ವಿದ್ಯಾವಂತರೇನಾದರೂ ಕ್ರಿಮಿನಲ್ಲುಗಳಾದರೆ ಪೊಲೀಸರು ನೆಮ್ಮದಿಯಾಗಿ ನಿದ್ರಿಸುವಂತಿಲ್ಲ ಅನ್ನೋ ವಿಚಾರ ವೀಕೆಂಡ್ ಸಿನಿಮಾದ ಮೂಲಕ ಸ್ಪಷ್ಟವಾಗಿ ಋಜುವಾದಂತಾಗಿದೆ. ವಾರವಿಡೀ ವರ್ಕ್ ಲೋಡ್, ಟೆನ್ಷನ್, ಎಚ್.ಆರ್. ಗಳು ಕೊಡುವ ಮಾನಸಿಕ ಕಿರುಕುಳ, ಸಸ್ಪೆನ್ಡ್ ಅನ್ನೋ ಪೆಡಂಭೂತದ ನಡುವೆ ಟೆಕ್ಕಿಗಳು, ಐಟಿಬಿಟಿ ಉದ್ಯಮಿಗಳು ತಿಂಗಳ ಕೈತುಂಬ ಸಂಬಳಕ್ಕಾಗಿ ಹೇಗೆಲ್ಲಾ ಸರ್ಕಸ್ ಮಾಡಬೇಕಾಗುತ್ತೆ ಅನ್ನೋದನ್ನು ವೀಕೆಂಡ್ ತಂಡ ಮನರಂಜನಾತ್ಮಕವಾಗಿ ಹಾಗೂ ಸಂದೇಶ ನೀಡುವ ರೀತಿಯಲ್ಲಿ ನಿರೂಪಿಸುವುದರಲ್ಲಿ ಯಶಸ್ವಿಯಾಗಿದೆ. ಈ ಮಧ್ಯೆ ನಾಯಕ ಅಜಯ್ ನನ್ನು ಸಹೋದ್ಯೋಗಿ ರಕ್ಷಾ ಪ್ರೇಮಿಸುವುದು, ಆದರೆ ಅಜಯ್ ನಾಯಕಿ ಅನುಪಮಳನ್ನು ಇಷ್ಟಪಟ್ಟಿರುವುದು, ಇವರಿಬ್ಬರ ಸುತ್ತಾಟ, ಡ್ಯೂಯೆಟ್ಗಳ ಮಧ್ಯೆ ಅಜಯ್ ಹೊರತಾಗಿ ಆಫೀಸಿನ ಫ್ರೆಂಡ್ ಸರ್ಕಲ್ ಗೆಳೆಯರ ವೀಕೆಂಡ್ ಮಸ್ತಿ, ಬಿಸಿ ಬಿಸಿ ಕುಸ್ತಿಗಳೆಲ್ಲವನ್ನೂ ನಿರ್ದೇಶಕರು ನೋಡುಗರ ಮೈ ಪುಳಕಗೊಳ್ಳುವಂತೆ ಮಾಡಿರೋದು ವೀಕೆಂಡ್ ಗೆ ಪ್ಲಸ್ ಪಾಯಿಂಟ್.
ಇನ್ನು ಆಫೀಸಿನಲ್ಲಿ ಅನಿವಾರ್ಯ ಕಾರಣಗಳಿಂದ ಕೆಲಸ ಕಳೆದುಕೊಂಡ ಅಲೆಮಾರಿ ಇಂಜಿನಿಯರ್ಗಳ ಒಳ ವೇದನೆ, ಕೌಟುಂಬಿಕ ಪರಿಸ್ಥಿತಿ, ಅಡ್ಡದಾರಿ ಹಿಡಿಯಬಹುದಾದ ಸನ್ನಿವೇಶಗಳು, ಇತ್ಯಾದಿಗಳೆಲ್ಲವೂ ನಿರುದ್ಯೋಗಿ ಯುವಕ ಯುವತಿಯರ ತೊಳಲಾಟವನ್ನು ಬಯಲು ಮಾಡಿದಂತಿದೆ. ಈ ನಡುವೆ ನಾಯಕನ ತಾತನಾಗಿ ಅಭಿನಯಿಸಿರುವ ಅನಂತ್ ನಾಗ್ ವೀಕೆಂಡ್ ಗೆ ಕಿಕ್ ಕೊಡುವಲ್ಲಿ ಬಹಳಷ್ಟು ಶ್ರಮ ವಹಿಸಿದ್ದು, ಎಂದಿನಂತೆ ತಮ್ಮ ಪ್ರಬುದ್ಧ ನಟನೆಯಿಂದ ಸಿನಿಮಾ ಪೂರ್ತಿ ಗಮನಸೆಳೆಯುತ್ತಾರೆ. ಈ ಚಿತ್ರದಲ್ಲಿ ಅನಂತ್ ಅವರ ಡೈಲಾಗ್ ಗಳು, ನೀಡಿರುವ ಕಿವಿ ಮಾತುಗಳೆಲ್ಲವೂ ನೊಂದ ಮನಸ್ಸುಗಳಿಗೆ ಸಾಂತ್ವನದ ನುಡಿಗಳಂತಿವೆ. ಮೊದಲಾರ್ಧ ಕೊಂಚ ನಿಧಾನ ಅನ್ನಿಸಿದರೂ ದ್ವಿತೀಯಾರ್ಧ ಮಾತ್ರ ಪ್ರೇಕ್ಷಕರನ್ನು ಕ್ಷಣ ಕ್ಷಣಕ್ಕೂ ಸೀಟಿನ ಮುಂದೆ ಬಂದು ಕೂಡುವಂತೆ ಮಾಡುತ್ತವೆ. ಇನ್ನು