ರಶ್ಮಿಕಾ ಮಂಡಣ್ಣ ಅದೃಷ್ಟವಂತೆ ಅನ್ನೋದರಲ್ಲಿ ಯಾವ ಅನುಮಾನವೂ ಇಲ್ಲ. ಕಿರಿಕ್ ಪಾರ್ಟಿ ಎನ್ನುವ ಸಿನಿಮಾವೊಂದರಲ್ಲಿ ನಟಿಸಿ, ಅದರ ಹಿಂದಿಂದೆಯೇ ಕನ್ನಡದ ಸ್ಟಾರ್ ನಟರ ಸಿನಿಮಾಗಳಲ್ಲಿಯೂ ಅವಕಾಸ ಪಡೆದಳು. ಇದಾಗುತ್ತಿದ್ದಂತೇ ರಪಕ್ಕಂತಾ ತೆಲುಗು ತಮಿಳು ಸಿನಿಮಾಗಳ ಸೂಪರ್ ಸ್ಟಾರ್ ಗಳ ಜೊತೆ ಛಾನ್ಸು ಪಡೆದಳು. ಅದೃಷ್ಟ ಮುಂದುವರೆದು ರಶ್ಮಿಕಾ ಭಯಂಕರ ಖುಷಿಯಾಗಿದ್ದಳು. ಟೈಗರ್ ಶ್ರಾಫ್ನಂಥ ಹಾಟ್ ನಟನ ಜತೆಗೆ ನಟಿಸುವುದಕ್ಕೆ ಅವಕಾಶ ಸಿಕ್ಕರೆ, ಯಾರಾದರೂ ಬಿಟ್ಟೋರುಂಟೆ. ಅದೇ ರೀತಿ ಸ್ಕ್ರೂ ಡೀಲಾ ಎಂಬ ಹಿಂದಿ ಚಿತ್ರದಲ್ಲಿ ಟೈಗರ್ಗೆ ನಾಯಕಿಯಾಗುವುದಕ್ಕೆ ಅವಕಾಶ ಸಿಕ್ಕಾಗ, ರಶ್ಮಿಕಾ ಅಷ್ಟೇ ಖುಷಿಪಟ್ಟಿದ್ದರು. ಆದರೆ, ಈಗ ಕೈಗೆ ಬಂದ ತುತ್ತು ಬಾಯಯಿಗೆ ಬರಲಿಲ್ಲ ಎನ್ನುವಂತಹ ಪರಿಸ್ಥಿತಿ ಎದುರಾಗಿದೆ. ಸ್ಕ್ರೂ ಡೀಲಾ ಸಿನಿಮಾ ಶುರುವಾಗುವುದಕ್ಕಿಂತ ಮುಂಚೆಯೇ ನಿಂತು ಹೋಗಿದೆ.
ಇಷ್ಟಕ್ಕೂ ಚಿತ್ರ ನಿಂತಿದ್ದರಲ್ಲಿ ರಶ್ಮಿಕಾ ಕೈವಾಡವೇನೂ ಇಲ್ಲ. ಅದಕ್ಕೆ ಸಂಪೂರ್ಣ ಕಾರಣ ಟೈಗರ್ ಅಲ್ಲದೆ ಮತ್ತ್ಯಾರೂ ಅಲ್ಲ. ಈ ಚಿತ್ರದಲ್ಲಿ ನಟಿಸುವುದಕ್ಕೆ 35 ಕೋಟಿ ರೂ. ಸಂಭಾವನೆ ಕೇಳಿದ್ದರಂತೆ ಟೈಗರ್. ಅದಕ್ಕೆ ನಿರ್ಮಾಪಕ ಕರಣ್ ಜೋಹರ್ ಸಹ ಒಪ್ಪಿದ್ದರಂತೆ. ಇದು ಆಗಿದ್ದು, ಕೆಲವು ತಿಂಗಳುಗಳ ಹಿಂದೆ. ಆಗಿನ್ನೂ ಟೈಗರ್ ಅಭಿನಯದ ಹೀರೋಪಂತಿ 2 ಚಿತ್ರ ಬಿಡಗುಡೆಯಾಗಿರಲಿಲ್ಲ. ಹೀರೋಪಂತಿ ದೊಡ್ಡ ಹಿಟ್ ಆಗಿದ್ದರಿಂದ, ಹೀರೋಪಂತಿ 2 ಬಗ್ಗೆಯೂ ಸಿಕ್ಕಾಪಟ್ಟೆ ನಿರೀಕ್ಷೆ ಇತ್ತು. ಸಿನಿಮಾ ದೊಡ್ಡ ಹಿಟ್ ಆಗಬಹುದು ಎಂದು ಭಾವಿಸಲಾಗಿತ್ತು. ಆದರೆ, ಭಯಾನಕ ಫ್ಲಾಪ್ ಆಯಿತು. ಟೈಗರ್ ಜೀವನದಲ್ಲಿ ಅಷ್ಟು ಕಡಿಮೆ ಸಂಪಾದನೆ ಯಾವ ಚಿತ್ರವೂ ಮಾಡಿರಲಿಲ್ಲ. ಅಷ್ಟು ಕೆಟ್ಟದಾಗಿ ಚಿತ್ರ ಸೋತು ಹೋಯಿತು. ಇದರಿಂದ ಟೈಗರ್ ಅಷ್ಟೇ ಅಲ್ಲ, ಕರಣ್ ಸಹ ಸುಸ್ತಾಗಿ ಕುಳಿತುಬಿಟ್ಟರು.
