ಬಿಗ್‌ಬಾಸ್: ಮಾಡರ್ನ್ ರೈತ ಶಶಿಯ ಒರಿಜಿನಲ್ ಹಿಸ್ಟರಿ!

Picture of Cinibuzz

Cinibuzz

Bureau Report


ನಿಜವಾದ ರೈತರು ನಾನಾ ಸಂಕಷ್ಟಗ ಸುಳಿಯಲ್ಲಿ ಸಿಕ್ಕಿ ಏದುಸಿರು ಬಿಡುತ್ತಾ ತಮ್ಮ ಪಾಡಿಗೆ ತಾವು ದುಡಿಯುತ್ತಿದ್ದಾರೆ. ಆದರೆ ಅಂಥಾ ರೈತರ ಹೆಸರು ಹೇಳಿಕೊಂಡು ನಾನಾ ಥರದ ಫಾಯಿದೆ ಗಿಟ್ಟಿಸಿಕೊಳ್ಳುವವರು ಮಾತ್ರ ಎಲ್ಲೆಲ್ಲಿಯೂ ಆರಾಮಾಗಿ ಅಡ್ಡಾಡಿಕೊಂಡಿದ್ದಾರೆ. ಹೀಗೆ ರೈತರ ಹೆಸರಿನಲ್ಲಿ ಲಾಭ ಗುಂಜಿಕೊಳ್ಳೋ ಬುದ್ಧಿ ರಾಜಕಾರಣ, ಸಂಘಟನೆಗಳಲ್ಲಿ ಮಾಮೂಲು. ಇದೀಗ ಅದು ಜನಪ್ರಿಯ ಶೋ ಬಿಗ್‌ಬಾಸ್‌ಗೂ ಅಂಟಿಕೊಂಡಿತಾ ಅಂತೊಂದು ಪ್ರಶ್ನೆ ಹುಟ್ಟಲು ಕಾರಣ ಈ ಸಲದ ಸ್ಪರ್ಧಿಯಾಗಿರೋ ಶಶಿ ಅಲಿಯಾಸ್ ಶಶಿಕುಮಾರ್!

ನೋಡಲು ಹ್ಯಾಂಡ್ಸಮ್ ಆಗೇ ಇರೋ ಶಶಿ ಎಂಬ ಹುಡುಗ ಈಗ ಬಿಗ್ ಬಾಸ್ ಸ್ಪರ್ಧಿ. ಆತ ಈ ಶೋಗೆ ಪ್ರವೇಶ ಪಡೆದುಕೊಂಡಿದ್ದೇ ತಾನೊಬ್ಬ ಮಾಡರ್ನ್ ರೈತ ಎಂಬ ಟ್ರಂಪ್ ಕಾರ್ಡ್ ಮೂಲಕ. ಕೃಷಿಯ ವಿಚಾರದಲ್ಲಿಯೇ ಪದವಿ ಪಡೆದು ಆಧುನಿಕ ಪದ್ಧತಿಗಳ ಮೂಲಕ ಕೃಷಿ ಮಾಡುತ್ತಿರೋದಾಗಿ ಈತ ಬೊಂಬಡಾ ಬಜಾಯಿಸಿದ್ದ. ಇಡೀ ರೈತ ಸಂಕುಲಕ್ಕೇ ಮಾಡರ್ನ್ ಕೃಷಿ ಪದ್ಧತಿಯ ಕ್ರಾಂತಿ ಹರಡಲೆಂದೇ ತಾನು ಬಿಗ್ ಬಾಸ್ ಶೋಗೆ ಬಂದಿರೋದು ಎಂಬರ್ಥದಲ್ಲಿಯೂ ಮಾತಾಡಿದ್ದ. ಆದರೀಗ ಈ ಮಾಡರ್ನ್ ರೈತ ಒರಿಜಿನಲ್ ರೈತನಲ್ಲ ಎಂಬಂಥಾ ಗುಮಾನಿಯೊಂದು ವ್ಯಾಪಕವಾಗಿಯೇ ಹರಿದಾಡುತ್ತಿದೆ!

