ಯೋಗರಾಜ ಭಟ್ ನಿರ್ದೇಶನದ ಪಂಚತಂತ್ರ ಹಾಡುಗಳ ಮೂಲಕ ಅಲೆಯೆಬ್ಬಿಸುತ್ತಾ ಬಿಡುಗಡೆಯ ಹಾದಿಯಲ್ಲಿದೆ. ಆದರೆ ಈ ಸಿನಿಮಾ ಬಿಡುಗಡೆಯಾಗೋ ಮುನ್ನವೇ ನಾಯಕಿಯಾಗಿ ನಟಿಸಿರೋ ಸೋನಲ್ ಮೊಂತೇರೋ ಅದೃಷ್ಟ ಏಕಾಏಕಿ ಕಲಾಯಿಸಿಬಿಟ್ಟಿದೆ. ಈಗ ಹರಿದಾಡುತ್ತಿರೋ ಸುದ್ದಿ ನಿಜವಾದರೆ ಸೋನಲ್ ಇಷ್ಟರಲ್ಲಿಯೇ ಬಾಲಿವುಡ್ ಚಿತ್ರದಲ್ಲಿ ನಟಿಸಲಿದ್ದಾರೆ.
ಯೋಗರಾಜ ಭಟ್ ಬರೆದಿರೋ ಶೃಂಗಾರದ ಹೊಂಗೇಮರ ಹೂ ಬಿಟ್ಟಿದೆ ಎಂಬ ಹಾಡಿಗೆ ಹಾಟ್ ಆಗಿಯೇ ಹೆಜ್ಜೆ ಹಾಕೋ ಮೂಲಕ ಸೋನಲ್ ಸುದ್ದಿ ಮಾಡಿದ್ದರು. ಅವರೀಗ ಬಾಲಿವುಡ್‌ನ ಚಿತ್ರವೊಂದಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರಂತೆ. ಆದರೆ ಅವರ ಪ್ರಧಾನ ಆದ್ಯತೆ ಕನ್ನಡವೇ. ಬಾಲಿವುಡ್ ಚಿತ್ರದಲ್ಲಿ ಅವಕಾಶ ಸಿಕ್ಕಿದ್ದು ಹಾದಾದರೂ ಅಲ್ಲಿಯೇ ನೆಲೆಗೊಳ್ಳುವ ಆಲೋಚನೆ ಸೋನಲ್ ಗೆ ಇದ್ದಂತಿಲ್ಲ.
ಸೋನಲ್ ತುಳು ಸಿನಿಮಾಗಳ ಮೂಲಕವೇ ನಟನೆಗಿಳಿದವರು. ಪಿಲಿ ಬೈಲ್ ಯಮನಕ್ಕ, ಮೈ ನೇಮ್ ಈಸ್ ಅಣ್ಣಪ್ಪ ಮುಂತಾದ ತುಳು ಚಿತ್ರಗಳಲ್ಲಿಯೂ ಅವರು ನಟಿಸಿದ್ದರು. ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಲೇ ಗಾಯಕಿಯೂ ಆಗಿರೋ ಸೋನಲ್ ಅವರದ್ದು ಬಹುಮುಖ ಪ್ರತಿಭೆ. ಅದು ಹೇಗೋ ಭಟ್ಟರ ಪಂಚತಂತ್ರದ ಮೂಲಕ ಸೋನಲ್ ಕನ್ನಡಕ್ಕೂ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ.
ತುಳು ಚಿತ್ರಗಳಲ್ಲಿ ನಟಿಸುತ್ತಲೇ ನಟಿಯಾಗಿ ರೂಪುಗೊಂಡಿದ್ದ ಸೋನಲ್ ಗೆ ಆರಂಭದಿಂದಲೂ ಆಸಕ್ತಿ ಇದ್ದದ್ದು ಕನ್ನಡ ಚಿತ್ರರಂಗದತ್ತ. ಅದು ಪಂಚತಂತ್ರದ ಮೂಲಕವೇ ಸಾಕಾರಗೊಂಡಿದೆ. ಇನ್ನೂ ಚಿತ್ರೀಕರಣದ ಹಂತದಲ್ಲಿರುವಾಗಲೇ ಈ ಚಿತ್ರದಿಂದ ಸೋನಲ್‌ಗೆ ಭರ್ಜರಿ ಪಬ್ಲಿಸಿಟಿಯೇ ಸಿಕ್ಕಿದೆ. ಅದರ ಒಡ್ಡೋಲಗದಲ್ಲಿಯೇ ಅವರೀಗ ಬಾಲಿವುಡ್ ಕಡೆ ಹೊರಟಿದ್ದಾರೆ. ಇಷ್ಟರಲ್ಲಿಯೇ ಶೃಂಗಾರದ ಹೊಂಗೇಮರ ಬಾಲಿವುಡ್ಡಲ್ಲಿಯೂ ಹೂ ಬಿಡಲಿದೆ.