ಹೆಣ್ಣನ್ನು ರಕ್ಷಿಸು, ಹೆಣ್ಣನ್ನು ಪೂಜಿಸು, ಹೆಣ್ಣನ್ನು ಆರಾಧಿಸು!
ಹಿನ್ನೆಲೆಯಲ್ಲಿ ಈ ಧ್ವನಿ ಬರುತ್ತಿದ್ದರೆ, ದೃಶ್ಯದಲ್ಲಿ ಹುಡುಗ, ಹುಡುಗಿ ಒಬ್ಬರೊಬ್ಬರು ತುಟಿಗೆ ತುಟಿ ಒತ್ತಿ ಡೀಪಾಗಿ ಮುತ್ತಿಟ್ಟುಕೊಳ್ಳುತ್ತಿರುತ್ತಾರೆ…
ಒಲಿದುಬಂದ ಹೆಣ್ಣನ್ನು ಅವನು ಅಕ್ಷರಶಃ ರಕ್ಷಿಸಿ, ಪೂಜಿಸಿ, ಆರಾಧಿಸುತ್ತಾನೆ…
ಎರಡು ಟ್ರ್ಯಾಕ್ನಲ್ಲಿ ಕಥೆ ನಡೆಯುತ್ತದೆ. ಒಂದು ಕಡೆ ಕಾಲೇಜು, ಹುಡುಗ ಹುಡುಗಿಯ ಓಡಾಟ, ಲವ್ವು, ರೊಮ್ಯಾನ್ಸು, ಫ್ಯಾಮಿಲಿ ಬಾಂಡಿಂಗು… ಹೀಗೆ ಸಾಗುತ್ತಿದ್ದರೆ ಮತ್ತೊಂದು ಕಡೆ ಮಹಿಳೆಯರ ಕೊಲೆ, ಸೀರಿಯಲ್ ಕಿಲ್ಲರ್, ಅದನ್ನು ಹುಡುಕಾಡುವ ಪೊಲೀಸರು… ಒಂದಕ್ಕೊಂದು ಸೂತ್ರ ಸಂಬಂಧ ಇಲ್ಲದಂತೆ, ಈ ಎರಡೂ ಟ್ರ್ಯಾಕ್ ಎಲ್ಲೂ ಸೇರೋದೇ ಇಲ್ಲವೇನೋ ಎನ್ನುವ ಮಟ್ಟಿಗೆ ನಡೆಯುತ್ತಿರುತ್ತದೆ. ಒಂದು ಕಥೆ ಅಂದಮೇಲೆ ಕಟ್ಟಕಡೆಯದಾಗಿಯಾದರೂ ಸೇರಬೇಕಲ್ಲವಾ? ಅನ್ನಿಸುವುದು ಸಹಜ.. ಆದರೆ ನಿಜಕ್ಕೂ ಏನಾಗುತ್ತದೆ ಅನ್ನೋದೇ ಅಸಲೀ ಸಿನಿಮಾ!!

ತುಂಬಾ ಪ್ರಕರಣಗಳನ್ನು ಕಣ್ಣಾರೆ ಕಾಣುತ್ತಿರುತ್ತೇವೆ. ಅತ್ಯಂತ ಪ್ರೀತಿಸಿ, ವರ್ಷಗಟ್ಟಲೆ ಜೊತೆಗೆ ಓಡಾಡಿ, ಜೀವಕ್ಕಂಟಿಕೊಂಡವರಂತೆ ಇದ್ದು, ಎದುರಾಗುವ ಎಲ್ಲ ಅಡ್ಡಿ ಆತಂಕಗಳನ್ನು ಮೀರಿ ಮದುವೆಯಾಗುತ್ತಾರೆ. ಇಷ್ಟೆಲ್ಲಾ ಆಗಿ ಜೊತೆಯಾದಮೇಲೆ, ಹೇಗೆ ಬಾಳಬೇಕು? ಉಹುಂ!

