ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ‘ಜೈ’ ಸಿನಿಮಾದ ಅದ್ದೂರಿ ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ವಿಶೇಷವೆಂದರೆ, ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಾಲಿವುಡ್‌ನ ಖ್ಯಾತ ನಟ, ‘ಅಣ್ಣ’ ಎಂದೇ ಪ್ರೀತಿಯಿಂದ ಕರೆಯಲ್ಪಡುವ ಸುನೀಲ್ ಶೆಟ್ಟಿ ಅವರು ಆಗಮಿಸುತ್ತಿದ್ದಾರೆ. ಈ ಅದ್ಧೂರಿ ಕಾರ್ಯಕ್ರಮವು ಇದೇ ನವೆಂಬರ್ 7 ರಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಮಂತ್ರಿ ಮಾಲ್‌ನಲ್ಲಿ ನಡೆಯಲಿದೆ. ಚಿತ್ರತಂಡವು ಈ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲು ಸಕಲ ಸಿದ್ಧತೆ ನಡೆಸಿದ್ದು, ಬಾಲಿವುಡ್ ಮತ್ತು ಸ್ಯಾಂಡಲ್‌ವುಡ್ ತಾರೆಯರ ಸಂಗಮಕ್ಕೆ ಈ ಇವೆಂಟ್ ಸಾಕ್ಷಿಯಾಗಲಿದೆ.

‘ಜೈ’ ಸಿನಿಮಾ ಬಿಗ್ ಬಾಸ್ ಕನ್ನಡ ಸೀಸನ್ 9ರ ವಿಜೇತ, ಪ್ರತಿಭಾವಂತ ನಟ ರೂಪೇಶ್ ಶೆಟ್ಟಿ ಅವರು ನಟಿಸಿ, ನಿರ್ದೇಶಿಸಿರುವ ಕನಸಿನ ಕೂಸು. ಈಗಾಗಲೇ ತಮ್ಮ ವಿಭಿನ್ನ ಶೈಲಿಯ ಮೂಲಕ ಗಮನ ಸೆಳೆದಿರುವ ರೂಪೇಶ್, ಈ ಚಿತ್ರದ ಮೂಲಕ ಮತ್ತೊಂದು ದೊಡ್ಡ ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ. ಅವರಿಗೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ತೆರೆ ಹಂಚಿಕೊಂಡಿದ್ದಾರೆ.
ಈ ಚಿತ್ರವು ಕನ್ನಡ ಮತ್ತು ತುಳು ಎರಡೂ ಭಾಷೆಗಳಲ್ಲಿ ಏಕಕಾಲದಲ್ಲಿ ನಿರ್ಮಾಣವಾಗಿದ್ದು, ಕರಾವಳಿ ಸೊಗಡಿನ ಕಥಾಹಂದರವನ್ನು ಹೊಂದಿದೆ. ಆಕ್ಷನ್, ಕಾಮಿಡಿ ಮತ್ತು ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿರುವ ಈ ಚಿತ್ರವು ಇದೇ ನವೆಂಬರ್ 14 ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ.
ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಸುನೀಲ್ ಶೆಟ್ಟಿ. ಮೂಲತಃ ಕರಾವಳಿಯವರಾದ (ಮಂಗಳೂರು) ಸುನೀಲ್ ಶೆಟ್ಟಿ ಅವರಿಗೆ ತುಳು ಭಾಷೆ ಮತ್ತು ಸಂಸ್ಕೃತಿಯ ಮೇಲೆ ಅಪಾರ ಪ್ರೀತಿ. ಆ ಪ್ರೀತಿಯಿಂದಾಗಿಯೇ ಅವರು ‘ಜೈ’ ಚಿತ್ರದಲ್ಲಿ ಅತ್ಯಂತ ಪ್ರಮುಖವಾದ, ಅತಿಥಿ ಪಾತ್ರವೊಂದರಲ್ಲಿ ನಟಿಸಿದ್ದಾರೆ. ವಿಶೇಷವೆಂದರೆ, ಈ ಪಾತ್ರಕ್ಕಾಗಿ ಅವರು ಯಾವುದೇ ಸಂಭಾವನೆಯನ್ನು ಪಡೆಯದೆ, ಕೇವಲ ಭಾಷಾಭಿಮಾನದಿಂದ ನಟಿಸಿರುವುದು ಚಿತ್ರತಂಡದ ಮೆಚ್ಚುಗೆಗೆ ಪಾತ್ರವಾಗಿದೆ.
ಈಗ, ಚಿತ್ರದ ಬಿಡುಗಡೆಯ ಹೊಸ್ತಿಲಲ್ಲಿ ನಡೆಯುತ್ತಿರುವ ಈ ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ಖುದ್ದು ಹಾಜರಾಗುವ ಮೂಲಕ, ಅವರು ಇಡೀ ‘ಜೈ’ ಚಿತ್ರತಂಡಕ್ಕೆ ಬೆಂಬಲವಾಗಿ ನಿಲ್ಲುತ್ತಿದ್ದಾರೆ. ಮಂತ್ರಿ ಮಾಲ್‌ನಲ್ಲಿ ತಮ್ಮ ನೆಚ್ಚಿನ ಬಾಲಿವುಡ್ ತಾರೆಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ನವೆಂಬರ್ 7ರ ಸಂಜೆ ನಡೆಯಲಿರುವ ಈ ಕಾರ್ಯಕ್ರಮವು ‘ಜೈ’ ಚಿತ್ರದ ನಿರೀಕ್ಷೆಯನ್ನು ಇಮ್ಮಡಿಗೊಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ.











































