ಅರುಣ್ ಕುಮಾರ್.ಜಿ
ಫೋಟೋಗಳು : ಕೆ.ಎನ್. ನಾಗೇಶ್ ಕುಮಾರ್, ಹಿರಿಯ ಪತ್ರಿಕಾ ಛಾಯಾಗ್ರಾಹಕ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ಇದೇ 2023ರ ಸೆಪ್ಟೆಂಬರ್ 23ರಂದು ನಡೆಯಲಿದೆ.
ಈ ಸಲ ಛೇಂಬರ್ ಅಧ್ಯಕ್ಷ ಸ್ಥಾನಕ್ಕೆ ಯಾರು ಬಂದು ಕೂರಬಹುದು ಎನ್ನುವ ಕುತೂಹಲ ಒಂದು ಕಡೆಯಾದರೆ, ಅಭ್ಯರ್ಥಿಗಳ ನಡುವೆ ಪೈಪೋಟಿ ಮತ್ತೊಂದು ಕಡೆ. ಈ ಬಾರಿ ವಾಣಿಜ್ಯ ಮಂಡಳಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಥೇಟು ರಾಜಕೀಯ ಪಕ್ಷಗಳ ಪುಢಾರಿಗಳಂತೆ ತಂತ್ರಗಾರಿಕೆ ಆರಂಭಿಸಿದ್ದಾರೆ. ಹಾಗೆ ನೋಡಿದರೆ, ಪ್ರಸಕ್ತ ವರ್ಷ ಅಧ್ಯಕ್ಷಸ್ಥಾನ ವಿತರಕ ವಲಯಕ್ಕೆ ಮೀಸಲಾಗಿದೆ. ವೃತ್ತಿಪರ ವಿತರಕರ ಜೊತೆಗೆ ನಿರ್ಮಾಪಕರಾಗಿ ಹೆಸರು ಮಾಡಿ, ಸಣ್ಣ ಪುಟ್ಟ ವಿತರಣೆ ಮಾಡಿರುವವರೂ ಈಗ ಅಧ್ಯಕ್ಷಗಾದಿಯ ಮೇಲೆ ಕಣ್ಣಿಟ್ಟಿದ್ದಾರೆ.
ಈ ಬಾರಿ ವಾಣಿಜ್ಯ ಮಂಡಳಿಯ ಚುನಾವಣೆಗೆ ಸ್ಪರ್ಧಿಸಿರುವವರಲ್ಲಿ ಪ್ರಾಮಾಣಿಕರು ಅನ್ನಿಸಿಕೊಂಡವರು, ಹಿಂದೆ ತಾವು ಮಾಡಿರುವ ಉತ್ತಮ ಕೆಲಸಗಳ ಬಗ್ಗೆ ಹೇಳಿಕೊಳ್ಳುತ್ತಿದ್ದಾರೆ. ಇನ್ನುಳಿದವರು ಹೇಗಾದರೂ ಮಾಡಿ ಅಧಿಕಾರಕ್ಕೆ ಬರಬೇಕು ಅಂತಾ ವಾಮಮಾರ್ಗವನ್ನು ಅನುಸರಿಸುತ್ತಿದ್ದಾರೆ.