ಮದುವೆ ಅಂತಾ ಆದಮೇಲೆ ದಿನದೊಪ್ಪತ್ತಿಗೆ ʻಇವಳೇನಾ ಅವಳುʼ ಎನ್ನುವಷ್ಟರ ಮಟ್ಟಿಗೆ ಹುಡುಗಿಯ ವರ್ತನೆಗಳಲ್ಲಿ ಬದಲಾವಣೆ ಕಾಣಲು ಶುರುವಾಗುತ್ತವೆ. ಮೊದಲೆಲ್ಲಾ ಹುಡುಗರ ಬಗ್ಗೆ ಇಂಥ ಮಾತುಗಳು ಕೇಳಿಬರುತ್ತಿದ್ದವು. ಆದರೆ ಈಗ ದಾಖಲಾಗುತ್ತಿರುವ ಪ್ರಕರಣಗಳಲ್ಲಿ ಬಹುತೇಕ ಉಲ್ಟಾ ಹೊಡೆಯುತ್ತಿದೆ. ಹೆಣ್ಣು ಎಷ್ಟರ ಮಟ್ಟಿಗೆ ಶೋಷಣೆಗೆ ಒಳಗಾಗುತ್ತಿದ್ದಾಳೋ, ಅದರ ಅರ್ಧಕ್ಕಿಂತಾ ಹೆಚ್ಚು ಪಾಲು ಪುರುಷರು ಕೂಡಾ ಮಹಿಳೆಯರಿಂದ ದಬ್ಬಾಳಿಕೆಗೆ ಒಳಪಡುತ್ತಿದ್ದಾರೆ. ʻʻಮದುವೆಯಾಗಿ ಮನೆ, ಮನಸ್ಸುಗಳ ಹೊಸ್ತಿಲೊಳಗೆ ಹೊಸದಾಗಿ ಬಂದ ಹುಡುಗಿ ತನ್ನ ಜೊತೆಗೆ ಮಾತ್ರವಲ್ಲ, ಅಪ್ಪ-ಅಮ್ಮನೊಂದಿಗೆ ಅನ್ಯೋನ್ಯವಾಗಿರಬೇಕು. ಎಲ್ಲರನ್ನೂ ಪ್ರೀತಿಸಬೇಕು. ಮುದ್ದಾದ ಮಗು ಕೂಡಾ ಜೊತೆಯಾಗುತ್ತದೆ. ಆ ಮೂಲಕ ಬದುಕು ಸುಂದರವಾಗುತ್ತದೆʼʼ ಅನ್ನೋದು ಹುಡುಗರ ಕನಸಾಗಿರುತ್ತೆ. ಆದರೆ, ಬಹುತೇಕರ ಬದುಕು ಭದ್ರಗೊಳ್ಳದೇ, ಕನಸುಗಳೆಲ್ಲಾ ಛಿದ್ರವಾಗುತ್ತವೆ. ಅಲ್ಲೀತನಕ ಭಯ ಅನ್ನೋ ಪದಕ್ಕೆ ಅರ್ಥವೇ ಗೊತ್ತಿಲ್ಲದವನಂತಿದ್ದ ಹುಡುಗ ʻಹೆಂಡತಿʼ ಎನ್ನುವ ಕ್ಯಾರೆಕ್ಟರ್ ಎಂಟ್ರಿ ಆದಮೇಲೆ ಅಕ್ಷರಶಃ ಬೆಚಿಬಿದ್ದಿರುತ್ತಾನೆ… ದುಃಖ, ಅಳು, ನೋವು, ಸಂಕಟಗಳೆಲ್ಲಾ ಹೊಸದಾಗಿ ಪರಿಚಯಗೊಳ್ಳುತ್ತವೆ!

