
ದಿ ವಿಲನ್ ಚಿತ್ರ ಅಮೋಘ ಯಶ ಕಂಡಿದೆ ಅಂತ ಬೇರ್‍ಯಾರು ಹೇಳದಿದ್ದರೂ ನಿರ್ದೇಶಕ ಪ್ರೇಮ್ ಮಾತ್ರ ಹೇಳುತ್ತಿದ್ದಾರೆ. ಈ ಚಿತ್ರ ಕನ್ನಡ ಚಿತ್ರರಂಗದಲ್ಲಿಯೇ ಭಯಾನಕ ಕ್ರಾತಿ ಮಾಡಿಬಿಟ್ಟಿದೆ ಅಂತ ಪ್ರೇಮ್ ಭ್ರಮಿಸಿದ್ದಾರೆ. ದುರಂತವೆಂದರೆ ಅದನ್ನು ಯಾರೂ ನಂಬುತ್ತಿಲ್ಲ!
ಈ ಚಿತ್ರ ಬಿಡುಗಡೆಯಾದೇಟಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟಾತಿ ಕೆಟ್ಟ ಮಾತುಗಳೇ ಹರಿದಾಡಿದ್ದವಲ್ಲಾ? ತನ್ನ ನಿರ್ದೇಶನದ ಬಗ್ಗೆ ಹರಡಿಕೊಂಡಿರೋ ಇಂಥಾ ಅವಹೇಳನದಿಂದ ಬೇಸತ್ತ ಪ್ರೇಮ್ ನಿರ್ದೇಶನದಿಂದ ದೂರ ಸರಿಯೋ ನಿರ್ಧಾರ ಮಾಡಿದ್ದಾರಾ? ಖುದ್ದು ಪ್ರೇಮ್ ಅವರೇ ಕೈಗೊಂಡಿರೋ ನಿರ್ಧಾರವೊಂದು ಇಂಥಾ ಪ್ರಶ್ನೆಗಳನ್ನು ಹುಟ್ಟು ಹಾಕಿದೆ!
ಪ್ರೇಮ್ ವಿಲನ್ ಚಿತ್ರದ ನಂತರ ಇಂಟರ್ ನ್ಯಾಷನಲ್ ಲೆವೆಲ್ಲಿನ ಚಿತ್ರವೊಂದನ್ನು ನಿರ್ದೇಶನ ಮಾಡೋದಾಗಿ ಹೇಳಿಕೊಂಡಿದ್ದರಲ್ಲಾ? ಆದರೆ ಅವರೀಗ ಏಕಾಏಕಿ ತಾವು ನಟಿಸೋದಾಗಿ ಘೋಶಿಸಿ ಪೆಂಡಿಂಗ್ ಉಳಿದುಕೊಂಡಿದ್ದ ಚಿತ್ರದಲ್ಲಿ ನಟಿಸಲಾರಂಭಿಸಿದ್ದಾರೆ. ವರ್ಷಾಂತರಗಳ ಹಿಂದೆ ಪ್ರೇಮ್ ಗಾಂಧಿಗಿರಿ ಅಂತೊಂದು ಚಿತ್ರದಲ್ಲಿ ನಟಿಸುತ್ತಿರೋದರ ಬಗ್ಗೆ ಸುದ್ದಿಯಾಗಿತ್ತು. ಆದರೆ ಅದು ನಿಂತೂ ಹೋದಂತಿತ್ತು. ಇದೀಗ ಆ ಚಿತ್ರಕ್ಕೆ ಮತ್ತೆ ಜೀವ ಬಂದಿದೆ. ಪ್ರೇಮ್ ಈಗ ಅದರಲ್ಲಿ ನಟಿಸಲಾರಂಭಿಸಿದ್ದಾರೆ.
ರಘು ಹಾಸನ್ ನಿರ್ದೇಶನದ ಈ ಚಿತ್ರದಲ್ಲಿ ಪ್ರೇಮ್ ನಾಯಕ. ರಾಗಿಣಿ ದ್ವಿವೇದಿ ಮುಖ್ಯ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಅರುಂಧತಿ ನಾಗ್ ಕೂಡಾ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇದೀಗ ಮತ್ತೆ ಆರಂಭವಾಗಿ ಹಗಲೂ ರಾತ್ರಿ ಚಿತ್ರೀಕರಣ ನಡೆಸಿಕೊಳ್ಳುತ್ತಿರೋ ಈ ಚಿತ್ರವೀಗ ಶೇಖಡಾ ಎಪ್ಪತೈದರಷ್ಟು ಚಿತ್ರೀಕರಣ ಮುಗಿಸಿಕೊಂಡಿದೆಯಂತೆ. ಇದಾದ ನಂತರ ಪ್ರೇಮ್ ಸಾಹೇಬರು ನಿರ್ದೇಶನಕ್ಕೆ ಗುಡ್ ಬೈ ಹೇಳಿ ನಟನಾಗಿಯೇ ಮುಂದುವರೆಯೋ ಪ್ಲಾನು ಮಾಡಿದ್ದಾರಾ ಎಂಬುದಕ್ಕೆ ಕಾಲವಷ್ಟೇ ಉತ್ತರ ಹೇಳಬೇಕಿದೆ!
#












































