ಮತ್ತೆ ಮತ್ತೆ ಕೇಳುವಂಥಾ ಮೋಹಕ ಹಾಡುಗಳು ನಿರ್ದೇಶಕ ಕಿರಣ್ ಗೋವಿಯವರ ಟ್ರೇಡ್ ಮಾರ್ಕ್ ಇದ್ದಂತೆ. ಅವರು ನಿರ್ದೇಶಿಸಿರೋ ಯಾರಿಗೆ ಯಾರುಂಟು ಚಿತ್ರದ ಮೂಲಕ ಅದು ಯಥಾಪ್ರಕಾರವಾಗಿ ಮುಂದುವರೆದಿದೆ. ಮೆಲೋಡಿಯಸ್ ಹಾಡುಗಳ ಮೂಲಕವೇ ಕೌತುಕದ ತರಂಗಗಳನ್ನೆಬ್ಬಿಸಿರೋ ಈ ಚಿತ್ರದಲ್ಲಿ ಮೂವರು ನಾಯಕಿಯರಿದ್ದಾರಲ್ಲಾ? ಆ ಪೈಕಿ ಒಬ್ಬರಾಗಿ ಅದ್ಭುತವಾದೊಂದು ಪಾತ್ರಕ್ಕೆ ಜೀವ ತುಂಬಿದ ಖುಷಿಯಲ್ಲಿರುವವರು ಅದಿತಿ ರಾವ್.
ಅಪ್ಪಟ ಬೆಂಗಳೂರಿನ ಕನ್ನಡತಿ ಅದಿತಿ ರಾವ್ ಅವರ ಒರಿಜಿನಲ್ ಹೆಸರು ಮೇಘನಾ. ಅದೇ ಹೆಸರಲ್ಲಿ ಆರಂಭ ಕಾಲದಲ್ಲಿ ಧಾರಾವಾಹಿಗಳಲ್ಲಿ ನಟಿಸಲಾರಂಭಿಸಿದ್ದ ಅವರು ನಾನಾ ಪಾತ್ರಗಳ ಮೂಲಕ ಕಿರುತೆರೆ ಪ್ರೇಕ್ಷಕರ ನೆನಪಲ್ಲುಳಿದಿದ್ದಾರೆ. ಆ ಕಾರಣದಿಂದಲೇ ಅಪಾರ ಅಭಿಮಾನಿ ಬಳಗವನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಡಿಗ್ರಿಯಲ್ಲಿರುವಾಗಲೇ ಹುಡುಕಿ ಬಂದ ನಟನೆಯ ಅವಕಾಶ, ಬಂದ ಅವಕಾಶವನ್ನು ಚೆಂದಗೆ ಬಳಸಿಕೊಂಡ ಪ್ರತಿಭೆ ಮತ್ತು ಅದನ್ನೇ ಆಧಾರವಾಗಿಟ್ಟುಕೊಂಡು ಹಿರಿತೆರೆಯಲ್ಲಿಯೂ ನಾಯಕಿಯಾಗಿ ಗುರುತಿಸಿಕೊಂಡಿರೋ ಅದಿತಿ ರಾವ್ ತಮ್ಮ ಮೂಲ ಹೆಸರನ್ನೇ ಮರೆಯುವಂತೆ ಮಾಡಿದ್ದು ಕೂಡಾ ಒಂದು ಧಾರಾವಾಹಿ ಎಂಬುದು ವಿಶೇಷ!
