ಕನ್ನಡದ ಪ್ರೇಕ್ಷಕರು ಯಾವ ಕಾಲಕ್ಕೂ ಮರೆಯದ ಖಳನಟ ಸುಂದರ್ ಕೃಷ್ಣ ಅರಸ್. ಅವರ ಪುತ್ರ ನಾಗೇಂದ್ರ ಅರಸ್ ಸಂಕಲನಕಾರರಾಗಿ ಸಕ್ರಿಯರಾಗಿದ್ದುಕೊಂಡೇ ನಿರ್ದೇಶಕರಾಗಿಯೂ ಛಾಪು ಮೂಡಿಸಿದ್ದಾರೆ. ಈಗಾಗಲೇ ಸಾಕಷ್ಟು ಸಿನಿಮಾಗಳನ್ನು ನಿರ್ದೇಶಿಸಿರುವ ನಾಗೇಂದ್ರ ಅರಸ್ ಮೇ ಫಸ್ಟ್ ಚಿತ್ರದ ನಂತರ ಅದೇ ಜೆಕೆ ನಾಯಕನಾಗಿರೋ ವಾರೆಂಟ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈಗಷ್ಟೇ ಬಿಡುಗಡೆಯಾಗಿರೋ ಪ್ರೋಮೋ ಮೂಲಕ ಈ ಚಿತ್ರ ಪ್ರೇಕ್ಷಕರು ಇದರ ಬಗ್ಗೆ ಮಾತಾಡುವಂತೆ ಮಾಡಿದೆ. ಇದುವರೆಗೂ ವಿಭಿನ್ನ ಕಥಾನಕಗಳ ಮೂಲಕವೇ ಕನ್ನಡದ ಮಹತ್ವದ ನಿರ್ದೇಶಕರಲ್ಲೊಬ್ಬರಾಗಿ ಸ್ಥಾನ ಪಡೆದಿರುವ ನಾಗೇಂದ್ರ ಅರಸ್ ವಾರೆಂಟ್ ಚಿತ್ರದ ಮೂಲಕ ಮತ್ತೊಂದು ತೆರನಾದ ಅಲೆಯೆಬ್ಬಿಸಲಿರೋ ಲಕ್ಷಣಗಳೂ ಕೂಡಾ ದಟ್ಟವಾಗಿಯೇ ಕಾಣಿಸುತ್ತಿದೆ!
ವಾರೆಂಟ್ ಮನೀಷಾ ವಾಮನ್ಗರ್ ನಿರ್ಮಾಣದ ಚಿತ್ರ. ಮನೀಷಾ ಕಾರವಾರ ಮೂಲದ ಕನ್ನಡತಿಯೇ ಆದರೂ ಮುಂಬೈನಲ್ಲಿ ಬದುಕು ರೂಪಿಸಿಕೊಂಡು ಕನ್ನಡ ಚಿತ್ರವೊಂದನ್ನು ನಿರ್ಮಾಣ ಮಾಡಬೇಕೆಂಬ ಕನಸು ಹೊಂದಿದ್ದವರು. ಆ ಕನಸಿಗೆ ನಾಗೇಂದ್ರ ಅರಸ್ ಜೀವ ತುಂಬಿದ್ದಾರೆ. ಮನೀಷಾ ಅವರೇ ಬರೆದಿರೋ ಆಕ್ಷನ್ ಕಥೆಗೆ ಚೇತೋಹಾರಿಯಾಗಿ ದೃಷ್ಯರೂಪ ನೀಡಿದ ಖುಷಿಯಲ್ಲಿದ್ದಾರೆ. ಇದು ಪಕ್ಕಾ ಆಕ್ಷನ್ ಬೇಸಿನ ಕಮರ್ಷಿಯಲ್ ಚಿತ್ರ. ಒಂದು ಪಕ್ಕಾ ಕಮರ್ಷಿಯಲ್ ಸಿನಿಮಾದ ಅಷ್ಟೂ ಕ್ವಾಲಿಟಿಗಳನ್ನು ಹೊಂದಿರೋ ವಾರೆಂಟ್ ಚಿತ್ರದಲ್ಲಿ ಜಯ ಕಾರ್ತಿಕ್ ಎರಡು ಶೇಡ್ಗಳಿರೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಜೊತೆಗೆ ಜೋಡಿಹಕ್ಕಿ ಸೀರಿಯಲ್ಲಿನಲ್ಲಿ ರಾಮಣ್ಣ ಎಂಬ ಪಾತ್ರದಿಂದ ಖ್ಯಾತರಾಗಿರೋ ತಾಂಡವ್ ಕೂಡಾ ನಾಯಕರಲ್ಲೊಬ್ಬರಾಗಿ ನಟಿಸಿದ್ದಾರೆ.
