ನೋ ಡೌಟ್! ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಮತ್ತೆ ಎದ್ದು ಬಂದಿದ್ದಾರೆ. “ಹಳೇ ಸ್ಟಾರ್ ಡೈರೆಕ್ಟರ್ಗಳು ಈ ಕಾಲಕ್ಕೆ ತಕ್ಕಂತೆ ಅಪ್ಡೇಟ್ ಆಗುತ್ತಿಲ್ಲ. ಹೊಸಬರೊಂದಿಗೆ ಅವರು ಹೊಂದಿಕೆಯಾಗೋದಿಲ್ಲ” ಅನ್ನೋ ಮಾತು ಕೇಳಿಬರುತ್ತಿರುತ್ತದೆ. ಆದರೆ ಉದ್ಘರ್ಷ ನೋಡಿಬಂದವರಿಗೆ ಅಂಥಾ ಭಾವನೆ ತಪ್ಪು ಅನ್ನೋದು ಮನದಟ್ಟಾಗುತ್ತದೆ. ಬರೀ ಪ್ರೀತಿ-ಪ್ರೇಮ, ಫ್ಯಾಮಿಲಿ ಸೆಂಟಿಮೆಂಟಿನ ಸಿನಿಮಾಗಳೇ ಬರುತ್ತಿದ್ದ ಕಾಲದಲ್ಲೇ ತರ್ಕ, ನಿಷ್ಕರ್ಷದಂಥಾ ಸಿನಿಮಾಗಳನ್ನು ಕೊಟ್ಟು ‘ಈ ಡೈರೆಕ್ಟ್ರು ಹತ್ತು ವರ್ಷ ಮುಂದಿದ್ದಾರೆ’ ಅನ್ನಿಸಿಕೊಂಡಿದ್ದವರು ದೇಸಾಯಿ. ಆ ನಂತರ ನಮ್ಮೂರ ಮಂದಾರ ಹೂವೇಯಂಥಾ ಸುಂದರ ಸಿನಿಮಾವನ್ನು ಕೊಟ್ಟು ಸೈ ಅನ್ನಿಸಿಕೊಂಡಿದ್ದವರು. ಈ ನಡುವೆ ದೇಸಾಯಿ ಬತ್ತಳಿಕೆ ಖಾಲಿಯಾಗಿದೆ ಅನ್ನಿಸಿಕೊಳ್ಳಲು ಕಾರಣ ಕೂಡಾ ಅವರೇ ರೂಪಿಸಿದ ಸಿನಿಮಾಗಳು. ಹೀಗಿರುವಾಗ, ಉದ್ಘರ್ಷ ನೋಡಿದವರಿಗೆ ದೇಸಾಯಿ ಮತ್ತೊಂದು ಜನ್ಮವೆತ್ತಿಬಂದಂತೆ ಕಾಣಿಸುತ್ತಿದೆ.
ಒಂದು ಕೊಲೆ, ಅದನ್ನು ತನ್ನ ಮೊಬೈಲಲ್ಲಿ ರೆಕಾರ್ಡು ಮಾಡಿಕೊಂಡ ಹುಡುಗಿ, ಆಕೆಯನ್ನು ಬೆನ್ನಟ್ಟಿದ ಹಂತಕ ಪಡೆ, ಅವಳನ್ನು ಕಾಪಾಡುವದನ್ನೇ ಗುರಿಯಾಗಿಸಿಕೊಂಡ ಅವಳ ಲವರ್. ಈ ನಡುವೆ ಜೊತೆಯಾಗುವ ಮತ್ತೊಬ್ಬ ಹುಡುಗಿ, ಸುಂದರವಾದ ಪ್ರಕೃತಿ, ಭಯ ಹುಟ್ಟಿಸುವ ಕಾಡು, ಪೊದೆ, ಹಳೇ ಬಂಗಲೆಗಳು, ರಾಕ್ಷಸ ದೇಹದ ವ್ಯಕ್ತಿಗಳು, ಕಾರುಗಳು, ಹೆಣ, ಹೊಡೆದಾಟ, ಸ್ಕ್ರೂ ಡ್ರೈವರ್, ಡ್ರ್ಯಾಗರ್, ಇರಿತ, ರಕ್ತ, ತುಂಡರಿಸಿದ ಬೆರಳುಗಳು… ಹೀಗೆ ತೆರೆಮೇಲೆ ಕಾಣಿಸಿಕೊಳ್ಳುವ ಒಂದೊದು ವಸ್ತು, ಪಾತ್ರಗಳೂ ದಿಗಿಲು ಹುಟ್ಟಿಸುವಂಥದ್ದು. ಯಾವಾಗ ಏನಾಗುತ್ತದೆ ಅಂತಾ ಗೊತ್ತಾಗದ ರೋಚಕತೆ, ಕ್ಷಣಕ್ಷಣಕ್ಕೂ ಎದುರಾಗುವ ಥ್ರಿಲ್ಲು.. ಅಬ್ಬಬ್ಬಾ… ಈ ಬೇಸಿಗೆಯಲ್ಲಿ ಥಿಯೇಟರಿಗೆ ಹೋಗಿ ಕುಂತವರ ಗಂಟಲು ಒಣಗಲು ಇಷ್ಟು ಸಾಕಲ್ಲವೆ?
ಸತ್ತವನ ಸಾವು ಸಾವಲ್ಲ, ಉಳಿದು ಉಳಿಸಲು ಪ್ರಯತ್ನಿಸುವವರ ಪಾಡು ಕಾಡು ಪಾಲಾಯಿತಲ್ಲ… ಎನ್ನುವಂತೆ ಉದ್ಘರ್ಷ ಮೂಡಿಬಂದಿದೆ. ಅನೂಪ್ ಠಾಕೂರ್ ಯಾಕೆ ಹೀರೋ ಆದರು ಅನ್ನೋದು ಸಿನಿಮಾ ನೋಡಿದಾಗ ಗೊತ್ತಾಗುತ್ತದೆ. ತಾನಿಯಾ ಹೋಪ್ ಮತ್ತು ಧನ್ಸಿಕಾ ಮೈಕೈ ಪರಚಿಸಿಕೊಂಡು ಮನಸಾರೆ ನಟಿಸಿದ್ದಾರೆ. ಮೈ ನವಿರೇಳಿಸುವಂಥಾ ಕಥಾ ಹಂದರವಿರುವ ಉದ್ಘರ್ಷದಲ್ಲಿ ಸ್ವಲ್ಪ ಅತಿಯೆನಿಸುವಷ್ಟು ವೈಲೆನ್ಸ್ ಇರೋದು ನಿಜ. ಇದು ಬಹುಭಾಷಾ ಸಿನಿಮಾ ಆಗಿರೋದರಿಂದ ಇಲ್ಲಿನವರಿಗೆ ಅದು ಹಿಂಸೆಯೆನಿಸಿದರೂ ಬೇರೆ ರಾಜ್ಯಗಳ ಜನ ಅದನ್ನೇ ಇಷ್ಟಪಡೋ ಸಾಧ್ಯತೆಗಳಿವೆ.
No Comment! Be the first one.