ದಕ್ಷಿಣ ಭಾರತದ ಚಿತ್ರಗಳಲ್ಲಿ ಹೆಸರು ಮಾಡಿದ ತಾಪ್ಸಿ ಪನ್ನು ಈಗ ಬಾಲಿವುಡ್‌ನ ಬೇಡಿಕೆಯ ನಟಿ. ’ಪಿಂಕ್’ ಹಿಂದಿ ಚಿತ್ರದ ದಿಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಈಗ ಶಾರ್ಪ್‌ಶೂಟರ್ ಆಗಿ ತೆರೆಗೆ ಬರುತ್ತಿದ್ದಾರೆ. ಉತ್ತರ ಪ್ರದೇಶ ಮೂಲದ ಚಂದ್ರೋ ತೋಮರ್ ಮತ್ತು ಪ್ರಕಾಶಿ ತೋಮರ್ ತಮ್ಮ ಐವತ್ತನೇ ವಯಸ್ಸಿನಲ್ಲಿ ಶಾರ್ಪ್‌ಶೂಟಿಂಗ್ ಕೈಗೆತ್ತಿಕೊಂಡಿದ್ದರು. ಅಷ್ಟೇ ಅಲ್ಲ ದೇಶದಾದ್ಯಂತ ನಡೆದ ಹತ್ತಾರು ಪ್ರಮುಖ ಶೂಟಿಂಗ್ ಸ್ಪರ್ಧೆಗಳಲ್ಲಿ ಪದಕಗಳನ್ನು ಗೆದ್ದಿದ್ದರು. ಈಗ ಅವರಿಗೆ ಕ್ರಮವಾಗಿ ೮೬ ಮತ್ತು ೮೧ ವರ್ಷ. ಇವರಿಬ್ಬರ ಸಾಧನೆಯನ್ನು ಆಧರಿಸಿ ಬಯೋಪಿಕ್ ತೆರೆಗೆ ಬರಲಿದೆ. ಇವರ ಪಾತ್ರಗಳನ್ನು ನಟಿಯರಾದ ತಾಪ್ಸಿ ಪನ್ನು ಮತ್ತು ಭೂಮಿ ಪಡ್ನೇಕರ್ ನಿರ್ವಹಿಸಲಿದ್ದಾರೆ.
ಬಾಲಿವುಡ್‌ನ ಖ್ಯಾತ ನಿರ್ದೇಶಕ, ನಿರ್ಮಾಪಕ ಅನುರಾಗ್ ಕಶ್ಯಪ್ ಅವರು ರಿಲಯನ್ಸ್ ಎಂಟರ್‌ಟೇನ್‌ಮೆಂಟ್ ಜೊತೆಗೂಡಿ ಚಿತ್ರ ನಿರ್ಮಿಸಲಿದ್ದಾರೆ. ತುಷಾರ್ ಹೀರಾನಂದಾನಿ ನಿರ್ದೇಶನದಲ್ಲಿ ಚಿತ್ರ ಮೂಡಿಬರಲಿದೆ. ತುಷಾರ್ ಈ ಹಿಂದೆ ’ಗ್ರ್ಯಾಂಡ್ ಮಸ್ತಿ’, ’ಏಕ್ ವಿಲನ್’ ಮತ್ತು ’ಡಿಶೂಂ’ ಹಿಂದಿ ಚಿತ್ರಗಳ ಚಿತ್ರಕಥಾ ವಿಭಾಗದಲ್ಲಿ ಕೆಲಸ ಮಾಡಿದ್ದರು. ನಟಿ ತಾಪ್ಸಿ ಪನ್ನು ಚಿತ್ರದ ಕುರಿತಂತೆ ಫೋಟೋ ಟ್ವೀಟ್ ಮಾಡಿ, ಈ ಚಿತ್ರದ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಡಿವೆ. ಅಂತಿಮವಾಗಿ ಚಿತ್ರ ಸೆಟ್ಟೇರುತ್ತಿದ್ದು, ಇದು ಎಲ್ಲರಿಗೂ ಪ್ರೇರಣೆ ನೀಡುವಂತಹ ಚಿತ್ರವಾಗಲಿದೆ. ನಮ್ಮ ಚಿತ್ರ ಆರಂಭವಾಗುತ್ತಿರುವುದಕ್ಕೆ ಈ ಫೋಟೋ ಸಾಕ್ಷಿಯಾಗಿದೆ ಎಂದಿದ್ದಾರೆ. ವಿನೀತ್ ಕುಮಾರ್ ಸಿಂಗ್ ಚಿತ್ರದ ಪಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
#