ಪ್ರತೀ ವಾರ ಬಿಡುಗಡೆಯಾಗೋ ಆರೇಳು ಸಿನಿಮಾಗಳಲ್ಲಿ ಒಂದೆರಡು ಚಿತ್ರಗಳಲ್ಲಾದರೂ ಈ ಹುಡುಗನ ಪಾತ್ರ ಇದ್ದೇ ಇರುತ್ತೆ. ನಟನಾಗಬೇಕೆಂಬ ಏಕಮಾತ್ರ ಉದ್ದೇಶದಿಂದ ತೀರ್ಥಹಳ್ಳಿಯ ಕುಗ್ರಾಮವೊಂದರಿಂದ ಹೇಳದೇ ಕೇಳದೆ ಓಡಿ ಬಂದಿದ್ದ ಈತನಿಗೆ ಬೆಂಗಳೂರಿನಲ್ಲಿ ಎದುರಾದದ್ದು ವಿಚಿತ್ರ ಜಗತ್ತು. ಆದರೂ ನಟನಾಗೋ ಕನಸು ಮಾಸದಂತೆ ನೋಡಿಕೊಳ್ಳುತ್ತಲೇ ಚಿಕ್ಕಪುಟ್ಟ ಪಾತ್ರಗಳನ್ನೂ ಮಾಡುತ್ತಾ ಬೆಳೆದು ಬಂದು ಈಗ ಹೀರೋ ಆಗಿಯೂ ಅವತರಿಸಿರುವವರು ವರ್ಧನ್ ತೀರ್ಥಹಳ್ಳಿ!

ಚೆಲುವಿನ ಚಿತ್ತಾರ ಚಿತ್ರದ ಸಣ್ಣದೊಂದು ಪಾತ್ರದ ಮೂಲಕ ನಟನಾದ ವರ್ಧನ್ ಆ ನಂತರದಲ್ಲಿ ಸಿಕ್ಕ ಸಣ್ಣಪುಟ್ಟ ಅವಕಾಶಗಳನ್ನೇ ಕನಸಿನ ಮೆಟ್ಟ್ಟಿಲುಗಳಂತೆ ಪೇರಿಸಿಕೊಂಡು ಬೆಳೆದವರು. ಇದೀಗ ಅವರು ಹೀರೋ ಆಗಿ ಹೊರ ಹೊಮ್ಮಿದ್ದಾರೆ. ಈ ಚಿತ್ರದಲ್ಲಿನ ಕೆಲ ಫೋಟೋಗಳು ಈಗಾಗಲೇ ಫೇಸ್‌ಬುಕ್ ಮೂಲಕ ವ್ಯಾಪಕ ಮೆಚ್ಚುಗೆಯನ್ನೂ ಗಳಿಸಿಕೊಂಡಿದೆ. ವರ್ಧನ್ ನಾಯಕನಾಗಿರೋ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿರುವವರು ಪ್ರಕಾಶ್ ಹೆಬ್ಬಾಳ್. ಹತ್ತಾರು ವರ್ಷಗಳಿಂದ ಚಿತ್ರರಂಗದಲ್ಲಿ ಕಾರ್ಯ ನಿರ್ವಹಿಸಿರುವ ಪ್ರಕಾಶ್ ಈ ಹಿಂದೆ ಒಲವೇ ಮಂದಾರ ಖ್ಯಾತಿಯ ಶ್ರೀಕಿ ನಾಯಕನಾಗಿರೋ ರಿಲೇ ಎಂಬ ಚಿತ್ರ ಆರಂಭಿಸಿದ್ದರು. ತಾತ್ಕಾಲಿಕವಾಗಿ ಈ ಚಿತ್ರ ಡಿಲೇ ಆದದ್ದರಿಂದ ವರ್ಧನ್ ನಾಯಕನಾಗಿರೋ ಚಿತ್ರವನ್ನು ಆರಂಭಿಸಿದ್ದಾರೆ. ಈಗಾಗಲೇ ಈ ಚಿತ್ರದ ಅರ್ಧ ಭಾಗದಷ್ಟು ಚಿತ್ರೀಕರಣವೂ ಮುಗಿದಿದೆ.

