ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ ಚಿತ್ರದ ಮೂಲಕವೇ ಯಶಸ್ವೀ ನಿರ್ದೇಶಕರೆನ್ನಿಸಿಕೊಂಡವರು ಸಂತೋಷ್ ಆನಂದರಾಮ್. ರಾಜಕುಮಾರದಂಥಾ ಸಾರ್ವಕಾಲಿಕ ಹಿಟ್ ಚಿತ್ರದ ನಂತರ ಅವರೀಗ ಮತ್ತೆ ಪುನೀತ್ ಗಾಗಿ ಯುವರತ್ನ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ಈ ಘಳಿಗೆಯಲ್ಲಿಯೇ ಅವರು ಮುಂದಿನ ಚಿತ್ರ ದರ್ಶನ್ ಜೊತೆ ಮಾಡಲಿದ್ದಾರೆಂಬ ಮಾತುಗಳೂ ಕೂಡಾ ವ್ಯಾಪಕವಾಗಿಯೇ ಕೇಳಿ ಬರಲಾರಂಭಿಸಿವೆ.
ರಾಜಕುಮಾರ್ ಸಿನಿಮಾ ಸೂಪರ್ ಹಿಟ್ ಆಗುತ್ತಲೇ ಸಂತೋಷ್ ಆನಂದರಾಮ್ ಸ್ಟಾರ್ ನಿರ್ದೇಶಕರಾಗಿ ಹೊರ ಹೊಮ್ಮಿದ್ದರು. ಸ್ಟಾರ್ ನಟರ ಅಭಿಮಾನಿಗಳೇ ತಂತಮ್ಮ ನೆಚ್ಚಿನ ನಟರ ಚಿತ್ರ ನಿರ್ದೇಶನ ಮಾಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ದುಂಬಾಲು ಬೀಳಲಾರಂಭಿಸಿದ್ದರು. ಸುದೀಪ್, ಶಿವಣ್ಣನ ಅಭಿಮಾನಿಗಳೂ ಈ ರೇಸಿನಲ್ಲಿದ್ದರು. ಆದರೆ ಸಂತೋಷ್ ಆನಂದ್ ರಾಮ್ ದರ್ಶನ್ ಚಿತ್ರ ನಿರ್ದೇಶನ ಮಾಡಬೇಕೆಂದು ಅಭಿಮಾನಿಗಳೆಲ್ಲ ಬಲವಾಗಿ ಒತ್ತಾಯಿಸಿಕೊಂಡು ಬರುತ್ತಿದ್ದಾರೆ.
ಅದಕ್ಕೆ ಸರಿಯಾಗಿ ಈಗ ದರ್ಶನ್ ಅಭಿನಯದ ಯಜಮಾನ ಚಿತ್ರಕ್ಕೆ ಸಂತೋಷ್ ಹಾಡೊಂದನ್ನು ಬರೆದಿದ್ದಾರೆ. ಕವಿರಾಜ್, ಯೋಗರಾಜ ಭಟ್, ಚೇತನ್ ಮುಂತಾದವರು ಬರೆದಿರೋ ಯಜಮಾನ ಹಾಡುಗಳು ಸೂಪರ್ ಹಿಟ್ಟಾಗಿವೆ. ಸಂತೋಷ್ ಆನಂದ್ ರಾಮ್ ಬರೆದಿರೋ ಹಾಡು ಇಷ್ಟರಲ್ಲಿಯೇ ಬಿಡುಗಡೆಯಾಗಲಿದೆ. ಈ ಹಾಡು ಬರೆಯೋ ಮೂಲಕ ಸಂತೋಷ್ ದರ್ಶನ್ ಜೊತೆ ಚಿತ್ರ ಮಾಡೋ ಮೊದಲ ಹೆಜ್ಜೆ ಇಟ್ಟಿದ್ದಾರೆಂದೇ ಅಭಿಮಾನಿ ವಲಯದಲ್ಲಿ ಗುಲ್ಲೆದ್ದಿದೆ. ಖುದ್ದು ಸಂತೋಷ್ ತಾನು ಎಲ್ಲ ನಟರ ಜೊತೆಗೂ ಚಿತ್ರ ಮಾಡಲು ಉತ್ಸುಕರಾಗಿರೋದಾಗಿ ಹೇಳಿಕೊಂಡಿರೋದರಿಂದ ಈ ಸಾಧ್ಯತೆಯನ್ನ ಅಲ್ಲಗಳೆಯುವಂತಿಲ್ಲ.
#