ರವಿಚಂದ್ರನ್ ಮನೆ ಮಾರಿಬಿಟ್ಟರಂತೆ. ಸಿಕ್ಕಾಪಟ್ಟೆ ಸಾಲಕ್ಕೆ ಸಿಲುಕಿರುವ ಕ್ರೇಜಿಸ್ಟಾರ್ ಮನೆ ಮಾರಿ ಬಾಡಿಗೆ ಮನೆಗೆ ಹೋಗಿದ್ದಾರೆ – ಎಂಬಿತ್ಯಾದಿ ವಿಚಾರಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ. ಅಪ್ಪ ಮಾಡಿಟ್ಟಿದ್ದ ಮನೆಯನ್ನೂ ಮಾರುವಷ್ಟು ಕನಸುಗಾರ ಕಷ್ಟಕ್ಕೆ ಸಿಲುಕಿದ್ದಾರಾ? ಏನಿದು ವಿಚಾರ? ಇದರ ಅಸಲೀಯತ್ತೇನು ಎಂಬಿತ್ಯಾದಿ ವಿಚಾರಗಳ ಬಗ್ಗೆ ಸ್ವತಃ ವಿ. ರವಿಚಂದ್ರನ್ ಮನಬಿಚ್ಚಿ ಮಾತಾಡಿದ್ದಾರೆ. ಅದರ ವಿವರ ಇಲ್ಲಿದೆ.
ನಾನು ಅಂದುಕೊಂಡಂತೆ ನನ್ನ ಸಿನಿಮಾ ಯಶ್ವಿಯಾಗಿಲ್ಲ. ರವಿ ತೋಪಣ್ಣ ಆಗಿದ್ದು ನಿಜ. ಆದರೆ ನನ್ನ ಮನೆಯ ವಿಚಾರದಲ್ಲಿ ಕೆಲವು ಮೀಡಿಯಾದವರು ಹೇಳುತ್ತಿರೋದೆಲ್ಲಾ ನಿಜವಲ್ಲ. ನಾನು ನನ್ನ ಬದುಕಲ್ಲಿ ಕಷ್ಟ ಅಂತೇನಾದ್ರೂ ಅನು ಭವಿಸಿದ್ದರೆ 1988ರಲ್ಲಿ. ಅಂಥಾ ಸಂಕಟದ ಕಾಲ ಮತ್ತೆ ನನ್ನ ಲೈಫಲ್ಲಿ ಬಂದಿಲ್ಲ. ಬರೋದೂ ಇಲ್ಲ. ಆ ಥರದ ಕಷ್ಟದ ಮುಂದೆ ಈಗ ಎದುರಾಗೋದೆಲ್ಲಾ ಕಷ್ಟಾನೇ ಅಲ್ಲ… ಅಷ್ಟಕ್ಕೂ ಸಾಲ ಅನ್ನೋದು ನನಗೆ ಹೊಸದೇನೂ ಅಲ್ಲ. ಅದು ಯಾವತ್ತಿಗೂ ಇದ್ದೇ ಇರುತ್ತೆ. ಹಾಗಂತ ತೀರಾ ಜೀವನ ನಡೆಸಲು ಕಷ್ಟದ ಪರಿಸ್ಥಿತಿ ಇಲ್ಲ. ನೆಮ್ಮದಿಯಿಂದ ಬದುಕಲು ಬೇಕಿರುವಷ್ಟು ಹಣ ನನ್ನಲ್ಲಿದೆ. ಸದ್ಯಕ್ಕೆ ಕೈತುಂಬಾ ದುಡಿಮೆ ಕೂಡಾ ಇದೆ. ʻಸುಮ್ನೆ ಇಟ್ಕೊಂಡಿರಿʼ ಅಂತಾ ನನಗೆ ಕಾರಣವೇ ಇಲ್ಲದೆ ಕಾಸು ಕೊಟ್ಟು ಹೋಗುವ ಸ್ನೇಹಿತರೂ ಇದ್ದಾರೆ. ಹೀಗಿರುವಾಗ ಮನೆಯನ್ನು ಮಾರಿಕೊಳ್ಳುವ ಹಂತಕ್ಕಂತೂ ತಲುಪಿಲ್ಲ. ನನ್ನ ಹಿರಿಯ ಮಗನ ಮದುವೆ ಮಾಡಿದ್ದೀವಿ. ಮದುವೆಯಾದ ನಂತರ ಗಂಡ-ಹೆಂಡತಿಯನ್ನು ಬೇರೆ ಮನೆ ಮಾಡಿಡುವುದು ನಮ್ಮ ಪ್ಲಾನ್ ಆಗಿತ್ತು. ಹಾಗಂತಾ ಒಂದೇ ಸಲಕ್ಕೆ ಬೇರೆ ಕಳಿಸಲೂ ಸಾಧ್ಯವಿಲ್ಲವಲ್ಲಾ? ಅವರಿಗೆಂದೇ ಖರೀದಿಸಿರುವ ಫ್ಲಾಟಲ್ಲಿ ಅವರ ಜೊತೆಗೆ ಒಂದಿಷ್ಟು ದಿನ ಇದ್ದು, ನಂತರ ಅವರನ್ನು ಅಲ್ಲೇ ಬಿಟ್ಟು ಬರಬೇಕು ಅಂತಾ ತೀರ್ಮಾನಿಸಿದ್ವಿ. ಅದರಂತೆ ನಡೆದುಕೊಂಡಿದ್ದೀವಿ ಅಷ್ಟೇ.
ಇನ್ನು ಈಗಿರುವ ರಾಜಾಜಿನಗರದ ಮನೆಯ ವಾಸ್ತು ಸರಿ ಇಲ್ಲ ಅಂತಾ ಕಳೆದ ಇಪ್ಪತ್ತು ವರ್ಷಗಳಿಂದ ಹಲವರು ಹೇಳಿದ್ದಾರೆ. ಯಾರ್ಯಾರು ಹೇಗೇಗೆ ಹೇಳಿದರೋ ಅಷ್ಟೂ ಬದಲಾವಣೆ ಮಾಡಿದ್ದೀವಿ. ಒಂದೇ ಸಮ ಹೊಡೆದು, ರಿಪೇರಿ ಮಾಡಿ ಸಾಕಾಗಿದೆ. ನಮ್ಮಮ್ಮ ಇದ್ದಾಗ ಅವರಿಗೆ ಒಂದು ರೀತಿಯ ಸೆಂಟಿಮೆಂಟ್ ಇತ್ತು. ಅಪ್ಪ ಕಟ್ಟಿಸಿದ ಮನೆ ಅಂತಾ. ಅವರ ಮನಸ್ಸಿಗೆ ಬೇಜಾರಾಗಬಾರದು ಅಂತಾ ಹಾಗೇ ಉಳಿಸಿಕೊಂಡು ಬಂದಿದ್ವಿ. ಈಗ ಅಮ್ಮ ಕೂಡಾ ಇಲ್ಲ. ಸಾಧ್ಯವಾದರೆ ಈಗಿರುವ ಮನೆಯನ್ನು ಸಂಪೂರ್ಣ ನೆಲಸಮ ಮಾಡಿ ಬೇರೆ ಮನೆ ಕಟ್ಟುವ ಸಾಧ್ಯತೆಯೂ ಇದೆ. ಇವಿಷ್ಟೂ ನನ್ನ ಮನೆಗೆ ಸಂಬಂಧಿಸಿದ ವಿಚಾರಗಳು.
