ತ್ರ್ರಿವಿಧ ದಾಸೋಹಿಯಾಗಿ, ಬಸವಣ್ಣನವರ ಕಾಯಕವೇ ಕೈಲಾಸ ಎಂಬ ತತ್ವವನ್ನು ಅಕ್ಷರಶಃ ಪರಿಪಾಲಿಸಿಕೊಂಡು ಬಂದವರು ಸಿದ್ದಗಂಗಾ ಮಂದ ಶ್ರೀ ಶಿವಕುಮಾರ ಸ್ವಾಮೀಜಿ. ಈಗಿನ ಕಾಲಮಾನದಲ್ಲಿ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲದ ಅಂಖಂಡ ನೂರಾಹನ್ನೊಂದು ವರ್ಷಗಳ ಸಾರ್ಥಕ ಜೀವನ ನಡೆಸಿದ ಶ್ರೀಗಳು ಶಿವೈಕ್ಯರಾಗಿದ್ದಾರೆ.
ಮನುಷ್ಯನ ಆಯಸ್ಸಿನ ಬಗೆಗಿರೋ ವೈಜ್ಞಾನಿಕ ವಿಶ್ಲೇಷಣೆ, ವೈದ್ಯ ಜಗತ್ತಿನ ನಂಬಿಕೆಗಳಿಗೆಲ್ಲ ಸವಾಲೆಸೆಯುವಂತೆ ಇಳೀ ವಯಸ್ಸಿನಲ್ಲಿಯೂ ಲವಲವಿಕೆಯಿಂದಿದ್ದವರು ಸ್ವಾಮೀಜಿ. ತೀರಾ ಇತ್ತೀಚೆಗೆ ಬೆನ್ನು ನೋವಿ ಸಮಸ್ಯೆಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡೂ ಮತ್ತೆ ಶಿವಧ್ಯಾನಕ್ಕೆ, ದಾಸೋಹಕ್ಕೆ ಮರಳಿದ್ದ ಸ್ವಾಮೀಜಿ, ಈ ಬಾರಿಯೂ ಅಂಥಾದ್ದೇ ಅಚ್ಚರಿಯೊಂದನ್ನು ನೀಡುತ್ತಾರೆಂದೇ ಭಕ್ತ ಗಣ ಕಾದು ಕೂತಿತ್ತು. ನಾಡಿನ ತುಂಬಾ ಶ್ರೀಗಳ ಚೇತರಿಕೆಗಾಗಿ ಜಾ ತಿ ಧರ್ಮಗಳ ಹಂಗಿಲ್ಲದೆ ಪ್ರಾರ್ಥನೆ ನಡೆದಿತ್ತು. ಆದರೆ ದೇವರಂತೆಯೇ ಬದುಕಿದ್ದ ಸ್ವಾಮೀಜಿ ದೈಹಿಕವಾಗಿ ಮರೆಯಾದರೂ ದೇವರಂತೆಯೇ ಎಲ್ಲರ ಮನಸುಗಳಲ್ಲಿ ಉಳಿದು ಹೋಗಿದ್ದಾರೆ.
ಬಹುತೇಕ ಮಠ ಮಾನ್ಯಗಳು ರಾಜಕೀಯ ದಾಳಗಾಳಾಗಿರೋ ವಿಷಮ ಸನ್ನಿವೇಶದಲ್ಲಿ ದಾಸೋಹವೇ ನಿಜವಾದ ಧರ್ಮ ಎಂಬಂತೆ ಮುಂದುವರೆದ ಸಿದ್ದಗಂಗಾಶ್ರೀಗಳು ಈ ಶತಮಾನದ ಮಾದರಿ ಮಹಾಪುರುಷ. ಸಿದ್ದಗಂಗಾ ಮಠದೊಳಗೆ ಯಶಾ ಜಾತಿ ಧರ್ಮಗಳ ಕಿಸುರೂ ಕಾಲಿಡದಂತೆ ಕಡೇ ಕ್ಷಣದ ವರೆಗೂ ಅವರು ಸಮರ್ಥವಾಗಿಯೇ ನೋಡಿಕೊಂಡಿದ್ದರು. ಒಂದು ಮಠ, ಸ್ವಾಮೀಜಿ ಅಂದರೆ ಹೀಗೇ ಇರಬೇಕು ಎಂಬಂಥಾ ಜನಸಾಮಾನ್ಯರ ಆದರ್ಶ ಇದೆಯಲ್ಲಾ? ಅದರ ಸಾಕಾರ ಸ್ವರೂಪದಂತಿದ್ದವರು ಶಿವಕುಮಾರ ಸ್ವಾಮೀಜಿ.