ಹಾಗೆ ಅದಿತಿ ರಾವ್ ಎಂದೇ ಹೆಸರಾಗಿರುವ ಅವರೀಗ ಯಾರಿಗೆ ಯಾರುಂಟು ಚಿತ್ರದ ನಾಯಕಿಯರಲ್ಲೊಬ್ಬರಾಗಿ ನಟಿಸಿದ್ದಾರೆ. ತಮ್ಮ ಪಾತ್ರ ಮತ್ತು ಕಥೆಯ ಬಗ್ಗೆ ಅಪಾರವಾದ ಭರವಸೆಯನ್ನೂ ಹೊಂದಿದ್ದಾರೆ. ಆರಂಭದಲ್ಲಿ ಅದಿತಿಗೆ ಇಷ್ಟವಾಗಿದ್ದದ್ದು ನಿರ್ದೇಶಕ ಕಿರಣ್ ಗೋವಿಯವರು ಕಥೆ ಹೇಳಿದ ರೀತಿ. ಒಂದಿಡೀ ಕಥೆ ಮತ್ತು ತಮ್ಮ ಪಾತ್ರವನ್ನು ಬಹುವಾಗಿ ಮೆಚ್ಚಿಕೊಂಡೇ ನಟಿಸಲು ಒಪ್ಪಿಕೊಂಡಿದ್ದ ಅವರಿಗೆ ಚಿತ್ರೀಕರಣ ಶುರುವಾಗುತ್ತಲೇ ಹೊಸಾ ಲೋಕವೊಂದು ತೆರೆದುಕೊಂಡಂತಾಗಿತ್ತು. ಅದು ಪಕ್ಕಾ ಚಾಲೆಂಜಿಂಗ್ ಪಾತ್ರ. ಆದರೆ ಅದೂ ಕೂಡಾ ಸಲೀಸಾಗಿದ್ದು ನಿರ್ದೇಶಕರ ಜಾಣ್ಮೆಯಿಂದ ಎಂಬುದು ಅದಿತಿ ಅಭಿಪ್ರಾಯ.
ನಿರ್ದೇಶಕ ಕಿರಣ್ ಗೋವಿ ಪ್ರತೀ ಸೀನುಗಳಲ್ಲಿಯೂ ಬರೀ ಡೈಲಾಗಿ ಒಪ್ಪಿಸಿ ಸುಮ್ಮನಾಗದೆ, ಆ ಸನ್ನಿವೇಶಕ್ಕೆ ಆ ಪಾತ್ರ ಹೇಗೆ ಪ್ರತಿಕ್ರಿಯಿಸುತ್ತೆ, ಹೇಗೆಲ್ಲ ವರ್ತಿಸುತ್ತೆ ಎಂಬುದನ್ನು ವಿವರಿಸಿ ನಟಿಸಿಯೇ ತೋರಿಸುತ್ತಿದ್ದರಂತೆ. ಇದಲ್ಲದೇ ವರ್ಕ್ಶಾಪನ್ನೂ ಮಾಡಿದ್ದರು. ಇದರಲ್ಲಿ ಪ್ರತೀ ದಿನ ರಿಹರ್ಸಲ್ ಕೂಡಾ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಪ್ರಶಾಂತ್, ಲೇಖಾ ಜೊತೆ ಚರ್ಚಿಸಿ ಆ ಕಾಂಬಿನೇಷನ್ನಿನಲ್ಲಿ ತನ್ಮಯರಾಗಿ ನಟಿಸೋಕೆ ಸಾಧ್ಯವಾಯ್ತು, ಒಂದೇ ಟೇಕಿಗೆ ಓಕೆಯಾಗುವಂಥಾ ಅಭಿನಯ ನೀಡಲು ಸಾಧ್ಯವಾಯಿತೆನ್ನುವ ಅದಿತಿ ಪಾಲಿಗೆ ಚಿತ್ರೀಕರಣದ ಪ್ರತಿ ಘಳಿಗೆಯೂ ಹೊಸತೇನನ್ನೋ ಕಲಿತುಕೊಂಡ, ಹೊಸಾ ಭರವಸೆಯನ್ನು ತುಂಬಿಕೊಂಡ ತೃಪ್ತಿಯಿದೆ. ಈ ಪಾತ್ರ ತನ್ನನ್ನು ಇನ್ನಷ್ಟು ಭಿನ್ನವಾಗಿ ಗುರುತಿಸುವಂತೆ ಮಾಡುತ್ತದೆ ಎಂಬ ನಂಬಿಕೆಯೂ ಇದೆ.
