ಈಗ ಎಲ್ಲೆಲ್ಲೂ ಕೆಜಿಎಫ್ ಸಿನಿಮಾದ ಹವಾ. ಕರ್ನಾಟಕದ ಗಡಿ ದಾಟಿ ಇಂಡಿಯಾ ಪೂರ್ತಿ ರಾಕಿಂಗ್ ಸ್ಟಾರ್ ಸಿನಿಮಾ ಸೌಂಡು ಮಾಡುತ್ತಿದೆ. ಕನ್ನಡ ನಾಡಿಗಷ್ಟೇ ಗೊತ್ತಿದ್ದ ಕಿರಾತಕನ ಪರಿಚಯ ದೇಶಾದ್ಯಂತ ಪಸರಿಸಿಕೊಂಡಿದೆ. ಇದು ಎಲ್ಲರಿಗೂ ಗೊತ್ತಿರೋ ವಿಚಾರ. ಯಾರಿಗೂ ಗೊತ್ತಿಲ್ಲದ ನ್ಯೂಸೊಂದು ಇಲ್ಲಿದೆ.
ಈ ವಾರ ತೆರೆಗೆ ಬರುತ್ತಿರೋ ಕೆ.ಜಿ.ಎಫ್ ನಂತರ ಯಶ್ ಸಿನಿಮಾ ಯಾವುದು? ಅಂದರೆ, ಅವರ ಅಭಿಮಾನಿಗಳೆಲ್ಲಾ `ಕಿರಾತಕ-೨’ ಅಂತಾ ಕೂಗಿ ಹೇಳುತ್ತಿದ್ದಾರೆ. ಆದರೆ `ಕಿರಾತಕ-೨’ ಅನ್ನೋ ಚಿತ್ರ ಯಾವ ಕಾರಣಕ್ಕೂ ಮುಂದುವರೆಯೋದಿಲ್ಲ ಅನ್ನೋ ಮಾತು ಖುದ್ದು ರಾಕಿಂಗ್ ಸ್ಟಾರ್ ಸರ್ಕಲ್ಲಿನಲ್ಲೇ ಮಾರ್ದನಿಸುತ್ತಿದೆ.
ಈ ಹಿಂದೆ ದಿಲ್ ವಾಲಾ, ಮಾಲಾಶ್ರೀಯ ಶಕ್ತಿ ಮತ್ತು ರ್ಯಾಂಬೋ-೨ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ, ಅದಕ್ಕೂ ಮುಂಚೆ ಡೈಲಾಗ್ ರೈಟರ್ ಆಗಿ ಅಬ್ಬರಿಸಿದ್ದ ಅನಿಲ್ ಕುಮಾರ್ `ಕಿರಾತಕ-೨’ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದರು. ಕೆ.ಜಿ.ಎಫ್ ಶೂಟಿಂಗ್ ಮುಗಿದ ಕೂಡಲೇ `ಕಿರಾತಕ-೨’ ಆರಂಭವಾಗಿತ್ತು. ಮೂರು ವರ್ಷಗಳಿಂದ ಪೊದೆಯಂತೆ ಬೆಳೆದುಕೊಂಡಿದ್ದ ಗಡ್ಡವನ್ನು ಬೋಳಿಸಿಕೊಂಡುಬಂದು ಹತ್ತು ದಿನಗಳ ಕಾಲ ಚಿತ್ರೀಕರಣವನ್ನೂ ನಡೆಸಿಕೊಟ್ಟಿದ್ದರು ಯಶ್. ಈ ನಡುವೆ ಕೆ.ಜಿ.ಎಫ್. ಪರಭಾಷೆಗಳಿಗೂ ಡಬ್ ಆಗಿ ಟಾಕ್ ಕ್ರಿಯೇಟ್ ಮಾಡಲು ಶುರು ಮಾಡಿತು ನೋಡಿ… ಯಶ್ಗೆ `ಕಿರಾತಕ’ನ ಮೇಲೆ ಅಸಡ್ಡೆ ಶುರುವಾಯಿತು. ಬರೋಬ್ಬರಿ ನಾಲ್ಕು ವರ್ಷಗಳ ಕಾಲ ಕಷ್ಟಪಟ್ಟು ತಯಾರುಮಾಡಿದ ಕೆ.ಜಿ.ಎಫ್ ಸಿನಿಮಾ ಈ ಪರಿ ಹೈಪು ಕ್ರಿಯೇಟ್ ಮಾಡಿರೋವಾಗ `ಕಿರಾತಕ’ನಂಥ ಸಾಧಾರಣ ಸಿನಿಮಾವನ್ನು ಮಾಡಬೇಕಾ ಅನ್ನೋ ಚಿಂತೆ ಯಶ್ಗೆ ಶುರುವಾಯಿತಂತೆ.
