ಶಿವರಾಜ್ ಕುಮಾರ್ ಅಭಿನಯದ ರುಸ್ತುಂ ಚಿತ್ರೀಕರಣವನ್ನು ಮುಗಿಸಿಕೊಂಡಿದೆ. ಈಗ ಈ ಸಿನಿಮಾದ ಡಬ್ಬಿಂಗ್ ಕೆಲಸಕ್ಕೆ ಚಾಲನೆ ಸಿಕ್ಕಿದೆ. ಇದರಲ್ಲಿ ಬಾಲಿವುಡ್ ನಟ ವಿವೇಕ್ ಒಬೇರಾಯ್ ಪೊಲೀಸ್ ಪಾತ್ರದಲ್ಲಿ ನಟಿಸಿರೋದು ಗೊತ್ತೇ ಇದೆ. ಇದಕ್ಕೆ ಡಬ್ ಮಾಡಲು ಬೇರೆಯವರನ್ನು ಹುಡುಕಾಡುತ್ತಿದ್ದ ನಿರ್ದೇಶಕರಿಗೆ ಖುದ್ದು ಒಬೇರಾಯ್ ಶಾಕ್ ಕೊಟ್ಟಿದ್ದಾರೆ!
ಸಾಮಾನ್ಯವಾಗಿ ಕನ್ನಡ ಚಿತ್ರಗಳಲ್ಲಿ ಯಾರೇ ಪರಭಾಷಾ ನಟ ನಟಿಯರು ನಟಿಸಿದರೂ ಆ ಪಾತ್ರಕ್ಕೆ ಬೇರೆಯವರಿಂದ ವಾಯ್ಸ್ ಡಬ್ ಮಾಡಿಸಲಾಗುತ್ತೆ. ತೀರಾ ಕನ್ನಡದವರೇ ಆದ ಕೆಲ ನಟ ನಟಿಯರೇ ನೆಟ್ಟಗೆ ಕನ್ನಡ ಮಾತಾಡಲು ತಿಣುಕಾಡುತ್ತಾರೆ. ಹಾಗಿರೋವಾಗ ಪರಭಾಷಾ ನಟನಟಿಯರಿಂದ ಅದನ್ನು ನಿರೀಕ್ಷಿಸಲು ಸಾಧ್ಯವೇ? ಸದ್ಯ ವಿವೇಕ್ ಒಬೇರಾಯ್ ಅದನ್ನು ಸಾಧ್ಯವಾಗಿಸಲಿದ್ದಾರೆ!
ಒಬೇರಾಯ್ ರುಸ್ತುಂ ಚಿತ್ರದಲ್ಲಿನ ತಮ್ಮ ಪಾತ್ರಕ್ಕೆ ತಾವೇ ಡಬ್ಬಿಂಗ್ ಮಾಡುವ ನಿರ್ಧಾರ ಪ್ರಕಟಿಸಿದ್ದಾರೆ. ರುಸ್ತುಂ ಆಫರ್ ಬಂದಾಗಿನಿಂದಲೂ ಅವರು ಕನ್ನಡ ಕಲಿಯಲಾರಂಭಿಸಿದ್ದರಂತೆ. ಈಗ ಅವರು ಅದರಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ. ಇದೀಗ ರುಸ್ತುಂ ನಿರ್ದೇಶಕರಿಗೆ ತಾವೇ ಡಬ್ ಮಾಡೋದಾಗಿ ನಿಖರವಾಗಿಯೇ ಒಬೇರಾಯ್ ಹೇಳಿದ್ದಾರಂತೆ.ಬಾಲಿವುಡ್ನ ಪ್ರಖ್ಯಾತ ಯಶ್ ರಾಜ್ ಸ್ಟುಡಿಯೋದಲ್ಲಿ ರುಸ್ತುಂ ಡಬ್ಬಿಂಗ್ ಕಾರ್ಯ ನಡೆಯಲಿದೆ. ಇಷ್ಟರಲ್ಲಿಯೇ ವಿವೇಕ್ ಒಬೇರಾಯ್ ಅಲ್ಲಿಗಾಗಮಿಸಿ ತಮ್ಮ ಕೆಲಸ ಶುರು ಮಾಡಿಕೊಳ್ಳಲಿದ್ದಾರೆ. #
No Comment! Be the first one.