ಉಗ್ರಂ ಸಿನಿಮಾದ ಮೂಲಕ ಹೆಸರು ಮಾಡಿದ ಕಲಾವಿದ ರವಿ. ಉಗ್ರಂ ರವಿ ಅಂತಲೇ ಫೇಮಸ್ಸಾಗಿರುವ ರವಿ ಕೆ.ಜಿ.ಎಫ್ ಅವನೇ ಶ್ರೀಮನ್ನಾರಾಯಣ, ಬಿಚ್ಚುಗತ್ತಿ, ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.
ಬೆಂಗಳೂರಿನ ಸಿ.ವಿ. ರಾಮನ್ ನಗರದಲ್ಲಿ ವಾಸವಿರುವ ಉಗ್ರಂ ರವಿ ಅವರ ಕಿರಿಯ ಸಹೋದರ ರಂಜೀತ್ ಕುಮಾರ್ ನೆನ್ನೆಯಿಂದ ನಾಪತ್ತೆಯಾಗಿದ್ದಾರೆ.
ಉಗ್ರಂ ರವಿ ಅವರ ತಂದೆ ಗುಣಾಲನ್ ಆರ್ಮಿಯಲ್ಲಿ ಸೇವೆಸಲ್ಲಿಸಿರುವ ಮಾಜಿ ಯೋಧ. ಈ ಹಿಂದೆ ಪಾಕಿಸ್ತಾನ, ಬಾಂಗ್ಲಾದೇಶ ವಿರುದ್ಧದ ಯುದ್ಧದಲ್ಲಿ ಭಾಗವಹಿಸಿದ್ದವರು. ಸದ್ಯ ನಿವೃತ್ತ ಜೀವನ ನಡೆಸುತ್ತಿರುವ ಗುಣಾಲನ್ ಅವರಿಗೆ ರವಿ ಸೇರಿದಂತೆ ನಾಲ್ಕು ಜನ ಮಕ್ಕಳು.
ಮೂವರು ಸ್ಟೇಟ್ ಲೆವೆಲ್ ಫುಟ್ ಬಾಲ್ ಆಟಗಾರರು. ರವಿ ಕೂಡಾ ರಾಜ್ಯ ತಂಡದ ಗೋಲ್ ಕೀಪರ್ ಆಗಿ ಹೆಸರು ಮಾಡಿದ್ದಾರೆ. ಇನ್ನುಳಿದ ಒಬ್ಬ ಸಹೋದರ ರಂಜೀತ್ ಕುಮಾರ್ ಹುಟ್ಟಿನಿಂದಲೇ ಬುದ್ದಿಮಾಂದ್ಯ. ಬೆಳಿಗ್ಗೆ ಮನೆಯಿಂದ ಹೊರಬಿದ್ದರೆ ಇಡೀ ದಿನ ಅಲ್ಲೀ ಇಲ್ಲಿ ಓಡಾಡಿಕೊಂಡು ಸಂಜೆ ಹೊತ್ತಿಗೆ ಮತ್ತೆ ಗೂಡು ಸೇರುತ್ತಿದ್ದ ರಂಜೀತ್ ನೆನ್ನೆ ಸಂಜೆ ವಾಪಾಸು ಬಂದಿರಲಿಲ್ಲ. ಕಾದು ಕಾದು ಕಡೆಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ರಂಜೀತ್ ದೇವರ ಮಗುವಾಗಿರುವುದರಿಂದ ಮನೆಯವರು ಮಾತ್ರವಲ್ಲದೆ , ನೆರೆಹೊರೆಯವರೂ ಅಪಾರ ಪ್ರೀತಿಯಿಂದ ಕಾಣುತ್ತಿದ್ದರು. ಮೂವತ್ತಾರು ವರ್ಷದ ಈ ಯುವಕನನ್ನು ಮಗುವಿನಂತೆ ಸಲಹುತ್ತಿದ್ದರು. ಈಗ ಏಕಾಏಕಿ ರಂಜೀತ್ ಕಾಣೆಯಾಗಿರುವುದು ಎಲ್ಲರಲ್ಲೂ ಆತಂಕ ಮೂಡಿಸಿದೆ.
ಆತ್ಮೀಯರೆಲ್ಲಾ ಸೇರಿ ಮನೆಯಿಂದ ತಪ್ಪಿಸಿಕೊಂಡಿರುವ ರಂಜೀತ್ ನನ್ನು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ. ಯಾರಿಗಾದರೂ ಈತನ ಸುಳಿವು ಸಿಕ್ಕರೆ ತಕ್ಷಣ ಸಿ.ವಿ. ರಾಮನ್ ನಗರ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ನೀಡಬೇಕಾಗಿ ವಿನಂತಿ.
No Comment! Be the first one.