ಕೃಷಿ ವಿಚಾರದಲ್ಲಿ ಎಂಎಸ್‌ಸಿ ಪದವಿ ಪಡೆದುಕೊಂಡಿರೋ ಶಶಿ ತಾನು ಅಪ್ಪಟ ರೈತ ಅಂತ ಹೇಳಿಕೊಂಡು ಈ ಕ್ಷಣಕ್ಕೂ ಅದನ್ನೇ ನಿರೂಪಿಸಲು ಪ್ರಯತ್ನಿಸುತ್ತಿದ್ದಾನೆ. ಆದರೆ ಈತ ಬಿಗ್‌ಬಾಸ್‌ಗೆ ಬರೋದಕ್ಕೂ ಮುನ್ನ ಕೆಲ ಧಾರಾವಾಹಿಗಳಲ್ಲೂ ನಟಿಸಿದ್ದಾನೆಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗಳೂ ಆರಂಭವಾಗಿದೆ. ಕೆಲ ಮಂದಿ ರೈತನೇನು ಧಾರಾವಾಹಿನಗಳಲ್ಲಿ ನಟಿಸ ಬಾರದಾ ಎಂಬಂಥಾ ಸಿನಿಕ ಪ್ರಶ್ನೆಗಳನ್ನೂ ಕೇಳುತ್ತಿದ್ದಾರೆ.

 

ರೈತನಾದವನು ಧಾರಾವಾಹಿಗಲ್ಲಿ ನಟಿಸಿದರೂ ತಪ್ಪಿಲ್ಲ. ಸಿನಿಮಾ ಹೀರೋ ಆಗಿ ಅವತರಿಸಿದರೂ ಖಂಡಿತೂ ಅದು ತಪ್ಪಲ್ಲ. ಆದರೆ ಬಿಗ್‌ಬಾಸ್ ಸ್ಪರ್ಧಿ ಶಶಿ ವಿಚಾರದಲ್ಲಿ ಇಂಥಾದ್ದೊಂದು ಪ್ರಶ್ನೆ ಎದ್ದಿರೋದೇ ಬೇರೆ ಕಾರಣಗಳಿಂದ. ಶಶಿ ತಾನು ಮಾಡರ್ನ್ ರೈತ ಅಂತ ಹೇಳಿಕೊಂಡಿದ್ದರ ಜೊತೆಗೇ ತಾನು ಜಾನಪದ ಕಲಾವಿದ ಅಂತೊಂದು ವಿಚಾರವನ್ನು ಜಾಹೀರು ಮಾಡಿದ್ದ. ಆದರೆ ಅದೇ ಹೊತ್ತಿನಲ್ಲಿ ತಾನು ಒಂದಷ್ಟು ಧಾರಾವಾಹಿಗಳಲ್ಲಿಯೂ ನಟಿಸಿದ್ದೇನೆ, ತಾನು ನಟನೂ ಹೌದು ಅಂತ ಯಾಕೆ ಹೇಳಿಕೊಂಡಿಲ್ಲ? ಇದು ತಾನು ರೈತ ಅಂತ ಗಿಟ್ಟಿಸಿಕೊಳ್ಳಲು ನೋಡುತ್ತಿರೋ ಫಾಯಿದೆ ಅಸ್ತವ್ಯಸ್ತವಾದೀತೆಂಬ ಭಯದ ಸೂಚನೆಯಲ್ಲವೇ?
ಬಿಗ್‌ಬಾಸ್ ಮನೆಯೊಳಗೂ ಕೂಡಾ ಶಶಿ ತಾನು ಆಧುನಿಕ ರೈತ ಅಂತ ಬಿಂಬಿಸಿಕೊಳ್ಳೋದಕ್ಕಾಗಿಯೇ ಲಾಗಾ ಹಾಕುತ್ತಿದ್ದಾನೆ. ಇತ್ತೀಚೆಗೊಂದು ದಿನ ನವರಸ ನಾಯಕ ಜಗ್ಗೇಶ್ ಬಿಗ್‌ಬಾಸ್ ಮನೆಯೊಳಗೆ ಪ್ರವೇಶ ಮಾಡಿದ್ದರಲ್ಲಾ? ಆ ಸಂದರ್ಭದಲ್ಲಿ ಜಗ್ಗೇಶ್ ಅವರೇ ನಟನಂತೆ ಕಾಣ್ತೀಯಲ್ಲಪ್ಪಾ? ಅಂದಾಗಲೂ ಶಶಿ ನಾನು ಮಾಡರ್ನ್ ರೈತ ಅಂದಿದ್ದ. ಕಳೆದ ವಾರ ನಟಿ ಆಶಿಕಾ ರಂಗನಾಥ್ ನೀವು ಆಕ್ಟರ್ರಾ ಅಂತ ಕೇಳಿದಾಗಲೂ ಈತ ಇಲ್ಲ ನಾನು ಮಾಡರ್ನ್ ಫಾರ್ಮರ್ ಅಂತಲೇ ಹೇಳಿಕೊಂಡಿದ್ದ. ಈತನಿಗೆ ತಾನು ರೈತ ಅಂತ ಭೆನಿಫಿಟ್ ಗಿಟ್ಟಿಸಿಕೊಳ್ಳೋ ಇರಾದೆ ಇಲ್ಲದೇ ಹೋಗಿದ್ದರೆ `ನಾನೂ ಒಂದಷ್ಟು ಸೀರಿಯಲ್ ಗಳಲ್ಲಿ ನಟಿಸಿದ್ದೇನೆ’ ಅಂತ ಹೇಳಿಕೊಳ್ಳಬಹುದಿತ್ತಲ್ಲಾ?

