ರೆಬೆಲ್ ಸ್ಟಾರ್ ಅಂಬರೀಶ್ ಕಣ್ಮರೆಯಾಗುತ್ತಲೇ ಮತ್ತೆ ವಿಷ್ಣು ಸ್ಮಾರಕದ ವಿಚಾರ ಹೊಗೆಯಾಡಲಾರಂಭಿಸಿದೆ. ನಿಜ, ವಿಷ್ಣುರಂಥಾ ನಟರ ಸ್ಮಾರಕ ನಿರ್ಮಾಣ ಈ ಪಾಟಿ ಕಗ್ಗಂಟಾಗಿರೋದು ಒಳ್ಳೆ ಬೆಳವಣಿಗೆಯಲ್ಲ. ಆದರೆ ಅದಕ್ಕೆ ಕಾರಣ ಸರ್ಕಾರವಲ್ಲ ಎಂಬ ವಿಚಾರ ಈಗಾಗಲೇ ಜಾಹೀರಾಗಿದೆ. ಭಾರತೀ ಮೇಡಮ್ ಬೇರೇನೋ ಲೆಕ್ಕಾಚಾರ ಹಾಕಿಕೊಂಡು ಕೂತಿರೋದರಿಂದಲೇ ಈ ವಿಚಾರ ಇಷ್ಟು ಜಟಿಲ ರೂಪ ಪಡೆದಿದೆ ಎಂಬುದೂ ಜಾಹೀರಾಗಿದೆ. ಹಾಗಿದ್ದರೂ ಕೂಡಾ ಭಾರತೀ ಅಳಿಯ ಅನಿರುದ್ಧ ಥೇಟು ಅವಿವೇಕಿಯಂತೆ ಮಾತಾಡಿದ್ದಾನೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನೂ ಜರಿದಿದ್ದಾನೆ. ಇದಕ್ಕಾಗಿ ಸಿಎಂ ಕಡೆಯಿಂದಲೇ ಉಗಿಸಿಕೊಂಡಿದ್ದೂ ಆಗಿದೆ!
ವಿಷ್ಣು ಅಭಿಮಾನಿಗಳೆಲ್ಲ ಬೆಂಗಳೂರಿನಲ್ಲಿಯೇ ಸ್ಮಾರಕ ನಿರ್ಮಾಣವಾಗಬೇಕೆಂಬ ಆಸೆ ಹೊಂದಿದ್ದಾರೆ. ಆದರೆ ಭಾರತಿ ಮಾತ್ರ ಮೈಸೂರಲ್ಲಿಯೇ ನಡೆಯ ಬೇಕೆಂದು ಪಟ್ಟು ಹಿಡಿದು ಕೂತಿದ್ದಾರೆ. ಅಲ್ಲಿ ಇದಕ್ಕಾಗಿ ಈ ಹಿಂದೆಯೇ ಐದೆಕರೆ ಜಮೀನು ಕೂಡಾ ಸ್ಯಾಂಕ್ಷನ್ ಆಗಿತ್ತು. ಆದರೀಗ ಆ ಜಮೀನಿನ ರೈತರು ತಿರುಗಿ ಬಿದ್ದಿದ್ದಾರೆ. ಇದಕ್ಕೆ ಅನಿರುದ್ಧ ನೇರವಾಗಿ ಕುಮಾರಸ್ವಾಮಿಯವರನ್ನು ಟಾರ್ಗೆಟ್ ಮಾಡಿದ್ದಾನೆ. ಮಾನ ಮರ್ಯಾದೆಯಿದ್ದರೆ ಸ್ಮಾರಕ ನಿರ್ಮಾಣ ಮಾಡಿ ಅಂತೆಲ್ಲ ಅಬ್ಬರಿಸಿದ್ದಾನೆ. ಇಡೀ ಅಭಿಮಾನಿ ಸಂಕುಲವೇ ರಾಜ್ಕುಮಾರ್, ವಿಷ್ಣು ಹಾಗೂ ಅಂಬಿ ಸ್ಮಾರಕಗಳನ್ನು ಒಂದೆಡೆ ಧ್ಯಾನಿಸುತ್ತಿರುವಾಗ ಈ ಅತ್ತೆ ಅಳಿಯ ಯಾಕೆ ಭಿನ್ನ ರಾಗ ತೆಗೆಯುತ್ತಿದ್ದಾರೆಂಬುದಕ್ಕೆ ಬೆಚ್ಚಿಬೀಳಿಸೋ ಕಾರಣಗಳೂ ಇವೆ!
ವಿಷ್ಣು ಸ್ಮಾರಕ ವಿಚಾರವಾಗಿ ಆರಂಭದಿಂದಲೂ ಅದೇಕೋ ಭಾರತಿ ಮೇಡಮ್ಮು ಅಡ್ಡಬಾಯಿ, ಅಡ್ಡಗಾಲಾಗುತ್ತಾ ಸಾಗಿದ್ದಾರೆ. ಇದೀಗ ಅವರ ಕಡೆಯಿಂದ ಅಂಥಾದ್ದೇ ಒಂದು ಅಪಸ್ವರವೂ ಕೇಳಿ ಬಂದಿದೆ. ವೀರಕಪುತ್ರ ಶ್ರೀನಿವಾಸ್ ನೇತೃತ್ವದಲ್ಲಿ ನಡೆಯೋ ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವಕ್ಕೆ ತಯಾರಿ ಆರಂಭವಾಗಿದೆ. ಸಾಹಸಿಂಹ ವಿಷ್ಣುವರ್ಧನ್ ಅಭಿಮಾನಿಗಳನ್ನು ಒಗ್ಗೂಡಿಸಿ ವಿಷ್ಣು ಹೆಸರನ್ನು ಸಾರ್ಥಕವಾಗುವಂಥಾ ಕೆಲಸ ಕಾರ್ಯಗಳನ್ನು ವಿಷ್ಣು ಸೇನೆ ನಡೆಯುತ್ತಿದೆ. ಅತ್ಯಂತ ಪಾರದರ್ಶಕವಾಗಿ ಮುಂದಡಿ ಇಡುತ್ತಿರುವ ವಿಷ್ಣು ಸೇನೆ ಸಾಹಸಸಿಂಹನ ಸ್ಮಾರಕದ ವಿಚಾರದಲ್ಲಿಯೂ ನಿರ್ಣಾಯಕವಾಗಿ ಕಾರ್ಯ ನಿರ್ವಹಿಸಿದೆ. ಆದರೀಗ ಭಾರತೀ ವಿಷ್ಣುವರ್ಧನ್ ಪತ್ರಿಕಾಗೋಷ್ಟಿಯೊಂದನ್ನು ಕರೆದು ಅದರಲ್ಲಿ ವಿಷ್ಣು ಅಭಿಮಾನಿಗಳ ಮೇಲೆಯೇ ಗೂಬೆ ಕೂರಿಸುವ ಪ್ರಯತ್ನ ಮಾಡಿದ್ದರು.
`ವಿಷ್ಣುರ್ಧನ್ ಅವರಿಗೆ ರಾಷ್ಟ್ರೀಯ ಉತ್ಸವದಂಥವು ಇಷ್ಟವಿರಲಿಲ್ಲ. ಆದರೆ ಒಂದಷ್ಟು ಜನ ತಮ್ಮ ಸ್ವಾರ್ಥಕ್ಕೋಸ್ಕರ, ಹೊಟ್ಟೆ ತುಂಬಿಸಿಕೊಳ್ಳಲೋಸ್ಕರ ಅದನ್ನೆಲ್ಲ ಮಾಡುತ್ತಿದ್ದಾರೆ’ ಎಂಬರ್ಥದಲ್ಲಿ ಮಾತಾಡಿ ಎದ್ದು ಹೋಗಿದ್ದಾರೆ. ಇದು ವಿಷ್ಣುಸೇನೆಯ ನೆರಳಲ್ಲಿ ಒಂದುಗೂಡಿರೋ ಸಾಹಸಸಿಂಹನ ಅಭಿಮಾನಿಗಳ ವಿರುದ್ಧ ಆಡಿರೋ ಮಾತೆಂಬುದು ಗೊತ್ತಾಗುತ್ತಲೇ ಅಭಿಮಾನಿಗಳಲ್ಲಿ ಭಾರತಿ ವಿರುದ್ಧ ಅಸಹನೆ ಶುರುವಾಗಿದೆ.
