ಗಜ ಚಂಡಮಾರುತದ ಬಿರುಸಿಗೆ ಬೆದರಿತೇ ತಲೈವಾ ಚಿತ್ರ?

Picture of Cinibuzz

Cinibuzz

Bureau Report

ರಜನೀಕಾಂತ್ ಅಭಿನಯದ ೨.೦ ಚಿತ್ರ ವಿಶ್ವಾಧ್ಯಂತ ತೆರೆಗಾಣಲು ರೆಡಿಯಾಗಿದೆ. ಮುಂದಿನ ವಾರವೇ ಈ ಚಿತ್ರ ಬಿಡುಗಡೆಯಾಗಲು ಮುಹೂರ್ತವೂ ನಿಗಧಿಯಾಗಿದೆ. ಆದರೆ ತಮಿಳುನಾಡು ದಿಕ್ಕಿನಿಂದ ಬರುತ್ತಿರೋ ಸುದ್ದಿಗಳು, ಅಲ್ಲಿನ ವಿದ್ಯಮಾನಗಳು ಮಾತ್ರ ಈ ಚಿತ್ರ ಮುಂದಿನ ವಾರ ಬಿಡುಗಡೆಯಾಗೋದೇ ಡೌಟು ಅನ್ನೋ ಸಂದೇಶವನ್ನೇ ಹರಡುತ್ತಿವೆ!

ವಿಶ್ವದ ತುಂಬಾ ನಿರೀಕ್ಷೆಯ ಕಾವೇರಿಸಿರೋ ಈ ಚಿತ್ರ ಬಿಡುಗಡೆಗೆ ಯಾವ ಅಡ್ಡಿಯಾದೀತೆಂಬ ಪ್ರಶ್ನೆ ಕಾಡೋದು ಸಹಜವೇ. ಹಾಗಿದ್ದೂ ೨.೦ ಬಿಡುಗಡೆಗೆ ಅಡ್ಡಿಯಾಗಿರೋ ವಿಚಾರ ಯಾವುದು ಅಂತ ನೋಡ ಹೋದರೆ ಎದುರಾಗೋದು ತಮಿಳು ನಾಡನ್ನೇ ಅದುರಿಸಿ ಹಾಕಿರುವ ಗಜ ಚಂಡ ಮಾರುತ!

ಗಜ ಚಂಡಮಾರುತ ತಮಿಳುನಾಡಲ್ಲಿ ಎಂಥಾ ಅನಾಹುತ ಸೃಷ್ಟಿಸಿದೆ ಎಂಬುದನ್ನು ಬಿಡಿಸಿ ಹೇಳೋ ಅವಶ್ಯಕತೆಯಿಲ್ಲ. ಮಳೆಗಾಲಲ ಮುಗಿಯುತ್ತಲೇ ಏಕಾಏಕಿ ತಮಿಳುನಾಡಿನ ಕರಾವಳಿಗೆ ಗಜ ಚಂಡ ಮಾರುತ ಬಂದಪ್ಪಳಿಸಿದೆ. ಅದೆಷ್ಟೋ ಜಿಲ್ಲೆಗಳು ಜಲಾವೃತವಾಗಿವೆ. ಮನೆ ಮಾರುಗಳು ರಣ ಗಾಳಿಗೆ ನಾಮಾವಶೇಷ ಹೊಂದಿ ಅಗಾಧ ಪ್ರಮಾಣದ ಜೀವ ಹಾನಿಯೂ ಸಂಭವಿಸಿದೆ.

ಇಂಥಾ ಸೂತಕದ ಛಾಯೆ ಇಡೀ ತಮಿಳುನಾಡನ್ನೇ ಆವರಿಸಿರುವಾಗ ೨.೦ ಚಿತ್ರ ಬಿಡುಗಡೆಯಾಗೋದರಲ್ಲಿ ಅರ್ಥವಿದೆಯಾ? ಹೀಗೊಂದು ಪ್ರಶ್ನೆಯನ್ನು ತಮಿಳುನಾಡಿನ ಪ್ರಜ್ಞಾವಂತರು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುತ್ತಿದ್ದಾರೆ. ತಮಿಳುನಾಡಿನ ಮಂದಿ ಸಿನಿಮಾ ಪ್ರೇಮಿಗಳು. ಈವತ್ತಿಗೆ ರಜನೀಕಾಂತ್ ವಿಶ್ವಮಟ್ಟದಲ್ಲಿಯೇ ಮಾರ್ಕೆಟ್ಟು ಹೊಂದಿರೋ ರಜನೀಕಾಂತ್ ಈ ಹಂತ ತಲುಪಿದ್ದು ತಮಿಳುನಾಡಿನ ಮಂದಿಯ ಬೆವರ ಹಣದಿಂದ, ಪ್ರೀತಿಯಿಂದ. ಹಾಗೆ ಗೆಲ್ಲಲು ಕಾರಣವಾದ ಜನರೇ ಸಂಕಷ್ಟದಲ್ಲಿರುವಾಗ ೨.೦ ಚಿತ್ರ ಬಿಡುಗಡೆ ಮಾಡೋದು ಮನುಷ್ಯತ್ವವಲ್ಲ ಎಂಬ ಕೂಗೂ ತಮಿಳು ನಾಡಿನ ತುಂಬಾ ಕೇಳಿ ಬರುತ್ತಿದೆ.

ಇದು ಸ್ವತಃ ರಜನೀಕಾಂತ್ ಅವರೂ ಕೂಡಾ ಆತ್ಮಾವಲೋಕನ ಮಾಡಲು ಪ್ರೇರೇಪಿಸಿದೆ. ಇನ್ನು ಕಲೆಕ್ಷನ್ನಿನ ವ್ಯಾವಹಾರಿಕ ದೃಷ್ಟಿಯಿಂದ ನೋಡಿದರೂ ತಮಿಳುನಾಡಿನ ವಾತಾವರಣ ಪ್ರತಿಕೂಲವಾಗಿಯೇ ಇದೆ. ಇದೆಲ್ಲದರಿಂದಾಗಿ ಹಠಾತ್ತನೆ ೨.೦ ಚಿತ್ರ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗೋ ಎಲ್ಲ ಲಕ್ಷಣಗಳೂ ಇವೆ. ದಿನದೊಪ್ಪತ್ತಿನಲ್ಲಿಯೇ ಚಿತ್ರ ತಂಡ ಈ ನಿರ್ಧಾರ ಪ್ರಕಟಿಸೋ ಸಾಧ್ಯತೆಗಳಿವೆ! 

#

ಇನ್ನಷ್ಟು ಓದಿರಿ

Scroll to Top