಕಥೆ ಸಿದ್ಧಪಡಿಸುವ ಮೂಲಕ ಸಂತೋಷ್ ಕನಸು ನನಸಾಗಿದೆ.
ಸಂತೋಷ್ ಅವರು ಮೈಸೂರಿನ ಅಗ್ರಹಾರ ಏರಿಯಾದಲ್ಲಿಯೇ ಹುಟ್ಟಿ ಬೆಳೆದವರು. ಕೂಡುಕುಟುಂಬದಲ್ಲಿ ಹುಟ್ಟಿ ಅಲ್ಲಿಯೇ ಶಾಲಾ ಕಾಲೇಜು ವ್ಯಾಸಂಗವನ್ನೂ ಮಾಡಿಕೊಂಡಿದ್ದವರು. ಕಾಲೇಜು ದಿನಗಳಲ್ಲಿಯೇ ಮಾಡೆಲಿಂಗ್ ನಲ್ಲಿಯೂ ಮಿಂಚಿದ್ದ ಸಂತೋಷ್ ಅನೂಪ್ ಭಂಡಾರಿಯವರ ಸಹಪಾಠಿಯೂ ಹೌದು. ಆ ಹಂತದಲ್ಲಿಯೇ ಮೈಸೂರಲ್ಲಿ ನಡೆದಿದ್ದ ಫ್ಯಾಶನ್ ಶೋ ಒಂದರಲ್ಲಿ ಸಂತೋಷ್ ವಿನ್ನರ್ ಆಗಿದ್ದರು. ಆ ಹಂತದಲ್ಲಿಯೇ ನಟನೆಯ ಕನಸು ಚಿಗುರಿಕೊಂಡಿತ್ತಾದರೂ ಅನಿವಾರ್ಯ ಕಾರಣಗಳಿಂದ ಕಾಪೋರೇಟ್ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಅದು ಕೈ ತುಂಬಾ ಸಂಬಳ ಬರುವ ಚೆಂದದ ಕೆಲಸ. ಬದುಕನ್ನು ಅಲ್ಲಿಯೇ ರೂಪಿಸಿಕೊಳ್ಳೋದಕ್ಕೆ ಯಾವ ಅಡ್ಡಿ ಆತಂಕಗಳೂ ಇರಲಿಲ್ಲ. ಆದರೆ ನಟನಾಗೋ ಹಂಬಲ ಮಾತ್ರ ಅಂಥಾ ಕೆಲಸವನ್ನೂ ತೊರೆದು ನಾಯಕನಾಗುವಂತೆ ಮಾಡಿದ್ದೊಂದು ಅಚ್ಚರಿ.
ಲಂಡನ್ ನಲ್ಲಿ ಲಂಬೋದರ ಚಿತ್ರದಲ್ಲಿ ನಾಯಕನಾಗಿ ಅವರದ್ದು ಬಲು ಮಜವಾದ ಪಾತ್ರವಂತೆ. ಚಿತ್ರೀಕರಣದ ಪ್ರತೀ ಹಂತದಲ್ಲಿಯೂ ಸಂಪೂರ್ಣವಾಗಿ ಎಂಜಾಯ್ ಮಾಡುತ್ತಲೇ ತೊಡಗಿಸಿಕೊಂಡಿದ್ದರಂತೆ. ದಿನಮಾ ಬೆಳಗ್ಗೆ ದಿನಭವಿಷ್ಯು ನೋಡಿ ಅದರಂತೆಯೇ ಪ್ರತೀ ಕ್ಷಣವೂ ಬದುಕೋ ಕ್ಯಾರೆಕ್ಟರ್ ಅವರದ್ದು. ನಟನೆಗೆ ತುಂಬಾ ಆದ್ಯತೆ ಇರೋದರಿಂದ ಚಿತ್ರೀಕರಣಕ್ಕೂ ಮುನ್ನ ತಿಂಗಳುಗಟ್ಟಲೆ ನಟನೆಯ ತರಬೇತಿ ಪಡೆದುಕೊಂಡೇ ಅವರು ಅಖಾಡಕ್ಕಿಳಿದಿದ್ದರು.
ಲಂಡನ್ ನಲ್ಲಿ ಲಂಬೋದರ ಚಿತ್ರದ ಮೂಲಕ ಅವರ ಕನಸು ನನಸಾಗಿದೆ. ಈಗಾಗಲೇ ಟ್ರೈಲರ್ ಪ್ರೋಮೋ ಮೂಲಕ ಸಂತೋಷ್ ಗಮನ ಸೆಳೆದಿದ್ದಾರೆ. ಅವರ ಮುಂದೀಗ ಒಂದಷ್ಟು ಆಫರ್ಗಳೂ ಇದ್ದಾವಂತೆ. ಆದರೆ ಈ ಚಿತ್ರದ ಕುರಿತು ಜನರ ಪ್ರತಿಕ್ರಿಯೆಯ ನಂತರವಷ್ಟೇ ಮುಂದಿನ ನಿರ್ಧಾರ ಕೈಗೊಳ್ಳೋ ಸಂಕಲ್ಪ ಸಂತೋಷ್ ಅವರದ್ದು. ಅಂತೂ ಈ ಚಿತ್ರ ಜನಮಾನಸ ಗೆದ್ದು ಸೂಪರ್ ಹಿಟ್ ಆಗುತ್ತದೆ, ಈ ಮೂಲಕವೇ ತನ್ನನ್ನು ನಾಯಕ ನಟನಾಗಿ ನೆಲೆ ನಿಲ್ಲಿಸುತ್ತದೆ ಅನ್ನೋ ಬಲವಾದ ನಂಬಿಕೆ ಅವರಲ್ಲಿದೆ.
No Comment! Be the first one.