ಟಗರು ಸಿನಿಮಾ ಬಂದಾಗ ಅದರಲ್ಲಿ ವಿಲನ್ನುಗಳಾಗಿದ್ದ ಧನಂಜಯ ಮತ್ತು ವಸಿಷ್ಠರನ್ನು ಜನ ಡಾಲಿ, ಚಿಟ್ಟೆ ಅಂತಾ ಮೆರೆಸಿದರು. ಆ ಚಿತ್ರದ ಪಾತ್ರಗಳು ಇವರ ಹೆಸರಿನೊಂದಿಗೆ ಪರ್ಮನೆಂಟಾಗಿ ಸೇರಿಕೊಂಡವು. ಲೂಸ್ ಮಾದ, ಕಾಕ್ರೋಜ್, ವಾಸ್ನೆಬಾಬು, ಡ್ರಾಕುಲ, ಪೆಟ್ರೋಲ್ ಮೊದಲಾದ ಕ್ಯಾರೆಕ್ಟರುಗಳು ಆಯಾ ನಟರ ವರ್ಚಸ್ಸು ಹೆಚ್ಚಿಸಿವೆ. ಅದು ನಿರ್ದೇಶಕರು ಸೃಷ್ಟಿಸುವ ಪಾತ್ರಗಳಿಗಿರುವ ಶಕ್ತಿ. ಈಗ ʻಹೆಡ್ ಬುಷ್ʼ ನೋಡಿದವರೆಲ್ಲಾ ಹೇಳುತ್ತಿರುವ ಪ್ರಮುಖ ಹೆಸರು ʻಸ್ಯಾಮ್ಸನ್ʼ… ಈ ಚಿತ್ರ ನೈಜ ಘಟನೆಗಳನ್ನು ಆಧರಿಸಿದ್ದು. ನಿಜವಾದ ಸ್ಯಾಮ್ಸನ್ ಹೇಗಿದ್ದನೋ ಗೊತ್ತಿಲ್ಲ. ಆದರೆ ಅಗ್ನಿ ಶ್ರೀಧರ್ ಅವರು ಬರೆದಿರುವ ಸ್ಯಾಮ್ಸನ್ ಪಾತ್ರಕ್ಕೆ ಅಕ್ಷರಶಃ ಜೀವ ಕೊಟ್ಟಿರೋ ನಟ ಬಾಲು ನಾಗೇಂದ್ರ.
ಬಾಲು ನಾಗೇಂದ್ರ ಕನ್ನಡ ಚಿತ್ರರಂಗದ ಅದ್ಭುತ ನಟ, ಪ್ರತಿಭಾವಂತ ಅನ್ನೋದು ಯಾವತ್ತೋ ಋಜುವಾತಾಗಿದೆ. ಸೂರಿ ನಿರ್ದೇಶನದ ಅಣ್ಣಾ ಬಾಂಡ್, ಕಡ್ಡಿಪುಡಿ ಮೊದಲಾದ ಸಿನಿಮಾಗಳಲ್ಲಿ ಬಾಲು ತಮ್ಮ ನಟನೆಯ ಮೂಲಕವೇ ಎಲ್ಲರನ್ನೂ ಬೆರಗಾಗಿಸಿದ್ದಾರೆ. ಕಡ್ಡಿಪುಡಿಯ ರೆಕ್ಕೆ ವೆಂಕ್ಟೇಶನ ಕ್ಯಾರೆಕ್ಟರಿನಲ್ಲಿ ಕಾಣಿಸಿಕೊಂಡು ಎಲ್ಲರನ್ನೂ ಬೆಚ್ಚಿಬೀಳಿಸಿದ್ದವರು ಬಾಲು.
