ಮೊದಲೇ ಕೇಳಿಸಿದ್ದರೆ ಕಥೆಯೇ ಬೇರೆಯಾಗುತ್ತಿತ್ತು!

Picture of Cinibuzz

Cinibuzz

Bureau Report

ಮೂರು ತಿಂಗಳ ಹಿಂದೆ ಬಿಡುಗಡೆಯಾಗಿದ್ದ ಚಿತ್ರ ಕನ್ನಡಕ್ಕಾಗಿ ಒಂದನ್ನು ಒತ್ತಿ. ತೆರೆಗೆ ಬಂದು ಹೋದ ಚಿತ್ರವನ್ನು ಮತ್ತೆ ಕನ್ನಡಿಗರ ಮನಸಿನ ಮೇಲೆ ಎತ್ತಿಟ್ಟಿರೋದು ಅದೇ ಸಿನಿಮಾ ಸುಮಧುರವಾದೊಂದು ಹಾಡು. ವಾಟ್ಸಪ್ ಸ್ಟೇಟಸ್‌ಗಳನ್ನು ಸಾರಾಸಗಟಾಗಿ ಆಕ್ರಮಿಸಿಕೊಂಡಿರೋ `ನನಗೀಗ ನನ ಮೇಲೆ ಅನುಮಾನ ಶುರುವಾಗಿದೆ’ ಎಂಬ ಹಾಡು ಯೂಟ್ಯೂಬ್‌ನಲ್ಲಿಯೂ ಟ್ರೆಂಡಿಂಗ್‌ನಲ್ಲಿದೆ!

ಹೊಸದಾಗಿ ಬಿಡುಗಡೆಯಾಗಿರೋ ಹಾಡುಗಳನ್ನೂ ಹಿಂದಿಕ್ಕಿ ಅಚ್ಚರಿದಾಯಕವಾಗಿ ಈ ಹಾಡು ಮೋಡಿ ಮಾಡಿದೆ. ಯೂಟ್ಯೂಬ್‌ನಲ್ಲಿ ಏಕಾಏಕಿ ಮೂವತ್ತು ಲಕ್ಷ ಮೀರಿದ ವೀಕ್ಷಣೆ ಪಡೆದುಕೊಂಡಿರೋ ಈ ಹಾಡು ಹುಚ್ಚು ಹಿಡಿಸಿದೆ. ನೋಡ ನೋಡುತ್ತಲೇ ಈ ಹುಚ್ಚು ಸಾಂಕ್ರಾಮಿಕವಾಗಿ ಹರಡಿಕೊಳ್ಳುತ್ತಲೇ ಇದೆ!

ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರದ ಪ್ರಚಾರಕ್ಕೆ ನಾನಾ ವಿಧಾನಗಳನ್ನು ಅನುಸರಿಸಲಾಗಿತ್ತು. ಆದರೆ ಅದ್ಯಾವುದೂ ಅಷ್ಟೊಂದು ಸದ್ದು ಮಾಡಿರಲೇ ಇಲ್ಲ. ಆದರೆ ಇದೀಗ ಈ ಹಾಡು ಸೃಷ್ಟಿಸಿರೋ ಅಲೆ ಕಂಡ ಎಲ್ಲರೂ ಇದೊಂದು ಹಾಡನ್ನು ಬಿಡುಗಡೆ ಪೂರ್ವದಲ್ಲಿ ಪ್ರಮೋಟ್ ಮಾಡಿದ್ದರೆ ಎಲ್ಲರೂ ಬೇಷರತ್ತಾಗಿ ಕನ್ನಡಕ್ಕಾಗಿ ಒಂದನ್ನು ಒತ್ತುತ್ತಿದ್ದರು. ಆ ಮೂಲಕ ಈ ಚಿತ್ರ ಗೆಲುವಿನತ್ತ ತಲುಪಿಕೊಳ್ಳುತ್ತಲೂ ಇತ್ತು. ಆದರೆ ಸಿನಿಮಾ ಬಿಡುಗಡೆಗೂ ಆಡಿಯೋ ಬಿಡುಗಡೆಗೂ ನಡುವೆ ಅಂತರ ಕಮ್ಮಿ ಇದ್ದಿದ್ದರಿಂದ ಬಹುಶಃ ಎಲ್ಲರನ್ನೂ ತಲುಪಲು ಸಾಧ್ಯವಾಗಿಲ್ಲವೇನೋ.