ಯಾವುದು ಹೊಟ್ಟೆ ತುಂಬಿಸಿಕೊಳ್ಳೋ ಕೆಲಸ? ಡಾ ವಿಷ್ಣುವರ್ಧನ್ ಅವರ ಹೆಸರಲ್ಲಿ ಏಳು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅಕ್ಷರಾರ್ಜನೆಗೆ ಒತ್ತಾಸೆಯಾದ ಸಾರ್ಥಕ ಪ್ರಯತ್ನವಾ? ಸಾಹಿತ್ಯ ಪರಿಷತ್ತಿನಲ್ಲಿ ಎರಡು ಲಕ್ಷ ದತ್ತಿನಿಧಿ ಇಟ್ಟು ವಿಷ್ಣು ಹೆಸರಿನಲ್ಲಿ ಸಿನಿಮಾ ಸಾಧಕರಿಗೆ ಪ್ರಶಸ್ತಿ ಕೊಡುವಂಥಾ ಕಾರ್ಯಕ್ರಮವಾ? ಚಾಮರಾಜಪೇಟೆಯಲ್ಲಿ ವಿಷ್ಣುವರ್ಧನ್ ಅವರೇ ಓದಿದ್ದ ಮಾಡೆಲ್ ಸರ್ಕಾರಿ ಶಾಲೆ ಮುಚ್ಚುತ್ತದೆಂದಾಕ್ಷಣವೇ ಅದನ್ನು ತಡೆದು ನಿಜವಾದ ವಿಷ್ಣು ನೆನಪನ್ನು ಕಾಪಾಡಿಕೊಂಡ ಸೂಕ್ಷ್ಮವಂತಿಕೆಯಾ? ಇಂಥಾ ನಾನಾ ಪ್ರಶ್ನೆಗಳು ವಿಷ್ಟುವರ್ಧನ್ ಅವರ ಅಪ್ಪಟ ಅಭಿಮಾನಿಗಳಲ್ಲಿದೆ.
ರಾಜ್ಯಾದಂತ ಮೂವತೈದು ವಿಷ್ಣು ಪ್ರತಿಮೆಗಳನ್ನು ವೀರಕಪುತ್ರ ಶ್ರೀನಿವಾಸ್ ಅವರೇ ಮುಂದೆ ನಿಂತು ಸ್ಥಾಪನೆ ಮಾಡಿಸಿದ್ದಾರೆ. ಅಭಿಮಾನಿಗಳೆಲ್ಲ ಇದಕ್ಕೆ ಒತ್ತಾಸೆಯಾಗಿದ್ದಾರೆ. ಇನ್ನುಳಿದಂತೆ ಈಗ ಪ್ರಕೃತಿ ವಿಕೋಪದಿಂದ ತತ್ತರಿಸಿರೋ ಕೊಡಗಿನಲ್ಲೊಂದು ಮನೆ ಕಟ್ಟಿ ಕೊಡುವಂಥಾ ಕೆಲಸಕ್ಕೂ ವಿಷ್ಣು ಸೇನೆ ಮುಂದಾಗಿದೆ. ಇದಕ್ಕಾಗಿ ಅಭಿಮಾನಿಗಳೆಲ್ಲ ಸೇರಿ ಎಪ್ಪತೈದು ಸಾವಿರದಷ್ಟು ಹಣ ಸಂಗ್ರಹಿಸಿದ್ದಾರೆ. ಆದರೆ ಉದ್ದೇಶಿತ ಮನೆ ನಿರ್ಮಾಣಕ್ಕೆ ಆರು ಲಕ್ಷ ಬೇಕಾಗುತ್ತದೆ. ಈ ಹಣವನ್ನು ವೀರಕಪುತ್ರ ಶ್ರೀನಿವಾಸ್ ಅವರು ತಮ್ಮ ಸ್ವಂತ ಮೂಲದಿಂದಲೇ ಹೊಂಚಿದ್ದಾರೆ. ಯಾರದ್ದೋ ಸಂಕಟಕ್ಕೆ ವಿಷ್ಣು ಹೆಸರಲ್ಲಿ ಮಿಡಿಯುವ ಈ ಮಾನವೀಯ ಕಾರ್ಯದಲ್ಲಿ ಯಾವ ಹೊಟ್ಟೆ ಪಾಡಿದೆ? ಈ ಮನೆಗಳಿಗೆ ವಿಷ್ಣು ನಿಲಯ ಎಂದೇ ನಾಮಕರಣ ಮಾಡಲೂ ತೀರ್ಮಾನಿಸಲಾಗಿದೆ. ಇದು ಅಭಿಮಾನಿಗಳ ಸಾರ್ಥಕ ಕೆಲಸವಲ್ಲದೆ ಮತ್ತೇನು? ಇಂಥಾದ್ದರಲ್ಲೆಲ್ಲ ಭಾರತಿ ಮೇಡಂ ಯಾಕೆ ಸ್ವಾರ್ಥ ಹೆಕ್ಕುವ ಕೆಲಸ ಮಾಡುತ್ತಿದ್ದಾರೆ?
ವಿಷ್ಣು ಸೇನೆಯ ಈ ವರೆಗಿನ ಎಲ್ಲ ಕೆಲಸ ಕಾರ್ಯಗಳ ಲೆಕ್ಕವನ್ನು ಅಭಿಮಾನಿಗಳು ಕೊಡಲು ರೆಡಿಯಿದ್ದಾರೆ. ರಾಜ್ಯದ ಅಷ್ಟೂ ಅಭಿಮಾನಿ ಸಂಘಗಳೂ ಇದಕ್ಕೆ ತಯಾರಿದ್ದಾವೆ. ಆದರೆ ಭಾರತಿ ಮೇಡಮ್ಮು ತಮ್ಮ ವಿಭಾ ಚಾರಿಟಬಲ್ ಟ್ರಸ್ಟ್ನ ಬ್ಯಾಂಕ್ ಸ್ಟೇಟ್ಮೆಂಟನ್ನು ಮಾಧ್ಯಮದ ಮುಂದಿಡಲು ತಯಾರಿದ್ದಾರಾ? ನಾಗರಹಾವು ಚಿತ್ರದ ರೀ ರಲೀಸ್ ವಿಚಾರವಾಗಿ ಪಡೆದುಕೊಂಡ ಐದು ಲಕ್ಷ ಸ್ವಾರ್ಥವಿಲ್ಲದ ಯಾವ ಘನ ಕಾರ್ಯಕ್ಕೆ ಖರ್ಚಾಗಿದೆ? ವಿಷ್ಣು ಅಳಿಯ ಭಾರೀ ಅಬ್ಬರದಲ್ಲಿ ಹೀರೋ ಆಗಿ ನಟಿಸಿ ತೋಪೆದ್ದಿದ್ದ ರಾಜಾಸಿಂಹ ಚಿತ್ರದಲ್ಲಿ ಬಾಕಿ ಹಣ ಕೊಡಲಿಲ್ಲವೆಂದು ಕಾರ್ಯಕ್ರಮಕ್ಕೆ ಹಾಜರಾಗದೆ ಬಾಕಿ ಹಣ ಪೀಕಿಸಿಕೊಂಡಿದ್ದು ಯಾರು? ಇದು ವಿಷ್ಣು ಹೆಸರುಳಿಸೋ ಕೆಲಸವೇ?