ಪ್ರಜ್ಞಾವಂತ ಮಾರ್ಸ್ ಸುರೇಶ್
ಪ್ರಸಕ್ತ ಚುನಾವಣೆಯಲ್ಲಿ ನಾಲ್ಕು ಜನ ಅಧ್ಯಕ್ಷಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಅದರಲ್ಲಿ ಹಿರಿಯ ವಿತರಕ ಮಾರ್ಸ್ ಸುರೇಶ್ ಒಬ್ಬರನ್ನು ಬಿಟ್ಟು ಉಳಿದ ಮೂವರೂ ಅಭ್ಯರ್ಥಿಗಳು ಅನ್ಯದಾರಿ ಅನುಸರಿಸುತ್ತಿರೋದು ಗುಟ್ಟಾಗೇನೂ ಉಳಿದಿಲ್ಲ. ಮಾರ್ಸ್ ಸುರೇಶ್ ಅವರ ಸಿಂಡಿಕೇಟಿನಲ್ಲಿ ಸದ್ಯಕ್ಕೆ ರೂಪಾ ಅಯ್ಯರ್, ಕರಿಸುಬ್ಬು ಮತ್ತು ನವಯುಗ ನಾರಾಯಣ ರೆಡ್ಡಿ ಮಾತ್ರ ಇದ್ದಾರೆ. ಕಡೇ ಘಳಿಗೆಯಲ್ಲಿ ಇನ್ನೂ ಕೆಲವಾರು ಮಂದಿ ಸುರೇಶ್ ಸರ್ಕಲ್ಲಿಗೆ ಸೇರಿಕೊಳ್ಳುವ ಅಂದಾಜಿದೆ. ವಿ.ಎಚ್. ಸುರೇಶ್ (ಮಾರ್ಸ್ ಸುರೇಶ್) ಎರಡು ಸಿನಿಮಾಗಳಿಗೆ ಪಾಲುದಾರ ನಿರ್ಮಾಪಕರಾಗಿದ್ದರು ಅನ್ನೋದು ಬಿಟ್ಟರೆ, ಇವತ್ತಿಗೂ ಪೂರ್ಣ ಪ್ರಮಾಣದಲ್ಲಿ ವಿತರಕರಾಗಿಯೇ ಉಳಿದಿದ್ದಾರೆ. ಸದ್ಯ ಸಿನಿಮಾ ವಲಯದಲ್ಲಿ ವಿಚಾರವಂತ ಅನ್ನಿಸಿಕೊಂಡವರು ಯಾರಾದರೂ ಇದ್ದರೆ ಅದು ಸುರೇಶ್ ಒಬ್ಬರೇ.
ಚಲನಚಿತ್ರ ವಾಣಿಜ್ಯ ಮಂಡಳಿಯ ಈ ವರೆಗಿನ ಹಲವಾರು ಮೈಲುಗಲ್ಲುಗಳಲ್ಲಿ ಸುರೇಶ್ ಅವರ ಕಿಂಚಿತ್ ಪಾಲಿದೆ. ಹಿರಿಯ ಪ್ರದರ್ಶಕರಾದ ತಲ್ಲಂ ನಂಜುಂಡ ಶೆಟ್ಟಿ ಮತ್ತು ವಿತರಕರಾದ ಎಚ್ ಡಿ ಗಂಗರಾಜ್ ಅಧ್ಯಕ್ಷತೆಯ ಅವಧಿಯಲ್ಲಿ ವಿತರಕ ವಲಯದ ಗೌರವ ಕಾರ್ಯದರ್ಶಿಯಾಗಿ, ಕಲಾವಿದೆ, ನಿರ್ಮಾಪಕರಾದ ಡಾ.ಜಯಮಾಲ ಮತ್ತು ಪ್ರದರ್ಶಕರಾದ ಕೆ.ವಿ.ಚಂದ್ರಶೇಖರ್ ಅವಧಿಯಲ್ಲಿ ವಿತರಕ ವಲಯದಿಂದ ಉಪಾಧ್ಯಕ್ಷರಾಗಿದ್ದವರು ಮಾರ್ಸ್ ಸುರೇಶ್. ತಲ್ಲಂ ನಂಜುಂಡ ಶೆಟ್ಟಿ ಅವರ ಆಡಳಿತಾವಧಿಯಲ್ಲಿ ಮಂಡಳಿಯ ನೂತನ ಕಟ್ಟಡದ ನಿರ್ಮಾಣ, ಡಾ. ಜಯಮಾಲ ಅವರ ಅವಧಿಯಲ್ಲಿ ನಡೆದ ಕನ್ನಡ ಚಿತ್ರರಂಗದ ಅಮೃತ ಮಹೋತ್ಸವ ಸೇರಿದಂತೆ ಉತ್ತಮರ ಅವಧಿಯಲ್ಲಿ ಉದ್ಯಮಕ್ಕೆ ಆದ ಒಳ್ಳೇ ಕೆಲಸಗಳಲ್ಲಿ ಸುರೇಶ್ ಸಕ್ರಿಯ ಪಾಲುದಾರರಾಗಿದ್ದವರು. ವಿತರಕನಾಗಿ, ಬದಲಾಗುತ್ತಿರುವ ಚಿತ್ರೋದ್ಯಮದ ಒಳಹೊರಗನ್ನು ಹತ್ತಿರದಿಂದ ನೋಡುತ್ತಾ ಬಂದಿರುವ ಸುರೇಶ್ ಅಧ್ಯಕ್ಷ ಸ್ಥಾನಕ್ಕೆ ಬಂದರೆ ಮಾತ್ರ ವಾಣಿಜ್ಯ ಮಂಡಳಿಗೆ ಅಂಟಿಕೊಂಡಿರುವ ಕಲ್ಮಶಗಳು ತೊಳೆಯಲು ಸಾಧ್ಯ.
