ಯಾವುದೇ ವಿವಾದಗಳಿಗೂ ತಲೆಯಿಡದೆ, ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡು ಹೋಗುತ್ತಿರುವ ಹೀರೋ ವಿನೋದ್ ಪ್ರಭಾಕರ್. ತೀರಾ ತಾನು ನಟಿಸಿದ ಸಿನಿಮಾ ಗಬ್ಬೆದ್ದುಹೋಗುತ್ತಿರುವ ಸಂದರ್ಭದಲ್ಲೂ ಪ್ರಶ್ನಿಸದ, ಸೈಲೆಂಟಾಗಿದ್ದುಬಿಡುವಷ್ಟು ಒಳ್ಳೇತನ ಬಹುಶಃ ಯಾರಿಗಾದರೂ ಮಾರಕವೇ. ವಿನೋದ್ ಪ್ರಭಾಕರ್ ಪರಿಸ್ಥಿತಿಯೂ ಈಗ ಇದೇ ಆಗಿದೆ!
ನಾವು ಮೊದಲೇ ತಿಳಿಸಿದಂತೆ ಶ್ಯಾಡೋ ಸಿನಿಮಾವನ್ನು ಅಧಿಕೃತವಾಗಿ ನಿರ್ಮಿಸಿರುವವರು ಚಕ್ರವರ್ತಿ ಎಂಬ ಆಂಧ್ರ ಮೂಲದ ವ್ಯಕ್ತಿ. ಇವತ್ತು ಸ್ವತಃ ಚಕ್ರವರ್ತಿ ಈ ಸಿನಿಮಾದ ಹೆಸರಿನಲ್ಲಿ ಯಾರ್ಯಾರನ್ನೋ ಸಿಕ್ಕಿಸಿ ಸಾಲ ಎತ್ತಿದ್ದಾನೆ ಎನ್ನುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಸಾಲದ್ದಕ್ಕೆ ತಮಗೆ ಉಪಕಾರ ಮಾಡಿದವರ ಬಗ್ಗೆಯೇ ಕೆಟ್ಟದಾಗಿ ಪುಕಾರೆಬ್ಬಿಸಿ, ತೆಪ್ಪಗಾಗಿದ್ದಾನೆ ಈ ಆಂಧ್ರ ಬಿಡ್ಡ!
ಸಿನಿಮಾ ಮಾಡಬೇಕು ಅಂತಾ ಹೇಳಿಕೊಳ್ಳುತ್ತಿದ್ದ ಚಕ್ರವರ್ತಿ ಆಲಿಯಾಸ್ ಚಕ್ರಿಯನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದು ವಿತರಕ ಬೆಂಗಳೂರು ಕುಮಾರ್ ಅಂತೆ. ವಿನೋದ್ ಪರಭಾಕರ್, ಶರತ್ ಲೋಹಿತಾಶ್ವ ಸೇರಿದಂತೆ ಚಿತ್ರದ ಕಲಾವಿದರಿಗೆ ಅಡ್ವಾನ್ಸ್ ಕೊಟ್ಟು ಸಿನಿಮಾ ಆರಂಭಿಸಿದ್ದೆಲ್ಲಾ ಸ್ವತಃ ಕುಮಾರ್. ಆರಂಭದಲ್ಲಿ ಈ ಸಿನಿಮಾದ ಕುರಿತಾಗಿ ಎಲ್ಲ ವ್ಯವಹಾರಗಳನ್ನು ನೋಡಿಕೊಂಡಿದ್ದು ಸ್ವತಃ ಕುಮಾರ್. ದಿನಕಳೆದಂತೆ ಶೂಟಿಂಗ್ ಮಾಡಿಸಲೂ ಚಕ್ರಿ ಬಳಿ ಕಾಸಿರಲಿಲ್ಲ. ಹೀಗಾಗಿ ಸ್ವತಃ ಕುಮಾರ್ ತಮ್ಮ ಪರಿಚಯವಿರುವ ಫೈನಾನ್ಷಿಯರ್ ಗಳ ಬಳಿ ಚಕ್ರಿಗೆ ಹಣದ ಏರ್ಪಾಟು ಮಾಡಿದ್ದರು. ಚೆನ್ನೈನ ಸಂಜಯ್ ಲಾಲ್ವಾನಿ ಬಳಿಯೂ ಹಣ ಕೊಡಿಸಿದ್ದರು. ಸಿನಿಮಾ ಬಿಡುಗಡೆಗೂ ಮುನ್ನ ಫೈನಾನ್ಸ್ ಕ್ಲಿಯರ್ ಮಾಡಿಕೊಳ್ಳಬೇಕಿದ್ದುದು ಚಕ್ರಿ ಜವಾಬ್ದಾರಿಯಾಗಿತ್ತು. ಆದರೆ ತನ್ನಷ್ಟಕ್ಕೆ ತಾನು ಸಿನಿಮಾದ ಹಕ್ಕುಗಳನ್ನು ಮಾರಿಕೊಂಡು, ಪಡೆದ ಸಾಲವನ್ನೂ ಮರುಪಾವತಿಸದೆ ಸೈಲೆಂಟಾಗಿ ಸಿನಿಮಾ ರಿಲೀಸ್ ಮಾಡಿಕೊಳ್ಳುವ ಸ್ಕೆಚ್ ಹಾಕಿದ್ದ ಚಕ್ರವರ್ತಿ. ಹೀಗಾಗಿ ಕನಕದುರ್ಗ ಚಲನಚಿತ್ರ ಸಂಸ್ಥೆಯಿಂದ ನಿರ್ಮಾಣಗೊಂಡ ಈ ಶ್ಯಾಡೋ ಸಿನಿಮಾ ಬಿಡುಗಡೆಯಾಗದಂತೆ ಸ್ಟೇ ತರಲಾಗಿತ್ತು. ಈಗ ಸ್ವತಃ ಬೆಂಗಳೂರು ಕುಮಾರ್ ಮಧ್ಯಸ್ಥಿಕೆ ವಹಿಸಿಕೊಂಡು ಚಿತ್ರ ರಿಲೀಸ್ ಆಗುವಂತೆ ನೋಡಿಕೊಂಡಿದ್ದಾರಂತೆ.
ಶ್ಯಾಡೋ ಸಿನಿಮಾ ತೆಲುಗಿನ ಸ್ಟಾಲಿನ್ ಚಿತ್ರದ ನಕಲು. ಅದೇ ಕತೆಯ ರಿಮೇಕ್ ಹಕ್ಕು ಪಡೆದು ಒಂದಿಷ್ಟು ಬದಲಾವಣೆ ಮಾಡಿಕೊಂಡು ಶ್ಯಾಡೋ ಚಿತ್ರವನ್ನು ರೂಪಿಸಿದ್ದಾರೆ. ಎಲ್ಲ ಅಂದುಕೊಂಡಂತೇ ಆಗಿದ್ದಿದ್ದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಚಿತ್ರದಲ್ಲಿಯೂ ಅತಿಥಿ ನಟನಾಗಿ ಕಾಣಿಸಿಕೊಳ್ಳಬೇಕಿತ್ತು. ಯಾವಾಗ ನಿರ್ಮಾಪಕ ಚಕ್ರವರ್ತಿ ಐನಾತಿ ಆಸಾಮಿ ಅನ್ನೋದು ಗೊತ್ತಾಯ್ತೋ ಆಗ ಎಲ್ಲವೂ ಬದಲಾಗಿತ್ತು.
ಈಗ ನೋಡಿದರೆ ವಿತರಕ ಬೆಂಗಳೂರು ಕುಮಾರ್ ಅವರ ಮೇಲೆ ಗೂಬೆ ಕೂರಿಸಿ, ಸಾಲ ಕೊಟ್ಟವರನ್ನು ವಂಚಿಸುವ ಕೆಟ್ಟ ಕೃತ್ಯಕ್ಕೆ ಚಕ್ರಿ ಕೈಯಿಟ್ಟಿದ್ದಾನೆ. ಬೆಂಗಳೂರು ಕುಮಾರ್ ಕನ್ನಡ ಸೇರಿದಂತೆ ತೆಲುಗು, ತಮಿಳು ಸಿನಿಮಾಗಳನ್ನು ಕರ್ನಾಟಕದಲ್ಲಿ ವಿತರಣೆ ಮಾಡುವ ಕೆಲಸವನ್ನು ಕಳೆದ ಹದಿನೈದು ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದಾರೆ. ಕನ್ನಡದಲ್ಲಿ ಸ್ವತಂತ್ರವಾಗಿ ಸಿನಿಮಾ ನಿರ್ಮಾಣ ಮಾಡುವ ಪ್ಲಾನು ಕೂಡಾ ಹೊಂದಿದ್ದಾರೆ.
ಈ ನಡುವೆ ಶ್ಯಾಡೋ ಇವತ್ತು ರಿಲೀಸೇನೋ ಆಗಿದೆ. ಆದರೆ ಈ ಚಿತ್ರದ ಕುರಿತಾಗಿ ಇನ್ನೂ ಏನೇನು ವಿವಾದಗಳು ಹೊರಬೀಳುತ್ತದೋ….?!
No Comment! Be the first one.