ಕಾಸರಗೋಡಿನಲ್ಲಿ ಕನ್ನಡ ಇದೆ. ಆದರೆ, ಕಾಸರಗೋಡು ಕರ್ನಾಟಕದಿಂದ ತಪ್ಪಿಸಿಕೊಂಡು ಎಷ್ಟೋ ವರ್ಷಗಳಾಗಿವೆ. ನಮ್ಮ ತಾಯ್ನುಡಿಯನ್ನು ನಮ್ಮೊಳಗೆ ಬದುಕಿಸಿಕೊಳ್ಳೋದೇ ಕಷ್ಟ. ಇಂಥಾದ್ದರಲ್ಲಿ ಯಾರದ್ದೋ ಹಿಡಿತದಲ್ಲಿರುವ ನೆಲದಲ್ಲಿ ನಮ್ಮದೆಂಬ ಭಾಷೆಯನ್ನು ದಕ್ಕಿಸಿಕೊಳ್ಳೋದು ಎಂಥಾ ಯಾತನೆಯ ಕೆಲಸವಲ್ಲವೇ? ಅದು ಎಂಥಾ ತ್ರಾಸದ ವಿಚಾರವೆಂಬುದನ್ನು ಒಂದು ಸರ್ಕಾರಿ ಶಾಲೆಯ ಹಿನ್ನೆಲೆಯಲ್ಲಿ ಪರಿಣಾಮಕಾರಿಯಾಗಿ ಹಿಡಿದಿಡುವ ಚಿತ್ರ ಸರ್ಕಾರಿ ಪ್ರಾಥಮಿಕ ಶಾಲೆ ಕಾಸರಗೋಡು, ಕೊಡುಗೆ ರಾಮಣ್ಣ ರೈ!
ಅದು ಕಾಸರಗೋಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಶಾಲೆಯ ಬೋರ್ಡನ್ನು ರಾಮಣ್ಣ ರೈ ಕೊಡುಗೆ ನೀಡಿದ್ದಾರಾದರೂ ಕನ್ನಡವನ್ನು ಉಳಿಸಿಕೊಳ್ಳೋದು ಯಾರಿಂದಲೂ ಸಾಧ್ಯವಿಲ್ಲ ಅನ್ನೋ ಮಟ್ಟಕ್ಕೆ ವ್ಯವಸ್ಥೆ ಹಡಾಲೆದ್ದಿರುತ್ತದೆ. ಕಾಸರಗೋಡಿನ ಕನ್ನಡ ಶಾಲೆಗೆ ಮಲಯಾಳಂ ಶಿಕ್ಷಕರನ್ನು ನೇಮಕ ಮಾಡಿದ್ದರ ವಿಚಾರವಾಗಿ ಆಗಾಗ ಗಡಿನಾಡಿನಲ್ಲಿ ದನಿಯೇಳುತ್ತಿರುತ್ತದಲ್ಲಾ? ಇನ್ನು ಅಲ್ಲಿದ್ದೆಷ್ಟೋ ಕನ್ನಡ ಶಾಲೆಗಳು ಮುಚ್ಚಿಹೋಗಿ ಅನಿವಾರ್ಯವಾಗಿ ಆ ಶಾಲೆಗಳ ಮಕ್ಕಳು ಮಲಯಾಳಂ ಶಾಲೆಗೆ ಸೇರುವ ಅನಿವಾರ್ಯತೆಯೂ ಸೃಷ್ಟಿಯಾಗಿದೆಯಲ್ಲಾ? ಅಂಥ ಎಲ್ಲಾ ಸಮಸ್ಯೆಗಳನ್ನು ಒಂದು ಕಡೆ ಸೇರಿಸಿ, ಅದಕ್ಕೆ ಕಥೆಯ ರೂಪ ಕೊಟ್ಟು ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರವನ್ನು ಕಟ್ಟಿಕೊಡಲಾಗಿದೆ.