ಹೀಗೆ ಯಾರಿಗೆ ಯಾರುಂಟು ಚಿತ್ರದ ನಾಯಕಿಯರಲ್ಲೊಬ್ಬರಾಗಿ ಒಂದು ಭಿನ್ನವಾದ ಪಾತ್ರಕ್ಕೆ ಜೀವ ತುಂಬಿಸಿರುವ ಅದಿತಿ ಬೆಂಗಳೂರಿನ ಹುಡುಗಿ. ಇಲ್ಲಿಯೇ ವಿದ್ಯಾಭ್ಯಾಸ ಪೂರೈಸಿದ್ದ ಅವರ ಪಾಲಿಗೆ ಚಿತ್ರರಂಗವೆಂಬುದು ದೂರದಿಂದಲೇ ಕೈ ಬೀಸಿ ಸೆಳೆಯುತ್ತಿದ್ದ ಮಾಯಾಲೋಕ. ಚಿಕ್ಕ ವಯಸಿನಿಂದಲೂ ಡ್ಯಾನ್ಸ್ ಮತ್ತು ಆಕ್ಟಿಂಗಿನಲ್ಲಿ ಆಸಕ್ತಿ ಹೊಂದಿದ್ದ ಅದಿತಿ ಶಾಲಾ ಕಾಲೇಜುಗಳಲ್ಲಿ ಮಿಂಚಿದ್ದೂ ಇದೆ. ಆದರೆ ಹಠಾತ್ತನೆ ನಟಿಯಾಗಬೇಕೆಂಬ ಆಂತರ್ಯದ ಬಯಕೆ ಈಡೇರಿಕೊಂಡಿದ್ದ ಅದಿತಿ ಫೈನಲ್ ಇಯರ್ ಡಿಗ್ರಿ ವ್ಯಾಸಂಗ ಮಾಡುತ್ತಿದ್ದ ಕಾಲದಲ್ಲಿ!
ಆವಾಗ ಎಲ್ಲರಂತಲ್ಲ ನಮ್ಮ ರಾಜಿ ಎಂಬ ಧಾರಾವಾಹಿಗೆ ಚಾಲನೆ ಸಿಕ್ಕಿತ್ತು. ಏಕಾಏಕಿ ಆ ಸೀರಿಯಲ್ಲಿನಲ್ಲಿ ನಟಿಸೋ ಸುಯೋಗವೂ ಅದಿತಿ ಪಾಲಿಗೆ ಕೂಡಿ ಬಂದಿತ್ತು. ಆ ಧಾರಾವಾಹಿಯಿಂದಲೇ ನಟಿಯಾಗಿ ಗುರುತಿಸಿಕೊಂಡ ಅವರ ಮುಖ್ಯ ಕನಸಾಗಿದ್ದದ್ದು ಚಿತ್ರರಂಗ. ಈ ನಡುವೆ ನಾನು ಅದಿತಿ ರಾವ್ ಎಂಬ ಧಾರಾವಾಹಿಯ ಮುಖ್ಯ ಪಾತ್ರದ ಮೂಲಕ ಮೇಘನಾ ಅದಿತಿ ಎಂಬ ಹೆಸರಿಂದಲೇ ಫೇಮಸ್ಸಾಗಿದ್ದರು. ಅದೇ ಹೆಸರನ್ನು ಪರ್ಮನೆಂಟಾಗಿ ಇಟ್ಟುಕೊಂಡಿದ್ದರು. ತಾನು ನಾಯಕ ನಟಿಯಾಗಬೇಕೆಂಬ ಹಂಬಲದಿಂದ ಪ್ರಯತ್ನಿಸುತ್ತಿದ್ದ ಅದಿತಿಗೆ ಸಾರಾ ಗೋವಿಂದು ಪುತ್ರ ಅನೂಪ್ಗೆ ಜೋಡಿಯಾಗಿ ಡೌ ಚಿತ್ರದಲ್ಲಿ ನಟಿಸೋ ಅವಕಾಶವೂ ಕೂಡಿ ಬಂದಿತ್ತು. ಆ ಬಳಿಕ ಹುಚ್ಚುಡುಗ್ರು ಚಿತ್ರದಲ್ಲಿಯೂ ನಟಿಸಿದ್ದ ಅದಿತಿ ಲೂಸ್ಮಾದ ಯೋಗಿಗೆ ನಾಯಕಿಯಾಗಿಯೂ ಒಂದು ಚಿತ್ರದಲ್ಲಿ ನಟಿಸಿದ್ದರು. ಆದರೆ ಕಾರಣಾಂತರಗಳಿಂದ ಆ ಪ್ರಾಜೆಕ್ಟು ಬಾಕಿಯಾಗಿತ್ತು. ತದನಂತರ ಅಕಿರಾ ಚಿತ್ರದ ಮೂಲಕ ಮುನ್ನೆಲೆಗೆ ಬಂದ ಅದಿತಿ ಮತ್ತೊಂದು ಚಿತ್ರವನ್ನೂ ಕೂಡಾ ನಾಯಕಿಯಾಗಿ ಕಂಪ್ಲೀಟ್ ಮಾಡಿಕೊಂಡಿದ್ದಾರೆ.
