ರಾಕಿಂಗ್ ಸ್ಟಾರ್ ಯಶ್ ಸೌತ್ ಇಂಡಿಯಾ ಸೂಪರ್ ಸ್ಟಾರ್ ಆಗ್ತಾರಾ?

Picture of Cinibuzz

Cinibuzz

Bureau Report

ಇಂಥದ್ದೊಂದು ಪ್ರಶ್ನೆ ಗಾಂಧಿನಗರ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗದ ವಠಾರಗಳಲ್ಲಿ ಕೇಳಿಬರುತ್ತಿದೆ. ಕೆ.ಜಿ.ಎಫ್ ಅನ್ನೋ ಮಲ್ಟಿಲಾಂಗ್ವೇಜ್ ಸಿನಿಮಾ ಬಿಡುಗಡೆಯಾಗಿ ಒಂದು ದಿನ ಕಳೆಯುವುದರ ಹೊತ್ತಿಗೆ ಈ ಪ್ರಶ್ನೆಗೆ ನಿಖರವಾದ ಉತ್ತರ ಕೂಡಾ ದಕ್ಕಿಬಿಡುತ್ತದೆ.

ರಾಕಿಂಗ್ ಸ್ಟಾರ್ ಅನ್ನಿಸಿಕೊಳ್ಳುವ ಮುಂಚಿನ ದಿನಗಳಿಂದ ಹಿಡಿದು ಇವತ್ತಿನ ವರೆಗೆ ಯಶ್ ನಡೆದುಬಂದ ಸಿನಿಮಾ ಮತ್ತು ಖಾಸಗಿ ಬದುಕಿನ ಹಾದಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದರೆ ಹಠಕ್ಕೆ ಬಿದ್ದು ಸಾಧಿಸುವ ಇವರ ಗುಣ ಎದ್ದುಕಾಣುತ್ತದೆ. ಆರಂಭದ ಒಂದಷ್ಟು ಸಿನಿಮಾಗಳು ನಿಲ್ಲದಿದ್ದಾಗ `ಯಶ್ ಕತೆ ಮುಗೀತು’ ಅಂತಾ ಗಾಂಧಿನಗರದ ಜನಾ ಷರಾ ಬರೆದಿದ್ದರು. ಆದರೆ ರಾಜಾಹುಲಿ, ಗಜಕೇಸರಿಯಂಥಾ ಸಿನಿಮಾಗಳ ಮೂಲಕ ಯಶ್ ಮತ್ತೆ ಎದ್ದು ನಿಂತರು. ಹೊಸ ಹುಡುಗ ಸಂತೋಷ್ ಆನಂದ್ ರಾಮ್ ಕೈಗೆ ಸಿನಿಮಾ ಕೊಟ್ಟು ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಮಾಡೋ ಹೊತ್ತಿನಲ್ಲಿ `ಯಶ್ ಚಾಪ್ಟರ್ರು ಮುಗೀತು ಗುರೂ’ ಅಂತಾ ಅವರ ಸುತ್ತಲಿನವರೇ ಮಾತಾಡಿಕೊಂಡಿದ್ದಿದೆ. ಆದರೆ ಯಶ್ ಮಾತ್ರ ತಮ್ಮ ಬುದ್ದಿವಂತಿಕೆಯನ್ನೆಲ್ಲಾ ಧಾರೆಯೆರೆದು ಆ ಸಿನಿಮಾಗೆ ಏನೇನು ಬೇಕೋ ಅದೆಲ್ಲವನ್ನೂ ದಕ್ಕಿಸಿಕೊಂಡು ರಾಮಾಚಾರಿಯನ್ನು ದೊಡ್ಡ ಮಟ್ಟದಲ್ಲಿ ಗೆಲ್ಲಿಸಿದರು. ಒಂದರ ಹಿಂದೆ ಹಿಟ್ ಸಿನಿಮಾಗಳನ್ನು ನೀಡುತ್ತಾ ಕಲೆಕ್ಷನ್ ವಿಚಾರದಲ್ಲೂ ಗೆದ್ದು ಸ್ಟಾರ್ ಎನಿಸಿಕೊಂಡರು.

