ರಥಾವರ ಖ್ಯಾತಿಯ ನಿರ್ದೇಶಕ ಚಂದ್ರಶೇಖರ ಬಂಡೀಯಪ್ಪ ನಿರ್ದೇಶನದಲ್ಲಿ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸಬೇಕಿರುವ ಚಿತ್ರ ವೈರಮುಡಿ. 2018ರಲ್ಲೇ ಈ ಚಿತ್ರ ಅನೌನ್ಸ್ ಆಗಿತ್ತು. ಕಂಬಳವನ್ನು ಪ್ರಧಾನ ವಿಷಯವನ್ನಾಗಿಟ್ಟುಕೊಂಡು ಅದರ ಸುತ್ತ ಹೆಣೆಯಲಾದ ತಿರುಳು ಈ ಚಿತ್ರದ್ದು. ಈ ಸಿನಿಮಾದ ಪೋಸ್ಟರ್ ಕೂಡಾ ಹಿಂದೆಯೇ ಅನಾವರಣಗೊಂಡಿದೆ. ಇವತ್ತು ಹೊಂಬಾಳೆ ಫಿಲಂಸ್ ಘೋಷಿಸಿರುವ ಕಾಂತಾರ ಸಿನಿಮಾ ಕೂಡಾ ಕಂಬಳದ ಕಥಾ ವಸ್ತು ಹೊಂದಿದ್ದು, ನಟ, ನಿರ್ದೇಶಕ ರಿಷಬ್ ಶೆಟ್ಟಿ ಕೋಣವನ್ನು ಓಡಿಸುತ್ತಿರುವ ಚಿತ್ರವನ್ನು ಬಳಸಲಾಗಿದೆ. ಇದು ಶಿವರಾಜ್ ಕುಮಾರ್ ಅಭಿಮಾನಿಗಳ ಕೋಪಕ್ಕೂ ಕಾರಣವಾಗಿದೆ.
ತಲೆಗೆ ರುಮಾಲು ಕಟ್ಟಿಕೊಂಡು, ಕೋಣಗಳ ಹಿನ್ನೆಲೆ ಬಳಸಿರುವುದರಿಂದ ʻನೀವು ನಮ್ಮ ಶಿವಣ್ಣನ ಸಿನಿಮಾ ಪೋಸ್ಟರನ್ನು ನಕಲು ಮಾಡುವ ಅಗತ್ಯವಿತ್ತೇ?ʼ ಎಂದು ಪ್ರಶ್ನಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಸೆಂಚುರಿ ಸ್ಟಾರ್ ಅಭಿಮಾನಿಗಳು ರೊಚ್ಚಿಗೆದ್ದು, ಹೊಂಬಾಳೆ ಸಂಸ್ಥೆ ಮತ್ತು ನಿರ್ದೇಶಕ ರಿಷಬ್ʼಗೆ ಪ್ರಶ್ನೆಗಳ ಸುರಿಮಳೆಗರೆಯುತ್ತಿದ್ದಾರೆ.
