ಸಿನಿಮಾ ಪತ್ರಕರ್ತರುಗಳಾದ ಹರಿ ಪರಾಕ್ ಮತ್ತು ಅಮಿತ್ ದೇಸಾಯಿ ಸೇರಿ ನಿರ್ದೇಶಿಸಿರುವ ಸಿನಿಮಾ ‘Sorry ಕಾವೇರಿ’. ಹೆಸರಿಗೆ ತಕ್ಕಂತೆ ಸೆಂಟಿಮೆಂಟಲ್ ಫೀಲ್ ಕೊಡುವ ಈ ಚಿತ್ರದ ಫಸ್ಟ್ ಲುಕ್ ಇತ್ತೀಚಿಗೆ ಬಿಡುಗಡೆಗೊಂಡಿದೆ. ಈ ಪೋಸ್ಟರ್ ನ್ನು ನೀನಾಸಂ ಸತೀಶ್ ರಿಲೀಸ್ ಮಾಡಿದ್ದು, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಪೋಸ್ಟರ್ ನಲ್ಲಿ ಪುಟ್ಟ ಬಾಲಕಿಯೊಬ್ಬಳು ಕ್ಯಾಮೆರಾ ಕೈಯಲ್ಲಿ ಹಿಡಿದು ನಗುತ್ತಿರುವ ಫೋಟೋ ಒಂದೆಡೆಯಾದರೆ ಪಕ್ಕದಲ್ಲಿಯೇ ಪಕ್ಕದಲ್ಲೆ ಯಶಸ್ವಿಯಾಗಿ ರೆಕಾರ್ಡ್ ಆಗುತ್ತಿದೆ ಎನ್ನುವ ಬಾಲಕಿಯ ನೆರಳಿನ ಫೋಟೋ ಇದೆ. ತದ್ವಿರುದ್ಧವಾಗಿರುವ ಈ ಪೋಸ್ಟರ್ ಸದ್ಯ ಸಾಕಷ್ಟು ಕೌತುಕತೆಯನ್ನು ಮೂಡಿಸಿದೆ. ‘Sorry ಕಾವೇರಿ’ ಚಿತ್ರದಲ್ಲಿ ಬಾಲಕಿ ಕಾವೇರಿ ಹುಟ್ಟುಹಬ್ಬಕ್ಕೆ ಆಕೆಯ ತಂದೆ ಒಂದು ಹ್ಯಾಂಡಿ ಕ್ಯಾಮರಾ ಉಡುಗೊರೆಯಾಗಿ ಕೊಡುತ್ತಾರೆ. ಅಲ್ಲಿಂದ ಕಾವೇರಿ ಆ ಕ್ಯಾಮರಾದೊಂದಿಗೆ ನಂಟು ಬೆಳೆಸಿಕೊಳ್ಳುತ್ತಾಳೆ. ಸದಾ ಕೈಯಲ್ಲಿ ಕ್ಯಾಮೆರಾ ಹಿಡಿದು ತಿರುಗುವ ಕಾವೇರಿಯ ಬದುಕಿನ ಹಲವು ಸುಂದರ ಕ್ಷಣಗಳು ಆ ಕ್ಯಾಮರಾದಲ್ಲಿ ಸೆರೆಯಾಗುತ್ತವೆ. ಆದರೆ ಮುಂದೆ ಅವಳ ಬದುಕಿನಲ್ಲಿ ಬರುವ ಒಂದು ಕೆಟ್ಟ ಅಧ್ಯಾಯಕ್ಕೂ ಆ ಕ್ಯಾಮರಾ ಸಾಕ್ಷಿಯಾಗುತ್ತದೆ. ಇದು ಸಿನಿಮಾದ ಒನ್ ಲೈನ್ ಸ್ಟೋರಿ.
ಅಂದಹಾಗೆ ಕಾವೇರಿ ಪಾತ್ರದಲ್ಲಿ ಖ್ಯಾತ ಬಾಲನಟಿ ಪ್ರಾಣ್ಯಾ ರಾವ್ ಕಾಣಿಸಿಕೊಂಡಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಪ್ರಾಣ್ಯಾ ಈ ಸಿನಿಮಾದಲ್ಲಿ ಕಾವೇರಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇತ್ತೀಚಿಗೆ ಪ್ರಾಣ್ಯಾ ನಟಿಸಿರುವ ಮುದ್ದು ಮುದ್ದಾಗಿ ಶಾರ್ಟ್ ಮೂವಿ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟ್ ನಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. ಜತೆಗೆ ತೆಲುಗು ನಟ ನಾಣಿ ಚಿತ್ರದಲ್ಲೂ ಪ್ರಾಣ್ಯಾ ಅಭಿನಯಿಸಿದ್ದಾರೆ. ಇನ್ನು ಚಿತ್ರಕ್ಕೆ ಹಿರಿಯ ಸಂಗೀತ ನಿರ್ದೇಶಕ ವಿ. ಮನೋಹರ್ ಸಂಗೀತ ಸಂಯೋಜನೆ ಮಾಡಿದ್ದು, ಎ.ಆರ್.ಎಂ ಮೂವೀಸ್ ಬ್ಯಾನರ್ ನಲ್ಲಿ ಈ ಸಿನಿಮಾ ಮೂಡಿಬಂದಿದೆ. ಈಗಾಗಲೇ ಎರಡು ಹಂತರದ ಚಿತ್ರೀಕರಣವನ್ನು ಮುಗಿಸಿಕೊಂಡು ಪೋಸ್ಟರ್ ಬಿಡುಗಡೆ ಮಾಡಿರುವ ಸದ್ಯದಲ್ಲಿಯೇ ಸಿಹಿ ಸುದ್ದಿಯನ್ನೂ ನೀಡಲಿದೆ.
No Comment! Be the first one.