ಇನ್ನು ನನ್ನ ಸಿನಿಮಾದ ಮ್ಯಾಟರಿಗೆ ಬರೋದಾದ್ರೆ. ಸದ್ಯ ನನ್ನ ಸಿನಿಮಾ ʻರವಿ ತೋಪಣ್ಣʼ ಆಗಿದೆ. ನೀವು ಬರೆಯೋ ಮುಂಚೆ ನಾನೇ ಹೇಳ್ಕೊಳ್ತೀನಿ. ಅಂದುಕೊಂಡಂತೆ ಆಗಲಿಲ್ಲ. ನಾನು ಯಾವತ್ತು ಏಕಾಂಗಿ ಎನ್ನುವ ಸಿನಿಮಾ ಮಾಡಿದೆನೋ? ಅವತ್ತಿನಿಂದ ನನ್ನೊಳಗೆ ಇಂಥಾ ಕಾನ್ಸೆಪ್ಟ್ ಕೂತುಬಿಟ್ಟಿತ್ತು. ನನ್ನೊಳಗೇ ಒಬ್ಬ ಸಂಘರ್ಷ ಮಾಡುತ್ತಿದ್ದ. ಒಬ್ಬ ವ್ಯಕ್ತಿಯ ಒಳತುಡಿತಗಳನ್ನು ತೆರೆಮೇಲೆ ತರಬೇಕಂತಾ ಹಲವು ಸಲ ಪ್ಲಾನ್ ಮಾಡಿದ್ದೇನೆ. ಭಯಾನಕವಾಗಿ ಸೋಲನ್ನೂ ಕಂಡಿದ್ದೇನೆ. ಇನ್ನು ಖಂಡಿತಾ ಅಂತಾ ಪ್ರಯತ್ನ ಮಾಡೋದಿಲ್ಲ. ಹೊಸ ವಾತಾವರಣ, ಹೊಸ ಆಲೋಚನೆಗಳು ನನ್ನಲ್ಲಿ ಮೂಡಬೇಕಿದೆ. ಈ ಕಾರಣದಿಂದಲೂ ಕೂಡಾ ಸ್ವಲ್ಪ ಇರುವ ಜಾಗ, ಪರಿಸರವನ್ನು ಬದಲು ಮಾಡಿದ್ದೇನೆ.
ಕೆಲವೊಂದು ಸಲ ನನ್ನ ಪರ್ಸನಲ್ ವಿಚಾರಗಳನ್ನು ಬಹಿರಂಗ ಮಾಡಲು ಆಗೋದಿಲ್ಲ. ಮನೆ ಅಂದ ಮೇಲೆ ಸಾವಿರ ಕಷ್ಟ ಸುಖ ಇರತ್ತೆ. ಬಂದೂಬಂದು ಅದನ್ನೆಲ್ಲಾ ನಾನು ಮೀಡಿಯಾ ಮುಂದೆ ಹೇಳುತ್ತಾ ಕೂರಕ್ಕೆ ಆಗಲ್ಲ. ನಾನು ಸುಮ್ಮನಿರ್ತೀನಿ ಅಂತಾ ಕೆಲವರು ಬಾಯಿಗೆ ಬಂದಿದ್ದನ್ನೇ ಬರೆದು ಪ್ರಚಾರ ಮಾಡ್ತಾರೆ. ಅದು ಅವರ ಕರ್ಮ ನಾನೇನು ಮಾಡಕ್ಕಾಗಲ್ಲ.
ಇದು ರವಿಚಂದ್ರನ್ ಅವರ ನೇರ ನುಡಿ. ಸಿನಿಮಾರಂಗ ಅಂದರೆ ಬರೀ ತಳುಕು ಬಳುಕು. ನಿಜಕ್ಕಿಂತಾ ಸುಳ್ಳೇ ಹೆಚ್ಚು. ಆದರೆ ರವಿಚಂದ್ರನ್ ಥರದ ಕೆಲವೇ ಕಲಾವಿದರು ಇದ್ದಿದ್ದನ್ನು ಇದ್ದಹಾಗೆ ಹೇಳಬಲ್ಲರು.
No Comment! Be the first one.