ಕೆಲಸಗಾತಿ ರೂಪಾ ಅಯ್ಯರ್
ನಿರ್ದೇಶಕಿ ರೂಪಾ ಅಯ್ಯರ್ ಕೋವಿಡ್ ಸಂದರ್ಭದಲ್ಲಿ ಸಿನಿಮಾ ಮಂದಿಗಾಗಿ ದುಡಿದಿದ್ದಾರೆ. ನೋಡಲ್ ಆಫೀಸರ್ ಆಗಿ ಚಿತ್ರರಂಗದ ಸದಸ್ಯರಿಗೆ ವ್ಯಾಕ್ಸಿನ್ ಹಾಕಿಸಿದ್ದರು. ಅದಕ್ಕೂ ಮುಂಚೆ, ಪ್ರಧಾನ ಮಂತ್ರಿಗಳ ಆಯುಷ್ಮಾನ್ ಆರೋಗ್ಯ ಕಾರ್ಡ್ಅನ್ನು ಚಿತ್ರರಂಗದ ಎಲ್ಲಾ ವಿಭಾಗಗಳಿಗೆ, ನಿರ್ಮಾಪಕರು ಮತ್ತು ವಿತರಕರಿಗೆ, ಥೇಟರ್ ಕಾರ್ಮಿಕರಿಗೆ ತನ್ನ ಸ್ವಂತ ಖರ್ಚಿನಿಂದ ಕೊಡಿಸಿದ್ದರು. ಕೋವಿಡ್ ಸಮಯದಲ್ಲಿ ಸರ್ಕಾರದ ವತಿಯಿಂದ ಚಿತ್ರರಂಗದ ಸದಸ್ಯರಿಗಾಗಿ 10 ಸಾವಿರ ರೇಶನ್ ಕಿಟ್ ತಲುಪಿಸುವ ವ್ಯವಸ್ಥೆ ಮಾಡಿಸಿದ್ದರು. GST ವ್ಯವಸ್ತೆಯ ಬದಲಾವಣೆಗಾಗಿ, ವಾಣಿಜ್ಯ ಮಂಡಳಿಯ ಪದಾಧಿಕಾರಿಗಳನ್ನು ಪಾರ್ಲಿಮೆಂಟಿನಲ್ಲಿ ಕೇಂದ್ರ ಸಚಿವೆ ಶ್ರೀ ನಿರ್ಮಲ ಸೀತಾರಾಂ ಅವರ ಭೇಟಿಗೆ ಕಾರಣರಾಗಿದ್ದು ಕೂಡಾ ಇದೇ ರೂಪಾ ಅಯ್ಯರ್. ಇವೆಲ್ಲ ಕಾರಣ ಸಾಕು ರೂಪಾ ಅವರನ್ನು ಉಪಾಧ್ಯಕ್ಷರ ಸ್ಥಾನಕ್ಕೆ ಆಯ್ಕೆ ಮಾಡಲು. ಇನ್ನು, ಸಿನಿಮಾ ವಲಯ ಮಾತ್ರವಲ್ಲದೆ, ರಾಜಕೀಯ ವಲಯದಲ್ಲೂ ಉತ್ತಮ ಹೆಸರು ಹೊಂದಿರುವ ಅಂಚೆಹಳ್ಳಿ ಶಿವಕುಮಾರ್ ಖಜಾಂಚಿ ಸ್ಥಾನದ ಅಭ್ಯರ್ಥಿಯಾಗಿದ್ದಾರೆ. ಅಂಚೆಹಳ್ಳಿ ಶಿವಕುಮಾರ್ ವಾಣಿಜ್ಯ ಮಂಡಳಿಯ ಎಲ್ಲ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಾ, ಯಾರದ್ದೇ ಕಷ್ಟಕ್ಕೆ ಸ್ಪಂದಿಸುವ ಗುಣ ಹೊಂದಿದ್ದಾರೆ.
ಮೂರು ಕೋಟಿ ಸಾಲ-ಸುರೇಶಣ್ಣಂಗೆ ಬಾಲ!
