ಇದು ಕನ್ನಡ ಚಿತ್ರರಂಗದ ಖದರ್!

Picture of Cinibuzz

Cinibuzz

Bureau Report

ಕನ್ನಡ ಚಿತ್ರಗಳ ಗುಣಮಟ್ಟವನ್ನು ಆಡಿಕೊಳ್ಳೋದು, ಯಾವ ಚಿತ್ರಗಳು ತೆರೆ ಕಂಡರೂ ಅದಕ್ಕೆ ಬಾಲಿವುಡ್ ಸೇರಿದಂತೆ ಬೇರೆ ಭಾಷೆಗಳ ಚಿತ್ರಗಳನ್ನು ಹೋಲಿಸಿ ಮೂದಲಿಸೋದು ಕೆಲವರ ಖಯಾಲಿ. ಆದರೆ ಕನ್ನಡ ಚಿತ್ರರಂಗದ ಖದರ್ ಮಾತ್ರ ಇದ್ಯಾವುದರ ಗೊಡವೆಯೂ ಇಲ್ಲದೆ ಗಡಿ ದಾಟಿಕೊಂಡು ಬೇರೆ ಭಾಷೆಗಳಿಗೂ ಪಸರಿಸಿದೆ. ಅಲ್ಲಿನವರನ್ನೂ ಪ್ರಭಾವಿಸಿದೆ!

 

ಈ ಮಾತಿಗೆ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಬಾಲಿವುಡ್ ಯುವ ನಟ ಶ್ರೇಯಸ್ ತಲ್ಪಡೆ ಹಂಚಿಕೊಂಡಿರೋ ವಿಚಾರಗಳಿಗಿಂತಲೂ ಬೇರೆ ಸಾಕ್ಷಿ ಬೇಕಿಲ್ಲ!

ಶ್ರೇಯಸ್ ಡಾ. ರಾಜ್‌ಕುಮಾರ್ ಅವರ ಅಭಿಮಾನಿ. ಇದುವರೆಗೂ ರಾಜ್‌ಕುಮಾರ್ ಅವರು ನಟಿಸಿರೋ ಅದೆಷ್ಟೋ ಚಿತ್ರಗಳನ್ನು ಶ್ರೇಯಸ್ ನೋಡಿದ್ದಾರಂತೆ. ಈ ಮೂಲಕ ರಾಜಣ್ಣನ ನಟನೆಯಿಂದ ಯಾವ ಪರಿಯಾಗಿ ಶ್ರೇಯಸ್ ಪ್ರಭಾವಿತರಾಗಿದ್ದಾರೆಂದರೆ, ಯಾವಾಗಲೇ ಬಿಡುವು ಸಿಕ್ಕರೂ ಅಣ್ಣವ್ರ ಸಿನಿಮಾಗಳನ್ನು ನೋಡೋ ಹವ್ಯಾಸ ಬೆಳೆಸಿಕೊಂಡಿದ್ದಾರಂತೆ. ಅವರೊಬ್ಬ ಮೇರು ನಟ ಎಂದಿರುವ ಶ್ರೇಯಸ್ ತಾನು ಅವರ ಅಭಿಮಾನಿ ಅಂತ ಹೆಮ್ಮೆಯಿಂದಲೇ ಹೇಳಿಕೊಂಡಿದ್ದಾರೆ.

ಇದಲ್ಲದೇ ಕನ್ನಡ ಚಿತ್ರರಂಗದ ಆಗು ಹೋಗುಗಳತ್ತಲೂ ಗಮನ ನೆಟ್ಟಿರೋ ಶ್ರೇಯಸ್‌ಗೆ ರಾಕಿಂಗ್ ಸ್ಟಾರ್ ಯಶ್ ಸ್ಟೈಲ್ ಅಂದರೂ ಇಷ್ಟವಂತೆ. ಇದೇ ಸಂದರ್ಭದಲ್ಲಿ ತನಗೇನಾದರೂ ಕನ್ನಡದಲ್ಲಿ ನಟಿಸೋ ಆಫರ್ ಬಂದರೆ ಖಂಡಿತಾ ಒಪ್ಪಿಕೊಳ್ಳುವುದಾಗಿಯೂ ಹೇಳಿಕೊಂಡಿದ್ದಾರೆ.

ಶ್ರೇಯಸ್‌ಗೆ ಕನ್ನಡ ಚಿತ್ರಗಳು ಮಾತ್ರವಲ್ಲದೆ ಕನ್ನಡಿಗರೆಂದರೂ ಅಚ್ಚುಮೆಚ್ಚು. ಬೆಂಗಳೂರು ಅಂದರಂತೂ ಭಾರತದ ಮತ್ಯಾವ ನಗರಕ್ಕಿಂತಲೂ ಹೆಚ್ಚೇ ಇಷ್ಟ ಅಂದಿದ್ದಾರೆ ಶ್ರೇಯಸ್. ಅವರಿಗೆ ಅತೀ ಹೆಚ್ಚಿನ ಸ್ನೇಹ ವಲಯ ಇರೋದೂ ಕೂಡಾ ಬೆಂಗಳೂರಿನಲ್ಲಿಯೇ. ಆದ್ದರಿಂದಲೇ ಈ ನಗರದ ಜೊತೆಗೆ ನಂಟು ಹೊಂದಿರೋ ಶ್ರೇಯಸ್ ರಾಜಣ್ಣನ ಅಭಿಮಾನಿ ಎಂಬುದಕ್ಕಿಂತ ಖುಷಿಯ ವಿಚಾರ ಮತ್ತೇನಿದೆ?

#

ಇನ್ನಷ್ಟು ಓದಿರಿ

Scroll to Top