ತೀರಾ ಚಿಕ್ಕ ವಯಸ್ಸಿಗೇ ಹೆಸರು, ಕೀರ್ತಿ, ಅವಕಾಶಗಳು ಒದ್ದೊದ್ದುಕೊಂಡು ಬಂದುಬಿಟ್ಟರೆ ಒಬ್ಬ ವ್ಯಕ್ತಿ ಏನಾಗಬಲ್ಲ? ಹಾಗೆ ಎಳೇವಯಸ್ಸಿಗೇ ವೇಗವಾಗಿ ಎತ್ತರಕ್ಕೇರಿ, ಅಷ್ಟೇ ಸ್ಪೀಡಿನಲ್ಲಿ ಮಂಗಮಾಯವಾದವರು ಯಾರ‍್ಯಾರಿದ್ದಾರೆ ಅಂತಾ ಹುಡುಕ ಹೊರಟರೆ ಸಿಗುವ ಮೊದಲಿಗನೆಂದರೆ, ಬಹುಶಃ ಅದು ಮುದ್ದು ಮುಖದ ನಟ ಸುನೀಲ್ ರಾವ್ ಇರಬಹುದು.

ಮಾಸ್ಟರ್ ಸುನಿಲ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗ ಆ ಹುಡುಗನಿಗೆ ಇನ್ನೂ ಉಂಡು, ಆಡಿ, ಒದ್ದು ಮಲಗುವ ವಯಸ್ಸು. ಶಂಕರ್ ನಾಗ್ ಅವರ ಮಾಲ್ಗುಡಿ ಡೇಸ್, ಏಳು ಸುತ್ತಿನ ಕೋಟೆ, ಕೆಂಡದ ಮಳೆ, ರೆಡಿಮೇಡ್ ಗಂಡ, ಶಾಂತಿ ಕ್ರಾಂತಿ, ಮೈಸೂರ್ ಜಾಣ ಮುಂತಾದ ಸಿನಿಮಾಗಳಲ್ಲಿ ಸುನಿಲ್ ಬಾಲ ಕಲಾವಿದ. ಆ ಕಾಲಕ್ಕೆ ಮಾಸ್ಟರ್ ಮಂಜುನಾಥ್ ಚೈಲ್ಡ್ ಆರ್ಟಿಸ್ಟ್ ಆಗಿ ಸ್ಟಾರ್ ವರ್ಚಸ್ಸು ಹೊಂದಿದ್ದ. ಅದೇ ಹೊತ್ತಿಗೆ ಎಂಟ್ರಿ ಕೊಟ್ಟ ಸುನೀಲ್ ತನ್ನ ಅಸಾಧಾರಣ ಪ್ರತಿಭೆ, ಚುರುಕುತನಗಳಿಂದಲೇ ಎಲ್ಲರ ಗಮನ ಸೆಳೆದಿದ್ದ. ಇಷ್ಟಕ್ಕೂ ಸುನೀಲ್ ಕರ್ನಾಟಕ ಕಂಡ ಅಪ್ರತಿಮ ಸುಗಮ ಸಂಗೀತದ ಹಾಡುಗಾರ್ತಿ, ಹಿನ್ನೆಲೆ ಗಾಯಕಿ ಬಿ.ಕೆ.ಸುಮಿತ್ರಾ ಪುತ್ರ. ಬಸವನಗುಡಿ ನ್ಯಾಷನಲ್ ಹೈಸ್ಕೂಲು, ಕಾಲೇಜಿನಲ್ಲಿ ಓದಿ ಬೆಳೆದ ಹೀರೋಗಳಾದ ರಮೇಶ್ ಅರವಿಂದ್, ಅರ್ಜುನ್ ಸರ್ಜಾ, ವಿಷ್ಣುವರ್ಧನ್, ಶ್ರೀನಾಥ್, ಸುಂದರರಾಜ್, ಕೋಕಿಲಾ ಮೋಹನ್, ಇವತ್ತಿನ ಸೃಜನ್ ಲೋಕೇಶ್ ಮುಂತಾದವರ ಪಟ್ಟಿಗೆ ಸೇರ್ಪಡೆಯಾದ ನಟ ಸುನೀಲ್ ರಾವ್. ಹಾಗೆ ನೋಡಿದರೆ ಇಲ್ಲಿ ತಿಳಿಸಿದ ನಟರೆಲ್ಲಾ ಓದು ಮುಗಿಸಿದ ಮೇಲೆ ನಟನೆಗಿಳಿದರೆ, ಸುನೀಲ್ ವಿದ್ಯಾರ್ಥಿಯಾಗಿದ್ದಾಗಲೇ ಹೆಸರು, ಕೀರ್ತಿ ಗಳಿಸಿಕೊಂಡಿದ್ದ.