ಈ ಸಿನಿಮಾಗೆ ಕಥೆ ಬರೆದಿದ್ದು ನಿರ್ಮಾಪಕಿ ಮನೀಷಾ ಅವರೇ ಆದ್ದರಿಂದ ಇಡೀ ಕಥೆ ಏನು ಬೇಡುತ್ತದೆ ಎಂಬ ಸ್ಪಷ್ಟ ಅಂದಾಜು ಅವರಿಗಿತ್ತು. ಜೊತೆಗೆ ಈ ಚಿತ್ರದ ನಾಯಕಿಯಾಗಿಯೂ ನಟಿಸಿರೋ ಮನೀಷಾ ಯಾವುದಕ್ಕೂ ಕೊರತೆಯಾಗದಂತೆ ನೋಡಿಕೊಂಡಿದ್ದರಿಂದ ತಮ್ಮ ಕೆಲಸ ಸಲೀಸಾಯ್ತೆಂಬುದು ನಾಗೇಂದ್ರ ಅರಸ್ ಅಭಿಪ್ರಾಯ. ನಾಗೇಂದ್ರ ಅರಸ್ ಈ ಸಿನಿಮಾದ ಮೊದಲ ಹಂತದ ಚಿತ್ರೀಕರಣವನ್ನು ಬ್ಯಾಂಕಾಕಿನಲ್ಲಿ ನಡೆಸಿದ್ದಾರೆ. ಸುಂದರವಾದ ಮೂರು ಹಾಡುಗಳು, ಟಾಕಿ ಪೋಷನ್ ಮತ್ತು ಹದಿನೈದರಿಂದ ಇಪ್ಪತ್ತು ಸೀನುಗಳನ್ನು ಅಲ್ಲಿನ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ. ಅದರಿಂದಲೇ ಇಡೀ ಚಿತ್ರ ರಿಚ್ ಆಗಿ ಮೂಡಿ ಬಂದಿದೆ ಎಂಬುದು ನಾಗೇಂದ್ರ ಅರಸ್ ಖುಷಿಯ ಮಾತು.
ರಾಕಿ ಎಂಬ ಸಿನಿಮಾದ ಮೂಲಕ ರಾಕಿಂಗ್ ಸ್ಟಾರ್ ಯಶ್ ವೃತ್ತಿ ಬದುಕನ್ನೇ ಬದಲಾಯಿಸಿದವರು ನಿರ್ದೇಶಕ ನಾಗೇಂದ್ರ ಅರಸ್. ಇಂಥಾ ಪ್ರತಿಭೆಯಿಂದಲೇ ತಮ್ಮ ತಂದೆಯ ಹೆಸರುಳಿಸಿರೋ ಅವರು ಅಪ್ಪನ ಹೆಸರಿದ್ದರೂ ಕೂಡಾ ಕಷ್ಟದ ದಾರಿ ದಾಟಿಕೊಂಡೇ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡವರು. ೧೯೯೫ರಲ್ಲಿ ನಾಗೇಂದ್ರ ಅರಸ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಅಸಿಸ್ಟೆಂಟ್ ಎಡಿಟರ್ ಆಗಿ. ತಮ್ಮ ಚಿಕ್ಕಪ್ಪ ಸುರೇಶ್ ಅವರಿಗೆ ಅಸಿಸ್ಟೆಂಟ್ ಆಗಿದ್ದುಕೊಂಡು ಸಂಕಲನ ವಿಭಾಗದ ಪಟ್ಟುಗಳನ್ನು ಕಲಿತುಕೊಂಡ ನಾಗೇಂದ್ರ ಅರಸ್ ೨೦೦೧ರಲ್ಲಿ ತೆರೆ ಕಂಡಿದ್ದ ಚಾಲೆಂಜಿಂಗ್ ಸ್ಟಾರ್ ಅಭಿನಯದ ಮೊದಲ ಚಿತ್ರ ಮೆಜೆಸ್ಟಿಕ್ ಮೂಲಕ ಸ್ವತಂತ್ರ ಸಂಕಲನಕಾರರಾಗಿ ಭಡ್ತಿ ಹೊಂದಿದ್ದರು. ಇದುವರೆಗೂ ಇನ್ನೂರಕ್ಕೂ ಹೆಚ್ಚಿನ ಸಿನಿಮಾಗಳಿಗೆ ಸಂಕಲನಕಾರರಾಗಿ ಕೆಲಸ ಮಾಡಿದ ಹೆಗ್ಗಳಿಕೆ ನಾಗೇಂದ್ರ ಅರಸ್ ಅವರದ್ದು.
