ಮಡಿಕೇರಿ ಕಾಡೊಳಗೆ ಕ್ಲೈಮ್ಯಾಕ್ಸ್ ಉದ್ಘರ್ಷ!

Picture of Cinibuzz

Cinibuzz

Bureau Report

ಸುನೀಲ್ ಕುಮಾರ್ ದೇಸಾಯಿ… ಹೀಗೊಂದು ಹೆಸರು ಕೇಳುತ್ತಲೇ ಒಂದೊಳ್ಳೆ ಚಿತ್ರಗಳ ಸಾಲೇ ಕಣ್ಮುಂದೆ ಬರುತ್ತೆ. ತಾವು ನಿರ್ದೇಶಕನಾಗಿ ಬಂದ ನಂತರ ಜನರೇಷನ್ನೇ ಬದಲಾಗಿದ್ದರೂ ಅದಕ್ಕನುಗುಣವಾಗಿ ಅಪ್‌ಡೇಟ್ ಆಗಿರೋ ದೇಸಾಯಿ ಇದೀಗ `ಉದ್ಘರ್ಷ’ ಚಿತ್ರದ ಮೂಲಕ ಮೈಕೊಡವಿಕೊಂಡಿದ್ದಾರೆ. ಮಡಿಕೇರಿಯಲ್ಲಿ ನಡೆಯುತ್ತಿರೋ ಈ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ರೀತಿ ನೋಡಿದರೆ ಸುನೀಲ್ ಕುಮಾರ್ ದೇಸಾಯಿ ಹಳೇ ಖದರ್ರಿನೊಂದಿಗೆ ಎದ್ದು ನಿಲ್ಲೋ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ!


ಇದೀಗ ಮಡಿಕೇರಿಯ ವಿಷಿಷ್ಠವಾದೊಂದು ಪ್ರದೇಶದಲ್ಲಿ ಉದ್ಘರ್ಷ ಚಿತ್ರದ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ನಡೆಯುತ್ತಿದೆ. ಅದು ಕಾಡಿನೊಂದಿಗೆ ಬೆಸೆದುಕೊಂಡಂತಿರುವ ಕಾಫಿ ತೋಟ. ಅದರ ಮಧ್ಯದಲ್ಲೊಂದು ಬ್ರಿಟಿಷರ ಕಾಲದ ಪಳೆಯುಳಿಕೆಯಂತಿರೋ ದೊಡ್ಡ ಬಂಗಲೆ. ಅದರ ಇಕ್ಕೆಲದಲ್ಲಿಯೇ ಕಾಡೊಳಗಿಂದ ತಪ್ಪಿಸಿಕೊಂಡು ಬಂದಂತಿರೋ ಹುಡುಗಿ. ಮೈಗೆ ಗೋಣಿ ಚೀಲವನ್ನೇ ಹೊದ್ದುಕೊಂಡಿರೋ ಆಕೆಯ ಮೈತುಂಬಾ ರಕ್ತ ಒಸರುವಂಥಾ ಗಾಯ. ಆಕೆ ಈ ರಕ್ಕಸ ಗಾತ್ರದ ಬಂಗಲೆಯ ಇಕ್ಕೆಲದಲ್ಲಿ ತಪ್ಪಿಸಿಕೊಳ್ಳಲು ಹವಣಿಸುವ ದೃಷ್ಯಾವಳಿ ಇಂದು ಚಿತ್ರೀಕರಣಗೊಂಡಿದೆ.


ಒಟ್ಟಾರೆಯಾಗಿ ಈ ಚಿತ್ರೀಕರಣ ನಡೆಯುತ್ತಿರೋ ರೀತಿ ನಿಜಕ್ಕೂ ಮತ್ತೊಮ್ಮೆ ಸುನೀಲ್ ಕುಮಾರ್ ದೇಸಾಯಿ ಪರ್ವವೊಂದು ಆರಂಭವಾಗಲಿರೋ ಲಕ್ಷಣದಂತೆಯೇ ಕಾಣಿಸುತ್ತಿದೆ.