ಇದೆಲ್ಲವೂ ಕೂಡಾ ಶಶಿಯ ಗೇಮ್‌ಪ್ಲಾನನ್ನು ಜಾಹೀರು ಮಾಡುತ್ತವೆ. ಅಷ್ಟಕ್ಕೂ ಈತ ತನ್ನೂರಲ್ಲಿ ಅದೇನು ಕೃಷಿ ಮಾಡಿದ್ದಾನೋ, ಅದ್ಯಾವ ಥರದಲ್ಲಿ ಉಳುಮೆ ಮಾಡಿದ್ದಾನೋ ಎಂಬುದು ಬಿಗ್‌ಬಾಸ್ ಆಯೋಜಕರಿಗೂ ಗೊತ್ತಿದೆ ಅನ್ನಲಾಗೋದಿಲ್ಲ. ಕೃಷಿಯಲ್ಲಿ ಎಂಎಸ್‌ದಸಿ ಮಾಡಿಕೊಂಡ ಮಾತ್ರಕ್ಕೆ, ಊರಲ್ಲಿ ಒಂದಷ್ಟು ಜಮೀನಿಟ್ಟುಕೊಂಡು ಎತ್ತು ಕಟ್ಟೋ ಜಾಗದಲ್ಲಿ ಟ್ರ್ಯಾಕ್ಟರು ನಿಂತೇಟಿಗೆ ಅಂಥವರನ್ನು ಮಾಡರ್ನ್ ರೈತ ಅನ್ನಲಾಗೋದಿಲ್ಲ. ರೈತರ ಶ್ರಮವನ್ನು ಗಿಮಿಕ್ಕುಗಳ ಮೂಲಕ ಯಾರು ಏನಕ್ಕೆ ಬಳಸಿಕೊಂಡರೂ ಅದು ಕ್ಷಮಾರ್ಹವಲ್ಲ. ಒಟ್ಟಾರೆಯಾಗಿ ಬಿಗ್‌ಬಾಸ್ ಪ್ರೇಕ್ಷಕರಿಗೂ ಕೂಡಾ ಶಶಿಯ ಮೇಲೊಂದು ಬಲವಾದ ಗುಮಾನಿ ಇದ್ದೇ ಇದೆ.

ಪರ ವಿರೋಧದ ಚರ್ಚೆಗಳೇನೇ ಇದ್ದರೂ ಶಶಿ ನಿಖರವಾಗಿಯೇ ತಾನೊಬ್ಬ ನಟ ಎಂಬ ವಿಚಾರವನ್ನು ಮುಚ್ಚಿಟ್ಟು ರೈತನ ಅವತಾರವೆತ್ತಿದ್ದಾನೆ. ಇಂಥಾ ಆತ್ಮವಂಚನೆಯ ಜೊತೆಗೇ ಬಿಗ್‌ಬಾಸ್ ಹೊಸ್ತಿಲು ದಾಟಿದವ ರಿಂದ ಅದೆಂಥಾ ಪ್ರಾಮಾಣಿಕ ಸ್ಪರ್ಧೆ ನಿರೀಕ್ಷಿಸಲಾದೀತು?

#

ಇನ್ನಷ್ಟು ಓದಿರಿ

Scroll to Top