ಆ ಚಿತ್ರ ಚೆನ್ನಾಗಿ ಹೋದರೆ, ಸ್ಕ್ರೂ ಡೀಲಾಗೆ ಅನುಕೂಲವಾಗುತ್ತದೆ ಎಂದು ನಂಬಿದ್ದ ಕರಣ್, ಅದೇ ಕಾರಣಕ್ಕೆ ಟೈಗರ್ಗೆ 35 ಕೋಟಿ ರೂ.ವರೆಗೂ ಕೊಡುವುದಕ್ಕೆ ಸಿದ್ಧರಿದ್ದರು. ಯಾವಾಗ ಚಿತ್ರ ಮಕಾಡೆ ಮಲಗಿತೋ, ಸ್ಕ್ರೂ ಡೀಲಾವನ್ನು ವಿತರಣೆಗೆ ತೆಗೆದುಕೊಳ್ಳುವುದಕ್ಕೆ ಯಾರೂ ಮುಂದೆ ಬರಲಿಲ್ಲ. ಚಿತ್ರಕ್ಕೆ ಮೊದಲು 140 ಕೋಟಿ ರೂ. ಬಜೆಟ್ ನಿಗದಿಯಾಗಿದ್ದು, ಅಷ್ಟೊಂದು ಹೂಡಿಕೆ ಮಾಡಿದರೆ ವಾಪಸ್ಸು ಬರುತ್ತದೋ ಇಲ್ಲವೋ ಎಂಬ ಕಾರಣಕ್ಕೆ ಮೊದಲು ಬಜೆಟ್ ಕಡಿತಗೊಳಿಸಲಾಯಿತು. ಬಜೆಟ್‌ನಲ್ಲಿ ಟೈಗರ್ ಸಂಭಾವನೆ ಸಹ ದೊಡ್ಡ ಪಾತ್ರವಹಿಸುತ್ತಿದ್ದರಿಂದ, ಸಂಭಾವನೆಯನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಕೇಳಲಾಯಿತು. 35 ಕೋಟಿ ರೂ.ಗಳಿಂದ 20 ಕೋಟಿವರೆಗೂ ಇಳಿಸಲಾಯಿತು. ಇದಕ್ಕೆ ಟೈಗರ್ ಸುತಾರಾಂ ಒಪ್ಪಲಿಲ್ಲ. ಯಾವಾಗ ಟೈಗರ್ ಒಪ್ಪಲಿಲ್ಲವೋ, ಬೇರೆ ದಾರಿ ಇಲ್ಲದೆ ಸ್ಕ್ರೂ ಡೀಲಾ ಚಿತ್ರವನ್ನು ನಿಲ್ಲಿಸಿದ್ದಾರೆ ಕರಣ್. ಮುಂದೇನಾಗುತ್ತದೋ ಗೊತ್ತಿಲ್ಲ. ಆದರೆ, ಸದ್ಯಕ್ಕಂತೂ ಆ ಚಿತ್ರ ಮುಂದುವರೆಯುವ ಯಾವ ಲಕ್ಷಣವೂ ಕಾಣುತ್ತಿಲ್ಲ.
ಸದ್ಯ ರಣಬೀರ್ ಜತೆಗೆ ಅನಿಮಲ್ ಎಂಬ ಚಿತ್ರದಲ್ಲಿ ನಟಿಸುತ್ತಿರುವ ರಶ್ಮಿಕಾ, ಆ ನಂತರ ಟೈಗರ್ ಜೊತೆ ತೆರೆ ಹಂಚಿಕೊಳ್ಳುವುದಕ್ಕೆ ಕನಸು ಕಾಣುತ್ತಿದ್ದರು. ಈಗ ತನ್ನದಲ್ಲದ ತಪ್ಪಿನಿಂದ ಆಕೆಯ ಕನಸು ನುಚ್ಚುನೂರಾಗಿದೆ. ಈಗ ಮಿಸ್ ಆಗಿದ್ದು, ಮುಂದೊಂದು ದಿನ ಟೈಗರ್ ಜತೆಗೆ ನಟಿಸುವ ಕನಸು ನನಸಾಗುತ್ತದಾ? ಗೊತ್ತಿಲ್ಲ!
Leave a Reply
You must be logged in to post a comment.