ಇಡೀ ಶಾಲೆಯ ಮಕ್ಕಳ ಸಂಖ್ಯೆ ಐವತ್ತೆರಡು. ಆ ಶಾಲೆಯನ್ನು ಮುಚ್ಚಿಹಾಕುವುದನ್ನೇ ಪರಮ ಉದ್ದೇಶವನ್ನಾಗಿಸಿಕೊಂಡ ಕೇರಳದ ಶಿಕ್ಷಣಾಧಿಕಾರಿ. ಇಂಥವನ ಮುಂದೆ ಕನ್ನಡಕ್ಕಾಗಿ ಉಗ್ರ ಹೋರಾಟ ಮಾಡುವವರು, ಭಾಷಾ ಸ್ವಾಭಿಮಾನಕ್ಕಾಗಿ ತಲೆ ತೆಗೆಯಲೂ ಸಿದ್ಧರಾದವರು, ಶಾಲೆಯನ್ನು ಜೀವದಂತೆ ಪೊರೆಯುವ ಮುಖ್ಯೋಪಾಧ್ಯಾಯರೆಲ್ಲಾ ಗಂಟಲು ಕಿತ್ತು ಬರುವಂತೆ ಕೂಗಾಡಿದರೂ ಕೇರಳಿಗ ಅಧಿಕಾರಿಯ ಮಸಲತ್ತಿನ ಮುಂದೆ ಯಾವ ಕಿಮ್ಮತ್ತೂ ಸಿಗೋದಿಲ್ಲ. ಏಕಾಏಕಿ ವರ್ಷದ ಮಧ್ಯದಲ್ಲಿ ಶಾಲೆ ನಿಲ್ಲಿಸಿಬಿಡುತ್ತಾನೆ. ಉಢಾಳನಂತೆ ತಿರುಗಾಡುವವನೊಬ್ಬನ ಗೈಡೆನ್ಸು ಪಡೆದು ಮಕ್ಕಳೆಲ್ಲ ಒಂದು ಸೇರಿ ಮೈಸೂರಿಗೆ ಹೋಗಿ ಸಮಾಜ ಸೇವಕನೊಬ್ಬನನ್ನು ಕರೆತರುತ್ತಾರೆ.
ಹಾಗೆ ಬಂದ ಸಮಾಜ ಸೇವಕ ಹೇಗಾದರೂ ಶಾಲೆಯನ್ನು ಉಳಿಸಲು ನಡೆಸೋ ಶತ ಪ್ರಯತ್ನ. ಮತ್ತೆ ಮತ್ತೆ ಅದಕ್ಕೆ ಅಡ್ಡಗಾಲಾಗೋ ಥರ ಥರದ ಮಸಲತ್ತುಗಳು… ಇದೆಲ್ಲದರ ನಡುವೆ ಕಾಸರಗೋಡಿನೊಳಗೆ ಬೆರೆತು ಹೋಗಿರೋ ಕನ್ನಡತನದ ಕೂಗು ಗುರಿ ಮುಟ್ಟುತ್ತದಾ? ಕಾಸರಗೋಡನ್ನು ಉಳಿಸಿಕೊಳ್ಳೋ ಕರ್ನಾಟಕದ ಪ್ರಯತ್ನದಂತೆಯೇ ಕೇರಳಿಗರ ಅಬ್ಬರಾಟದ ನಡುವೆ ಅದು ಅಂತರ್ಧಾನವಾಗುತ್ತಾ ಎಂಬ ಕುತೂಹಲದೊಂದಿಗೆ ಹೋದರೆ ಈ ಚಿತ್ರ ಹೊಸಾ ಬಗೆಯದ್ದೊಂದು ಜಗತ್ತನ್ನೇ ಅನಾಯಾಸವಾಗಿ ಕಣ್ಮುಂದೆ ಕದಲುವಂತೆ ಮಾಡುತ್ತೆ.