‘ಚಿತ್ರ’ ಸಿನಿಮಾದಲ್ಲಿ ನಾಲ್ಕಾರು ಹೀರೋಗಳಲ್ಲಿ ಒಬ್ಬನಾಗಿ ಎರಡನೇ ಇನ್ನಿಂಗ್ಸ್ ಆರಂಭಿಸಿದ ಸುನೀಲ್ ನಂತರ ಪ್ರೇಮ್ ನಿರ್ದೇಶನದ ‘ಎಕ್ಸ್’ಕ್ಯೂಸ್ ಮಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದ ಪ್ರಮುಖ ಹೀರೋ ಆಗಿ ಗುರುತಿಸಿಕೊಂಡ. ಆ ನಂತರ ಕವಿತಾ ಲಂಕೇಶರ ಪ್ರೀತಿ ಪ್ರೇಮ ಪ್ರಣಯ, ಬಾಬಾರೋ ರಸಿಕ, ಮಸಾಲಾ, ಚಪ್ಪಾಳೆ, ಸಖ ಸಖಿ ಮುಂತಾದ ಸಿನಿಮಾಗಳು ಒಂದರ ಹಿಂದೊಂದು ತಯಾರಾಗಿ, ಬಿಡುಗಡೆಯಾಗುತ್ತಿದ್ದಂತೇ ಸುನೀಲ್ ರಾವ್ ಬ್ಯುಸೀ ಹೀರೋ ಕೂಡಾ ಆದ. ಕನ್ನಡ ಚಿತ್ರರಂಗದಲ್ಲೇ ಸಾಕೆನಿಸುವಷ್ಟು ಅವಕಾಶಗಳಿದ್ದಾಗಲೇ ಸುನೀಲ್ ಒಂದು ಕೆಟ್ಟ ನಿರ್ಧಾರ ತೆಗೆದುಕೊಂಡುಬಿಟ್ಟ.