ಅಭಿಮಾನ್ ಸ್ಟುಡಿಯೋದ ಆವರಣದಲ್ಲಿನ ವಿಷ್ಣು ಸಮಾಧಿ ಸ್ಥಳವೇ ಸ್ಮಾರಕವಾಗಬೇಕೆಂಬುದು ಅಭಿಮಾನಿಗಳೆಲ್ಲರ ಒಡಲಾಸೆ. ಇದರ ಸಾಕಾರಕ್ಕಾಗಿ ಹಗಲಿರುಳೆನ್ನದೇ ಕಾರ್ಯ ನಿರ್ವಹಿಸಿದ್ದವರು, ಹೋರಾಟ ಕಟ್ಟಿದ್ದವರು ವೀರಕಪುತ್ರ ಶ್ರೀನಿವಾಸ್. ಅವರು ಅಭಿಮಾನಿಗಳನ್ನು ಒಗ್ಗೂಡಿಸಿ ಸರ್ಕಾರವೇ ಈ ಸ್ಥಳದತ್ತ ಬರುವಂತೆ ಮಾಡಿದ್ದರು. ಆ ಕ್ಷಣದಲ್ಲಿ ಭಾರತಿಯವರು ಅಭಿಮಾನಿಗಳ ಒತ್ತಾಸೆಗೆ ತಮ್ಮ ಸಹಮತ ಇದೆ ಅಂತ ಒಂದೇ ಒಂದು ಮಾತು ಹೇಳಿದ್ದರೂ ಯಾವತ್ತೋ ಸ್ಮಾರಕವಾಗುತ್ತಿತ್ತು. ಆದರೆ ಈ ಕ್ಷಣಕ್ಕೂ ಅದು ಸಾಧ್ಯವಾಗದ ಹಿಂದಿರೋದು ಯಾರ ಸ್ವಾರ್ಥ? ಯಾವ ಹೊಟ್ಟೆಪಾಡು?
ಅಭಿಮಾನಿಗಳೆಲ್ಲ ಬೆಂಗಳೂರಿನ ಅಭಿಮಾನ್ ಸ್ಟುಡಿಯೋ ಆವರಣದಲ್ಲಿರೋ ಜಾಗದಲ್ಲಿಯೇ ವಿಷ್ಣು ಸ್ಮಾರಕ ನಿರ್ಮಾಣವಾಗಬೇಕೆಂಬ ಆಸೆ ಹೊಂದಿದ್ದರೆ ಭಾರತಿ ಮಾತ್ರ ಮೈಸೂರಿನಲ್ಲಾಗಬೇಕೆಂಬ ಭಿನ್ನ ರಾಗ ತೆಗೆದಿದ್ದರು. ಆದರೆ ಭಾರತಿ ಸಿದ್ಧಪಡಿಸಿರೋ ಇದರ ನೀಲನಕ್ಷೆಯೇ ಎಲ್ಲವನ್ನೂ ಹೇಳುವಂತಿದೆ. ಯಾಕೆಂದರೆ ಭಾರತಿ ವಿಷ್ಣು ಸ್ಮಾರಕವನ್ನು ವಿಷ್ಣುವರ್ಧನ್ ಸ್ಮಾರಕ ಭವನ ಟ್ರಸ್ಟ್ ಅಂತ ಮಾಡಿಸಿದ್ದಾರೆ. ಈಗಾಗಲೇ ರಾಜ್ಕುಮಾರ್ ಸೇರಿದಂತೆ ಅನೇಕ ಗಣ್ಯರ ಸಮಾಧಿ ಸ್ಮಾರಕವಾಗಿದೆಯಷ್ಟೆ. ಸ್ಮಾರಕ ಭವನ ಅಂದರೆ ಅಲ್ಲಿ ಖಂಡಿತಾ ಕಮರ್ಶಿಯಲ್ ವಾಸನೆ ಬಡಿಯುತ್ತದೆ. ಈ ಸ್ಮಾರಕ ಭವನದಲ್ಲಿ ಅಭಿನಯ ತರಬೇತಿ, ನೃತ್ಯ ತರಬೇತಿ, ಯೋಗ ಧ್ಯಾನ ಮತ್ತು ಧನ್ವಂತರಿ ಆಸ್ಪತ್ರೆಯೊಂದನ್ನು