ವಿಜಯಪ್ರಸಾದ್ ಚಿತ್ರಗಳೇ ಹಾಗೆ. ಅವರ ಚಿತ್ರಗಳಲ್ಲಿ ಅದ್ಧೂರಿತನ ಇರುವುದಿಲ್ಲ. ಐಷಾರಾಮಿ ಜೀವನವಿರುವುದಿಲ್ಲ. ದೊಡ್ಡದೊಡ್ಡ ಮನುಷ್ಯರು, ಮನೆಗಳು, ಆಡಂಬರ, ಫಾರಿನ್ ಶೂಟಿಂಗ್ ಯಾವುದೂ ಇರುವುದಿಲ್ಲ. ಅವರು ತಮ್ಮ ಪ್ರತಿ ಚಿತ್ರಕ್ಕೂ ಆಯ್ಕೆ ಮಾಡಿಕೊಳ್ಳುವುದು ಮೈಸೂರನ್ನು. ಆ ಮೈಸೂರಿನಲ್ಲೇ ಈ ಜಗತ್ತಿನ ಬಡವರ, ನೊಂದವರ, ತಿರಸ್ಕೃತರ, ಅನಾಥರ ನೋವಿನ ಕಥೆಯನ್ನು ಹೇಳುವ ಪ್ರಯತ್ನವನ್ನು ಅವರು ಮಾಡುತ್ತಾರೆ. ಅವರಿಗೆ ಒಂದು ವಿಷಯ ಚೆನ್ನಾಗಿ ಸ್ಪಷ್ಟವಿದೆ. ಬರೀ ಗೋಳಿನ ಕಥೆಯನ್ನು ಹೇಳಿದರೆ, ಜನ ಬರುವುದಿಲ್ಲ ಎಂದು. ಅದಕ್ಕಾಗಿ ಅವರು ತಮ್ಮದೇ ಶೈಲಿಯ ಚೇಷ್ಟೆಯನ್ನೂ ಸೇರಿಸುತ್ತಾ ಹೋಗುತ್ತಾರೆ. ಮೊನ್ನೆ ಬಿಡುಗಡೆಯಾದ ಜಗ್ಗೇಶ್ ಅಭಿನಯದ ‘ತೋತಾಪುರಿ’ ಸಹ ಅದೇ ಶೈಲಿಯ ಒಂದು ಚಿತ್ರ.
ಜಾತಿ ತಾರತಮ್ಯ, ಧರ್ಮಗಳ ನಡುವಿನ ಸಂಘರ್ಷದಲ್ಲಿ ಮಾನವೀಯತೆ ಮೌಲ್ಯ ಕಳೆದುಕೊಳ್ಳುತ್ತಿದೆ. ಇಂಥ ಸಂದರ್ಭದಲ್ಲಿ ಜಾತಿ, ಧರ್ಮ ಮತ್ತು ಮಾನವೀಯತೆಯಲ್ಲಿ ಮನುಷ್ಯನಿಗೆ ಯಾವುದು ದೊಡ್ಡದು? ಇಂದಿನ ಸಮಾಜಕ್ಕೆ ಮುಖ್ಯವಾಗಿ ಏನು ಬೇಕು? ಎಂಬ ಗಂಭೀರ ಪ್ರಶ್ನೆಗಳನ್ನು ಹಾಸ್ಯಮಯವಾಗಿ ಹೇಳುವ ಪ್ರಯತ್ನವನ್ನು ವಿಜಯಪ್ರಸಾದ್ ಅವರು ‘ತೋತಾಪುರಿ’ ಈ ಚಿತ್ರದಲ್ಲಿ ಮಾಡಿದ್ದಾರೆ.
ಇಂಥ ವಿಷಯಗಳನ್ನು ತೆರೆಯ ಮೇಲೆ ತರುವುದು ಅಷ್ಟು ಸುಲಭದ ವಿಷಯವಲ್ಲ. ಸ್ವಲ್ಪ ಆಚೀಚೆಯಾದರೂ ರಾಜಕೀಯ ಬಣ್ಣ ಪಡೆದುಕೊಳ್ಳುವ, ವಿವಾದವಾಗುವ ಅಪಾಯ ಇದ್ದೇ ಇದೆ. ಆದರೆ, ಯಾರ ಮನಸ್ಸಿಗೂ ನೋವಾಗದಂತೆ ಜಾತಿ, ಧರ್ಮ, ಲಿಂಗ ತಾರತಮ್ಯದ ಗಂಭೀರವಾದ ವಿಷಯವನ್ನು ತಿಳಿ ಹಾಸ್ಯದ ಮೂಲಕ ಹೇಳುವುದಕ್ಕೆ ವಿಜಯಪ್ರಸಾದ್ ಅವರಿಗೆ ಗೊತ್ತಿದೆ. ಅದನ್ನೇ ಅವರು ಇಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ.