ಎನ್.ಎಂ. ಸುರೇಶ್ ತಾವು ನಿರ್ದೇಶಕರಾಗಿರುವ ಮಲ್ಲೇಶ್ವರಂ ಸಹಕಾರಿ ಬ್ಯಾಂಕಿನಿಂದ ನಿರ್ಮಾಪಕರ ಸಂಘದ ಕಟ್ಟಡಕ್ಕೆ ಮೂರು ಕೋಟಿ ರೂಪಾಯಿ ಸಾಲ ಮಂಜೂರು ಮಾಡಿಸಿದ್ದಾರಂತೆ. ಸಂಘದ ಆಸ್ತಿಪತ್ರಗಳನ್ನು ಅಡ ಇರಿಸಿಕೊಂಡು ಕೊಡಿಸುತ್ತಿರುವ ಹಣವನ್ನು ತಾವೇ ದೇಣಿಗೆ ಕೊಟ್ಟಂತೆ ಸುರೇಶಣ್ಣ ಬಿಲ್ಡಪ್ ಕೊಡುತ್ತಿದ್ದಾರೆ ಅಂತಾ ಅವರ ಸುತ್ತ ಮುತ್ತಲಿನವರೇ ಮಾತಾಡಿಕೊಳ್ಳುತ್ತಿದ್ದಾರೆ. ಶಿಲ್ಪಾ ಶ್ರೀನಿವಾಸ್ ಮತದಾರರ ಮನೆಗೆ ಹೋಗಿ ಸಿಲ್ವರ್ ಕಾಯಿನ್ ಕೊಟ್ಟು, ಪೇಟ ಹಾರ ಹಾಕಿ ಮತ ಯಾಚಿಸುತ್ತಿದ್ದಾರೆ. ಇನ್ನು ಎ. ಗಣೇಶ್ ಸದಸ್ಯರನ್ನು ರೆಸಾರ್ಟುಗಳಿಗೆ ಕರೆದುಕೊಂಡು ಹೋಗಿ ಪಾರ್ಟಿ ಮಾಡಿಸುತ್ತಿದ್ದಾರೆ. ಅಧ್ಯಕ್ಷ ಸ್ಥಾನ ಸೇರಿದಂತೆ ಇನ್ನಿತರ ಪದಾಧಿಕಾರಿ ಜಾಗಕ್ಕೆ ಆಸೆ ಪಟ್ಟಿರುವ ಅನೇಕರು ಮತದಾರ ಸದಸ್ಯರ ಮನವೊಲಿಸಿಕೊಳ್ಳಲು ದೇವನಹಳ್ಳಿ ಫಾರ್ಮ್ ಹೌಸಿನಿಂದ ಗೋವಾ ತನಕ ಟೂರು ಆಯೋಜಿಸುತ್ತಿದ್ದಾರೆ.
ಗೋವಿಂದಾಯನಮಃ!
ಸಾ.ರಾ. ಗೋವಿಂದು ಅವಧಿಯಲ್ಲಿ ಮೆಂಬರ್ ಶಿಪ್ ಹಣದ ವಿಚಾರದಲ್ಲಿ ಬಾರೀ ಅವ್ಯವಹಾರ ನಡೆದಿದೆ, ಹೊಸ ಸದಸ್ಯರಿಂದ ಪಡೆದ ಹಣಕ್ಕೂ ಇಲ್ಲಿರುವ ರೆಸಿಪ್ಟಿಗೂ ತಾಳೆಯಾಗದೇ ಗೊಂದಲವಾಗಿದೆ, ಈ ಅವ್ಯವಹಾರದ ಮೊತ್ತ ಒಂದೂ ಕಾಲು ಕೋಟಿ ರೂಪಾಯಿಗಳಷ್ಟು ಎನ್ನುವ ಮಾತಿದೆ. ಬರೀ ಸದಸ್ಯತ್ವದ ಹಣದಲ್ಲೇ ಈ ಮಟ್ಟಿಗಿನ ಗೋಲ್ಮಾಲ್ ನಡೆದಿದೆ ಎಂದಾದರೆ, ಇನ್ನುಳಿದಂತೆ ಎಲ್ಲೆಲ್ಲಿ, ಯಾರ್ಯಾರು ಎಷ್ಟೆಷ್ಟು ಬಿಲ ತೋಡಿ ಗೆಬರಿದ್ದಾರೋ ಗೊತ್ತಿಲ್ಲ.
