ಅನ್ಯಾಯದ ವಿರುದ್ಧ ತನ್ನ ವಕೀಲಿ ವೃತ್ತಿಯ ಕತ್ತಿ ಝಳಪಿಸುವ ಅಮ್ಮ ಮತ್ತು ತಾಯಿಯ ನೆರಳಲ್ಲಿ ದುಷ್ಟರನ್ನು ಸದೆ ಬಡಿಯಲು ನಿಂತ ಮಗ… ಆತನ ಸುತ್ತ ಹಬ್ಬಕೊಳ್ಳುವ ಪ್ರೀತಿ, ಅಲ್ಲಲ್ಲಿ ಮುದ ನೀಡೋ ಕಾಮಿಡಿ… ಒಂದು ಕಮರ್ಷಿಯಲ್ ಚಿತ್ರಕ್ಕೆ ಏನೇನು ಬೇಕೋ ಅದೆಲ್ಲವನ್ನೂ ಮೈದುಂಬಿಕೊಂಡಂತಿರೋ ತಾಯಿಗೆ ತಕ್ಕ ಮಗ ಚಿತ್ರ ಪ್ರೇಕ್ಷಕರ ನಿರೀಕ್ಷೆಗಳನ್ನು ತಣಿಸಿದೆ.
ವಕೀಲೆಯಾಗಿ ಸಮಾಜವಿರೋಧಿಗಳನ್ನು ಮಟ್ಟ ಹಾಕೋ ವಕೀಲೆಯಾಗಿ ಸುಮಲತಾ ಅಂಬರೀಶ್, ಮಗ ಮೋಹನ್ದಾಸನಾಗಿ ಅಜೇಯ್ ರಾವ್ ಮತ್ತು ಪ್ರೇಯಸಿ ಸರಸ್ವತಿಯಾಗಿ ಆಶಿಕಾ ರಂಗನಾಥ್ ನಟಿಸಿದ್ದಾರೆ. ಅಲ್ಲಲ್ಲಿ ಒಂದಷ್ಟು ಕೊರತೆಗಳು ಕಾಡೋದನ್ನು ಬಿಟ್ಟರೆ ಒಂದು ಸರಳವಾದ ಕಥೆಯನ್ನೇ ಪ್ರೇಕ್ಷಕರನ್ನು ಹಿಡಿದಿಡುವ ಧಾಟಿಯಲ್ಲಿ ನಿರ್ದೇಶಕ ಶಶಾಂಕ್ ಕಟ್ಟಿ ನಿಲ್ಲಿಸಿದ್ದಾರೆ.
ಅದು ನನಗೆ ನೀನು ನಿನಗೆ ನಾನು ಎಂಬಂಥಾ ಅಮ್ಮ ಮಗನ ಜೋಡಿ. ತಾಯಿ ವಕೀಲೆ. ಆಕೆ ಎಂಥಾ ಖದೀಮರೇ ಆದರೂ ಎದುರು ಹಾಕಿಕೊಂಡು ಕಾನೂನು ಮೂಲಕವೇ ನ್ಯಾಯ ಒದಗಿಸಿ ಕೊಡೋ ದಿಟ್ಟ ಹೆಣ್ಣ ಮಗಳು. ಮಗ ಮೋಹನ ದಾಸನ ಪಾಲಿಗೆ ಅಮ್ಮನ ರಕ್ಷಣೆಯೇ ಕಾಯಕ. ದುಷ್ಟರನ್ನು ಕಂಡರೆ ಕೆಂಡಾಮಂಡಲವಾಗಿ ಬಗ್ಗು ಬಡಿಯೋದು ಆತನ ವರಸೆ. ಅನ್ಯಾಯ ಕಂಡರೆ ಕೋಪಗೊಂಡು ಪ್ರತಾಪ ತೋರೋ ಮೋಹನದಾಸ್ ದುಷ್ಟರ ಪಾಲಿಗೆ ಸಿಂಹಸ್ವಪ್ನ.
ಇಂಥಾ ತಾಯಿ ಮತ್ತು ಮಗ ಅಧಿಕಾರದಾಸೆಗೆ ಏನು ಮಾಡಲೂ ಹೇಸದ ರಾಜಕಾರಣಿ ಮತ್ತು ತಂದೆಯ ನೆರಳಲ್ಲಿ ಎಂಥಾ ಕೆಲಸಕ್ಕೂ ರೆಡಿಯಾಗಿರೋ ಹುಂಬ ಮಗನ ವಿರುದ್ಧ ನಿಲ್ಲುತ್ತಾರೆ. ಅದರ ಸುತ್ತ ಥರ ಥರದ ವಿದ್ಯಮಾನಗಳು ನಡೆಯುತ್ತವೆ. ಇಂಥಾ ತಾಯಿ ಮಗನ ಬದುಕಿಗೆ ನಾಯಕಿ ಸರಸ್ವತಿಯ ಆಗಮನವೂ ಆಗುತ್ತೆ. ಈ ತಾಯಿ ಮಗ ದುಷ್ಟರ ವಿರುದ್ಧ ಗೆಲ್ಲುತ್ತಾರಾ? ಅನ್ಯಾಯದ ವಿರುದ್ಧ ಉಗ್ರ ಪ್ರತಾಪ ತೋರೋ ಮೋಹನ್ದಾಸನ ಪಾಲಿಗೆ ಪ್ರೀತಿಯೂ ದಕ್ಕುತ್ತಾ ಎಂಬೆಲ್ಲ ಕುತೂಹಲಗಳಿದ್ದರೆ, ಈ ಚಿತ್ರದಲ್ಲಿ ಥ್ರಿಲ್ಲಾಗುವಂಥಾ ಉತ್ತರವೂ ಇದೆ!
ಒಟ್ಟಾರೆಯಾಗಿ ಪಕ್ಕಾ ಕಮರ್ಷಿಯಲ್ ಶೈಲಿಯಲ್ಲಿ ಶಶಾಂಕ್ ಈ ಚಿತ್ರವನ್ನು ಕಟ್ಟಿ ಕೊಟ್ಟಿದ್ದಾರೆ. ಕಥೆ ಗಂಭೀರವಾಗುತ್ತಲೇ ವಸಾಧು ಕೋಕಿಲಾ ಬಂದು ಕಚಗುಳಿ ನೀಡುತ್ತಾರೆ. ಆಶಿಕಾ ರಂಗನಾಥ್ ಪಾತ್ರದ ಹೆಸರು ಸರಸ್ವತಿ. ಆದರೆ ಅವರನ್ನಿಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ತೋರಿಸಲಾಗಿದೆ. ಅದೂ ಕೂಡಾ ಚಿತ್ರದ ಒಟ್ಟಂದಕ್ಕೆ ಪೂರಕವಾಗಿದೆ. ಕೆಲವೆಡೆ ಅತೀ ಸಿನಿಮೀಯ ಎಂಬಂಥಾ ಸೀನುಗಳಿದ್ದರೂ ತಾಯಿ ಮಗನ ಖದರಿನ ನಡುವೆ ಅವು ಮರೆಯಾಗುತ್ತವೆ.
#
No Comment! Be the first one.