ನಮ್ಮೂರ ಮಂದಾರ ಹೂವೆ ಚಿತ್ರದಂಥಾ ಸಾರ್ವಕಾಲಿಕ ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿರೋ ದೇಸಾಯಿ ಉತ್ಕರ್ಷ, ನಿಶ್ಕರ್ಷ, ಬೆಳದಿಂಗಳ ಬಾಲೆ ಮುಂತಾದ ಸಾರ್ವಕಾಲಿಕ ಹಿಟ್ ಚಿತ್ರಗಳ ಮೂಲಕ ನೆಲೆ ನಿಂತಿರೋ ದೇಸಾಯಿ, ಉದ್ಘರ್ಷ ಚಿತ್ರದ ಮೂಲಕ ಮತ್ತೊಂದು ಮಹಾ ಗೆಲುವಿಗೆ ರೂವಾರಿಯಾಗೋ ಛಾಯೆ ಮಡಿಕೇರಿಯಲ್ಲಿ ಚಿತ್ರೀಕರಣ ನಡೆಯುತ್ತಿರೋ ಪ್ರದೇಶದ ತುಂಬಾ ಕಾಣಿಸಿಕೊಂಡಿದ್ದರಲ್ಲಿ ಅಚ್ಚರಿ ಪಡುವಂಥಾದ್ದೇನೂ ಇಲ್ಲ.
ಈಗಾಗಲೇ ಈ ಚಿತ್ರ ಹೈದ್ರಾಬಾದ್ ಮುಂತಾದೆಡೆಗಳಲ್ಲಿನ ರೆಸಾರ್ಟುಗಳಲ್ಲಿ, ರಾಮೋಜಿ ಫಿಲಂ ಸಿಟಿಯಲ್ಲಿ ಅರವತೈದು ದಿನಗಳ ಚಿತ್ರೀಕರಣ ಮುಗಿಸಿಕೊಂಡಿದೆ. ಇದೀಗ ಮಡಿಕೇರಿಯಲ್ಲಿ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ನಡೆಯುತ್ತಿದೆ. ಇನ್ನೊಂದು ಆರು ದಿನಗಳ ಕಾಲ ಚಿತ್ರೀಕರಣ ಸಮಾಪ್ತಿಯಾದರೆ ಉದ್ಘರ್ಷ ಚಿತ್ರ ಅಂತಿಮ ಹಂತ ತಲುಪುತ್ತದೆ. ವಿಶೇಷವೆಂದರೆ, ಈ ಚಿತ್ರದ ಮೂಲಕ ಪರಭಾಷೆಗಳಲ್ಲಿಯೂ ಬಾರೀ ಬೇಡಿಕೆ ಹೊಂದಿರುವ ನಟ ಠಾಕೂರ್ ಅನೂಪ್ ಸಿಂಗ್ ನಾಯಕನಾಗಿ ನಟಿಸಿದ್ದಾರೆ. ಕೆಲ ಜನಪ್ರಿಯ ಟಿವಿ ಶೋಗಳು ಸೇರಿದಂತೆ ಸಿಂಗಂ ಚಿತ್ರದಲ್ಲಿಯೂ ಖಳನಾಗಿ ನಟಿಸಿದ್ದವರು ಠಾಕೂರ್ ಅನೂಪ್ ಸಿಂಗ್. ಇದೀಗ ದರ್ಶನ್ ಅಭಿನಯದ ಯಜಮಾನ ಚಿತ್ರದಲ್ಲಿಯೂ ಖಳನಾಗಿ ಅಭಿನಯಿಸಿದ್ದಾರೆ. ಆದರೆ ಅವರು ನಾಯಕನಾಗಿರೋ ಮೊದಲ ಚಿತ್ರ ಉದ್ಘರ್ಷ.


ಇನ್ನುಳಿದಂತೆ ಈ ಚಿತ್ರದ ನಾಯಕಿಯಾಗಿರುವಾಕೆ ದನ್ಷಿಕಾ. ಈಕೆ ಕಬಾಲಿ ಚಿತ್ರದಲ್ಲಿ ರಜನೀಕಾಂತ್ ಮಗಳಾಗಿ ನಟಿಸಿದ್ದ ಹುಡುಗಿ. ಇದೀಗ ಮಡಿಕೇರಿಯಲ್ಲಿ ಈಕೆಯ ಭಾಗದ ಚಿತ್ರೀಕರಣವೇ ನಡೆಯುತ್ತಿದೆ. ಮೈ ತುಂಬಾ ಗಾಯ ಮಾಡಿಕೊಂಡು, ರಕ್ತ ಸೋರುತ್ತಿರುವ, ಗೋಣಿ ಚೀಲ ಹೊದ್ದುಕೊಂಡಿರೋ ಅವತಾರದಲ್ಲಿ ದಂತಿಕಾ ನಟಿಸುತ್ತಿದ್ದಾಳೆ. ದೇವರಾಜ್ ಆರ್ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಬಾಲಿವುಡ್‌ನಲ್ಲಿಯೂ ಹೆಸರು ಮಾಡಿರುವ ಸಂಜೋಯ್ ಜೋಷಿ ಹಿನ್ನೆಲೆ ಸಂಗೀತ ನೀಡಿದ್ದಾರೆ. ತಾನ್ಯಾ ಹೋಪೆ, ಕಬೀರ್ ಸಿಂಗ್ ದುಹಾನ್, ಹರ್ಷಿಕಾ ಪುಣಚ್ಚ ಮುಂತಾದವರು ನಟಿಸಿದ್ದಾರೆ. #

ಇನ್ನಷ್ಟು ಓದಿರಿ

Scroll to Top