ಶಶಾಂಕ್ ನಿರ್ದೇಶನದ ಜೊತೆ ನಿರ್ಮಾಪಕರಾಗಿಯೂ ಕಾರ್ಯನಿರ್ವಹಿಸಿರುವ ಚಿತ್ರ ತಾಯಿಗೆ ತಕ್ಕ ಮಗ. ಅಜೇಯ್ ರಾವ್ ನಟನೆಯ ಇಪ್ಪತೈದನೇ ಚಿತ್ರ ಎಂಬ ಕಾರಣದಿಂದಲೂ ಮುಖ್ಯವಾಗಿರೋ ಈ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಈ ಹಿಂದೆ ಧೈರ್ಯಂ ಚಿತ್ರದ ಮೂಲಕ ಮಾಸ್ ಇಮೇಜಿಗೆ ಒಗ್ಗಿಕೊಂಡಿದ್ದ ಅಜೇಯ್ ರಾವ್ ಈ ಚಿತ್ರದುದ್ದಕ್ಕೂ ಬೇರೆಯದ್ದೇ ರೀತಿಯಲ್ಲಿ ಕಾಣಿಸಿಕೊಂಡಿರೋದನ್ನು ಟ್ರೈಲರ್ ಸಾಕ್ಷೀಕರಿಸಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಭಾರೀ ವೀಕ್ಷಣೆ ಪಡೆದುಕೊಂಡಿರುವ ಈ ಟ್ರೈಲರ್ ಈ ಕ್ಷಣಕ್ಕೂ ಟ್ರೆಂಡಿಂಗ್ನಲ್ಲಿದೆ!
ತಾಯಿಗೆ ತಕ್ಕ ಮಗ ಎಂಬ ಟೈಟಲ್ಲು ಕೇಳಿದಾಕ್ಷಣ ಇದೊಂದು ಮದರ್ ಸೆಂಟಿಮೆಂಟ್ ಚಿತ್ರ ಎಂಬ ಭಾವನೆ ಮೂಡೋದು ಸಹಜ. ಆದರೆ ಈ ಟ್ರೈಲರ್ ನೋಡಿದ ಯಾರೊಬ್ಬರೂ ಈ ಚಿತ್ರಕ್ಕೆ ಬರೀ ಆ ಚೌಕಟ್ಟು ಹಾಕಲು ಸಾಧ್ಯವೇ ಇಲ್ಲ. ಅಮ್ಮ ಅನ್ಯಾಯದ ವಿರುದ್ಧ ಸಿಡಿದೇಳುತ್ತಾ ದುಷ್ಟರ ಪಾಲಿಗೆ ಸಿಂಹಸ್ವಪ್ನವಾದ ಲಾಯರ್. ಸಮಾಜ ಕಂಟಕರನ್ನು ಸದೆ ಬಡಿಯುತ್ತಲೇ ತಾಯಿಯನ್ನು ಸದಾ ಬೆಂಗಾವಲಾಗಿ ಪೊರೆಯೋ ಮಗ… ಅದರ ನಡುವಲ್ಲಿಯೇ ನವಿರಾದ ಪ್ರೇಮ ಮತ್ತು ಭರಪೂರ ಹಾಸ್ಯ… ಕಿಚ್ಚ ಸುದೀಪ್ ಅವರ ಖಡಕ್ ಧ್ವನಿಯಿಂದಲೇ ಆಗೋ ಆರಂಭ…
ಇವಿಷ್ಟನ್ನೂ ಟ್ರೈಲರ್ ಮೂಲಕ ಕಟ್ಟಿಕೊಟ್ಟಿರೋ ಶಶಾಂಕ್ ಅವರು ತಾಯಿಗೆ ತಕ್ಕ ಮಗನ ಅಸಲೀ ಖದರೇನೆಂಬುದನ್ನು ಪರಿಣಾಮಕಾರಿಯಾಗಿಯೇ ಸಾಬೀತು ಮಾಡಿದ್ದಾರೆ.
ಈ ಹಿಂದೆ ಎಕ್ಸ್ಕ್ಯೂಸ್ಮೀ ಚಿತ್ರದಲ್ಲಿ ಸುಮಲತಾ ಅಂಬರೀಶ್ ಅಜೇಯ್ ರಾವ್ಗೆ ಅಮ್ಮನಾಗಿ ನಟಿಸಿದ್ದರು. ದಶಕಗಳ ನಂತರ ಈ ಅಮ್ಮ ಮಗ ಮತ್ತೆ ಜೊತೆಯಾಗಿದ್ದಾರೆ. ಆಶಿಕಾ ರಂಗನಾಥ್ ಅಜೇಯ್ ರಾವ್ಗೆ ಜೋಡಿಯಾಗಿ ನಟಿಸಿದ್ದಾರೆ. ಪಕ್ಕಾ ಮಾಸ್ ಕಥಾನಕ ಹೊಂದಿರೋ ಈ ಸಿನಿಮಾದ ಟ್ರೈಲರಿನಲ್ಲಿ ಅಜೇಯ್ ಮಾಸ್ ಸೀನುಗಳಲ್ಲಿ ಪಳಗಿಕೊಂಡಿರೋದು ಸ್ಪಷ್ಟವಾಗಿಯೇ ಕಾಣಿಸುತ್ತಿದೆ.
ಇದು ಶಶಾಂಕ್ ನಿರ್ಮಾಪಕರಾಗಿ ಪಾದಾರ್ಪಣೆ ಮಾಡಿದ ಮೊದಲ ಚಿತ್ರ. ಅಜೇಯ್ ರಾವ್ ಅವರ ಇಪ್ಪತೈದನೇ ಚಿತ್ರವೂ ಹೌದು. ಈಗೆದ್ದಿರೋ ಟ್ರೈಲರ್ ಅಲೆ ಪುಷ್ಕಳವಾದೊಂದು ಗೆಲುವಿನ ಎಲ್ಲ ಸೂಚನೆಗಳನ್ನೂ ಧ್ವನಿಸುತ್ತಿದೆ.
#
No Comment! Be the first one.