ಹೀಗೆ ಸದ್ದೇ ಇಲ್ಲದೆ ಹೀರೋ ಆಗಲು ಅಣಿಯಾಗಿರುವ ವರ್ಧನ್ ಬದುಕು ನಟನೆಯನ್ನೇ ಕನಸಾಗಿಸಿಕೊಂಡು ಎಲ್ಲಿಂದಲೋ ಬಂದು ನೆಲೆ ಕಂಡುಕೊಂಡ ಪಡಿಪಾಟಲಿನ ಕಥಾನಕಗಳಿಗೆ ಹೊಸಾ ಸೇರ್ಪಡೆ. ತೀರ್ಥಹಳ್ಳಿಯ ಬಿದರಳ್ಳಿ ಎಂಬ ಕುಗ್ರಾಮದ ರಂಗಪ್ಪ ಮತ್ತು ಶಾರದಮ್ಮ ದಂಪತಿಯ ಮೂವರು ಗಂಡು ಮಕ್ಕಳಲ್ಲಿ ಎರಡನೆಯವರು ವರ್ಧನ್. ಹತ್ತನೇ ತರಗತಿ ಮುಗಿಯುತ್ತಿದ್ದಂತೆಯೇ ಮನೆಯ ಬಡತನ ಓದಿಗೆ ಅಡ್ಡಗಾಲಾಗಿತ್ತು. ಅದಾಗಲೇ ತಾನು ಹೀರೋ ಆಗಬೇಕೆಂಬ ಕನಸು ಕಾಣಲಾರಂಭಿಸಿದ್ದ ವರ್ಧನ್ ಅದೊಂದು ದಿನ ಯಾರ ಬಳಿಯೂ ಹೇಳದೆ ಊರು ಬಿಟ್ಟವರೇ ಬೆಂಗಳೂರಿಗೆ ಬಂದಿಳಿದಿದ್ದರು. ಹಾಗೆ ಅವರು ಊರು ಬಿಡಲು ಕಾರಣವಾಗಿದ್ದದ್ದು ಎಲ್ಲಿ ಮನೆಯವರು ತನ್ನನ್ನು ಹೋಟೆಲ್ ಕೆಲಸಕ್ಕೆ ಸೇರಿಸಿ ನಟನಾಗೋ ಕನಸಿಗೆ ಮಣ್ಣು ಹಾಕುತ್ತಾರೋ ಎಂಬ ಭಯ!

ಆದರೆ ಬೆಂಗಳೂರೆಂಬ ರಾಕ್ಷಸನಗರಿಯ ತೆಕ್ಕೆ ಬಿದ್ದ ನಂತರ ಗಾಂಧಿನಗರದ ದಿಕ್ಕೂ ಗೊತ್ತಿಲ್ಲದ ಈ ಹುಡುಗನ ಅನ್ನದ ಮೂಲವಾಗಿದ್ದದ್ದು ಆತನೇ ಭಯಪಟ್ಟಿದ್ದ ಹೋಟೆಲ್ ಕೆಲಸ. ಆ ನಂತರದಲ್ಲಿ ಬಹುಶಃ ವರ್ಧನ್ ಮಾಡದ ಕೆಲಸಗಳೇ ಇಲ್ಲ. ಬಾಡಿಗೆ ಮನೆಯ ಸಾಮಾನು ಸರಂಜಾಮುಗಳನ್ನು ಲಾರಿಗೆ ತುಂಬಿ ಶಿಫ್ಟ್ ಮಾಡೋ ಕೆಲಸದಿಂದ ಮೊದಲ್ಗೊಂಡು ಕಟ್ಟಡಗಳಿಗೆ ಪೇಂಟು ಬಳಿಯೋ ತನಕ ವರ್ಧನ್‌ಗೆ ಬದುಕಿನ ವಿರಾಟ್ ರೂಪದ ದಿಗ್ಧರ್ಶನವಾಗಿ ಹೋಗಿತ್ತು. ಈ ನಡುವೆಯೇ ನಟನಾಗಬೇಕೆಂಬ ಆಸೆಯನ್ನು ಸಾಕಾರಗೊಳಿಸಿಕೊಳ್ಳೋ ಪ್ರಯತ್ನವೂ ಚಾಲ್ತಿಯಲ್ಲಿತ್ತು.