ಹೀಗೆ ಸಂಕಲನಕಾರರಾಗಿ ಬಹು ಬೇಡಿಕೆ ಹೊಂದಿದ್ದರು ನಿರ್ದೇಶಕನಾಗಬೇಕೆಂಬ ತುಡಿತ ಅವರೊಳಗೆ ಸದಾ ಜಾಗೃತವಾಗಿತ್ತು. ಯಾವ ಹಿನ್ನೆಲೆಯೂ ಇಲ್ಲದೆ ಚಿತ್ರರಂಗಕ್ಕೆ ಬರುವ ಸಾಮಾನ್ಯ ಹುಡುಗನಂತೆಯೇ ಅದಕ್ಕಾಗಿ ಪ್ರಯತ್ನ ಪಡಲಾರಂಭಿಸಿದ್ದ ನಾಗೇಂದ್ರ ಅರಸ್ ರಾಕಿ ಚಿತ್ರದ ಮೂಲಕ ತಮ್ಮ ಕನಸನ್ನು ಸಾಕಾರಗೊಳಿಸಿಕೊಂಡಿದ್ದರು. ಈ ಸಿನಿಮಾ ಹಿಟ್ ಆಗಿತ್ತು. ಅದುವರೆಗೂ ಒಂದು ಬ್ರೇಕ್ಗಾಗಿ ತಡಕಾಡುತ್ತಿದ್ದ ಯಶ್ ಮಾಸ್ ಹೀರೋ ಆಗಿ, ರಾಕಿಂಗ್ ಸ್ಟಾರ್ ಆಗಿ ಹೊರ ಹೊಮ್ಮಿದ್ದರು. ಮೊದಲ ಪ್ರಯತ್ನದಲ್ಲಿಯೇ ಗೆಲುವು ಕಂಡ ನಾಗೇಂದ್ರ ಅರಸ್ ಆ ನಂತರ ವಿಜಯ ರಾಘವೇಂದ್ರ ನಟನೆಯ ಹಾರ್ಟ್ಬೀಟ್, ನಗೆಬಾಂಬ್, ವರ್ಧನ, ಮೇ ಫಸ್ಟ್ ಮುಂತಾದ ಸಾಲು ಸಾಲು ಚಿತ್ರಗಳನ್ನು ನಿರ್ದೇಶನ ಮಾಡಿದರು. ಇದೀಗ ಅಂಥಾದ್ದೇ ಶ್ರದ್ದೆ ಮತ್ತು ಕನಸಿನೊಂದಿಗೆ ವಾರೆಂಟ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ಈಗಾಗಲೇ ಈ ಸಿನಿಮಾ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡಿದೆ ತಿಂಗಳೊಪ್ಪತ್ತಿನಲ್ಲಿಯೇ ಆಡಿಯೋ ರಿಲೀಸ್ ಮಾಡಲೂ ತಯಾರಿ ಆರಂಭವಾಗಿದೆ. ಈ ಚಿತ್ರಕ್ಕೆ ಒಂದು ಐಂಟಂ ಸಾಂಗಿಗೆ ವಿ ಮನೋಹರ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಇನ್ನು ಮೂರು ಹಾಡುಗಳಿಗೆ ಮ್ಯಾಥ್ಯೂಸ್ ಮನು ಸಂಗೀತ ನಿರ್ದೇಶನ ಮಾಡಿದ್ದಾರೆ. ಶ್ರೀಧರ್ ಕಷ್ಯಪ್ ಕಥೆಯ ಫೋರ್ಸಿಗೆ ಹೇಳಿ ಮಾಡಿಸಿದಂಥಾ ಹೊಸಾ ಥರದ ಹಿನ್ನೆಲೆ ಸಂಗೀತ ನೀಡಿದ್ದಾರಂತೆ.
ವಾರೆಂಟ್ ಚಿತ್ರ ಜಯ ಕಾರ್ತಿಕ್ ಅವರನ್ನೂ ಮಾಸ್ ಆಗಿ ನೆಲೆಗಾಣಿಸುವ ಸೂಚನೆಗಳಿವೆ. ಒಟ್ಟಾರೆಯಾಗಿ ಇಡೀ ಸಿನಿಮಾವನ್ನು ಕನ್ನಡಕ್ಕೆ ಹೊಸತೆನ್ನಿಸುವಂತೆ, ಪ್ರೇಕ್ಷಕರನ್ನು ಆವರಿಸಿಕೊಳ್ಳುವಂತೆ ರೂಪಿಸಿರುವ ತೃಪ್ತಿ ನಾಗೇಂದ್ರ ಅರಸ್ ಮಾತುಗಳಲ್ಲಿ ಜಿನುಗುತ್ತವೆ.
#