ಈ ಅವ್ಯವಹಾರವನ್ನು ಕಂಡು ಹಿಡಿಯಲು ಹಿರಿಯ ಪ್ರದರ್ಶಕ ಕೆ.ವಿ. ಚಂದ್ರಶೇಖರ್ ಅವರನ್ನು ಮುಖ್ಯಸ್ಥರನ್ನಾಗಿ ಮಾಡಿ ಕಮಿಟಿ ರಚಿಸಲಾಗಿದೆ. ಒಂದು ವೇಳೆ ಮಾರ್ಸ್ ಸುರೇಶ್ ಆಯ್ಕೆಯಾಗಿ ಬಂದರೆ, ಈ ಹಿಂದೆ ನಡೆದಿದೆ ಎನ್ನಲಾದ ಎಲ್ಲ ಅಕ್ರಮಗಳೂ ಬಯಲಿಗೆ ಬರೋದು ಖಚಿತ ಅಂತಾ ಸ್ವತಃ ವಾಣಿಜ್ಯ ಮಂಡಳಿ ಸದಸ್ಯರೇ ಮಾತಾಡಿಕೊಳ್ಳುತ್ತಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಇವತ್ತಿಗೂ ಉತ್ತಮ ಹೆಸರು ಉಳಿಸಿಕೊಂಡು ಘನತೆಯಿಂದ ವ್ಯವಹಾರ ಮಾಡುತ್ತಿರುವ ಕೆಲವರಲ್ಲಿ ಕೆ.ವಿ.ಚಂದ್ರಶೇಖರ್, ಮಾರ್ಸ್ ಸುರೇಶ್ ರಂಥ ವಿರಳರಷ್ಟೇ ಉಳಿದಿದ್ದಾರೆ. ಹೀಗಾಗಿ ಸಾರಾ ಗೋವಿಂದು ಎನ್.ಎಂ. ಸುರೇಶ್ ಅವರನ್ನು ಗೆಲ್ಲಿಸಲು ಪಣ ತೊಟ್ಟಿದ್ದಾರೆ. ಇನ್ನೊಂದು ಕೈಯನ್ನು ಶಿಲ್ಪಾ ಶ್ರೀನಿವಾಸ್ ಹೆಗಲ ಮೇಲೂ ಇಟ್ಟಿದ್ದಾರೆ. ʻಇಬ್ಬರಲ್ಲಿ ಒಬ್ಬರು ಗೆದ್ದರೂ ಓಕೆ. ತಮ್ಮ ಹಳೇ ಫೈಲು ರೀ ಓಪನ್ ಆಗದಿದ್ದರೆ ಸಾಕುʼ ಅಂತಾ ಗೋವಿಂದಣ್ಣ ಬಯಸಿದ್ದಾರೆ ಅನ್ನೋದು ಅವರ ನಿಕಟವರ್ತಿಗಳೇ ನೀಡುತ್ತಿರುವ ವರ್ತಮಾನ!
ಇವ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಎ. ಗಣೇಶ್ ಈ ಸಲ ನಾನೇ ಅಧ್ಯಕ್ಷ ಅಂತಾ ಒಂದಾದಮೇಲೊಂದು ತಂಡವನ್ನು ಪಿಕ್ನಿಕ್ ಕಳಿಸುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.
ಇವರೆಲ್ಲರ ನಡುವೆ ಎನ್.ಎಂ. ಸುರೇಶ್, ಶಿಲ್ಪಾ ಶ್ರೀನಿವಾಸ್ ಮತ್ತು ಎ ಗಣೇಶ್ ಸಿಂಡಿಕೇಟಿನ ಹಲವರು ಯದ್ವಾತದ್ವಾ ಖರ್ಚು ಮಾಡಿ ಪ್ರಚಾರಕ್ಕೆ ನಿಂತಿದ್ದಾರೆ. ಯಾರಿಗೆ ಗೊತ್ತು? ಬಂದಿದ್ದೆಲ್ಲಾ ಬರಲಿ ಅಂತಾ ಪಾರ್ಟಿ, ಕಾಸು, ಗಿಫ್ಟು ಎಲ್ಲವನ್ನೂ ಈಸಿಕೊಂಡು ಕಡೆಗೆ ಮಾರ್ಸ್ ಸುರೇಶ್ ಥರದ ಸಭ್ಯರ ತಂಡವನ್ನೇ ಜನ ಆಯ್ಕೆ ಮಾಡಬಹುದು!
No Comment! Be the first one.