ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಉದ್ಘರ್ಷ ಚಿತ್ರ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡಿದೆ. ಯಶಸ್ವೀ ಥ್ರಿಲ್ಲರ್ ಚಿತ್ರಗಳ ಮೂಲಕವೇ ಮಾಸ್ಟರ್ ಡೈರೆಕ್ಟರ್ ಅನ್ನಿಸಿಕೊಂಡಿರೋ ದೇಸಾಯಿ ಉದ್ಘರ್ಷದಲ್ಲಿಯೂ ಥ್ರಿಲ್ಲರ್ ಹಾದಿಯಲ್ಲೇ ಹೆಜ್ಜೆಯಿಟ್ಟಿದ್ದಾರೆ. ಕನ್ನಡ ಮಾತ್ರವಲ್ಲದೇ ಬಹು ಭಾಷೆಗಳಲ್ಲಿ ತಯಾರಾಗಿರೋ ಈ ಸಿನಿಮಾ ಆರಂಭದಿಂದ ಇಲ್ಲಿಯವ ರೆಗೂ ಸದಾ ಸುದ್ದಿಯಲ್ಲಿತ್ತು. ಪ್ರೇಕ್ಷಕರಲ್ಲಿ ನಿರೀಕ್ಷೆಯ ತಾಪವನ್ನೂ ಏರಿಸಿತ್ತು. ಇದೀಗ ಚಿತ್ರೀಕರಣ ಮುಗಿಸಿಕೊಳ್ಳುವ ಮೂಲಕ ಬಿಡುಗಡೆಯ ಸಮೀಪಕ್ಕೂ ಉದ್ಘರ್ಷ ತಲುಪಿಕೊಂಡಿದೆ.
ಉದ್ಘರ್ಷದಲ್ಲಿ ಬೇರೆ ಬೇರೆ ಭಾಷೆಗಳ ತಂತ್ರಜ್ಞರು ಮತ್ತು ನಟ ನಟಿಯದ ದೊಡ್ಡ ದಂಡೇ ಇದೆ. ಸಿಂಗಂ ೩ ಖ್ಯಾತಿಯ ಖ್ಯಾತ ಖಳನಟ ಠಾಕೂರ್ ಅನೂಪ್ ಸಿಂಗ್ ಈ ಚಿತ್ರದ ಮೂಲಕ ಮೊದಲ ಸಲ ನಾಯಕನಾಗಿದ್ದಾರೆ. ತಾನ್ಯಾ ಹೋಪೆ ನಾಯಕಿಯಾಗಿ ನಟಿಸಿದ್ದಾರೆ. ಬಾಲಿವುಡ್ ನಟ ಕಬೀರ್ ಸಿಂಗ್ ದುಹಾನ್, ಶ್ರವಣ್ ರಾಘವೇಂದ್ರ, ವಂಶಿ ಕೃಷ್ಣ, ಶ್ರದ್ದಾ ದಾಸ್ ಮುಂತಾದವರ ಅದ್ದೂರಿ ತಾರಾಗಣ ಉದ್ಘರ್ಷದಲ್ಲಿದೆ.
ಆರ್ ದೇವರಾಜ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ರಾಜೇಂದ್ರ ಹಾಗೂ ಡಿ ಮಂಜುನಾಥ್ ಸಹ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಎಂಭತ್ತರ ದಶಕದಲ್ಲಿಯೇ ಹೊಸಾ ಅಲೆ ಸದೃಷ್ಟಿಸಿದ್ದವರು. ಥರ ಥರದ ಚಿತ್ರಗಳನ್ನು ನಿರ್ದೇಶನ ಮಾಡಿದ್ದರೂ ಅವರು ಸ್ಟಾರ್ ನಿರ್ದೇಶಕ ಅನ್ನಿಸಿಕೊಂಡಿರೋದು ಥ್ರಿಲ್ಲರ್ ಸಿನಿಮಾಗಳಿಂದ. ಯಾವ ಕಾಲ ಘಟ್ಟದಲ್ಲಿಯೇ ನಿಂತಿದ್ದರೂ ವರ್ಷಗಟ್ಟಲೆ ಮುಂದಕ್ಕೆ ಹೋಗಿ ಆಲೋಚಿಸುವ ದೇಸಾಯಿ ಉದ್ಘರ್ಷವನ್ನೂ ಕೂಡಾ ಅಂಥಾದ್ದೇ ಹೊಸತನಗಳಿಂದ ನಿರ್ದೇಶನ ಮಾಡಿದ್ದಾರೆ. ಇದೀಗ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡಿರುವ ಈ ಸಿನಿಮಾ ಶೀಘ್ರದಲ್ಲಿಯೇ ತೆರೆ ಕಾಣಲು ರೆಡಿಯಾಗುತ್ತಿದೆ.
#