ಮಾಗಡಿ ತಾಲೂಕಿನ ವೀರಾಪುರದಲ್ಲಿ ೧೯೦೭ರ ಏಪ್ರಿಲ್ ೧ರಂದು ಹೊನ್ನೇಗೌಡ ಮತ್ತು ಗಂಗಮ್ಮ ದಂಪತಿಯ ಪುತ್ರರಾಗಿ ಜನಿಸಿದ್ದ ಶ್ರೀಗಳ ಪೂರ್ವಾಶ್ರಮದ ಹೆಸರು ಶಿವಣ್ಣ. ಪುಟ್ಟ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡು ಅಕ್ಕನ ಆಸರೆಯಲ್ಲಿ ಬೆಳೆದ ಶ್ರೀಗಳು ವಿದ್ಯಾಭ್ಯಾಸದ ದಿನಗಳಲ್ಲಿಯೇ ಸಿದ್ದಗಂಗಾ ಮಠದ ಆಗಿನ ಪೀಠಾಧೀಶರಾಗಿದ್ದ ಉದ್ಧಾನ ಶಿಯೋಗಿಗಳ ಸಂಪರ್ಕಕ್ಕೆ ಬಂದಿದ್ದರು. ಬಳಿಕ ಅವರು ಚಿಕ್ಕ ವಯಸ್ಸಿನಲ್ಲಿಯೇ ಶ್ರೀ ಮಠದ ಉತ್ತರಾಧಿಕಾರಿಯಾಗಿದ್ದೂ ಕೂಡಾ ಆಕಸ್ಮಿಕವೇ. ಅಲ್ಲಿಂದ ಇಲ್ಲೀವರೆಗೆ ಶ್ರೀಗಳು ಸಿದ್ಧಗಂಗಾ ಮಠವನ್ನ ಕಟ್ಟಿ ನಿಲ್ಲಿಸಿದ್ದು, ಜಾತಿ ಧರ್ಮಗಳ ಹಂಗಿಲ್ಲದೆ ಲಕ್ಷಾಂತರ ಮಕ್ಕಳಿಗೆ ಜ್ಞಾನಾರ್ಜನೆ ನೀಡಿದ್ದೆಲ್ಲವೂ ಸುವರ್ಣ ಇತಿಹಾಸ.
ಶಿವಕುಮಾರ ಸ್ವಾಮಿಗಳು ಇಡೀ ಬದುಕಿನಲ್ಲಿ ಹಚ್ಚಿಕೊಂಡಿದ್ದದ್ದು ಶಿವಧ್ಯಾನ ಮತ್ತು ತ್ರಿವಿಧ ದಾಸೋಹವನ್ನು ಮಾತ್ರ. ಆರಂಭ ಕಾಲದಲ್ಲಿ ಊರೂರು ಸುತ್ತಿ ಭಕ್ತರ ಮನೆಗಳಿಂದ ಧವಸ ಧಾನ್ಯ ಸಂಗ್ರಹಿಸಿ ಅಕ್ಷರ ದಾಸೋಹ ನಡೆಸಿದ್ದ ಶಿವಕುಮಾರ ಸ್ವಾಮೀಜಿ ನಮ್ಮ ಕಾಲದಲ್ಲಿ ಜೀವಿಸಿದ್ದರೆಂಬುದೇ ನಮ್ಮೆಲ್ಲರ ಹೆಮ್ಮೆ. ಸನ್ಯಾಸದ ನಿಜವಾದ ಪಾವಿತ್ರ್ಯಕ್ಕೆ, ನಿಜವಾದ ಧರ್ಮ ಯಾವುದೆಂಬುದಕ್ಕೆ ಶ್ರೀಗಳು ಜೀವಿಸಿದ ರೀತಿಯೇ ಉದಾಹರಣೆ.
ದೇವರಂತೆಯೇ ಬದುಕಿ ದೇವರಾಗಿಯೇ ಉಳಿದುಹೋದ ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ಈ ನಾಡು ಯಾವತ್ತಿಗೂ ಋಣಿಯಾಗಿರುತ್ತದೆ.
#
No Comment! Be the first one.