ಹರ್ಷ ನಿರ್ದೇಶನದ ಸೀತಾರಾಮ ಕಲ್ಯಾಣ ಚಿತ್ರವೀಗ ಪ್ರೇಕ್ಷಕರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಹಾಡೊಂದರ ಮೂಲಕ ರಚಿತಾ ರಾಮ್ ಮತ್ತರು ನಿಖಿಲ್ ಕ್ಯೂಟ್ ಜೋಡಿಯಾಗಿಯೂ ಸುದ್ದಿಯಲ್ಲಿದ್ದಾರೆ. ಈಗಾಗಲೇ ಹೊರ ಬಂದಿರೋ ಒಂದಷ್ಟು ಪೋಸ್ಟರ್ಗಳೇ ಈ ಸಿನಿಮಾದಲ್ಲಿ ರಚಿತಾ ರಾಮ್ ಬೇರೆಯದ್ದೇ ಥರದ ಪಾತ್ರವೊಂದರಲ್ಲಿ ನಟಿಸಿದ್ದಾರೆಂಬ ಸೂಚನೆಯೂ ಸಿಕ್ಕಿದೆ.
ಸೀತಾರಾಮ ಕಲ್ಯಾಣದಲ್ಲಿ ನಿಜಕ್ಕೂ ರಚಿತಾ ಪಾತ್ರ ಹೇಗಿದೆ ಅಂತ ಅಭಿಮಾನಿಗಳಲ್ಲಿ ಈಗಾಗಲೇ ಕುತೂಹಲ ತಾರಕಕ್ಕೇರಿದೆ. ಈ ಬಗ್ಗೆ ನಿರ್ದೇಶಕ ಎ ಹರ್ಷ ಒಂದಷ್ಟು ಮಹತ್ವದ ಮಾಹಿತಿಗಳನ್ನ ಹಂಚಿಕೊಂಡಿದ್ದಾರೆ. ಈ ಪ್ರಕಾರವಾಗಿ ಹೇಳೋದಾದರೆ, ರಚಿತಾ ಪಾಲಿಗೆ ಸೀತಾರಾಮ ಕಲ್ಯಾಣದ ಪಾತ್ರ ಹೊಸಾ ಇಮೇಜನ್ನೇ ಕಟ್ಟಿಕೊಡಲಿದೆ!
ರಚಿತಾ ರಾಮ್ ಅವರದ್ದು ಬರೀ ಸೀತಾರಾಮನ ಸಖಿಯ ಪಾತ್ರವಲ್ಲ. ಅವರಿಲ್ಲಿ ಒಂದು ತುಂಬು ಕುಟುಂಬದ ಮುದ್ದಿನ ಮಗಳಾಗಿ ನಟಿಸಿದ್ದಾರೆ. ಈ ವರೆಗೂ ಬೋಲ್ಡ್ ಪಾತ್ರಗಳಿಗೇ ಹೆಸರಾಗಿದ್ದ ರಚಿತಾ ಅವರದ್ದಿಲ್ಲಿ ಸಂಪೂರ್ಣವಾಗಿ ಬೇರೆಯದ್ದೇ ಥರದ ಪಾತ್ರ. ಬಾಂಧವ್ಯಗಳಿಗೆ ಬೆಲೆ ಕೊಡುವ ರಚಿತಾ ಪಾತ್ರ ಪ್ರತಿಯೊಬ್ಬ ಅಪ್ಪನಿಗೂ ಕೂಡಾ ಇದ್ದರೆ ಇಂಥಾ ಒಬ್ಬಳು ಮಗಳಿರಬೇಕು ಅನ್ನಿಸುವಂತಿದೆಯಂತೆ. ಅಭಿನಯಕ್ಕೆ ಹೆಚ್ಚು ಪ್ರಾಧಾನ್ಯತೆ ಇರೋ ಈ ಚಿತ್ರ ಓರ್ವ ನಟಿಯಾಗಿ ರಚಿತಾ ಪಾಲಿಗೆ ಮಹತ್ವದ್ದು.
ಇನ್ನುಳಿದಂತೆ ನಾಯಕನೊಂದಿಗಿನ ರೊಮ್ಯಾಂಟಿಕ್ ಸೀನುಗಳಲ್ಲಿಯೂ ರಚಿತಾ ಡಿಫರೆಂಟಾಗಿಯೇ ಕಾಣಲಿದ್ದಾರೆ. ತಾನು ನಿಖಿಲ್ ಅವರಿಗಿಂತ ಸೀನಿಯರ್ ಅನ್ನೋ ಸಣ್ಣ ಬಿಗುಮಾನವೂ ಇಲ್ಲದೇ ರಚಿತಾ ಚಿತ್ರದುದ್ದಕ್ಕೂ ನಟಿಸಿದ್ದಾರಂತೆ. ಅದರ ಫಲವಾಗಿಯೇ ನಿಖಿಲ್ ಮತ್ತು ರಚಿತಾ ಜೋಡಿ ನೋಡಿ ಪ್ರೇಕ್ಷಕರೆಲ್ಲ ಮರುಳಾಗಿದ್ದಾರೆ!
#
No Comment! Be the first one.