ಕೌಟುಂಬಿಕ ಸಿನಿಮಾಗಳ ಮೂಲಕವೇ ಹೆಸರಾದವರು ತಮಿಳು ನಟ ವಿಶು. ರಂಗಭೂಮಿ ನಟನಾಗಿ ತೀರಾ ಸಣ್ಣ ವಯಸ್ಸಿಗೇ ಬಣ್ಣ ಹಚ್ಚಿದ್ದ ವಿಶು ನಂತರ ನಟ, ನಿರ್ದೇಶಕ, ಬರಹಗಾರನಾಗಿ ಚಿತ್ರರಂಗಕ್ಕೆ ಸಲ್ಲಿಸಿದ ಸೇವೆ ದೊಡ್ಡದು.
ವೈ.ಜಿ. ಪಾರ್ಥಸಾರಥಿಯವರ ನಾಟಕ ತಂಡದಲ್ಲಿದ್ದು, ನಂತರ ತಮಿಳಿನ ಚಿತ್ರಬ್ರಹ್ಮ ಕೆ. ಬಾಲಚಂದರ್ ಅವರ ಬಳಿ ಸಹಾಯಕರಾಗಿ ಸೇರಿಕೊಂಡಿದ್ದವರು ವಿಶು. ವಿಶು ಬರೆದು, ನಟಿಸಿ, ನಿರ್ದೇಶಿಸಿದ್ದ ಸಾಕಷ್ಟು ಸಿನಿಮಾಗಳು ಕನ್ನಡಕ್ಕೂ ರಿಮೇಕ್ ಆಗಿವೆ. ಕುಡುಂಬಮ್ ಕದಂಬಂ – ಆನಂದ ಸಾಗರ, ಇರು ಕೋಡುಗಳ್ – ಎರಡು ರೇಖೆಗಳು, ಸಂಸಾರಮ್ ಒರು ಮಿಂಸಾರಮ್ – ಒಂದೇ ಗೂಡಿನ ಹಕ್ಕಿಗಳು, ವೀಡು, ಮನೈವಿ ಮಕ್ಕಳ್ – ಗಂಡ ಮನೆ ಮಕ್ಕಳು, ತಿಲ್ಲು ಮುಲ್ಲು – ಆಸೆಗೊಬ್ಬ ಮೀಸೆಗೊಬ್ಬ… ಹೀಗೆ ವಿಶು ಅವರ ತಮಿಳು ಚಿತ್ರಗಳು ಕನ್ನಡದಲ್ಲೂ ಮರುನಿರ್ಮಾಣಗೊಂಡು ಸೂಪರ್ ಹಿಟ್ ಆಗಿವೆ. ಅವಿಭಕ್ತ ಕುಟುಂಬದ ಕಥೆಗಳನ್ನು ತಮ್ಮ ಸಿನಿಮಾಗಳ ಮೂಲಕ ಕಣ್ಣೆದುರು ಕಟ್ಟಿಕೊಡುತ್ತಿದ್ದವರು ವಿಶು. ವಿಶು ನಿರ್ವಹಿಸಿದ್ದ ಪಾತ್ರವನ್ನು ಕನ್ನಡದಲ್ಲಿ ಶ್ರೀನಾಥ್, ದ್ವಾರಕೀಶ್ ಮತ್ತು ಪ್ರಭಾಕರ್ ನಿರ್ವಹಿಸಿದ್ದಾರೆ. ವಿಶು ಚಿತ್ರಕತೆ ಬರೆದಿದ್ದ ತಿಲ್ಲುಮುಲ್ಲು ಚಿತ್ರದಲ್ಲಿ ರಜನಿಕಾಂತ್ ನಟಿಸಿದ್ದರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆದ್ದಿತ್ತು. ಅದೇ ಚಿತ್ರವನ್ನು ಆಸೆಗೊಬ್ಬ ಮೀಸೆಗೊಬ್ಬ ಹೆಸರಿನಲ್ಲಿ ಕನ್ನಡದಲ್ಲಿ ರಿಮೇಕ್ ಮಾಡಲಾಯಿತು. ಶಿವರಾಜ್ ಕುಮಾರ್ ಅಭಿನಯದ ಈ ಚಿತ್ರ ಕರ್ನಾಟಕದಲ್ಲೂ ಸೂಪರ್ ಹಿಟ್ ಆಗಿತ್ತು.
ರಜನಿಕಾಂತ್ ನಟನೆಯ ಅರುಣಾಚಲಂ ಸೇರಿದಂತೆ ಸಾಕಷ್ಟು ಸೂಪರ್ ಸ್ಟಾರ್ ನಟರ ಸಿನಿಮಾಗಳಲ್ಲೂ ವಿಶು ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಸಿನಿಮಾ ನಿರ್ದೇಶನ, ಬರವಣಿಗೆ ಮತ್ತು ನಟನೆಯ ಜೊತೆಗೆ ಸನ್ ಟಿವಿಯಲ್ಲಿ ಮೂಡಿ ಬರುತ್ತಿದ್ದ ವಿಶುವಿನ್ ಹರಟೈ ಅರಂಗಂ ಎನ್ನುವ ಚರ್ಚಾ ಕಾರ್ಯಕ್ರಮ ಅಪಾರ ನೋಡುಗರನ್ನು ಹೊಂದಿತ್ತು. ಭಾರತ ಮಾತ್ರವಲ್ಲದೆ, ಜಗತ್ತಿನ ಬಹುತೇಕ ದೇಶಗಳಲ್ಲಿ ಈ ಕಾರ್ಯಕ್ರಮ ಚಿತ್ರೀಕರಣಗೊಂಡಿತ್ತು. ಅದ್ಭುತ ಮಾತುಗಾರಿಕೆ ಹೊಂದಿದ್ದ ವಿಶು ಸಾಮಾಜಿಕ ಸ್ಥಿತ್ಯಂತರಗಳ ಬಗ್ಗೆ ನಿರರ್ಗಳವಾಗಿ ಮಾತಾಡಬಲ್ಲವರಾಗಿದ್ದರು. ೨೦೧೬ರ ಹೊತ್ತಿಗೆ ಬಿಜೆಪಿ ಪಕ್ಷ ಸೇರಿದ್ದ ವಿಶು ಟಿವಿ ಕಾರ್ಯಕ್ರಮ, ಸಿನಿಮಾ ನಟನೆಗಳಿಂದ ದೂರವೇ ಉಳಿದಿದ್ದರು. ಇತ್ತೀಚೆಗೆ ಆರೋಗ್ಯ ಕೂಡಾ ಪದೇ ಪದೇ ಕೈ ಕೊಡುತ್ತಿತ್ತು. ಅಂತಿಮವಾಗಿ ಮಾರ್ಚ್ ೨೨ರ ಸಂಜೆ ಹೊತ್ತಿಗೆ ವಿಶು ಉಸಿರು ನಿಲ್ಲಿಸಿ, ಎದ್ದು ನಡೆದಿದ್ದಾರೆ.