ಇದು ಅಭಿಮಾನವಾ ಅಥವಾ ಅತಿರೇಕದ ಪರಮಾವಧಿಯಾ ಗೊತ್ತಿಲ್ಲ. ಸಿನಿಮಾ ನಟರ ಕಟೌಟು ಕಟ್ಟಲು ಹೋಗಿ ಜೀವ ಬಿಟ್ಟವರಿದ್ದಾರೆ. ನೆಚ್ಚಿನ ನಟನ ಮನೆಯ ಕಿಟಕಿಯಲ್ಲಿ ಇಣುಕಲು ಹೋಗಿ ಪ್ರಾಣ ತೊರೆದ ಘಟನೆಯೂ ನಡೆದಿತ್ತು. ಈಗ ಯಶ್ ಅನ್ನೋ ಹೀರೋ ಹುಟ್ಟುಹಬ್ಬ ಆಚರಿಸಲಿಲ್ಲ ಅನ್ನೋ ಕಾರಣಕ್ಕೆ ಪೆಟ್ರೋಲ್ ಸುರಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡವನ ಬಗ್ಗೆ ಮರುಕಬಪಡಬೇಕೋ, ಸತ್ತ ಅನ್ನೋದನ್ನೂ ನೋಡದೆ ನಿಂದಿಸಬೇಕೋ ನೀವೇ ತೀರ್ಮಾನಿಸಿ…
ಇಂಥಾ ಹುಚ್ಚಾಟದಿಂದಲೇ ಯಶ್ ಅಭಿಮಾನಿ ರವಿ ಎಂಬ ಹುಡುಗ ಸುಟ್ಟ ದೇಹದೊಂದಿಗೆ ಉಸಿರು ನಿಲ್ಲಿಸಿದ್ದಾನೆ. ಈ ಹಿಂದೆಯೂ ಇಂಥಾ ಒಂದಷ್ಟು ಘಟನಾವಳಿಗಳು ನಡೆದಿವೆ. ಆದರೆ ಈ ಪ್ರಕರಣ ಅಭಿಮಾನದ ಹೆಸರಿನ ಅತಿರೇಕಕ್ಕೆ ಬೀಭತ್ಸ ಉದಾಹರಣೆಯಾಗಿ ದಾಖಲಾಗಿದೆ.
ಹೀಗೆ ಹೊಸಕೆರೆಹಳ್ಳಿಯಲ್ಲಿರೋ ಯಶ್ ಮನೆ ಮುಂದೆ ಬೆಂಕಿ ಹಚ್ಚಿಕೊಂಡು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣ ಹೊಂದಿದ ರವಿಗೆ ಇನ್ನೂ ಎಳೆಯ ವಯಸ್ಸು. ಬೆಂಗಳೂರಿನ ನೆಲಮಂಗದವನಾದ ರವಿ ಯಶ್ ಹಾರ್ಡ್ಕೋರ್ ಅಭಿಮಾನಿ. ಈ ಬಾರಿ ಅಂಬರೀಶ್ ನಿಧನರಾದ ಹಿನ್ನೆಲೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳೋದಿಲ್ಲ ಅಂತ ಯಶ್ ಅನೌನ್ಸ್ ಮಾಡಿದ್ದರೂ ಈತ ಆ ಸಂಭ್ರಮಾಚರಣೆಗೆ, ಯಶ್ನನ್ನ ನೋಡೋದಕ್ಕೆಂಬ ಮನೆ ಮುಂದೆ ಜಮಾಯಿಸಿದ್ದ. ಅದೇನೇ ಪ್ರಯತ್ನ ಪಟ್ಟರೂ ಯಶ್ ಸಿಗದಿದ್ದರಿಂದ ಹುಚ್ಚು ಕೆದರಿಸಿಕೊಂಡಿದ್ದ ರವಿ ಮೈಮೇಲೆ ಪೆಟ್ರೋಲು ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ.
ಸ್ಥಳೀಯರೇ ಈತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದರೂ ಇಂದು ಮುಂಜಾನೆ ಸಾವನ್ನಪ್ಪಿದ್ದಾನೆ. ಯಾರ ಅಭಿಮಾನಿಗಳೇ ಇದ್ದರೂ ಇಂಥಾ ವರ್ತನೆಯನ್ನು ಹುಚ್ಚು ಅನ್ನದೇ ಬೇರೆ ದಾರಿಯಿಲ್ಲ. ಅಷ್ಟಕ್ಕೂ ಯಶ್ರನ್ನ ಮುಂದೆಯೂ ನೋಡೋ ಅವಕಾಶ ಈ ಹುಡುಗನಿಗಿತ್ತು. ಆದರೂ ಯಶ್ ನೋಡಲು ಸಿಗಲಿಲ್ಲ ಎಂಬ ಒಂದೇ ಕಾರಣದಿಂದ ಬೆಂಕಿ ಹಚ್ಚಿಕೊಂಡ ಈತನ ಸಾವಿನ ಬಗ್ಗೆ ಮರುಕಕ್ಕಿಂತಲೂ ಕಪಾಳಕ್ಕೆ ಬಾರಿಸಿ ಬಿಡುವಂಥಾ ಸಿಟ್ಟು ಮಾತ್ರವೇ ಎಲ್ಲರಲ್ಲಿದೆ.
ಇವನೇನೋ ಅಭಿಮಾನದ ಹುಚ್ಚಿನಿಂದ ಬೆಂಕಿ ಹಚ್ಚಿಕೊಂಡು ಸತ್ತ. ಅವನನ್ನು ಸಾಕಿ ಸಲಹಿದ ಹೆತ್ತವರ ಗತಿಯೇನಾಗಬೇಕು. ಹೀಗೆ ಜೀವದಂತೆ ಸಾಕಿ ಸಲಹಿದವರಿಗಿಂತಲೂ ತಮ್ಮ ಅಭಿಮಾನವೇ ದೊಡ್ಡದೆಂದುಕೊಳ್ಳೋ ಎಳಸು ದಡ್ಡತನದ ಬಗ್ಗೆಯಷ್ಟೇ ಸಂತಾಪ ಸೂಚಿಸಲು ಸಾಧ್ಯ. ಇನ್ನಾದರೂ ಅಭಿಮಾನಿಗಳು ಅನ್ನಿಸಿಕೊಂಡವರು ಇಂಥಾ ಮೂರ್ಖ ಕೆಲಸದಿಂದ ದೂರವಿದ್ದರೆ ಒಳಿಸು. ಹೀಗೆ ಬೆಂಕಿ ಹಚ್ಚಿಕೊಂಡು ಬೋರಲು ಬಿದ್ದಾಗ ಅವರ ಅಭಿಮಾನದ ನಟರಿಗೆ ಪಕ್ಕದಲ್ಲಿ ಕೂತು ಗಾಳಿ ಬೀಸುವ ದರ್ದಿರೋದಿಲ್ಲ. ಇಂಥಾ ದಡ್ಡತನದ ಸಾವು ತಂದುಕೊಂಡರೆ ನಂಬಿಕೊಂಡವರನ್ನು ಯಾವ ಅಭಿಮಾನವೂ ಕಾಪಾಡೋದಿಲ್ಲ. ಈ ಸತ್ಯ ಎಲ್ಲರಿಗೂ ರವಿ ಸಾವಿನ ಮೂಲಕ ಅರ್ಥವಾಗಬೇಕಿದೆ.
#