ಮಯೂರ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ಮಂಜುನಾಥ್ ಡಿ ಅವರು ನಿರ್ಮಿಸಿರುವ ಸಿನಿಮಾ `ವೀಕ್ ಎಂಡ್. ಸತತ ಮೂರು ದಶಕಗಳಿಂದ ಸಿನಿಮಾ ಸಾಂಗತ್ಯ ಹೊಂದಿರುವ ಶೃಂಗೇರಿ ಸುರೇಶ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಚಿತ್ರದ ಹಾಡುಗಳು ಈಗಾಗಲೇ ಬಿಡುಗಡೆಗೊಂಡು ಕೇಳುಗರನ್ನು ಕರ್ಣಾನಂದಗೊಳಿಸಿದೆ. ಯಾವ ಆಡಂಬರವಿಲ್ಲದೆ ತಯಾರಾಗಿದ್ದ ಈ ಸಿನಿಮಾ ಈಗ ಸುಮಧುರವಾದ ಮೂರು ಹಾಡುಗಳ ಮೂಲಕವೇ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ.
ಹೇಳಿ ಕೇಳಿ ಇದು ಐಟಿ ಯುಗ. ಈ ವಲಯದ ಜನರ ಜೀವನವನ್ನು ಆಧರಿಸಿದ ಸಿನಿಮಾ `ವೀಕ್ ಎಂಡ್. ವಾರದ ಕೊನೆಯಲ್ಲಿ ಮೋಜು, ಮಸ್ತಿ, ಟ್ರಿಪ್ಪು, ಪಾರ್ಟಿಗಳೆಂದರೆ ಎಲ್ಲರಿಗೂ ಆಸಕ್ತಿ ಇದ್ದೇ ಇರುತ್ತೆ. ಆದರೆ ಹೊರ ಜಗತ್ತಿಗೆ ಆಪ್ಯಾಯವಾಗಿ ಕಾಣೋ ಈ `ವೀಕ್ ಎಂಡ್’ ಮೋಜಿನಲ್ಲಿ ದುರಂತಗಾಥೆಗಳೂ ಇದ್ದಾವೆ. ಅದರಲ್ಲಿ ಹೆಚ್ಚಿನವುಗಳು ಐಟಿ ಮಂದಿಗೆ ಸಂಬಂಧಿಸಿದವುಗಳೇ. ಇಂಥಾ ಸೂಕ್ಷ್ಮ ಘಟನಾವಳಿಗಳ ಎಳೆಯೊಂದಿಗೇ ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯಲ್ಲಿ ಈ ಚಿತ್ರವನ್ನು ನಿರೂಪಿಸಲಾಗಿದೆ.
ಹೊಸಬರ ಸಿನಿಮಾಗಳನ್ನು ನೋಡಲು ಜನ ಬರಬೇಕೆಂದರೆ ಅದು ಹಾಡುಗಳ ಮೂಲಕವೇ ಮ್ಯಾಜಿಕ್ ಮಾಡಬೇಕು. ಈ ನಿಟ್ಟಿನಲ್ಲಿ `ವೀಕ್ ಎಂಡ್’ ಆರಂಭಿಕ ಗೆಲುವು ಕಂಡಿದೆ. ಯಾಕೆಂದರೆ, ಇದರಲ್ಲಿ ಮೂರು ಹಾಡುಗಳಿವೆ. ಇವುಗಳಿಗೆ ಶ್ರೀಲಂಕಾ ಮೂಲದ ಬೆಂಗಳೂರು ವಾಸಿ ಮನೋಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್ ಅವರ ಗರಡಿಯಲ್ಲಿ ಪಳಗಿಕೊಂಡಿರೋ ಮನೋಜ್ ಮೂರೂ ಹಾಡುಗಳನ್ನು ಮೋಹಕವಾಗಿಯೇ ರೂಪಿಸಿದ್ದಾರೆ. ಬಿಡುಗಡೆಯಾಗಿರುವ ಹಾಡುಗಳೆಲ್ಲವೂ ಕಡಿಮೆ ಅವಧಿಯಲ್ಲಿಯೇ ಜನರನ್ನು ಆಕರ್ಷಿಸಿವೆ. ಹೊಸತನದ ಸೌಂಡಿಂಗ್ನಿಂದ ಪ್ರೇಕ್ಷಕರಿಗೆ ಹತ್ತಿರಾಗಿ `ವೀಕ್ ಎಂಡ್’ ಚಿತ್ರದ ಬಗ್ಗೆ ನಿರೀಕ್ಷೆಯನ್ನೂ ಹುಟ್ಟು ಹಾಕಿವೆ. ಸದ್ಯದಲ್ಲೇ ತೆರೆಗೆ ಬರಲಿರುವ `ವೀಕ್ ಎಂಡ್’ ಹಾಡುಗಳಂತೆಯೇ ನೋಡುಗರನ್ನೂ ಸೆಳೆದುಕೊಳ್ಳಲಿ.
ಶೃಂಗೇರಿ ಸುರೇಶ್ ನಿರ್ದೇಶನದ ಈ ಚಿತ್ರಕ್ಕೆ ಶಶಿಧರ್ ಅವರ ಛಾಯಾಗ್ರಹಣವಿದೆ. ಮನೋಜ್ ಸಂಗೀತ ನಿರ್ದೇಶನ, ರುದ್ರೇಶ್ ಸಂಕಲನ, ಬಾಬು ಖಾನ್ ಕಲಾ ನಿರ್ದೇಶನ, ಮಂಜುನಾಥ್ ಜಂಬೆ ಸಹ ನಿರ್ದೇಶನ ಹಾಗೂ ರಾಮು, ಯೋಗಾನಂದ್ ನಿರ್ಮಾಣ ನಿರ್ವಹಣೆಯಿದೆ. ಮಿಲಿಂದ್ ಅವರು ನಾಯಕನಾಗಿ ಅಭಿನಯಿಸಿರುವ ಈ ಚಿತ್ರದ ನಾಯಕಿ ಸಂಜನಾ ಬುರ್ಲಿ. ಹಿರಿಯ ನಟ ಅನಂತನಾಗ್, ಗೋಪಿನಾಥ್ ಭಟ್, ಮಂಜುನಾಥ್, ನಾಗಭೂಷಣ್, ನೀನಾಸಂ ರಘು, ನವನೀತ, ನಟನ ಪ್ರಶಾಂತ್, ನೀತು ಬಾಲಾ, ವೀಣಾ ಜಯಶಂಕರ್, ಬ್ಯಾಂಕ್ ಸತೀಶ್, ಶಿವಕುಮಾರ್, ಸಂಜಯ್ ನಾಗೇಶ್, ಮಂಜುನಾಥ್ ಶಾಸ್ತ್ರಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
No Comment! Be the first one.