ವಿಶೇಷವೆಂದರೆ, ವರ್ಧನ್ ಬೆಂಗಳೂರಿಗೆ ಬಂದು ಐದು ವರ್ಷದ ವರೆಗೂ ಮನೆಯವರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಊರಲ್ಲಿ ಹೆತ್ತವರು, ಅಣ್ಣ ತಮ್ಮಂದಿರು ಕಂಡ ಕಂಡ ಜ್ಯೋತಿಷಿಗಳ ಬಳಿ ಹೋಗಿ ವರ್ಧನ್ ಬಗ್ಗೆ ಶಾಸ್ತ್ರ ಕೇಳಲಾರಂಭಿಸಿದ್ದರು. ಅದರಲ್ಲಿ ಕೆಲ ಜ್ಯೋತಿಷಿಗಳು ಕವಡೆ ಕಾಗೆ ಹಾರಿಸಿ ಅಂದಾಜಿನ ಮೇಲೆ ದಿಕ್ಕುಗಳನ್ನು ಹೆಸರಿಸಿ ಅಲ್ಲಿದ್ದಾನೆ ಅಂದರೆ ಮತ್ತೆ ಕೆಲ ಮಂದಿ ಅವನು ಸತ್ತೇ ಹೋಗಿದ್ದಾನೆ ಅಂತಲೂ ಶಾಸ್ತ್ರ ಹೇಳಿದ್ದರಂತೆ. ಇತ್ತ ವರ್ಧನ್ ಬೆಂಗಳೂರಿಗೆ ಓಡಿ ಹೋಗೋ ಮುನ್ನವೇ ಅವರಣ್ಣ ಬೆಂಗಳೂರಿನ ಹೋಟೆಲಿನಲ್ಲಿ ಕೆಲಸ ಮಾಡಲಾರಂಭಿಸಿದ್ದರು. ಬೆಂಗಳೂರಿಗೆ ಬಂದು ನಾಲಕೈದು ವರ್ಷವಾಗೋ ಹೊತ್ತಿಗೆಲ್ಲ ಬದುಕಲು ಏನೇನು ಸಾಧವೋ ಅದೆಲ್ಲ ಕೆಲಸವಲನ್ನು ಮಾಡಿದ್ದ ವರ್ಧನ್ ಕಡೇಗೆ ದೇವಯ್ಯ ಪಾರ್ಕ್ ಹತ್ತಿರದ ಸಿಮೆಂಟ್ ಅಂಗಡಿಯಲ್ಲಿ ಕೆಲಸ ಆರಂಭಿಸಿದ್ದರು. ಆಗ ಅವರದ್ದು ಆ ಸಿಮೆಂಟ್ ಅಂಗಡಿಯ ಲಾರಿ ಕ್ಲೀನರ್ ಕೆಲಸ.

ಹಾಗೊಂದು ದಿನ ಸಿಮೆಂಟಂಗಡಿ ಲಾರಿಯನ್ನು ರಿಪೇರಿಗೆಂದು ನೆಲಮಂಗಲದಲ್ಲಿ ನಿಲ್ಲಿಸಲಾಗಿತ್ತಂತೆ. ಅಲ್ಲಿ ಅತ್ತಿತ್ತ ಓಡಾಡಿದ ವರ್ಧನ್‌ಗೆ ತನ್ನ ಅಣ್ಣ ಮಾಗಡಿಯಲ್ಲಿ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದ ವಿಚಾರ ಮಾತ್ರ ಗೊತ್ತಿತ್ತು. ಆದರೆ ಆತ ಎಲ್ಲಿದ್ದಾರೆಂಬುದು ಗೊತ್ತಿರಲಿಲ್ಲ. ನೆಲಮಂಗಲದಲ್ಲಿ ಮಾಗಡಿ ರೂಟು ಕೇಳಿಕೊಂಡು ಹೊರಟ ವರ್ಧನ್ ಒಂದಷ್ಟು ಹೋಟೆಲುಗಳಿಗೆ ಹೋಗಿ ವಿಚಾರಿಸಿದ್ದಾರೆ. ಕಡೆಗೂ ಒಂದು ಹೋಟೆಲಿನಲ್ಲಿ ಪತ್ತೆಯಾದ ಅಣ್ಣ ಆರಂಭದಲ್ಲಿ ಮೈತುಂಬಾ ಸಿಮೆಂಟು ಮೆತ್ತಿಕೊಂಡಿದ್ದ, ಕೆಂಚುಕೆಂಚಾಗಿದ್ದ ಕೂದಲಿನ ವರ್ಧನ್‌ರನ್ನು ಪತ್ತೆಹಚ್ಚಲು ಹೆಣಗಿದರಾದರೂ ನಂತರ ಓಡೋಡಿ ಬಂದು ತಬ್ಬಿಕೊಂಡು ಅಳಲಾರಂಭಿಸಿದ್ದರಂತೆ. ಆತ ತನ್ನ ತಮ್ಮ ಸಿಗಲಿ ಅಂತ ಹರಕೆ ಹೊತ್ತು, ಪ್ರತೀ ವಾರ ಯಾವ ಚಿತ್ರ ಬಂದರೂ ಬಿಡದೇ ನೋಡುತ್ತಿದ್ದರಂತೆ. ಅದರಲ್ಲೇನಾದರೂ ತಮ್ಮ ನಟಿಸಿದ್ದರೆ ಪತ್ತೆ ಹಚ್ಚೋ ಉದ್ದೇಶ ಅವರದ್ದಾಗಿತ್ತು!