ನಿರ್ಮಾಣದ ಜತೆಗೆ ಪೊಲೀಸ್ ಕಾಪ್ ಆಗಿ ಗತ್ತು ಗೈರತ್ತನ್ನು ಪ್ರದರ್ಶಿಸಿರುವ ಮಂಜುನಾಥ್ ಡಿ ಅವರ ನಟನೆಯಂತೂ ಅತ್ಯದ್ಭುತವಾಗಿದೆ. ಅವರ ಎಂಟ್ರಿಯಾದಾಗಲೆಲ್ಲವೂ ಹಿನ್ನೆಲೆ ಸಂಗೀತದ ಬಿಟ್ ಗಳು ಸಾಕಷ್ಟು ಮಜಾ ಕೊಡುವಂತದ್ದು. ಇನ್ನು ನಾಯಕಿಯ ತಂದೆಯಾಗಿ ಸದಾ ಡೌಟಪ್ಪನಂತೆ ತನ್ನ ಮಗಳನ್ನು ಹಿಂಬಾಲಿಸುವ ಗೋಪಿನಾಥ್ ಭಟ್ಟರ ನಟನೆ ಮೆಚ್ಚುವಂತದ್ದು. ಮಗಳು ಅಡ್ಡ ದಾರಿ ಹಿಡಿಯಬಹುದೆಂದು ಆಕೆ ಪ್ರೇಮಿಸುತ್ತಿದ್ದ ಹುಡುಗನ ಮೇಲೆಯೇ ಕಣ್ಣಿಟ್ಟು, ಸಾಕಷ್ಟು ಅಟ್ಯಾಕ್ ಮಾಡಿಸಿ, ಕಡೆಗೆ ಸಿಕ್ಕುಬಿದ್ದು ಕುರಿಯಂತೆ ತಲೆ ತಗ್ಗಿಸುವ ಸ್ಥಿತಿಯನ್ನೊಮ್ಮೆ ಕಂಡರೆ ನಗುವಿನ ಜತೆಗೆ ಮನಮಿಡಿಯುತ್ತದೆ.
ಇನ್ನು ಅಲೆಮಾರಿ ಇಂಜಿನಿಯರ್ಗಳ ನಾಯಕನಾಗಿ ಕಾಣಿಸಿಕೊಂಡಿರುವ ರಘು ನೀನಾಸಂ ತಾನು ಕಲಿತು ಬಂದ ಸಂಸ್ಥೆಯ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿದಲ್ಲದೇ ಅಚ್ಚುಕಟ್ಟಾಗಿ ತನಗೆ ಕೊಟ್ಟ ಪಾತ್ರವನ್ನು ನಿರ್ವಹಿಸಿದ್ದಾರೆ. ನಾಯಕ ಮಿಲಿಂದ್ ಹಾಗೂ ನಾಯಕಿ ಸಂಜನಾ ಬುರ್ಲಿ ಸಹ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಿನಿಮಾ ಆರಂಭದಲ್ಲಿ ಪ್ರಾಯೋಗಿಕವಾಗಿ ಎಂಜಿ ರೋಡ್, ಬ್ರಿಗೇಡ್ ರೋಡ್ ಗಳ ಗಿಜಿ ಗಿಜಿಯನ್ನು ಗಮನ ಸೆಳೆಯುವಂತೆ ಛಾಯಾಗ್ರಹಕ ಶಶಿಧರ್ ಕೆ ಸೆರೆಹಿಡಿದಿರುವುದು ವೀಕೆಂಡ್ ಗೆ ಪ್ಲಸ್ ಆಗಲಿದೆ. ಒಟ್ಟಾರೆ ಹೇಳುವುದಾದರೆ ಅಡ್ಡ ದಾರಿ ಹಿಡಿದವರಿಗೆ ಒಂದು ದಾರಿಯಾದರೆ ಉತ್ತಮ ಮಾರ್ಗದಲ್ಲಿ ನಡೆಯುವವರಿಗೆ ಸಾವಿರಾರು ಅವಕಾಶಗಳಿರುತ್ತವೆ. ಹಾಗೆಯೇ ಸಾವಿಗೆ ಸಾವೇ ಪರಿಹಾರವಲ್ಲ ಎಂಬ ಸಂದೇಶವನ್ನು ವೀಕೆಂಡ್ ಮನಮುಟ್ಟುವಂತೆ ತೋರಿಸಿ ಥಿಯೇಟರ್ ನಿಂದ ಹೊರಬಂದರೂ ಗುಂಗಿನಲ್ಲಿರುವಂತೆ ಮಾಡುತ್ತದೆ. ಕೊಟ್ಟ ಕಾಸಿಗೆ ಮೋಸವಿಲ್ಲ. ವಾರದ ಕೆಲಸಗಳ ಒತ್ತಡದಲ್ಲಿದ್ದವರೂ ವಾರಾಂತ್ಯದಲ್ಲಿ ವೀಕೆಂಡ್ ಸಿನಿಮಾ ನೋಡಿ ಮಜಾ ಮಾಡಬಹುದು.
No Comment! Be the first one.