ಬಂದವಳು ಅಂದುಕೊಂಡಂತೆ ಇರೋದೇ ಇಲ್ಲ. ಅದಕ್ಕೆ ಅವಳ ಹೆತ್ತವರ ಕಾರಣವೂ ಇರಬಹುದು. ಮಗಳು ಅಳತೆಗೆ ಮೀರಿದ ಆಸ್ತಿ ಹೊಂದಬೇಕು. ಅವಳ ಸೌಂದರ್ಯವೇ ಬಂಡವಾಳವಾಗಿ ಹಣ ಮಾಡಬೇಕು ಅಂತಾ ಓವರ್ ಎಕ್ಷ್ಪೆಕ್ಟೇಷನ್ಗಳನ್ನು ಬಿತ್ತಿರುತ್ತಾರೆ. ಹೋದಮನೆಯಲ್ಲಿ ಹೇಗೆ ಬಾಳಬೇಕು ಅಂತಾ ಹೇಳಿಕೊಡುವುದರ ಬದಲಾಗಿ, ಒಗ್ಗಟ್ಟು, ಪ್ರೀತಿಯನ್ನು ಹೇಗೆಲ್ಲಾ ಒಡೆದು, ವಿಂಗಡಿಸಬೇಕು, ಕಡಿದು ಪಾಲುಹಾಕಬೇಕು ಅನ್ನೋದರ ಟ್ರೈನಿಂಗು, ದುರ್ಬುದ್ಧಿಯ ಫೀಡಿಂಗುಗಳನ್ನು ಮಾಡುತ್ತಲೇ ಇರುತ್ತಾರೆ. ಅದು ಯಾವ ಮಟ್ಟಿಗೆ ಅಂದರೆ, ಹೆತ್ತ ಮಗಳ ಬದುಕನ್ನು ಬೀದಿಗೆ ತಂದು ನಿಲ್ಲಿಸುವ ತನಕ ಅವರಿಗೆ ಸಮಾಧಾನ ಅನ್ನೋದೇ ಇರೋದಿಲ್ಲ. ಇವೆಲ್ಲದರ ಪ್ರತಿಫಲವಾಗಿ, ಗಂಡು ಹೆತ್ತವರ ಮೇಲೆ ಸುಳ್ಳು ಆರೋಪಗಳು, ಫಾಲ್ಸ್ ಕೇಸುಗಳೆಲ್ಲಾ ಬೀಳುತ್ತವೆ. ಕಾನೂನಿನ ಅತ್ಯಮೂಲ್ಯವಾದ ಅಂಶಗಳನ್ನೆಲ್ಲಾ ತಮ್ಮ ಸ್ವಾರ್ಥಕ್ಕೆ ದುರುಪಯೋಗ ಮಾಡಿಕೊಳ್ಳುತ್ತಾರೆ. ಆ ಮೂಲಕ ಕರುಣೆಗೆ ಜಾಗವನ್ನೂ ಕೊಡದೆ ಕುಟುಂಬಗಳನ್ನು ಅಪೋಷನ ತೆಗೆದುಕೊಳ್ಳುತ್ತಾರೆ. ಹೆಣ್ಣುಮಕ್ಕಳಿಂದ ಶೋಷಣೆಗೆ ಒಳಗಾಗಿ ಜೀವ ಬಿಟ್ಟ ಹುಡುಗರು, ಅವಮಾನ ತಡೆಯಲಾರದೆ ಆತ್ಮಹತ್ಯೆಗೊಳಗಾದ ಫ್ಯಾಮಿಲಿಗಳು ಅವೆಷ್ಟಿವೆಯೋ? ಸದಾ ಹೆಣ್ಣಿನ ಹಿತ ಬಯಸುವ ಸಮಾಜ, ಇಂಥವನ್ನು ಕಣ್ಣಾರೆ ಕಂಡರೂ ಹೆಚ್ಚು ಮಾತಾಡಲು ಹೋಗೋದಿಲ್ಲ!
ಆದರೆ ʻಐ ಯಾಮ್ ಗಾಡ್ʼ ಈ ಎಲ್ಲದರ ಬಗ್ಗೆಯೂ ಸವಿವರವಾಗಿ ಹೇಳುತ್ತದೆ. ಮಾತುಗಳಲ್ಲಿ ಹೇಳಿ, ಭಾಷಣ ಮಾಡೋದಿಲ್ಲ; ಅಂಕಿ ಅಂಶಗಳನ್ನು ನೀಡಿ ಪ್ರಬಂಧ ಮಂಡಿಸುವುದಿಲ್ಲ! ಬದಲಿಗೆ ಪ್ರತಿಯೊಂದನ್ನೂ ಕಥೆಯೊಳಗೆ ಬೆರೆಸಿ, ಇಂಚಿಂಚಾಗಿ ಬಿಚ್ಚಿಟ್ಟಿದೆ!
