ಅದೆಷ್ಟೇ ಬೇಡಿಕೆಯ ನಟಿಯರಾದರೂ ಮದುವೆಯಾದ ನಂತರ ಮರೆಯಾಗೋದು ಮಾಮೂಲು. ಆದರೆ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮಡದಿ ರಾಗಿಣಿ ಚಂದ್ರ ಮಾತ್ರ ಮದುವೆಯಾದ ನಂತರವೇ ನಟಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಅವರು ನಾಯಕಿಯಾಗಿಯೂ ಒಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ.

ರಾಗಿಣಿ ನಟನೆಗಿಳಿಯುತ್ತಾರೆಂಬ ಬಗ್ಗೆ ಮದುವೆಯಾದ ಆರಂಭದಿಂದಲೂ ಸುದ್ದಿಯಾಗುತ್ತಲೇ ಬಂದಿತ್ತು. ಕಡೆಗೂ ಅವರು ಪ್ರಜ್ವಲ್ ನಟನೆಯ ಇನ್ಸ್‌ಪೆಕ್ಟರ್ ವಿಕ್ರಂ ಚಿತ್ರದಲ್ಲಿ ಒಂದು ಪಾತ್ರವನ್ನು ನಿರ್ವಹಿಸುತ್ತಾರೆಂಬುದೂ ಪಕ್ಕಾ ಆಗಿತ್ತು. ಇದೀಗ ಅಧಿಕೃತವಾಗಿಯೇ ರಾಗಿಣಿ ಥ್ರಿಲ್ಲರ್ ಚಿತ್ರವೊಂದರಲ್ಲಿ ನಾಯಕಿಯಾಗುತ್ತಿರೋ ಸುದ್ದಿ ಹೊರ ಬಿದ್ದಿದೆ. ಈ ಬಗ್ಗೆ ಖುದ್ದು ರಾಗಿಣಿಯವರೇ ಮಾತಾಡಿದ್ದಾರೆ.
ರಾಗಿಣಿ ನಾಯಕಿಯಾಗುತ್ತಿರೋದು ರಘು ಸಮರ್ಥ ನಿರ್ದೇಶನದ ವಿಜಯದಶಮಿ ಚಿತ್ರದ ಮೂಲಕ. ಇದೇ ತಿಂಗಳ ಹತ್ತೊಂಭತ್ತನೇ ತಾರೀಕಿನಂದು ಈ ಚಿತ್ರದ ಮುಹೂರ್ತ ಸಮಾರಂಭವೂ ನಡೆಯಲಿದೆ. ಇದೊಂದು ಥ್ರಿಲ್ಲರ್ ಕಥಾನಕ ಹೊಂದಿರುವ ಚಿತ್ರ. ಇದರಲ್ಲಿ ರಾಗಣಿ ಕಾನೂನು ಪದವಿ ಪಡೆದ ಹುಡುಗಿಯಾಗಿ ನಟಿಸಲಿದ್ದಾರೆ. ಹಾಗಾದರೆ ಈ ಚಿತ್ರದ ನಾಯಕ ಯಾರೆಂಬ ಪ್ರಶ್ನೆ ಹುಟ್ಟೋದು ಸಹಜ. ಇದಕ್ಕೆ ಈ ಚಿತ್ರದಲ್ಲಿ ನಾಯಕ ಇಲ್ಲ ಎನ್ನುವ ಮೂಲಕ ವಿಜಯದಶಮಿ ಎಂಬುದು ಮಹಿಳಾಶ ಪ್ರಧಾನ ಚಿತ್ರ ಎಂಬ ಸೂಚನೆ ಸಿಕ್ಕಿದೆ.

ರಾಗಿಣಿ ಚಂದ್ರ ಈ ಮೂಲಕ ನಾಯಪಕಿಯಾಗಿ ಎಂಟ್ರಿ ಕೊಡಲು ತಯಾರಾಗಿದ್ದಾರೆ. ಈಕೆ ಮೂಲತಃ ಡ್ಯಾನ್ಸರ್. ನಾಯಕ ನಟಿಯಾಗಲು ಹೇಳಿ ಮಾಡಿಸಿದಂತಿರೋ ಈಕೆ ಪ್ರಜ್ವಲ್ ಅವರ ಮಡದಿಯಾದ ನಂತರ ಗಂಡ ಹೆಂಡತಿಯನ್ನು ಒಟ್ಟಾಗಿ ನಟಿಸುವಂತೆ ಮಾಡೋ ಪ್ರಯತ್ನಗಳೂ ನಡೆದಿದ್ದದವು. ರಾಗಿಣಿಯವರೇ ಹೇಳುವಂತೆ ಪ್ರಜ್ವಲ್ ಮತ್ತು ರಾಗಿಣಿ ನಾಯಕ ನಾಯಕಿಯಾಗಿ ನಟಿಸುವಂತೆ ಅದೆಷ್ಟೋ ಆಫರುಗಳು ಬಂದಿವೆ. ಆದರೆ ರಘು ಸಮರ್ಥ್ ಅವರು ಹೇಳಿದ ಕಥೆ ಚೆನ್ನಾಗಿದ್ದುದರಿಂದ ರಾಗಿಣಿ ಈ ಚಿತ್ರದ ಮೂಲಕವೇ ನಾಯಕಿಯಾಗಿ ನಟಿಸಲು ತೀರ್ಮಾನಿಸಿದ್ದಾರಂತೆ.
#












