ಇಲ್ಲಿನ ಜನ `ಅಭಿಮಾನ’ದ ವಿಚಾರವಾಗಿ ಒಬ್ಬರನ್ನೊಬ್ಬರು ಕಾಲೆಳೆದುಕೊಳ್ಳೋ ಸಮಯಕ್ಕೆ ಸೀಮಿತ ಪರಿಧಿಯಲ್ಲಿ ಕಿತ್ತಾಡೋದಕ್ಕಿಂತಾ ಗಡಿ ದಾಟಿ ಹೆಸರು ಮಾಡಬೇಕು ಅಂತಾ ನಿರ್ಧರಿಸಿ ಕೆ.ಜಿ.ಎಫ್ ನಂಥಾ ಐದು ಭಾಷೆ ಸಿನಿಮಾದ ಮೂಲಕ ತನ್ನ ವ್ಯಾಪ್ತಿಯನ್ನು ವೃದ್ಧಿಸಿಕೊಳ್ಳುವತ್ತ ಯಶ್ ಗಮನ ಹರಿಸಿದರು. ಹಾಗೆ ನೋಡಿದರೆ ಯಶ್ ಸಿನಿಮಾ, ಮದುವೆ ಯಾವುದೇ ವಿಚಾರ ತೆಗೆದುಕೊಂಡರೂ ಪ್ರೀ ಪ್ಲಾನ್ ಇಲ್ಲದೇ ಏನನ್ನೂ ಮಾಡೋದಿಲ್ಲ. ಸಾಮಾನ್ಯವಾಗಿ ಕನ್ನಡದಲ್ಲಿ ತಮ್ಮ ಅರ್ಹತೆಗೆ ತಕ್ಕ ಬೆಲೆ ಸಿಗುತ್ತಿಲ್ಲ ಅನಿಸಿದಾಗ ಬೇರೆ ಹೀರೋಗಳು ಪರಭಾಷೆಯಲ್ಲಿ ಹೆಸರು ಮಾಡಿದ ನಿರ್ದೇಶಕರಿಗೆ ಸಿನಿಮಾ ಕೊಟ್ಟು ಅಥವಾ ಅಲ್ಲಿನ ಸ್ಟಾರ್ ಡೈರೆಕ್ಟರುಗಳ ಸಿನಿಮಾಗಳಲ್ಲಿ ಅವಕಾಶ ಪಡೆದು ತಮ್ಮ ಗರಿಮೆಯನ್ನು ಹೆಚ್ಚಿಸಿಕೊಳ್ಳೋ ಪ್ರಯತ್ನ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ಯಶ್ ಅದನ್ನು ಮಾಡಿಲ್ಲ. ಪ್ರಶಾಂತ್ ನೀಲ್ ಅನ್ನೋ ಕನ್ನಡದ ಪ್ರತಿಭಾವಂತ ಯುವ ನಿರ್ದೇಶಕನಿಗೆ ಸಿನಿಮಾ ನೀಡಿ ತಮ್ಮೊಟ್ಟಿಗೆ ಅವರನ್ನೂ ಹೊರಜಗತ್ತಿಗೆ ಪರಿಚಯಿಸಿಕೊಳ್ಳುವ ರಿಸ್ಕ್ ತೆಗೆದುಕೊಂಡಿದ್ದಾರೆ. ಇನ್ನು ಬೇರೆ ಯಾರೇ ಆಗಿದ್ದರೂ ಐದು ಭಾಷೆಯಲ್ಲಿ ತಯಾರಾಗಿರುವ ಕೆ.ಜಿ.ಎಫ್.ಗೆ ಭಾರತೀಯ ಸಿನಿಮಾರಂಗದಲ್ಲಿ ಈಗಾಗಲೇ ಹೆಸರು ಮಾಡಿರುವ ಛಾಯಾಗ್ರಾಹಕರನ್ನು ಕರೆತಂದು ಕೂರಿಸುತ್ತಿದ್ದರು. ಯಶ್ ಇಲ್ಲಿ ಕೂಡಾ ಅಂತಾ ಕೆಲಸ ಮಾಡಿಲ್ಲ. ಬದಲಿಗೆ, ನಮ್ಮಲ್ಲಿಯೇ ಇದ್ದು ಅಸಾಧಾರಣ ಪ್ರತಿಭಾವಂತ ಎನಿಸಿಕೊಂಡಿರುವ ಭುವನ್ ಗೌಡ ಕೈಗೆ ಕ್ಯಾಮೆರಾ ನೀಡಿ `ಅದೇನೇನು ಮಾಡಬೇಕು ಅಂದುಕೊಂಡಿದ್ದೀಯೋ ಮಾಡು ನೋಡೋಣ’ ಅಂತಾ ಬೆನ್ನು ತಟ್ಟಿದರು.