ವಿಜಯಪ್ರಸಾದ್ ಈ ಕಥೆಯನ್ನು ನಿರೂಪಿಸುವ ರೀತಿಯೇ ವಿಶೇಷವಾಗಿದೆ. ಎಲ್ಲ ಜಾತಿ, ಧರ್ಮಗಳ ಕಥೆ ಇದಾಗಿರುವುದರಿಂದ, ಅವರು ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮೂರು ಪಾತ್ರಗಳನ್ನು ಸಾಂಕೇತಿಕವಾಗಿ ಇಟ್ಟುಕೊಂಡು ಕಥೆಯನ್ನು ನಿರೂಪಿಸುತ್ತಾರೆ. ಈ ಮೂರು ಪಾತ್ರಗಳು ಬಂದು ಚಿತ್ರದ ಪಾತ್ರಗಳನ್ನು ಪರಿಚಯಿಸುವುದಷ್ಟೇ ಅಲ್ಲ, ತಮ್ಮ ನಿರೂಪಣೆಯಿಂದ ಕಥೆಯನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತಾರೆ. ಚಿತ್ರವು ಪ್ರಮುಖವಾಗಿ ಈರೇಗೌಡ, ಶಕೀಲಾ ಬಾನು, ದೊನ್ನೆ ರಂಗಮ್ಮ ಮತ್ತು ನಂಜಮ್ಮ ಎಂಬ ನಾಲ್ಕು ಪ್ರಮುಖ ಪಾತ್ರಗಳ ಸುತ್ತ ಸುತ್ತುತ್ತದೆ. ನಾಲ್ಕು ವಿಭಿನ್ನ ಸ್ತರದ ಮತ್ತು ವಯಸ್ಸಿನ ಪಾತ್ರಗಳನ್ನು ಕೆಲವೊಮ್ಮೆ ತುಂಬಾ ಗಂಭೀರವಾಗಿ, ಕೆಲವೊಮ್ಮೆ ತಮಾಷೆಯಾಗಿ ಕಟ್ಟಿಕೊಡುತ್ತಾ ಹೋಗುತ್ತಾರೆ ವಿಜಯಪ್ರಸಾದ್. ಒಂದು ಗಂಭೀರವಾದ ವಿಷಯ ಮತ್ತು ದೃಶ್ಯದಿಂದ ಪ್ರೇಕ್ಷಕರಿಗೆ ಕಣ್ಣೀರು ಬಂದರೆ, ಅದರ ಮುಂದಿನ ದೃಶ್ಯದ ಹಾಸ್ಯದಿಂದ ನಗುವಂತಾಗುತ್ತದೆ. ಒಟ್ಟಾರೆ ಅಳುತ್ತಲೇ ನಗಿಸುವ, ನಗುತ್ತಲೇ ಅಳಿಸುವ ಒಂದು ವಿಭಿನ್ನವಾದ ಪ್ರಯತ್ನವೇ ‘ತೋತಾಪುರಿ’.
ಬರೀ ಕಥೆ, ಮಾತುಗಳು, ನಿರೂಪಣೆಯಷ್ಟೇ ಅಲ್ಲ, ತಾಂತ್ರಿಕವಾಗಿಯೂ ಚಿತ್ರ ಖುಷಿ ಕೊಡುತ್ತದೆ. ಛಾಯಾಗ್ರಹಣ, ಕಲಾ ನಿರ್ದೇಶನ, ಕಲರಿಂಗ್, ಹಿನ್ನೆಲೆ ಸಂಗೀತ ಚಿತ್ರಕ್ಕೆ ಇನ್ನಷ್ಟು ಪುಷ್ಠಿ ತುಂಬುತ್ತದೆ. ಇನ್ನು, ಅಭಿನಯವಂತೂ ಕೇಳುವುದೇ ಬೇಡ. ಜಗ್ಗೇಶ್, ದತ್ತಣ್ಣ, ವೀಣಾ ಸುಂದರ್, ಅದಿತಿ ಪ್ರಭುದೇವ, ಹೇಮಾ ದತ್ರಂತಹ ಒಬ್ಬರಿಗಿಂತ ಇನ್ನೊಬ್ಬರು ಘಟಾನುಘಟಿ ಕಲಾವಿದರಿರುವುದರಿಂದ ‘ತೋತಾಪುರಿ’ಯನ್ನು ಇನ್ನಷ್ಟು ರುಚಿಯಾಗಿಸುತ್ತಾರೆ.
ಒಟ್ಟಿನಲ್ಲಿ ಈ ದಸರ ಸೀಸನ್ನಲ್ಲಿ ಪ್ರೇಕ್ಷಕರಿಗೆ ಒಂದೊಳ್ಳೆಯ ಮನರಂಜನೆ ಎಂದರೆ ಅದು ‘ತೋತಾಪುರಿ’.
No Comment! Be the first one.