ರಿಯಲ್ ಸ್ಟಾರ್ ಉಪೇಂದ್ರ ಇದೀಗ ಲೋಕಸಭಾ ಚುನಾವಣಾ ವಿಚಾರದಲ್ಲಿ ಫುಲ್ ಬ್ಯುಸಿ. ಈ ಬಾರಿ ಅವರು ತಮ್ಮ ಉತ್ತಮ ಪ್ರಜಾಕೀಯ ಪಕ್ಷವನ್ನು ಮುನ್ನೆಲೆಗೆ ತರುವ ಬಿರುಸಿನ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ 14 ಅಭ್ಯರ್ಥಿಗಳನ್ನು ಅನೌನ್ಸ್ ಕೂಡ ಮಾಡಿದ್ದಾರೆ. ಆದರೆ ಇದೆಲ್ಲವನ್ನೂ ಮೀರಿಸುವಂತೆ ಇದೀಗ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣ ಬಿಸಿ ಎಲ್ಲೆಡೆಯೂ ಏರಿಕೊಂಡಿದೆ. ಅತ್ತ ನಿಖಿಲ್ ಮತ್ತು ಇಲ್ಲ ಸುಮಲತಾ ಅಂಬರೀಶ್ ಮುಖಾಮುಖಿಯಾಗಿರೋದರಿಂದಾಗಿ ಚಿತ್ರರಂಗಕ್ಕೂ ಮಂಡ್ಯ ಕಣಕ್ಕೂ ನೇರಾನೇರ ಕನೆಕ್ಷನ್ನು ಸಿಕ್ಕಿ ಬಿಟ್ಟಿದೆ. ಹೀಗಿರೋದರಿಂದಲೇ ಸಿನಿಮಾ ತಾರೆಗಳೆದುರಾದರೆ ಮಾಧ್ಯಮ ಮಂದಿಯ ಕಡೆಯಿಂದಲೂ ಈ ಪ್ರಶ್ನೆಗಳೆದುರಾಗುತ್ತವೆ. ಹಾಗಿದ್ದ ಮೇಲೆ ಉಪ್ಪಿ ಅದರಿಂದ ಪಾರಾಗಲು ಸಾಧ್ಯವೇ?
ತಮ್ಮ ಪ್ರಜಾಕೀಯ ಪಕ್ಷದ ಭಾಗವಾಗಿ ಓಡಾಟದಲ್ಲಿದ್ದ ಉಪೇಂದ್ರ ಅವರಿಗೂ ಮಂಡ್ಯ ಲೋಕಸಭಾ ಕ್ಷೇತ್ರದ ಕುರಿತಾದ ಪ್ರಶ್ನೆಗಳು ಎದುರಾಗಿವೆ. ಅದಕ್ಕವರು ಬುದ್ಧಿವಂತಿಕೆಯಿಂದಲೇ ಉತ್ತರಿಸಿ ಪಾರಾಗಿದ್ದಾರೆ. “ಎಲೆಕ್ಷನ್ನು ನಡೀತಿರೋದು ಬರೀ ಮಂಡ್ಯದಲ್ಲಿ ಮಾತ್ರವಲ್ಲವಲ್ಲ” ಅಂದಿರೋ ಉಪ್ಪಿ ಮತ್ತೂ ಪ್ರಶ್ನೆಗಳು ತೂರಿ ಬಂದಾಗ ಖಡಕ್ ಆದ ಉತ್ತರವನ್ನೇ ಕೊಟ್ಟಿದ್ದಾರೆ. “ನಾವು ಅಭಿವೃದ್ದಿ ದಿಕ್ಕಿನಲ್ಲಿ ಮಾತಾಡೋದು ಬೇಕಾದಷ್ಟಿದೆ. ಅಂಥಾ ವಿಚಾರಗಳನ್ನ ಮಾತಾಡುವಂತಾದರೆ ಮಾತ್ರವೇ ಅಭಿವೃದ್ಧಿ ಸಾಧ್ಯ” ಎಂಬರ್ಥದಲ್ಲಿ ಉಪ್ಪಿ ಮಾತಾಡಿದ್ದಾರೆ.
ಹೀಗೆ ಮಂಡ್ಯ ಚುನಾವಣಾ ಕಣದಿಂದ ಜಾರಿಕೊಂಡಿರೋ ಉಪ್ಪಿ ತಮ್ಮ ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಈ ಬಾರಿ ರಾಜ್ಯದ ಅಷ್ಟೂ ಕ್ಷೇತ್ರದಿಂದಲೂ ಹವಾ ಸೃಷ್ಟಿಸಲು ಮುಂದಾಗಿದ್ದಾರೆ. ಖುದ್ದು ಅವರೇ ಏಪ್ರಿಲ್ ತಿಂಗಳ ಆರಂಭದಿಂದ ಪ್ರತೀ ಅಭ್ಯರ್ಥಿಗಳ ಪರವಾಗಿಯೂ ಪ್ರಚಾರ ನಡೆಸಲಿದ್ದಾರಂತೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯ ಹೊತ್ತಿಗೆಲ್ಲ ಉಪ್ಪಿ ಪ್ರಜಾಕೀಯ ಪಕ್ಷ ಆರಂಭಿಸಿದ್ದರು. ಆದರೆ ಚುನಾವಣೆ ಸಮೀಪಿಸುತ್ತಿದ್ದಂತೆ ಆಂತರಿಕ ತಿಕ್ಕಾಟಗಳು ಆರಂಭವಾಗಿ ಪ್ರಜಾಕೀಯವೇ ಮರೆಗೆ ಸರಿದಿತ್ತು. ಆದರೆ ಈ ಬಾರಿ ಮಾತ್ರ ಎಲ್ಲ ಕಾರ್ಯ ಯೋಜನೆಗಳೂ ಪಕ್ಕಾ ಇದ್ದಂತಿದೆ.
No Comment! Be the first one.