ಅದೇ ಹೊತ್ತಿನಲ್ಲಿ ಯಾರಿಗೆ ಯಾರುಂಟು ಚಿತ್ರವೂ ಬಿಡುಗಡೆಗೆ ಸಜ್ಜಾಗಿದೆ. ನಿರ್ಮಾಪಕ ರಘುನಾಥ್ ಸೇರಿದಂತೆ ಇಡೀ ಚಿತ್ರ ತಂಡದ ಬಗ್ಗೆ ಪ್ರೀತಿ, ಅಭಿಮಾನ ಹೊಂದಿರೋ ಅದಿತಿಗೆ ಈ ಚಿತ್ರ ಹಾಡುಗಳ ಮೂಲಕವೇ ಸೃಷ್ಟಿಸಿರೋ ಕ್ರೇಜ್ ಬಗ್ಗೆ ಅಚ್ಚರಿ ಬೆರೆತ ಖುಷಿಯಿದೆ. ಈ ಚಿತ್ರ ಸದಾ ಕಾಲವೂ ತನ್ನ ನಟನಾ ವೃತ್ತಿಗೆ ಬೆಂಬಲವಾಗಿ ನಿಂತಿರೋ ಅಮ್ಮ ಪದ್ಮಲತಾರ ಪಾಲಿಗೂ ಗೆಲುವಿನ ಸರ್ಪ್ರೈಸ್ ನೀಡುತ್ತದೆ ಎಂಬ ಆಸೆಯಿದೆ. ಹೇಳಿಕೇಳಿ ಅದಿತಿಯವರಿಗೆ ಯಾವುದೇ ಸಿನಿಮಾ ಹಿನ್ನೆಲೆ ಇಲ್ಲ. ಮಗಳು ಬಣ್ಣ ಹಚ್ಚುತ್ತೇನೆಂದಾಗ ಬೆಚ್ಚಿ ಬೀಳೋ ಟಿಪಿಕಲ್ ಪ್ರೀತಿಯ ಕುಟುಂಬ ಅದಿತಿಯದ್ದು. ಆದರೆ ಆರಂಭದಲ್ಲಿ ಅಮ್ಮ ಒಂದು ಚಿತ್ರದಲ್ಲಿ ನಟಿಸೋಕೆ ಮಾತ್ರ ಓಕೆ ಅಂದಿದ್ದರಂತೆ. ಆ ಬಳಿಕ ಮತ್ತೊಂದು, ಮಗದೊಂದು ಸೇರಿ ಅದಿತಿ ಹೀರೋಯಿನ್ ಆಗಿ ನೆಲೆ ಕಂಡುಕೊಂಡಿದ್ದಾರೆ. ಬಿಎಸ್ಎನ್ಎಲ್ ಉದ್ಯೋಗಿಯಾಗಿರುವ ಅಮ್ಮನ ಪಾಲಿಗೆ ಅದಿತಿಯೀಗ ಹೆಮ್ಮೆಯ ಮಗಳು. ಹಾಗೆಯೇ ಯಾರಿಗುಂಟು ಯಾರಿಗಿಲ್ಲ ಚಿತ್ರವೂ ಕೂಡಾ ತನನ್ನು ಸ್ಯಾಂಡಲ್ವುಡ್ಡಿನ ಹೆಮ್ಮೆಯ ನಾಯಕಿಯಾಗಿ ನೆಲೆಗೊಳಿಸುತ್ತದೆ ಎಂಬ ನಿರೀಕ್ಷೆ ಅದಿತಿಯದ್ದು…
#
No Comment! Be the first one.