ಸೃಜನ್ ಲೋಕೇಶ್ ಮತ್ತು ನಿರ್ದೇಶಕ ತೇಜಸ್ವಿ ಮತ್ತೆ ಜೊತೆಯಾಗಿ ಬರಲಿದ್ದಾರೆ. ಒಂದು ಸಿನಿಮಾ ಮುಗಿಸಿ ಅದರ ಬೆನ್ನಿಗೇ ಅದೇ ಹೀರೋ ಮತ್ತು ನಿರ್ದೇಶಕ ಒಟ್ಟಿಗೇ ಕೆಲಸ ಮಾಡುವುದು ಕನ್ನಡ ಚಿತ್ರರಂಗದಲ್ಲಿ ಸದ್ಯದ ಮಟ್ಟಿಗೆ ವಿರಳ.
ಆದರೆ, ‘ಎಲ್ಲಿದ್ದೆ ಇಲ್ಲಿತನಕ ಚಿತ್ರದ ಯಶಸ್ವೀ ಜೋಡಿ ಮತ್ತೊಂದು ಸಿನೆಮಾದಲ್ಲೂ ಒಂದಾಗಿ ಮುಂದುವರೆಯುತ್ತಿರುವುದು ನಿಜಕ್ಕೂ ಅಭಿನಂದಿಸಬೇಕಾದ ವಿಚಾರ.

ಕಳೆದ ಏಳೆಂಟು ವರ್ಷಗಳಿಂದ ಜೊತೆಯಾಗೇ ಇದ್ದು, ಟೀವಿ ಶೋಗಳು, ಧಾರಾವಾಹಿ ಮತ್ತಿತರ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಒಬ್ಬರಿಗೊಬ್ಬರು ನೆರವಾಗುತ್ತಾ, ದುಡಿದವರು ಸೃಜನ್ ಮತ್ತು ತೇಜಸ್ವಿ.
ಎಲ್ಲಿದ್ದೆ ಇಲ್ಲಿತನಕ ಸಿನಿಮಾದಲ್ಲಿ ಲವ್ ಮತ್ತು ಕೌಟುಂಬಿಕ ಕಥಾವಸ್ತುವನ್ನು ಆಯ್ಕೆ ಮಾಡಿಕೊಂಡಿದ್ದ ಇವರೀಗ ಪಕ್ಕಾ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಜಾನರಿನ ಸಿನಿಮಾಗೆ ಕೈ ಇಡುತ್ತಿದ್ದಾರೆ. ಈಗಾಗಲೇ ವಿಶೇಷವಾದ ಟೈಟಲ್ ಕೂಡಾ ಆಯ್ಕೆಮಾಡಿಕೊಂಡಿದ್ದಾರೆ. ಆದರೆ ಸ್ಪೆಷಲ್ ಎನ್ನಿಸುವ ಸಂದರ್ಭದಲ್ಲಿ ಆ ಶೀರ್ಷಿಕೆ ರಿವೀಲ್ ಆಗಲಿದೆ. ಸದ್ಯ ಸ್ಕ್ರಿಪ್ಟ್ ಕೆಲಸ ಅಂತಿಮಹಂತದಲ್ಲಿದೆ. ಇದು ಮುಗಿಯುತ್ತಿದ್ದಂತೇ ಮಾರ್ಚ್ ಹೊತ್ತಿಗೆ ಚಿತ್ರೀಕರಣ ಆರಂಭವಾಗಲಿದೆಯಂತೆ.

ಸೃಜನ್ ಅವರ ಲೋಕೇಶ್ ಪ್ರೊಡಕ್ಷನ್ಸ್ ಸಂಸ್ಥಯೇ ಈ ಚಿತ್ರವನ್ನೂ ನಿರ್ಮಿಸಲಿದ್ದು, ಎಲ್ಲಿದ್ದೆ ಇಲ್ಲಿತನಕ ಚಿತ್ರದಲ್ಲಿ ಕೆಲಸ ಮಾಡಿದ್ದ ಬಹುತೇಕ ತಂತ್ರಜ್ಞರೇ ಇಲ್ಲೂ ಇರಲಿದ್ದಾರೆ.