ಅದೇನೆಂದರೆ, ನನಗಿರೋ ಟ್ಯಾಲೆಂಟಿಗೆ ನಾನ್ಯಾಕೆ ಬರೀ ಕನ್ನಡವನ್ನೇ ನೆಚ್ಚಿ ಕೂರಬೇಕು? ಬಾಲಿವುಡ್ ಹೀರೋ ಆಗಬಹುದು ಅನ್ನೋ ಕನಸು ಕಂಡ. ಬರೀ ಕನಸು ಕಂಡು ಸುಮ್ಮನಾಗಿದ್ದಿದ್ದರೆ ಬಹುಶಃ ಇವತ್ತು ಸುನೀಲ್ ರಾವ್ ಅನ್ನೋ ನಟನನ್ನು ನಮ್ಮ ಕನ್ನಡದ ಜನ ಮರೆತುಹೋಗುವ ಪ್ರಮೇಯವೇ ಎದುರಾಗುತ್ತಿರಲಿಲ್ಲ. ಏಕಾಏಕಿ ಮುಂಬೈ ಫ್ಲೈಟು ಹತ್ತಿ ಕನ್ನಡ ಚಿತ್ರರಂಗಕ್ಕೆ ಟಾಟಾ ಅಂದೇ ಬಿಟ್ಟ. ಅಷ್ಟೊತ್ತಿಗಾಗಲೇ ಈತನ ಅಕ್ಕ ಸೌಮ್ಯಾ ರಾವ್ ಮುಂಬೈನಲ್ಲಿ ಸಿಂಗರ್ ಆಗಿ ದೊಡ್ಡ ಹೆಸರು ಮಾಡಿದ್ದರು. ಸುನೀಲ್ ಕೂಡಾ ಬಾಂಬೆಗೆ ಹೋಗಿ ಹರಾಮ್ ಕೋರ್ ಸಿನಿಮಾದ ನಿರ್ದೇಶಕ ಶ್ಲೋಕ್ ಶರ್ಮಾ ಜೊತೆ ಸೇರಿ ಹಿಂದಿ ಸಿನಿಮಾ ಮಾಡುವ ಪ್ಲಾನು ನಡೆಸಿದ. ಆದರೆ ಅದು ಕಾರ್ಯರೂಪಕ್ಕೆ ಬರಲೇ ಇಲ್ಲ. ಕನ್ನಡ ಚಿತ್ರರಂಗದಲ್ಲಿ ಈತನಿಗೆ ಕಾಸು ಕೊಟ್ಟು, ಕಾದಿದ್ದು ಕಾಲ್‌ಶೀಟ್ ಪಡೆಯುತ್ತಿದ್ದರು ನಿರ್ಮಾಪಕ, ನಿರ್ದೇಶಕರು. ಆದರೆ, ಮುಂಬೈ ಅಂಗಳದಲ್ಲಿ ಕುಂತವನ ಪಾಲಿಗೆ ಎದುರಾಗಿದ್ದು ಅಕ್ಷರಶಃ ನಾಯಿಪಾಡು. ವರ್ಷಗಟ್ಟಲೇ ಕಾದರೂ ಸುನೀಲ್ ಬಯಸಿದ ಪಾತ್ರವಾಗಲಿ, ಹೀರೋ ಆಗುವ ಅವಕಾಶವಾಗಲಿ ಕೈಗೆಟುಕಲಿಲ್ಲ.

ಮುಂಗಾರು ಮಳೆ ಸಿನಿಮಾದಲ್ಲಿ ಮೊದಲಿಗೆ ಹೀರೋ ಆಗಬೇಕಾಗಿದ್ದಿದ್ದು ಇದೇ ಸುನೀಲ್ ರಾವ್ ಎನ್ನುವ ಮಾತಿದೆ. ಆದರೆ ಸುನೀಲ್ ಬಂದ ಅವಕಾಶವನ್ನು ಒಪ್ಪಲಿಲ್ಲವಂತೆ. ಇನ್ನು ಆರ್. ಚಂದ್ರು ನಿರ್ದೇಶನದ ಮೊದಲ ಸಿನಿಮಾ ತಾಜ್ ಮಹಲ್’ನಲ್ಲಿ ಕೂಡಾ ಸುನೀಲ್ ರಾವ್ ನಾಯಕನಾಗಿ ನಟಿಸಬೇಕಿತ್ತು. ಎಲ್ಲ ತಯಾರಿ ನಡೆಯುತ್ತಿದೆ ಅನ್ನೋ ಸಂದರ್ಭದಲ್ಲೇ ಸುನೀಲ್ ಖ್ಯಾತೆ ತೆಗೆದಿದ್ದ ಅಂತಾ ಆ ಜಾಗಕ್ಕೆ ಅಜೇಯ್ ರಾವ್’ನನ್ನು ತಂದು ನಿಲ್ಲಿಸಲಾಯಿತು. ಸುನೀಲ್ ಯಾವ ಪಾತ್ರವನ್ನೂ ಒಪ್ಪೋದೇ ಇಲ್ಲ. ಕಡೇ ಗಳಿಗೆ ತನಕ ಓಡಾಡಿಸಿ, ಆಟಾಡಿಸಿ ಕೊನೆಗೆ ಕೈ ಎತ್ತುತ್ತಾನೆ ಎನ್ನುವ ಕೆಟ್ಟ ಆಪಾದನೆ ಸುನೀಲ್ ನೆತ್ತಿಗೆ ಮೆತ್ತಿಕೊಂಡಿತು. ಇತ್ತ ಕನ್ನಡದಲ್ಲಿ ಬಂದ ಅವಕಾಶಗಳನ್ನೆಲ್ಲಾ ರಿಜೆಕ್ಟು ಮಾಡುತ್ತಿದ್ದ ಸುನೀಲನಿಗೆ ಬಾಲಿವುಡ್ಡು ಬೇಡಿದರೂ ಅವಕಾಶ ಕೊಡದೆ ಬಾಲ ಕಟ್ ಮಾಡಿತ್ತು!