ʻಕೆಂಡಸಂಪಿಗೆʼಯನ್ನು ಸೂರಿ ಆರಂಭಿಸಿದ್ದೇ ಬಾಲುಗಾಗಿ ಅನ್ನೋದು ಹಲವರಿಗೆ ಗೊತ್ತಿಲ್ಲ. ಕಾರಣಾಂತರಗಳಿಂದ ಬಾಲು ನಟಿಸಬೇಕಿದ್ದ ಕೆಲವು ಪಾತ್ರಗಳು ಬೇರೆ ನಟರ ಪಾಲಾಗಿವೆ. ಫ್ರೆಂಚ್ ಬಿರಿಯಾನಿ ಸಿನಿಮಾ ಕೂಡಾ ಅದಕ್ಕೊಂದು ಉದಾಹರಣೆ. ಸ್ವಭಾವತಃ ಬಾಲು ನಾಗೇಂದ್ರ ನೇರವಂತ ಅನ್ನೋದರ ಜೊತೆಗೆ ಚೂರೇಚೂರು ಮುಂಗೋಪಿ. ಇದ್ದದ್ದನ್ನು ಇದ್ದಹಾಗೆ ಹೇಳಿಬಿಡುವ ಇವರ ಗುಣವೇ ಕೆಲವೊಮ್ಮೆ ಅವಕಾಶಗಳು ತಪ್ಪಿಹೋಗುವಂತೆ ಮಾಡಿರಲೂಬಹುದು. ಬಹುತೇಕ ಬಕೀಟು ಗಿರಾಕಿಗಳೇ ತುಂಬಿಹೋಗಿರುವ ಚಿತ್ರರಂಗದಲ್ಲಿ ಜೀ ಹುಜೂರ್ ಎನ್ನುವ ಮನಸ್ಥಿತಿ ರೂಢಿಸಿಕೊಂಡಿದ್ದರೆ ಬಹುಶಃ ಬಾಲು ಈ ಹೊತ್ತಿಗೆ ಜಗದ್ವಿಖ್ಯಾತ ಕಲಾವಿದನಾಗಿರುತ್ತಿದ್ದರು. ಹಾಗಂತ ಬಾಲು ಕಡಿಮೆ ಸಾಧನೆಯೇನು ಮಾಡಿಲ್ಲ. ರಂಗಭೂಮಿ ಹಿನ್ನೆಲೆಯಿಂದ ಬಂದು , ಪೋಷಕ ಪಾತ್ರಗಳಲ್ಲಿ ನಟಿಸುತ್ತಲೇ ಹೀರೋ ಕೂಡಾ ಆದವರು. ಹುಲಿರಾಯ, ಕಪಟನಾಟಕ ಪಾತ್ರಧಾರಿ ಚಿತ್ರಗಳಲ್ಲಿ ನಾಯಕನಟನಾಗಿ ಕಾಣಿಸಿರುವ ಬಾಲುವನ್ನು ನೋಡಿದವರು ಮೆಚ್ಚಿದ್ದಾರೆ.
ಸಾಮಾನ್ಯಕ್ಕೆ ಪ್ರತಿಭಾವಂತ ಹೀರೋಗಳು ತಮ್ಮ ಅಕ್ಕಪಕ್ಕ ಅದೇ ತೂಕದ ನಟರನ್ನು ಆಯ್ಕೆ ಮಾಡಿಕೊಳ್ಳುವುದು ಅಪರೂಪ. ಈ ವಿಚಾರದಲ್ಲಿ ಧನಂಜಯ ಅವರದ್ದು ನಿಜಕ್ಕೂ ದೊಡ್ಡ ಗುಣ. ಸ್ಯಾಮ್ಸನ್ ಪಾತ್ರಕ್ಕೆ ಬಾಲು ನಾಗೇಂದ್ರಾನೇ ಬೇಕು ಅಂತಾ ಸಿಕ್ಕಸಿಕ್ಕಲ್ಲೆಲ್ಲಾ ಹುಡುಕಾಡಿಸಿದ್ದರು ಡಾಲಿ. ಅಜಾನುಬಾಹು ಸ್ಯಾಮ್ಸನ್ ಪಾತ್ರಕ್ಕೆ ಬಾಲು ಸೂಟಾಗುತ್ತಾರಾ ಅಂತಾ ಅನುಮಾನಿಸಿದ್ದ ಅಗ್ನಿ ಶ್ರೀಧರ್ ಕೂಡಾ ಇವರ ನಟನೆಯನ್ನು ನೋಡಿ ಫಿದಾ ಆಗಿದ್ದರು.
ಅಂತಿಮವಾಗಿ ಈಗ ಪರದೆ ಮೇಲೆ ಸ್ಯಾಮ್ಸನ್ ಪಾತ್ರವನ್ನು ಗೆಲ್ಲಿಸಿದ್ದಾರೆ ಬಾಲು. ಸಿನಿಮಾ ನೋಡಿದವರೆಲ್ಲಾ ʻಸ್ಯಾಮ್ಸನ್ ಸ್ಯಾಮ್ಸನ್ʼ ಅಂತಾ ಕೂಗುತ್ತಿದ್ದಾರೆ. ʻಡಬಲ್ ರೋಡ್ ಜಂಕ್ಷನ್….ʼ ಡೀಫಾಲ್ಟ್ ಡೈಲಾಗ್ ಆಗಿಬಿಟ್ಟಿದೆ. ಬಾಲು ಮನಸು ಮಾಡಿದರೆ ಕನ್ನಡ ಮಾತ್ರವಲ್ಲ, ಭಾರತೀಯ ಚಿತ್ರರಂಗದ ಪೂರ್ತಿ ಅಬ್ಬರಿಸಬಹುದು. ಆ ತಾಕತ್ತು ಈ ನಟನಲ್ಲಿದೆ. ಬಾಲು ನಾಗೇಂದ್ರ ಬೇಗ ಅದನ್ನು ಸಾಧ್ಯವಾಗಿಸಲಿ…
No Comment! Be the first one.