ಈ ಹಾಡು ಕೇಳಿ ಮುದಗೊಂಡ ಮಂದಿಯ ಮೇಲ್ಕಂಡ ಅಭಿಪ್ರಾಯದಲ್ಲಿ ನಿಜಕ್ಕೂ ಹುರುಳಿದೆ. ಈ ಸಿನಿಮಾ ಬಿಡುಗಡೆಯಾದ ದಿನ ಕನ್ನಡದ ಇತರೆ ಎಂಟು ಸಿನಿಮಾಗಳು ತೆರೆಗೆಬಂದಿತ್ತು. ಥಿಯೇಟರುಗಳ ಸಮಸ್ಯೆಯಿಂದ ಸಿನಿಮಾ ಅಂದುಕೊಂಡಷ್ಟು ಸೌಂಡು ಮಾಡಿರಲಿಲ್ಲ. ಈ ದುರಂತ ಸಂಭವಿಸಿ ಮೂರು ತಿಂಗಳು ಕಳೆದ ನಂತರ ಪವಾಡ ಸದೃಷವಾಗಿ ಕೇಳಿಸಿದ್ದು ಈ ಬೆಳುದಿಂಗಳಂಥಾ ಹಾಡು!

ಮಾಮೂಲಿಯಾಗಿ ಕೆಲ ಹಾಡುಗಳು ಮೊದಲು ಕೇಳಿದಾಗ ಹಿಡಿಸೋದಿಲ್ಲ. ಒಂದು ವೇಳೆ ಹಿಡಿಸಿದರೂ ಕೆಲ ಹಾಡುಗಳ ಆಯಸ್ಸು ಒಂದಷ್ಟು ಸಲ ಕೇಳೋವರೆಗೆ ಮಾತ್ರ. ಆದರೆ ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರದ ಹಾಡು ಅದೆಷ್ಟು ಸಲ ಕೇಳಿದರೂ ಬೇಜಾರಾಗೋದಿಲ್ಲ. ಆ ಟ್ಯೂನು, ಅದರ ಏರಿಳಿತ, ಬದುಕಿಗೆ, ಮನಸಿಗೆ ಹತ್ತಿರಾಗುವ ನವಿರು ಸಾಹಿತ್ಯ… ಇಷ್ಟೂ ಸಮ್ಮಿಳಿತಗೊಂಡಿರೋ ಈ ಹಾಡು ಅಕ್ಷರಶಃ ಹುಚ್ಚು ಹಿಡಿಸಿದೆ.

ಈ ಹಾಡಿನ ಮೂಲಕವೇ ಅರ್ಜುನ್ ಜನ್ಯಾ ಮತ್ತೆ ಹೊಸಾ ಸ್ವರೂಪದಲ್ಲಿ ಮಿರುಗಿದ್ದಾರೆ. ಈ ಹಾಡನ್ನು ಬರೆದವರು ಈ ಚಿತ್ರದ ನಿರ್ದೇಶಕ ಕುಶಾಲ್ ಗೌಡ. ಬಹುಶಃ ಅವರು ಗೀತರಚನೆಕಾರನಾಗಿಯೇ ಈ ಹಾಡಿನ ಮೂಲಕ ಎಲ್ಲರನ್ನೂ ಕಾಡಿದ್ದಾರೆ. ಈ ತೀರಾ `ಹಿಟ್’ ಲಿಸ್ಟಿಗೆ ಸೇರದಿದರೂ ಹಾಡು ಮಾತ್ರ ಜನಮನ ಗೆದ್ದಿದೆ. ಈ ಹಾಡಿನ ಮಾಟೇಂಜುಗಳೆಲ್ಲಾ ಚಿತ್ರೀಕರಣಗೊಂಡ ನಂತರ ಆ ದೃಶ್ಯಗಳನ್ನು ನೋಡಿ ಕೇವಲ ಹತಯ್ತು ನಿಮಿಷಗಳಲ್ಲಿ ಕುಷಾಲ್ ಈ ಸಾಲುಗಳನ್ನು ಬರೆದಿದ್ದರಂತೆ. ಅದೂ ಅರ್ಜುನ್ ಜನ್ಯಾ ಜೊತೆಗೆ ಇದೇ ಟ್ಯೂನು ಬೇಕು ಅಂತಾ ಹಠ ಮಾಡಿ ಒಪ್ಪಿಸಿದ್ದರಂತೆ. ಇದೆಲ್ಲ ಏನೇ ಆಗಲಿ, ಯಾರದ್ದೋ ಎದೆಯ ಕರೆಯಾಗಿ, ಯಾವ ನೋವಿಗೋ ಮದ್ದಾಗಿ, ಸುಖಾಸುಮ್ಮನೆ ಮುದ್ದಾಗಿ ಕಾಡುತ್ತಲೇ ಇರುತ್ತದೆ. ಇಷ್ಟು ಅದ್ಭುತ ಹಾಡು ಕೊಟ್ಟ ಈ ಚಿತ್ರ ತಂಡ ಮತ್ತಷ್ಟು ಅಚ್ಚರಿಗಳೊಂದಿಗೆ ಮರಳುವಂತಾಗಲಿ.

https://www.youtube.com/watch?v=TCAO95AmyXc #

ಇನ್ನಷ್ಟು ಓದಿರಿ

Scroll to Top