ಇದೆಲ್ಲದರ ಪ್ರತಿಫಲವೆನ್ನುವಂತೆ ಇನ್ನೂ ಟ್ರೇಲರ್ ಬಿಡುಗಡೆಗೂ ಮುನ್ನವೇ ಇಡೀ ಇಂಡಿಯಾ ಸಿನೆಮಾ ಇಂಡಸ್ಟ್ರಿಯನ್ನು ಬೆರಗುಗೊಳಿಸಿದ್ದಾರೆ. ಇನ್ನೇನು ಎರಡು ದಿನಗಳಲ್ಲಿ ಬಿಡುಗಡೆಗೊಳ್ಳುವ ಟ್ರೇಲರ್ ವೀಕ್ಷಿಸಲು ಇಡೀ ಭಾರತದ ಸಿನಿಮಾ ಪತ್ರಕರ್ತರನ್ನೆಲ್ಲಾ ಖುದ್ದು ಬೆಂಗಳೂರಿಗೇ ಕರೆಸಿಕೊಳ್ಳುತ್ತಿದ್ದಾರೆ. ಯಶ್ ಮತ್ತು ಕೆ.ಜಿ.ಎಫ್ ಚಿತ್ರತಂಡದ ಕ್ರಿಯಾಶೀಲ ಮನಸ್ಸುಗಳು ಅಂದುಕೊಂಡಿದ್ದನ್ನೆಲ್ಲಾ ಸಾಕಾರಗೊಳಿಸುತ್ತಾ, ಹಣಕಾಸಿನ ಲೆಕ್ಕಾಚಾರವನ್ನು ಹಾಕದೇ ಧೈರ್ಯ ಮಾಡುತ್ತಿರುವ ಹೊಂಬಾಳೆ ಫಿಲಂಸ್ ಸಂಸ್ಥೆಯ ವಿಜಯ್ ಕಿರಗುಂದೂರು ಅವರ ನಿರ್ಧಾರಗಳಿಗಾಗಿ ಅವರನ್ನು ನಿಜಕ್ಕೂ ಅಭಿನಂದಿಸಬೇಕು. ಒಂದುವೇಳೆ ಕೆ.ಜಿ.ಎಫ್ ಟೀಮಿನ ಮಾಸ್ಟರ್ ಪ್ಲಾನುಗಳೆಲ್ಲವೂ ವರ್ಕೌಟಾದರೆ ದಕ್ಷಿಣ ಭಾರತದ ಸೂಪರ್ ಸ್ಟಾರ್ ಗಳ ಪಟ್ಟಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ಅನ್ನೋ ಹೆಸರು ಖಾತೆ ತೆರೆಯುವುದರಲ್ಲಿ ಅನುಮಾನಗಳಿಲ್ಲ. ಸಿನಿಬಜ಼್‌ನ ಈ ಗ್ರಹಿಕೆ ನಿಜವಾಗಲಿ. ಆ ಮೂಲಕ ಯಶ್ ಭಾರತೀಯ ಚಿತ್ರರಂಗದಲ್ಲಿ ಮಿಂಚಲಿ, ಕನ್ನಡವನ್ನು ಬೆಳಗಲಿ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಮ್ಮ ಕಡೆಯಿಂದ ಯಶ್‌ಗೊಂದು ಶುಭಾಶಯ ತಿಳಿಸೋಣ.

#

ಇನ್ನಷ್ಟು ಓದಿರಿ

Scroll to Top