ಸಿನಿಮಾದ ಆರಂಭದಲ್ಲೇ ಎರಡೂಮುಕ್ಕಾಲು ಗಂಟೆ ಅವಧಿ ಅನ್ನೋದನ್ನು ನೋಡಿ ʻʻಏನ್ ಗುರೂ, ಈ ಕಾಲದಲ್ಲಿ ಎರಡೂ ಮುಕ್ಕಾಲು ಗಂಟೆ ಸಿನಿಮಾ ಯಾರು ನೋಡ್ತಾರೆ? ಅದೂ ಹೊಸಬರದ್ದು?ʼʼ ಅಂತೇನಾದರೂ ಅಂದುಕೊಂಡರೆ, ಆ ಅಭಿಪ್ರಾಯ ನಿಜಕ್ಕೂ ಅದು ತಪ್ಪು… ಇನ್ನೇನು ಮುಗೀತು ಅನ್ನೋ ಹೊತ್ತಿಗೆ ಹೊಸಾ ಟ್ವಿಸ್ಟು, ಮತ್ತೊಂದು ವಿಚಾರ ತೆರೆದುಕೊಳ್ಳುತ್ತಲೇ ಇರುತ್ತದೆ. ಕಟ್ಟಕಡೆಯದಾಗಿ ಬರುವ ʻʻಹೆಣ್ಣೇ… ಹೆಣ್ಣಾಗಿರುʼʼ ಎನ್ನುವ ಸಾಲು ಸಿನಿಮಾಗೆ ಮಾತ್ರವಲ್ಲ, ವಾಸ್ತವಕ್ಕೂ ಪೂರಕವಾಗಿದೆ!
ಇವೆಲ್ಲದರ ನಡುವೆ, ಇದೊಂದು ಪುರುಷಪ್ರಧಾನ ಸಿನಿಮಾನಾ? ಅಪರಾಧವನ್ನು ಇಲ್ಲಿ ವೈಭವೀಕರಿಸಲಾಗಿದೆಯಾ? ಕಾನೂನು ಮೀರಿ ವರ್ತಿಸುವ ಪಾತ್ರವನ್ನು ಸಮರ್ಥಿಸಿಕೊಳ್ಳಲಾಗಿದೆಯಾ? ಎಂಬಿತ್ಯಾದಿ ಪ್ರಶ್ನೆಗಳಿಗೆ ಚಿತ್ರ ಸ್ಪಷ್ಟವಾಗಿ ಉತ್ತರಿಸುತ್ತದೆ; ಅರ್ಥ ಮಾಡಿಸುತ್ತದೆ!
ಈ ಹಿಂದೆ ಒಂದು ಸಿನಿಮಾವನ್ನು ನೀಡಿದ್ದ ರವಿ ಗೌಡ ಈ ಸಲ ಫುಲ್ ಎನರ್ಜಿಯೊಂದಿಗೆ ಬಂದಿದ್ದಾರೆ. ಇವತ್ತಿನ ದಿನಕ್ಕೆ ಏನು ಬೇಕೋ ಅದನ್ನು ಕೊಟ್ಟಿದ್ದಾರೆ. ಇವರ ನಟನೆ, ಡೈಲಾಗ್ ಡೆಲಿವರಿಗಳನ್ನೆಲ್ಲಾ ನೋಡಿದರೆ, ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ನಕ್ಷತ್ರ ಹುಟ್ಟಿಕೊಂಡಿದೆ ಅನ್ನೋದು ಸ್ಪಷ್ಟವಾಗೇ ಗೊತ್ತಾಗುತ್ತದೆ. ಅಷ್ಟರ ಮಟ್ಟಿಗೆ ರವಿ ಗೌಡ ಗೆಲುವು ಕಂಡಿದ್ದಾರೆ. ನಟನೆಯೊಂದಿಗೆ ನಿರ್ದೇಶನವನ್ನೂ ಮಾಡಿ ಸೈ ಅನ್ನಿಸಿಕೊಂಡಿದ್ದಾರೆ. ರವಿ ಗೌಡ ಅವರ ಮೇಲೆ ಉಪ್ಪಿಯ ಪ್ರಭಾವ ಹೆಚ್ಚಾಗೇ ಇದೆ. ಅದನ್ನವರು ಗುಟ್ಟಾಗಿಟ್ಟುಕೊಂಡಿಲ್ಲ ಕೂಡಾ!