ಇಂಥಾ ಹತ್ತಾರು ಪಡಿಪಾಟಲುಗಳೆದುರಾದರೂ ವರ್ಧನ್ ಒಳಗಿನ್ನು ನಟನಾಗಬೇಕೆಂಬ ಆಸೆ ಜೀವಂತವಾಗಿತ್ತು. ಯಾವ ನಿರಾಸೆ, ಕಷ್ಟಗಳು ಎದುರಾದರೂ ಕುಗ್ಗದೆ ಅವಕಾಶಕ್ಕಾಗಿ ಅಲೆಯಲಾರಂಭಿಸಿದ್ದ ವರ್ಧನ್‌ಗೆ ಕಡೆಗೂ ಚೆಲುವಿನ ಚಿತ್ತಾರ ಚಿತ್ರದಲ್ಲಿ ಸಣ್ಣದೊಂದು ಪಾತ್ರ ಸಿಕ್ಕಿತ್ತು. ಅದು ವರ್ಧನ್ ನಟಿಸಿದ ಮೊದಲ ಚಿತ್ರ. ಆ ನಂತರ ಅಲ್ಲಿ ಸಿಕ್ಕ ಕಾಂಟ್ಯಾಕ್ಟುಗಳನನು ಬಳಸಿಕೊಂಡು ಸಣ್ಣ ಸಣ್ಣ ಅವಕಾಶಗಳನ್ನು ಗಿಟ್ಟಿಸಿಕೊಳ್ಳಲಾರಂಭಿಸಿದ್ದರು.