ಹೀಗಾಗಿ `ಹತ್ತು ದಿನ ಶೂಟಿಂಗ್ ಮಾಡಿರೋದಷ್ಟೇ ಅಲ್ವಾ? ಇಲ್ಲಿಗೇ ನಿಲ್ಲಿಸಿಬಿಡೋಣ’ ಅಂತ ತೀರ್ಮಾನಿಸಿದರು ಅನ್ನುತ್ತಿದೆ ಮೂಲ. ಇನ್ನೊಂದು ವಿಚಾರವೆಂದರೆ, ಈ ಸಿನಿಮಾಗೆ ಜಯಣ್ಣ ಬ್ಯಾನರಿನ ಹೆಸರು ಬಳಸಿಕೊಳ್ಳಲಾಗಿತ್ತಾದರೂ ಸ್ವತಃ ಯಶ್ ನಿರ್ಮಾಪಕರಾಗಿದ್ದರು ಅನ್ನೋದು.
ಏಕಾಏಕಿ ಸಿನಿಮಾ ನಿಂತುಹೋಗುತ್ತದೆ, ಅದೂ ಒಬ್ಬ ಸ್ಟಾರ್ ಸಿನಿಮಾ ಡ್ರಾಪ್ ಆಯಿತೆಂದರೆ ಅದರ ನಿರ್ದೇಶಕನ ಭವಿಷ್ಯಕ್ಕೆ ಕತ್ತಲು ಕವಿಯೋದು ಗ್ಯಾರೆಂಟಿ. ಹೀಗಾಗಿ `ಕಿರಾತಕ’ ನಿಲ್ಲಿಸಿದರು ಅನ್ನೋದನ್ನು ಮರೆ ಮಾಚಲಾಗಿದೆ. ಇತ್ತ ನಿರ್ದೇಶಕ ಅನಿಲ್ ಕುಮಾರ್ ಸೈಲೆಂಟಾಗಿ ರಾಮ್ ಕುಮಾರ್ ಪುತ್ರ ಧೀರನ್’ನನ್ನು ಹಾಕಿಕೊಂಡು `ದಾರಿ ತಪ್ಪಿದ ಮಗ’ ಅನ್ನೋ ಚಿತ್ರವನ್ನು ಆರಂಭಿಸಿದ್ದಾರೆ. ಯಶ್ ಸಿನಿಮಾ ಮುಂದುವರೆಯುವಂತಾಗಿದ್ದರೆ ಅನಿಲ್ ತಾನೆ ಮತ್ತೊಂದು ಸಿನಿಮಾ ಕೆಲಸ ಆರಂಭಿಸೋ ಪ್ರಮೇಯವೆಲ್ಲಿ ಬರುತ್ತಿತ್ತು? ಈ ವಿಚಾರವಾಗಿ ಮಾಧ್ಯಮದ ಮಂದಿ ಡೈರೆಕ್ಟರ್ ಅನಿಲ್ ಅವರನ್ನು ಪ್ರಶ್ನಿಸಿದರೆ `ಯಶ್ ಅವರು ಒಂಚೂರು ಬ್ಯುಸಿ ಇದಾರೆ’ ಅದಕ್ಕೇ ಮತ್ತೊಂದು ಸಿನಿಮಾ ಮಾಡ್ತಿದೀನಿ ಅಂತಾ ಸಬೂಬು ಹೇಳಿ ಸಿನಿಮಾ ನಿಂತುಹೋದ ವಿಚಾರವನ್ನು ಮರೆಮಾಚುತ್ತಿದ್ದಾರೆ.
ಒಟ್ಟಾರೆಯಾಗಿ ನೋಡಿದರೆ ಸದ್ಯದ ಪರಿಸ್ಥಿತಿಯಲ್ಲಿ `ಕಿರಾತಕ-೨’ ಮುಂದುವರೆಯುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಒಂದುವೇಳೆ ಕೆ.ಜಿ.ಎಫ್. ನಿರೀಕ್ಷೆಯಂತೇ ಗೆದ್ದರೆ, ಅದರ ಮುಂದುವರಿದ ಅಧ್ಯಾಯದಲ್ಲಿ ಯಶ್ ಬ್ಯುಸಿಯಾಗುತ್ತಾರೆ. ಪ್ರಶಾಂತ್ ನೀಲ್ ಸಿನಿಮಾ ಅಂದರೆ ಗೊತ್ತಲ್ಲ? ಹೆಚ್ಚೂಕಮ್ಮಿ ಅದು ಪಂಚವಾರ್ಷಿಕ ಯೋಜನೆಯಿದ್ದಂತೆ. ಅಲ್ಲಿಗೆ ಕಿರಾತಕ ಖತಂ ಅನ್ನೋದು ನಿಜವಾದಂತೆ!
#
No Comment! Be the first one.