ಇದು ಕನ್ನಡಪ್ರೇಮಿ ಹುಡುಗನ ಮೊದಲ ಕನಸು!

Picture of Cinibuzz

Cinibuzz

Bureau Report

ಇತ್ತೀಚೆಗೆ ಬಿಡುಗಡೆಯಾಗಿದ್ದ ಹಾಡುಗಳ ಅಲೆಯಲ್ಲಿಯೇ ಪ್ರೇಕ್ಷಕರನ್ನು ತಲುಪಿಕೊಂಡಿರೋ ಚಿತ್ರ ರುದ್ರಾಕ್ಷಿಪುರ. ಹೆಸರಲ್ಲೇ ಒಂಥರಾ ರಹಸ್ಯ ಬಚ್ಚಿಟ್ಟುಕೊಂಡಿರೋ ಈ ಚಿತ್ರ ಥ್ರಿಲ್ಲರ್ ಕಥೆ ಹೊಂದಿದೆ ಎಂಬುದಷ್ಟೇ ಈವರೆಗೆ ಬಯಲಾಗಿರೋ ಅಂಶ. ಇದನ್ನು ಹೊರತಾಗಿಸಿ ಮತ್ತೆಲ್ಲವನ್ನೂ ನಿಗೂಢವಾಗಿಟ್ಟಿರೋ ನಿರ್ದೇಶಕ ಈಶ್ವರ್ ಪೋಲಂಕಿ ಪಾಲಿಗಿದು ಮೊದಲ ಕನಸು!

ಶಿಲ್ಪಿಯೂ ಆಗಿರುವ ನಾಗರಾಜ್ ಮುರುಡೇಶ್ವರ್ ನಿರ್ಮಾಣದ ಚಿತ್ರ ರುದ್ರಾಕ್ಷಿಪುರ. ದಾವಣಗೆರೆಯ ಹುಡುಗ ಅರ್ಜುನ್ ಸಹಾನ್ ಮತ್ತು ರೂಪಿಕ ಈ ಚಿತ್ರದಲ್ಲಿ ನಾಯಕ, ನಾಯಕಿಯರಾಗಿ ಅಭಿನಯಿಸಿದ್ದಾರೆ. ರವಿ ಚೇತನ್ ವಿಲನ್ ಆಗಿ ಆರ್ಭಟಿಸಿದ್ದಾರೆ. ಥ್ರಿಲ್ಲರ್ ಕಥೆಯೊಂದನ್ನು ಬೇರೆಯದ್ದೇ ವಿಧಾನದ ಕಮರ್ಷಿಯಲ್ ವೇಯಲ್ಲಿ ಹೇಳಲಾಗಿದೆ ಅಂತಷ್ಟೇ ವಿವರ ಕೊಡುವ ನಿರ್ದೇಶಕರು, ಈ ಮೂಲ ರುದ್ರಾಕ್ಷಿಪುರದತ್ತ ಕೌತುಕದ ದೃಷ್ಟಿ ನೆಡುವಂತೆಯೂ ಮಾಡುತ್ತಾರೆ.

ಈಶ್ವರ್ ಪೋಲಂಕಿ ಮೂಲತಃ ಆಂಧ್ರಪ್ರದೇಶದವರು. ಧರ್ಮಾವರಂ ಅವರ ಮೂಲ. ಆದರೆ ಅವರ ತಂದೆ ಧರ್ಮಾವರಂ ಸೀರೆಗಳ ವ್ಯಾಪಾರದ ಸಲುವಾಗಿ ವರ್ಷಾಂತರಗಳ ಹಿಂದೆ ಬೆಂಗಳೂರಿನಲ್ಲಿಯೇ ಬಂದು ನೆಲೆಯಾಗಿದ್ದಾರೆ. ಆದ್ದರಿಂದ ಈಶ್ವರ್ ಇಲ್ಲಿಯೇ ಓದಿ ಬೆಳೆದು ಪಕ್ಕಾ ಕನ್ನಡದ ಹುಡುಗನಾಗಿಯೇ ಬೆಳೆದಿದ್ದಾರೆ. ಇದಲ್ಲದೇ ಅಪಾರವಾದ ಕನ್ನಡಾಭಿಮಾನವನ್ನೂ ಹೊಂದಿದ್ದಾರೆ. ಅದು ಯಾವ ರೀತಿಯಲ್ಲಿದೆಯೆಂದರೆ, ಮುಂದ್ಯಾವತ್ತಾದರೂ ತಾನು ತೆಲುಗು ಚಿತ್ರವೊಂದನ್ನು ನಿರ್ದೇಶನ ಮಾಡಿದರೆ ಕನ್ನಡ ನಿರ್ದೇಶಕ ತೆಲುಗು ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ ಅಂತ ಅನ್ನಿಸಿಕೊಳ್ಳೋದೇ ಅವರ ಇಂಗಿತ!

ಈಶ್ವರ್ ಪೋಲಂಕಿ ಮನೆಯವರ ಒತ್ತಾಸೆಗೆ ಮಣಿದು ಸಿಎ ಓದಲಾರಂಭಿಸಿದ್ದರಂತೆ. ಆದರೆ ಆರಂಭದಿಂದಲೂ ತಾನು ಸಿನಿಮಾ ನಿರ್ದೇಶಕನಾಗಬೇಕೆಂಬ ಇರಾದೆ ಹೊಂದಿದ್ದ ಅವರಿಗೆ ಲೆಕ್ಕಾಚಾರದ ಜಗತ್ತಿನಲ್ಲಿ ಕಳೆದು ಹೋಗೋದು ಸುತಾರಾಂ ಇಷ್ಟವಿರಲಿಲ್ಲ. ಕಡೆಗೂ ಧೈರ್ಯ ಮಾಡಿ ಮನೆ ಮಂದಿಯನ್ನು ಒಪ್ಪಿಸಿಯೇ ನಿರ್ದೇಶಕರಾಗಿರೋ ಈಶ್ವರ್ ಪಾಲಿಗೆ ರುದ್ರಾಕ್ಷಿಪುರ ಚಿತ್ರ ಮಹತ್ವಾಕಾಂಕ್ಷೆಯ ಮೊದಲ ಹೆಜ್ಜೆ.


ಪ್ರತೀ ಕ್ಷಣವೂ ಪ್ರೇಕ್ಷಕರನ್ನು ಕುತೂಹಲದ ಉತ್ತುಂಗದಲ್ಲಿಡುವ, ಭರ್ಜರಿ ಮನರಂಜನೆ ನೀಡುವ ಅಚ್ಚುಕಟ್ಟಾದ ಚಿತ್ರವೊಂದನ್ನು ನಿರ್ದೇಶನ ಮಾಡಿದ ಖುಷಿ ಈಶ್ವರ್‌ಗಿದೆ. ಮುಂದಿನ ತಿಂಗಳು ಈ ಚಿತ್ರವನ್ನು ತೆರೆಗಾಣಿಸುವ ಆಲೋಚನೆಯೂ ಅವರಲ್ಲಿದೆ.

#

ಇನ್ನಷ್ಟು ಓದಿರಿ

Scroll to Top