ಆ ಬಳಿಕ ಸಿಕ್ಕಿದ್ದೆಲ್ಲ ಪುಟ್’ಪುಟಾಣಿ ಪಾತ್ರಗಳೇ. ಆದರೂ ಅದರ ಮೂಲಕವೇ ಗಮನ ಸೆಳೆದದ್ದು ವರ್ಧನ್ ಹೆಚ್ಚುಗಾರಿಕೆ. ಸೀರಿಯಲ್’ಗಳಲ್ಲಿಯೂ ನಟಿಸಿ ಆ ಮೂಲಕ ಆರ್ಥಿಕ ಸಂಕಷ್ಟ ನೀಗಿಸಿಕೊಳ್ಳಲು ಯತ್ನಿಸಿದ್ದರಾದರೂ ತನ್ನ ಗುರಿ ಸಿನಿಮಾ ಮಾತ್ರ ಅಂದುಕೊಂಡು ಅಲ್ಲಿಂದಲೂ ಹೊರ ಬಂದಿದ್ದರು. ಆ ಬಳಿಕ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದರೂ ನಸೀಬು ಬದಲಾಗಿದ್ದು ಶ್ರೀಮುರಳಿ ಅಭಿನಯದ ಉಗ್ರಂ ಚಿತ್ರದ ಮೂಲಕವೇ. ಆ ನಂತರ ಕೋಟಿಗೊಬ್ಬ, ಇತ್ತೀಚೆಗೆ ತೆರೆ ಕಂಡಿದ್ದ ರ‍್ಯಾಂಬೋ೨, ವಾಸು ನಾನ್ ಪಕ್ಕಾ ಕಮರ್ಷಿಯಲ್ ಮುಂತಾದ ಚಿತ್ರಗಳಲ್ಲಿಯೂ ವರ್ಧನ್ ಗಮನಾರ್ಹ ನಟನೆಯಿಂದ ಗಮನ ಸೆಳೆದಿದ್ದಾರೆ. ಪ್ರಜ್ವಲ್ ದೇವರಾಜ್ ಅಭಿನಯದ ಹೆಚ್ಚಿನ ಸಿನಿಮಾಗಳಲ್ಲಿ ವರ್ಧನ್ ಮಿಂಚಿದ್ದರು. ಇನ್ನೇನು ಈತ ಮುಖ್ಯ ಖಳನಟನಾಗಿ ಅಬ್ಬರಿಸುತ್ತಾರೆ ಅನ್ನೋ ಕ್ಷಣದಲ್ಲಿಯೇ ಹೀರೋ ಆಗಿ ಮಿಂಚೋ ಅವಕಾಶ ಸಿಕ್ಕಿ ಬಿಟ್ಟಿದೆ.

ಹೀರೋ ಆಗಬೇಕೆಂಬ ಕನಸಿನೊಂದಿಗೇ ಬೆಳೆದು ಬಂದಿದ್ದ ವರ್ಧನ್‌ಗೆ ತಾನು ಇದೇ ರೀತಿಯಲ್ಲಿ ಲಾಂಚ್ ಆಗಬೇಕೆಂಬ ಸ್ಪಷ್ಟವಾದ ಕಲ್ಪನೆ ಇತ್ತು. ಸದ್ಯ ಪ್ರಕಾಶ್ ಹೆಬ್ಬಾಳ್ ಅಂಥಾದ್ದೇ ಕಥೆ ರೆಡಿ ಮಾಡಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರದ್ದು ಮಂಗಳೂರು ಭೂಗತದ ಬೇಸ್ ಇರೋ ಮಾಸ್ ಕಥೆ. ಅಲ್ಲಿ ಹಫ್ತಾ ವಸೂಲಿ ಮಾಡೋ ಹುಡುಗನೊಬ್ಬನ ಸುತ್ತ ಸುತ್ತೋ ಈ ಕಥೆ ತನಗೆ ಹೇಳಿ ಮಾಡಿಸಿದಂತಿದೆ ಎಂಬ ಖುಷಿ ವರ್ಧನ್ ಅವರದ್ದು. ಇಷ್ಟರಲ್ಲಿಯೇ ಈ ಚಿತ್ರದ ಟೈಟಲ್ ಸ್ಟಾರ್ ನಟರೊಬ್ಬರ ಮೂಲಕ ಅನಾವರಣಗೊಳ್ಳಲಿದೆ.

ಬದುಕು ಎತ್ತೆತ್ತ ಎಸೆದರೂ ನಟನೆಯ ಕನಸು ಕೈಜಾರದಂತೆ ನೋಡಿಕೊಂಡ ವರ್ಧನ್ ತೀರ್ಥಹಳ್ಳಿ ಹಂತ ಹಂತವಾಗಿಯೇ ಬೆಳೆದು ಬಂದಿದ್ದಾರೆ. ಈಗ ನಾಯಕನಾಗಿಯೂ ಎಂಟ್ರಿ ಕೊಟ್ಟಿದ್ದಾರೆ. ದೊಡ್ಡ ಗೆಲುವು ಅವರದ್ದಾಗಲೆಂದು ಹಾರೈಸೋಣ.

#

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಡಾಲಿಯ ಅಬ್ಬರ ಕಂಡು ಏನಂದರು ಯಜಮಾನ?

Previous article

ಖಡಕ್ ಟ್ರೈಲರ್‌ಗೆ ಕಿಚ್ಚನ ಧ್ವನಿಯ ಕಿಕ್!

Next article

You may also like

Comments

Leave a reply

Your email address will not be published.