ʻನಿರ್ದೇಶಕ ಚಂದ್ರಶೇಖರ ಬಂಡೀಯಪ್ಪ ಕೂಡಾ ವಿಪರೀತ ಬೇಸರಕ್ಕೊಳಗಾದಂತೆ ಕಾಣುತ್ತಿದೆ. ʻʻನಾನು ʻಕಂಬಳʼವನ್ನು ಪೇಟೆಂಟ್ ತೆಗೆದುಕೊಂಡಿಲ್ಲ. ಆದರೆ, ನಾನು ಈ ಚಿತ್ರದ ಕಥೆ ಸಿದ್ಧಪಡಿಸಲು ಮೂರು ವರ್ಷ ಕಷ್ಟ ಪಟ್ಟಿದ್ದೀನಿ. ಹಗಲು ರಾತ್ರಿಯೆನ್ನದೆ ಊರೂರು ಅಲೆದು, ನೂರಾರು ಜನರನ್ನು ಮಾತಾಡಿಸಿ, ಸಾಕಷ್ಟು ರಿಸರ್ಚ್ ಮಾಡಿ ಸಬ್ಜೆಕ್ಟ್ ರೆಡಿ ಮಾಡಿಕೊಂಡಿದ್ದೀನಿ. ನಿರ್ದೇಶಕ ರಿಷಬ್ ಕೂಡಾ ನನ್ನಂತೆಯೇ ಕಷ್ಟ ಪಟ್ಟು ಮಾರ್ಕೆಟ್ ಸೃಷ್ಟಿಸಿಕೊಂಡಿದ್ದಾರೆ. ನಾನು ಮೂರು ವರ್ಷಗಳ ಹಿಂದೆಯೇ ಸಿನಿಮಾವನ್ನು ಅನೌನ್ಸ್ ಮಾಡಿರುವುದರಿಂದ, ಸೌಜನ್ಯಕ್ಕಾದರೂ ಒಮ್ಮೆ ಈ ಸಿನಿಮಾ ಮಾಡುತ್ತಿರುವುದರ ಬಗ್ಗೆ ಹೇಳಬಹುದಿತ್ತು.
ಯಾರೋ ಕಳ್ಳನ ಬಗ್ಗೆಯೋ, ರೌಡಿಯೊಬ್ಬನ ಕುರಿತಾಗಿ ಸಿನಿಮಾ ಮಾಡುವ ತಯಾರಿ ನಡೆಸಿದ್ದಿದ್ದರೆ ಖಂಡಿತವಾಗಿಯೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ನನ್ನ ಪ್ರತಿಯೊಂದು ಸಿನಿಮಾದಲ್ಲೂ ಈ ಮಣ್ಣಿನ ಸಂಸ್ಕೃತಿಯ ಕುರಿತು ಶೋಧನೆ ನಡೆಸಿ ಚಿತ್ರ ಮಾಡಿಕೊಂಡು ಬಂದಿದ್ದೀನಿ. ʻವೈರಮುಡಿʼ ಚಿತ್ರಕ್ಕೂ ಅಪಾರ ಶ್ರಮ ಹಾಕಿದ್ದೇನೆ. ಮೂರು ತಿಂಗಳು ಓಡಾಡಿ, ಡಿಸೈನರ್ ಮಣಿ ಬಳಿ ಪೋಸ್ಟರ್ ವಿನ್ಯಾಸ ಮಾಡಿಸಿದ್ದೆ.
ನಾನು ಯಾವುದೇ ಸಿನಿಮಾದ ಕಥೆ ಸಿದ್ದಪಡಿಸಿಲು ನಿರ್ಮಾಪಕರಿಂದ ಹಣ ಪಡೆದು, ರೂಮು ಹಾಕಿಸಿಕೊಂಡು ಕೂರುವುದಿಲ್ಲ. ನನ್ನ ಕೈಯಿಂದ ಹಣ ವ್ಯಯ ಮಾಡಿರುತ್ತೀನಿ. ಇಷ್ಟೆಲ್ಲಾ ಮಾಡಿ ಕತೆಯನ್ನು ದೊಡ್ಡ ಹೀರೋಗಳಿಗೆ ಹೇಳಿ ಒಪ್ಪಿಸಿ, ನಿರ್ಮಾಪಕರನ್ನು ಪಡೆಯುವುದು ಎಂಥಾ ಕಷ್ಟದ ಕೆಲಸ ಅನ್ನೋದು ಯಾವುದೇ ನಿರ್ದೇಶಕನಿಗೆ ಗೊತ್ತಿರುತ್ತದೆ. ಈ ನಿಟ್ಟಿನಲ್ಲಿ ರಿಷಬ್ ಒಂದು ಮಾತಾದರೂ ಹೇಳದಿರುವುದರ ಬಗ್ಗೆ ಬೇಸರವಷ್ಟೇ ಉಳಿದಿದೆ.ʼʼ ಇದು ರಥಾವರ ನಿರ್ದೇಶಕ ಚಂದ್ರಶೇಖರ್ ಬಂಡೀಯಪ್ಪ ನೀಡಿರುವ ಪ್ರತಿಕ್ರಿಯೆ.
