ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಭೌತಿಕವಾಗಿ ನಮ್ಮನ್ನು ಅಗಲಿ ಅದಾಗಲೇ ಹತ್ತು ವರ್ಷಗಳಾಯಿತು. ಆದರೆ, ಅವರು ಮಾಡಿದ್ದ ಸಿನಿಮಾಗಳು ಯಾವತ್ತಿಗೂ ಜೀವಂತವಾಗಿರುತ್ತವೆ. ಅವರ ಕುರಿತಾದ ಸುದ್ದಿಗಳಂತೂ ಇವತ್ತಿಗೂ ಚಾಲ್ತಿಯಲ್ಲಿವೆ. ಚಿತ್ರರಂಗದಲ್ಲಿ ವಿಷ್ಣು ಅವರ ಆತ್ಮೀಯ ಗೆಳೆಯರಲ್ಲಿ ಶ್ರೀ ರಾಘವೇಂದ್ರ ಚಿತ್ರವಾಣಿಯ ಸಂಸ್ಥಾಪಕ, ಹಿರಿಯ ಪತ್ರಿಕಾ ಪ್ರಚಾರಕರ್ತ, ನಿರ್ಮಾಪಕ ಡಿ.ವಿ. ಸುಧೀಂದ್ರ ಕೂಡಾ ಒಬ್ಬರಾಗಿದ್ದರು. ಸುಧೀಂದ್ರ ಬದುಕಿನ ಪಯಣ ಮುಗಿಸಿ ಎದ್ದು ನಡೆದಾಗ ವಿಷ್ಣು ಅಪಾರವಾಗಿ ನೊಂದುಕೊಂಡಿದ್ದರು. ಸುಧೀಂದ್ರರ ಕುರಿತಾಗಿ ಪುಸ್ತಕವೊಂದನ್ನು ತರುವ ಪ್ರಯತ್ನವಾದಾಗ ವಿಷ್ಣು ಸ್ವತಃ ಬಯಸಿ ಕವನದಂತಾ ಸಾಲುಗಳನ್ನು ಬರೆದಿದ್ದರು.
ಈಗ ಸುಧೀಂದ್ರ ಮಾತ್ರವಲ್ಲ, ವಿಷ್ಣು ಕೂಡಾ ಇಲ್ಲ. ಆದರೆ ಸುಧೀಂದ್ರ ಅವರ ಬಗ್ಗೆ ವಿಷ್ಣು ಬರೆದ ಕವಿತೆಗೆ ಸಂಗೀತ ನಿರ್ದೇಶಕ ವಿ ಶ್ರೀಧರ್ ಸಂಭ್ರಮ್ ಸಂಗೀತ ಸಂಯೋಜಿಸುವ ಮೂಲಕ ಜೀವ ನೀಡಿದ್ದಾರೆ. ಅಜಯ್ ವಾರಿಯರ್ ಹಾಡಿರುವ ಈ ಹಾಡು ಇಂದು ಲೋಕಾರ್ಪಣೆಗೊಂಡಿದೆ.
ಸುಧೀಂದ್ರ ಅವರ ಬದುಕಿನ ಹಾದಿಯನ್ನು ತೆರೆದಿಡುವ ’ಸುಧೀಂದ್ರ ಸಿನಿ ಪಯಣ’ ಎನ್ನುವ ಸಾಕ್ಷ್ಯ ಚಿತ್ರದಲ್ಲಿ ವಿಷ್ಣು ಬರೆದ ಕವಿತೆ ಹಾಡಾಗಿದೆ. ಡಿ.ವಿ. ಸುಧೀದ್ರ ಅವರ ಅಣ್ಣನ ಮೊಮ್ಮಗ ಪವನ್ ವೆಂಕಟೇಶ್ ನಿರ್ದೇಶಿಸಿರುವ ಈ ಸಾಕ್ಷ್ಯ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ, ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು, ಹಿರಿಯ ಕಲಾವಿದ, ತಂತ್ರಜ್ಞರು ಡಿ.ವಿ.ಎಸ್. ಬಗ್ಗೆ ಮಾತಾಡಿದ್ದಾರೆ.
ಸುಧೀಂದ್ರ ಅವರ ಕಾಲಾನಂತರ ಅವರ ಅಣ್ಣನ ಮಗ ವೆಂಕಟೇಶ್ ಶ್ರೀ ರಾಘವೇಂದ್ರ ಚಿತ್ರವಾಣಿಯ ಮುಖ್ಯಸ್ಥಿಕೆ ವಹಿಸಿದ್ದಾರೆ. ಜೊತೆಗೆ ಸುಧೀಂದ್ರ ಅವರ ಮಗ ಸುನಿಲ್ ಮತ್ತು ವೆಂಕಟೇಶ್ ಅವರ ಸಹೋದ ಡಿ.ಜಿ. ವಾಸುದೇವ್ ಸಹಾ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿದ್ದಾರೆ. ಇವೆಲ್ಲದರ ಪ್ರತಿಫಲವಾಗಿ ಇಂದು ಶ್ರೀರಾಘವೇಂದ್ರ ಚಿತ್ರವಾಣಿ ಮತ್ತು ಸುಧೀಂದ್ರ ವೆಂಕಟೇಶ್ ಸಹೋದರರು ಚಿತ್ರರಂಗದಲ್ಲಿ ಹೆಚ್ಚು ಹೆಸರು ಮಾಡಿದ್ದಾರೆ.
ಈಗ ಶ್ರೀ ರಾಘವೇಂದ್ರ ಚಿತ್ರವಾಣಿಯ ೪೩ ನೇ ವಾರ್ಷಿಕೋತ್ಸವ ಮತ್ತು ೧೯ನೇ ವರ್ಷದ ವಾರ್ಷಿಕ ಪ್ರಶಸ್ತಿಪ್ರದಾನ ಸಮಾರಂಭ ನಡೆದಿದೆ. ಚಿತ್ರರಂಗದಲ್ಲಿ ಅನುಪಮ ಸೇವೆ ಸಲ್ಲಿಸುತ್ತಿರುವ ಹಿರಿಯ ಮತ್ತು ಕಿರಯ ಪ್ರತಿಭಾವಂತರನ್ನು ಸನ್ಮಾನಿಸಲಾಗಿದೆ. ಇದೇ ಸಂದರ್ಭದಲ್ಲಿ ಪವನ್ ವೆಂಕಟೇಶ್ ನಿರ್ದೇಶನದ ಸುಧೀಂದ್ರ ಸಿನಿ ಪಯಣ ಕೂಡಾ ಬಿಡುಗಡೆಯಾಗಿದೆ.