ಈ ಚಿತ್ರದ ಮೂಲಕ ಕಳೆದುಹೋದದ್ದು ದಕ್ಕುವುದು ಕನ್ನಡ ಮಾತ್ರವಲ್ಲ ಹುಡುಗನ ಪ್ರಾಂಜಲ ಪ್ರೀತಿ ಕೂಡಾ. ಬಹುಶಃ ಒಂದು ಸರ್ಕಾರಿ ಶಾಲೆ ಉಳಿಸುವ ಸರ್ಕಸ್ಸಿನ ಸುತ್ತಲೇ ಗಿರಕಿ ಹೊಡೆದಿದ್ದರೆ ಇದೊಂದು ಮಾಮೂಲು ಚಿತ್ರವಾಗಿ ದಾಖಲಾಗುತ್ತಿತ್ತು. ಆದರೆ ನಿರ್ದೇಶಕ ರಿಷಬ್ ಶೆಟ್ಟಿ ಒಂದಿಡೀ ಕಾಸರಗೋಡಿನ ಒಡಲ ಉರಿಯನ್ನೆಲ್ಲ ತಣ್ಣಗೆ ಧಗ ಧಗಿಸುವಂತೆ ಮಾಡಿದ್ದಾರೆ. ಕಾಸರಗೋಡನ್ನು ಕರ್ನಾಟಕದಲ್ಲಿಯೇ ಉಳಿಸಿಕೊಳ್ಳಲು ಮಾಡಿದ ಹೋರಾಟದ ಸುತ್ತಲಿನ ವಿದ್ಯಮಾನಗಳನ್ನೆಲ್ಲ ಗಂಭೀರವಾಗಿ ಪರಿಗಣಿಸದವರಿಗೂ ಅದರ ಅಸಲೀ ಬಿಸಿ ತಟ್ಟುತ್ತದೆ. ಕನ್ನಡತನವನ್ನು ಎದೆಯಲ್ಲಿಟ್ಟುಕೊಂಡೇ ಕೇರಳ ತನ್ನ ರಾಜ್ಯ ಅಂತ ಒಪ್ಪಿಕೊಳ್ಳುವ ಅನಿವಾರ್ಯಕ್ಕೆ ಬಿದ್ದ ಆ ಮನಸುಗಳ ಅನಾಥಪ್ರಜ್ಞೆ ಹಸಿ ಹಸಿಯಾಗಿಯೇ ಪ್ರೇಕ್ಷಕರೆದೆಗೆ ದಾಟಿಕೊಳ್ಳುತ್ತೆ. ಇದರ ಜೊತೆಗೇ ಕಥೆಯೊಂದಿಗೆ ಬೆರೆತು ಹೋದಂತೆ ಆ ಭಾಗದ ಸಂಸ್ಕೃತಿಯನ್ನೂ ಕಟ್ಟಿಕೊಡುವಲ್ಲಿಯೂ ನಿರ್ದೇಶಕರು ಯಶಸ್ವಿಯಾಗಿದ್ದಾರೆ.
ಕಾಸರಗೋಡು ಭಾಗದ ಕನ್ನಡವೇ ತುಂಬಿರೋ ಇಡೀ ಚಿತ್ರ ಕೇವಲ ಭಾಷೆ, ಸರ್ಕಾರಿ ಶಾಲೆಯ ಅಳಿವು ಉಳಿವಿನ ಆಚೆಗೂ ಈ ಚಿತ್ರ ಮುಖ್ಯವಾಗುತ್ತದೆ. ಇಂಥಾ ಗಂಭೀರ ಕಥಾನಕವನ್ನೂ ಕೂಡಾ ಜ್ಯೂನಿಯರ್ ಕಿರಿಕ್ ಪಾರ್ಟಿಗಳ ಕೀಟಲೆಗಳ ಜೊತೆಗೆ ತಿಳಿಯಾಗಿ ನಿರೂಪಣೆ ಮಾಡಿರುವ ಶೈಲಿಯೂ ಸೆಳೆಯುತ್ತದೆ. ಒಟ್ಟಾರೆಯಾಗಿ ಒಂದು ಕಲಾತ್ಮಕ ಚೌಕಟ್ಟಿನೊಳಗಷ್ಟೇ ಬಂಧಿಯಾಗಬಹುದಾಗಿದ್ದ ಈ ಸೂಕ್ಷ್ಮ ಕಥೆಯನ್ನು ಕಮರ್ಷಿಯಲ್ ಬಯಲಲ್ಲಿಯೂ ಹರಿದಾಡಿಸೋ ಮೂಲಕ ರಿಷಬ್ ಶೆಟ್ಟಿ ಅಚ್ಚರಿ ಹುಟ್ಟಿಸುತ್ತಾರೆ.