ಇದೆಲ್ಲದರ ನಡುವೆ ಆರೇಳು ವರ್ಷ ಕಾಲ ಕಳೆದುಹೋಗಿತ್ತು. ಮತ್ತೆ ಸುನೀಲ್ ಬೆಂಗಳೂರಿನತ್ತ ಮುಖ ಮಾಡೋ ಸಮಯಕ್ಕೆ, ಇದೇ ಸುನೀಲ್ ಬಿಟ್ಟ ಸ್ಥಳವನ್ನು ಆಕ್ರಮಿಸಿಕೊಂಡಿದ್ದ ಗಣೇಶ್, ಅಜಯ್ ರಾವ್ ಸೇರಿದಂತೆ ದಿಗಂತ್, ಪ್ರಜ್ವಲ್, ಚಿರಂಜೀವಿ ಸರ್ಜಾ ಮುಂತಾದ ಹೊಸ ಹೀರೋಗಳು ಜನ್ಮವೆತ್ತಿದ್ದರು. ಅಲ್ಲಿಗೆ ಮರಳಿ ಬಂದ ಸುನೀಲ್ ಬಳಿ ಗಾಂಧಿನಗರದವರು ಸುಳಿಯಲೂ ಇಲ್ಲ. ಜನ ಕೂಡಾ ಇಂಥಾ ನಟ ಇದ್ದ ಅನ್ನೋದನ್ನೇ ಮರೆತುಬಿಟ್ಟರು. ಒಂದು ಕಾಲಕ್ಕೆ ಕಾಲ್ ಶೀಟ್ ಕೊಡಲಿಕ್ಕೇ ಕಷ್ಟ ಪಡುತ್ತಿದ್ದ ಸುನೀಲ್ ಅವಕಾಶಗಳಿಗಾಗಿ ಪರದಾಡುವಂತಾಯಿತು. ಸಿನಿಮಾ ಛಾನ್ಸು ಕೈಗೆಟುಗಲೇ ಇಲ್ಲ ಅಂದಾಗ ಸುನೀಲ್ ರಾವ್ ಲೂಸ್ ಕನೆಕ್ಷನ್ ಎನ್ನುವ ವೆಬ್ ಸಿರೀಸ್’ನಲ್ಲಿ ನಟಿಸಿದರು. ರಘು ಶಾಸ್ತ್ರಿ ನಿರ್ದೇಶನದ ಈ ವೆಬ್ ಸಿರೀಸ್ ಡಿಜಿಟಲ್ ಮೀಡಿಯಾದಲ್ಲಿ ಹೆಸರು ಮಾಡಿತು. ಆದರೆ ಸಿನಿಮಾ ಮಾತ್ರ ‘ಮತ್ತೆ ಬಾ’ ಕರೆಯಲಿಲ್ಲ. ಸುನಿಲ್ ರಾವ್ ನಾಯಕನಾಗಿ ನಟಿಸಿದ್ದ ಎಕ್ಸ್’ಕ್ಯೂಸ್ ಮಿ ಚಿತ್ರದ ನಿರ್ದೇಶಕ ಪ್ರೇಮ್ ಇವತ್ತು ಸ್ಟಾರ್ ಡೈರೆಕ್ಟರ್. ಈತನೊಂದಿಗೇ ನಟಿಸಿದ್ದ ಅಜಯ್ ರಾವ್ ಕೂಡಾ ಬ್ಯುಸೀ ಹೀರೋ. ಸುನಿಲ್ ನಟನೆಯ ಸಿನಿಮಾಗಳನ್ನು ನಿರ್ದೇಶಿಸಿದ್ದ ನಾಗಣ್ಣ, ದಯಾಳ್ ಪದ್ಮನಾಭನ್ ಚಿತ್ರರಂಗದಲ್ಲಿ ಬಿಡುವಿರದಷ್ಟು ಕೆಲಸ ಪಡೆದಿದ್ದಾರೆ.