ತೆರೆಯೋ ಯೋಚನೆ ಭಾರತಿಯವರಿಗಿರೋದು ನಿಜವಾ? ಅಸಲಿಗೆ ಇದರ ನೀಲನಕ್ಷೆ ಸ್ಮಾರಕದಂತಿಲ್ಲ, ಕಮರ್ಷಿಯಲ್ ಕಾಂಪ್ಲೆಕ್ಸ್ನಂತಿದೆ ಎಂಬ ರೂಮರ್ ಹಬ್ಬಿರೋದರ ಹಿಂದೆ ಸತ್ಯವಿಲ್ಲವೇ? ಇಂಥಾ ಕಮರ್ಶಿಯಲ್ ಕೊಂಪೆಯ ಮಧ್ಯೆ ವಿಷ್ಣು ಬಳೆಯಿಟ್ಟು ಅದರ ಜೊತೆಗೆ ಆರಡಿ ಪುತ್ಥಳಿ ನಿರ್ಮಿಸೋ ನೀಲನಕ್ಷೆಯ ಹಿಂದೆ ಇರೋದು ಯಾರ ಹೊಟ್ಟೆಪಾಡು? ಇದು ವಿಷ್ಣುವರ್ಧನ್ ನೆನಪುಗಳನ್ನೂ ವಾಣಿಜ್ಯೀಕರಣಗೊಳಿಸುವ ದುಷ್ಟತನವಲ್ಲದೆ ಮತ್ತಿನ್ನೇನು?
ಇಂಥಾ ಹತ್ತಾರು ಪ್ರಶ್ನೆಗಳು ವಿಷ್ಣು ಅಭಿಮಾನಿಗಳಲ್ಲಿದೆ. ತಾವು ಇದುವರೆಗೆ ನಡೆಸಿರೋ ಕಾರ್ಯಕ್ರಮಗಳಿಗೆ, ಕೆಲಸ ಕಾರ್ಯಗಳಿಗೆ ಕಾಸೆತ್ತಿದ್ದು ಸಾಬೀತಾದರೆ ಆ ಕ್ಷಣದಿಂದ ಮತ್ತೆಂದೂ ತಮ್ಮ ಬಾಯಲ್ಲಿ ವಿಷ್ಣು ಹೆಸರು ಬರೋದಿಲ್ಲ ಎಂಬಂಥಾ ಬದ್ಧತೆ ವೀರಕಪುತ್ರ ಶ್ರೀನಿವಾಸ್ ಅವರದ್ದು. ಶ್ರೀನಿವಾಸ್ ಸೇರಿದಂತೆ ರಾಜ್ಯದ ಸಮಸ್ತ ಅಭಿಮಾನಿ ಪಡೆಗಳೂ ತಮ್ಮ ಬ್ಯಾಂಕ್ ಸ್ಟೇಟ್ ಮೆಂಟನ್ನು ಮಾಧ್ಯಮದ ಮುಂದೆ ಅನಾವರಣಗೊಳಿಸಲು ತಯಾರಿದ್ದಾರೆ. ತಮ್ಮ ವಿಭಾ ಚಾರಿಟಬಲ್ ಟ್ರಸ್ಟಿನ ಬ್ಯಾಂಕ್ ಸ್ಟೇಟ್ಮೆಂಟನ್ನು ಮಾಧ್ಯಮಗಳ ಮುಂದೆ ಅನಾವರಣಗೊಳಿಸಲು ಭಾರತೀ ಮೇಡಂಗೆ ಸಾಧ್ಯವಾಗಬಹುದೇ? ಯಾವುದು ಸ್ವಾರ್ಥ, ಯಾವುದು ಅಭಿಮಾನ ಎಂಬ ವಿಚಾರ ಸಾಬೀತು ಮಾಡಲಿಕ್ಕಾದರೂ ಭಾರತೀ ವಿಷ್ಣುವರ್ಧನ್ ತಮ್ಮ ವಿಭಾ ಚಾರಿಟಬಲ್ ಟ್ರಸ್ಟಿನ ಬ್ಯಾಂಕ್ ಸ್ಟೇಟ್ಮೆಂಟನ್ನು ಜಾಹೀರು ಮಾಡಿಯಾರೇ?
#
No Comment! Be the first one.