ಈ ನೆಲದ ಕಥೆ ಅಂದಮೇಲೆ ಯಾರು ಬೇಕಾದರೂ ಅದನ್ನು ತಮ್ಮ ಸಿನಿಮಾ ಅಥವಾ ಸೃಜನಶೀಲ ಕೃತಿಗಳಿಗೆ ಬಳಸಿಕೊಳ್ಳಬಹುದು. ಆದರೆ, ಬಂಡೀಯಪ್ಪ ಹೇಳಿದಂತೆ ರಿಷಬ್ ಒಂದು ಮಾತು ಹೇಳಿ ಮುಂದುವರೆಯಬಹುದಿತ್ತು. ಕಡೇಪಕ್ಷ ಪೋಸ್ಟರನ್ನು ಭಿನ್ನವಾಗಿ ರೂಪಿಸಬಹುದಿತ್ತು. ಸದ್ಯ ವೈರಮುಡಿ ಮತ್ತು ಕಾಂತಾರ ಸಿನಿಮಾಗಳನ್ನು ಕುರಿತಂತೆ ವಿವಾದವೊಂದು ಜೀವ ಪಡೆದಿದೆ. ಇದಕ್ಕೆ ರಿಷಬ್ ಹೇಗೆ ಪ್ರತಿಕ್ರಿಯಿಸುತ್ತಾರೆ? ಈ ವಿಚಾರ ಇನ್ನೂ ಯಾವೆಲ್ಲಾ ತಿರುವುಗಳನ್ನು ಪಡೆಯುತ್ತದೋ ಗೊತ್ತಿಲ್ಲ.
ನೂರಾರು ವರ್ಷಗಳ ಹಿನ್ನೆಲೆ, ಇತಿಹಾಸವಿರುವ ಜಾನಪದ ಕ್ರೀಡೆ ಕಂಬಳ. ದಷ್ಟಪುಷ್ಟ ಕೋಣಗಳನ್ನು, ಹಸನಾಗಿ ಹದ ಮಾಡಿದ ಮಣ್ಣಿನ ಗದ್ದೆಯಲ್ಲಿ ಓಡಿಸುವ ರೋಚಕ ಸ್ಪರ್ಧೆ ಇದು. ಕರಾವಳಿ ಪ್ರದೇಶದಲ್ಲಿ ರೈತಾಪಿ ಜನರು ಭತ್ತದ ಕೊಯ್ಲಿನ ನಂತರ ಮನರಂಜನೆಗೋಸ್ಕರ ಏರ್ಪಡಿಸುವ ಈ ಕ್ರೀಡೆ ಇವತ್ತು ರಂಜನೆಯನ್ನು ಮೀರಿ ಹಲವು ಆಯಾಮಗಳನ್ನು ಪಡೆದುಕೊಂಡಿದೆ. ಎರಡು ಕಣಳಲ್ಲಿ ಏಕಕಾಲಕ್ಕೆ ಕೋಣಗಳನ್ನು ಓಡಿಸಿ, ಅವುಗಳ ನಡುವೆ ಸ್ಪರ್ಧೆ ನಡೆಸಲಾಗುತದೆ. ರಾಜಮಹಾರಾಜರ ಕಾಲದಿಂದಲೂ ಈ ಕಂಬಳವನ್ನು ಸಂಪ್ರದಾಯದಂತೆ ಆಚರಿಸಿಕೊಂಡು ಬರಲಾಗುತ್ತಿದೆ. ಈಗ ಇದೇ ಕಂಬಳ ಸಿನಿಮಾರಂಗದಲ್ಲಿನ ಎರಡು ಪ್ರಬಲ ನಿರ್ದೇಶಕರ ನಡುವೆಯೂ ಸ್ಪರ್ಧೆಯನ್ನೇರ್ಪಡಿಸಿದೆ.