ಇವೆಲ್ಲದರ ನಡುವೆ ಸುನೀಲ್ ತುರ್ತು ನಿರ್ಗಮನ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಇದೆ. ಆದರೆ ಅದು ಯಾವ ಹಂತದಲ್ಲಿದೆ ಅಂತಾ ಮಾಹಿತಿ ಇಲ್ಲ. ಸಿನಿಮಾ ಅರ್ಧಕ್ಕೆ ಕೈ ಕೊಟ್ಟರೂ, ಫ್ಯಾಷನ್ ಡಿಸೈನರ್ ಶ್ರೇಯಾ ಅಯ್ಯರ್’ರನ್ನು ಲವ್ ಮಾಡಿ ಕೈ ಹಿಡಿದಿದ್ದಾರೆ. ಖಾಸಗೀ ಬದುಕನ್ನು ಸುಂದರವಾಗಿಸಿಕೊಂಡಿರುವ ಸುನೀಲ್ ರಾವ್ ಅವರ ಪ್ರೊಫೆಷನಲ್ ಲೈಫ್ ಕೂಡಾ ಮತ್ತೆ ರಂಗೇರಬೇಕಿದೆ.
ನಟನೆಯ ವಿಚಾರಕ್ಕೆ ಬಂದರೆ ಹಿಂದಿಯ ನವಾಜುದ್ದೀನ್ ಸಿದ್ದಿಕಿಯಂತಾ ನಟನಿಗೆ ಸರಿಗಟ್ಟಬಲ್ಲ ಟ್ಯಾಲೆಂಟು ಇವರದ್ದು. ಕಾಮಿಡಿ ಆಕ್ಟಿಂಗ್ ಕೊಟ್ಟರೆ ಜಗ್ಗೇಶ್’ರಂತೆ ನಗಿಸುವ ಕೆಪ್ಯಾಸಿಟಿ ಇದೆ. ನಿರ್ದೇಶಕರು ಒಂದು ಎಕ್ಸ್’ಪ್ರೆಷನ್ ಕೇಳಿದರೆ ಹತ್ತು ಬಗೆಯಲ್ಲಿ ಕೊಟ್ಟು ‘ಯಾವುದು ಬೇಕು’ ಹೇಳಿ ಅಂತಾ ಕೇಳಿ ಡೈರೆಕ್ಟರನ್ನೇ ಗೊಂದಲಕ್ಕೀಡುಮಾಡಬಲ್ಲ ದೈತ್ಯನೀತ. ಇಷ್ಟೆಲ್ಲಾ ಇರುವ ಸುನೀಲ್ ರಾವ್ ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಸುತ್ತಿನ ಗೆಲುವಿನ ಸವಾರಿ ನಡೆಸಬೇಕಿದೆ. ಅದು ಸಾಧ್ಯವಾಗಲಿ ಅಂತೊಮ್ಮೆ ಆಶಿಸೋಣ!

CG ARUN

ಪ್ರೀತಿಯಲ್ಲಿ ಸೋತ ಎಲ್ಲಾ ಹೃದಯಗಳಿಗೆ

Previous article

ಕಬ್ಜ ಮಾಡಿಕೊಳ್ಳಲು ಹೊರಟಿತು ಉಪ್ಪಿ-ಚಂದ್ರು ಜೋಡಿ!

Next article

You may also like

Comments

Leave a reply

Your email address will not be published. Required fields are marked *