ವಾಸುಕಿ ವೈಭವ್ ಸಂಗೀತ, ಅಜನೀಶ್ ಲೋಕನಾಥ್ ಹಿನ್ನಲೆ ಸಂಗೀತ, ವೆಂಕಟೇಶ್ ಅಂಗುರಾಜ್ ಛಾಯಾಗ್ರಹಣ, ಪ್ರದೀಪ್ ರಾವ್, ಪ್ರತೀಕ್ ಶೆಟ್ಟಿ ಸಂಕಲನ, ವಸಂತ್ರಾವ್ ಎಂ. ಕುಲಕರ್ಣಿ ಅವರ ಕಲಾ ನಿರ್ದೇಶನ, ಅಭಿಜಿತ್ ಮಹೇಶ್ ಹಾಗೂ ರಾಜ್ ಬಿ ಶೆಟ್ಟಿ ಸಂಭಾಷಣೆ… ಹೀಗೆ ಎಲ್ಲರ ಕೆಲಸವೂ ಜೀವಂತವಾಗಿವೆ.
ಅನಂತ್ ನಾಗ್ ಅವರ ಪಾತ್ರ ನಟನೆ ಮಾತ್ರವಲ್ಲ ಅವರು ತೊಟ್ಟಿರುವ ಬಟ್ಟೆಯನ್ನು ನೋಡ್ತಿದ್ದರೆ ಎಳೇ ಮುದುಕರಂತಾಡುವ ಹುಡುಗರೂ ನಾಚಿಕೊಳ್ಳಬೇಕು… ಹಾಗಿದೆ! ವಯಸ್ಸಿಗೆ ಮೀರಿದ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪ್ರಮೋದ್ ಶೆಟ್ಟಿ ಅಬ್ಬರಿಸುತ್ತಲೇ ಹೊಟ್ಟೆ ತುಂಬಾ ನಗಿಸುತ್ತಾರೆ. ಹುಡುಗ ಮಹೇಂದ್ರ ಸೇರಿದಂತೆ ಮಕ್ಕಳೆಲ್ಲರ ಪಾತ್ರಗಳೂ ನೋಡುಗರನ್ನು ತಾಕುತ್ತವೆ. ನಮ್ಮತನವೊಂದನ್ನು ಗಡಿಯಾಚೆಗೆ ಅನಾಥವಾಗಿಸಿದ ನಿಟ್ಟುಸಿರು, ಕೈಚಾಚಿ ನಿಂತ ಕನ್ನಡತನವನ್ನು ಕೇರಳದ ಪಾಲಾಗುವಂತೆ ಮಾಡಿದೆವೋ ಏನೋ ಎಂಬಂಥಾ ಪಾಪಪ್ರಜ್ಞೆ ಮತ್ತು ಯಾವ ಬೌಂಡರಿಗೂ ನಿಲುಕದ ಚೆಂದದ ಚಿತ್ರ ನೋಡಿದ ತೃಪ್ತಿಯನ್ನು ಖಂಡಿತಾ ಈ ಚಿತ್ರ ಪ್ರೇಕ್ಷಕರೊಳಗೆ ತುಂಬಿ ಕಳಿಸುತ್ತೆ!
#
No Comment! Be the first one.