ಇನ್ನು ಆರ್ಮುಗ ರವಿಶಂಕರ್ ಅವರ ಪಾತ್ರ ಮತ್ತು ನಟನೆ ಎರಡೂ ಈ ಚಿತ್ರದಲ್ಲಿ ನೆಕ್ಸ್ಟ್ ಲೆವೆಲ್. ಪೊಲೀಸ್ ಅಧಿಕಾರಿಯಾಗಿ, ಗಂಭೀರ ಪಾತ್ರದ ಮೂಲವೇ ನಗಿಸೋದು ಸುಲಭವಲ್ಲ; ರವಿಶಂಕರ್ ಅದನ್ನು ಸಾಧಿಸಿದ್ದಾರೆ. ʻಫೈಟರ್ʼ ಹಣೆಪಟ್ಟಿಯನ್ನು ಅಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ನಿರಂಜನ್ ಪ್ರತಿಭಾವಂತ ನಟ. ತೀರಾ ಅಪರೂಪಕ್ಕೆನ್ನುವಂತೆ ಸಿನಿಮಾದ ಪೂರ್ತಿ ಕ್ಯಾರಿ ಆಗುವಂಥ, ಅತ್ಯಂತ ಒಳ್ಳೆಯ ಪಾತ್ರ ನಿರಂಜನ್ಗೆ ದಕ್ಕಿದೆ. ನಿರಂಜನ್ ಅದನ್ನು ಮುಂದುವರಿಸಿಕೊಂಡು ಹೋಗುವ ತೂಕ ಹೊರಬೇಕೇ ವಿನಃ ತಲೆ ಭಾರ ಹೆಚ್ಚಿಸಿಕೊಳ್ಳಬಾರದು. ಬೇರೆ ಯಾವುದೋ ರಾಜ್ಯದಿಂದ ಬಂದವಳು ಅನ್ನೋದೇ ಗೊತ್ತಾಗದಂತೆ ವಿಜೇತಾ ಪ್ರತೀಕ್ ಅದ್ಭುತವಾಗಿ ʻನಟಿಸಿʼದ್ದಾಳೆ. ಚೇತನ್ ದುರ್ಗ ಇಷ್ಟವಾಗುತ್ತಾರೆ. ಅವಿನಾಶ್ ಮತ್ತು ಅರುಣಾ ಬಾಲರಾಜ್ ತುಂಬಾನೇ ಕಾಡುತ್ತಾರೆ. ಸಣ್ಣ ಪಾತ್ರದಲ್ಲಿ ಬರುವ ಹಿರಿಯ ಹಾಸ್ಯ ಕಲಾವಿದ ಉಮೇಶಣ್ಣ ಕಣ್ಣಲ್ಲಿ ನೀರು ಜಿನುಗುವಂತೆ ಮಾಡುತ್ತಾರೆ. ಎಲ್ಲಕ್ಕಿಂತಾ ಮುಖ್ಯವಾಗಿ ರವಿಗೌಡ ಎಲ್ಲರನ್ನೂ ಸರಿಯಾಗಿ ದುಡಿಸಿಕೊಂಡಿದ್ದಾರೆ; ತಾವೂ ಶ್ರಮಿಸಿದ್ದಾರೆ. ಅಜನೀಶ್ ಕೊಟ್ಟಿರುವ ಹಾಡುಗಳು ಪರವಾಗಿಲ್ಲ. ಹಿನ್ನೆಲೆ ಸಂಗೀತ ಸಖತ್ತಾಗಿದೆ. ಜಿತಿನ್ ದಾಸ್ ಕ್ಯಾಮೆರಾ ಕೆಲಸ ಬೆಂಕಿ. ಆನಂದ್ ಕಲಾನಿರ್ದೇಶನ ಮತ್ತು ಸುರೇಶ್ ಆರ್ಮುಗಮ್ ಸಂಕಲನ ಕೂಡಾ ಪರ್ಫೆಕ್ಟ್….
ದೊಡ್ಡ ಮಟ್ಟದ ಗೆಲುವು ಕಾಣಲು ಬೇಕಿರುವ ಬಹುತೇಕ ಎಲ್ಲ ಎಲಿಮೆಂಟುಗಳೂ ʻಐ ಯಾಮ್ ಗಾಡ್ʼನಲ್ಲಿದೆ!











































