‘ಬನಾರಸ್’ ಚಿತ್ರ ಶುರುವಾಗಿ ಎರಡ್ಮೂರು ವರ್ಷಗಳೇ ಆಗಿವೆ. ಇನ್ನು, ಚಿತ್ರದ ಪ್ರಮೋಷನ್ ಶುರುವಾಗಿ ಕೂಡಾ ತಿಂಗಳುಗಳೇ ಆಗಿವೆ. ಒಂದಿಷ್ಟು ಇವೆಂಟುಗಳೂ ಆಗಿವೆ. ಆದರೆ, ಎಲ್ಲೂ ನಾಯಕ ಝೈದ್ ಖಾನ್ ಅವರ ತಂದೆ ಶಾಸಕ ಜಮೀರ್ ಅಹ್ಮದ್ ಖಾನ್ ಚಿತ್ರತಂಡದ ಜೊತೆಯಾಗಲೀ, ಝೈದ್ ಜೊಯಾಗಿಲೀ ಕಾಣಿಸಿಕೊಂಡಿರಲಿಲ್ಲ. ಚಿತ್ರದ ಬಗ್ಗೆಯಾಗಲೀ, ತಮ್ಮ ಮಗನ ಬಗ್ಗೆಯಾಗಲೀ ಮಾತನಾಡಿರಲಿಲ್ಲ. ಈಗ ಇದೇ ಮೊದಲ ಬಾರಿಗೆ ಜಮೀರ್ ಅಹ್ಮದ್ ಖಾನ್ ಚಿತ್ರ ಹಾಗೂ ತಮ್ಮ ಮಗನ ಕುರಿತು ಮಾತನಾಡಿದ್ದಾರೆ.
‘ನನಗೆ ಹೆಚ್ಚು ಟೈಮ್ ಸಿಗುವುದಿಲ್ಲ ಸಿನಿಮಾಗಳನ್ನು ನೋಡುವುದು ಕಡಿಮೆಯೇ. ಮುಂಚೆ ಡಾ. ರಾಜ್ ಕುಮಾರ್ ಅವರ ಸಿನಿಮಾಗಳನ್ನು ನೋಡುತ್ತಿದ್ದೆ. ಈಗ ದರ್ಶನ್ ಅವರ ಸಿನಿಮಾಗಳನ್ನು ನೋಡುತ್ತೇನೆ. ಅವರು ನನ್ನ ಹೃದಯದಲ್ಲಿದ್ದಾರೆ. ಅವರಿಗೆ ಯಾವ ರೀತಿ ಧನ್ಯವಾದ ತಿಳಿಸಬೇಕೋ ಗೊತ್ತಿಲ್ಲ. ನಿಜ ಹೇಳಬೇಕೆಂದರೆ, ನನಗಿಂತ ನನ್ನ ಮಗನನ್ನು ಪ್ರೋತ್ಸಾಹಿಸುತ್ತಿರುವುದು ಅವರೇ. ಅವರ ಸಹಾಯವನ್ನು ಮರೆಯೋಕೆ ಸಾಧ್ಯವಿಲ್ಲ. ನಾನು ಇವತ್ತು ಸಿನಿಮಾ ನೋಡಿದೆ. ನನಗೆ ನಿಜಕ್ಕೂ ಆಶ್ಚರ್ಯವಾಯಿತು. ನನ್ನ ಮಗ ಎಂದು ಹೇಳುತ್ತಿಲ್ಲ. ನಿಜಕ್ಕೂ ಚೆನ್ನಾಗಿ ಮಾಡಿದ್ದಾನೆ. ಇವನು ನನ್ನ ಮಗನಾ ಎಂದು ಆಶ್ಚರ್ಯವಾಯಿತು. ಅವನಿಗೆ ಚಿಕ್ಕಂದಿನಿಂದಲೂ ನಟನೆ ಬಗ್ಗೆ ಆಸಕ್ತಿ. ಅವನು ಓದಿ ಏನಾದರೂ ಆಗಬೇಕು ಎಂಬ ಆಸೆ ಇತ್ತು. ಆದರೆ, ಅವನು ಒಪ್ಪಲಿಲ್ಲ. ಅವನಿಗೆ ಓದಿಗಿಂತ ಸಿನಿಮಾ ಬಗ್ಗೆಯೇ ಹೆಚ್ಚು ಆಸಕ್ತಿ. ನನ್ನ ಮಗ ಅಂತ ನಾನು ಅವನಿಗೆ ಆಶೀರ್ವಾದ ಮಾಡಬಹುದು. ಆದರೆ, ಅವನ ಕೈ ಹಿಡಿಯಕಾಗಿರುವುದು ಪ್ರೇಕ್ಷಕರು’ ಎನ್ನುತ್ತಾರೆ ಖಾನ್.
ಝೈದ್, ಜಮೀರ್ ಜೊತೆಗೆ ಇದುವರೆಗೂ ಸಿನಿಮಾ ಬಗ್ಗೆ ಚರ್ಚೆ ಮಾಡಿಲ್ಲವಂತೆ. ‘ನಾವು ರಾಜಕಾರಣಿಗಳು. ಸಿನಿಮಾ ಬಗ್ಗೆ ಗೊತ್ತಿಲ್ಲ. ಹಾಗಾಗಿ, ಅವನಿಗೆ ನನ್ನ ಮಾರ್ಗದರ್ಶನ ಕಡಿಮೆಯೇ. ಏನೇ ಇದ್ದರೂ ದರ್ಶನ್ ಮಾತು ಕೇಳು ಅಂತ ಹೇಳಿದ್ದೆ. ದರ್ಶನ್ ಅವರೇ ಅವನಿಗೆ ಮಾರ್ಗದರ್ಶನ ಮಾಡುತ್ತಿರುವುದು. ನನಗೂ ಒಂದೊಮ್ಮೆ ಹೀರೋ ಆಗಬೇಕು ಎಂಬ ಆಸೆ ಇತ್ತು. ನನಗೆ 18 ವರ್ಷ ಇದ್ದಾಗ ಮುಂಬೈಗೆ ಹೋಗಿದ್ದೆ. ನನ್ನ ಹಣೆಬರಹದಲ್ಲಿ ಇರಲಿಲ್ಲ ಅಂತನಿಸುತ್ತದೆ. ಹಾಗಾಗಿ, ನಾನು ನಟ ಆಗಲಿಲ್ಲ. ಅವಕಾಶ ಸಿಕ್ಕಿದ್ದರೆ, ನಾನು ಇನ್ನೊಬ್ಬ ದ್ವಾರಕೀಶ್ ಆಗುತ್ತಿದ್ದೆ. ಹೀರೋ ಅಂತೂ ಖಂಡಿತಾ ಆಗುತ್ತಿರಲಿಲ್ಲ’ ಎನ್ನುತ್ತಾರೆ ಜಮೀರ್ ಅಹ್ಮದ್ ಖಾನ್.
‘ಬನಾರಸ್’ ಚಿತ್ರದಲ್ಲಿ ಝೈದ್ ಖಾನ್, ಸೋನಲ್, ಅಚ್ಯುತ್ ಕುಮಾರ್ ಮುಂತಾದವರು ನಟಿಸಿದ್ದು, ಜಯತೀರ್ಥ ಬರೆದು ನಿರ್ದೇಶನ ಮಾಡಿದ್ದಾರೆ. ತಿಲಕ್ರಾಜ್ ಭಲ್ಲಾಳ್ ನಿರ್ಮಿಸಿರುವ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.
No Comment! Be the first one.