
ಬಿಗ್‌ಬಾಸ್ ಶೋನ ಪ್ರತೀ ಸೀಜನ್ನಿನಲ್ಲಿಯೂ ಚಿತ್ರ ವಿಚಿತ್ರ ಆಸಾಮಿಗಳು ಇದ್ದೇ ಇರುತ್ತಾರೆ. ಈ ಸೀಜನ್ ಕೂಡಾ ಅದಕ್ಕೆ ಹೊರತಾಗಿಲ್ಲ. ಆಂಡಿಯೆಂಬಾತನಂತೂ ಪ್ರೇಕ್ಷಕರಿಗೇ ಅಸಹ್ಯ ಹುಟ್ಟಿಸಿದ್ದಾನೆ. ಒಂದು ವೇಳೆ ಪ್ರೇಕ್ಷಕರ ಓಟೇ ಅಂತಿಮ ಅಂತಾಗಿದ್ದರೆ ಈತ ಎರಡೇ ವಾರಕ್ಕೆ ಎಗರಿ ಬೀಳುತ್ತಿದ್ದ. ಈ ಆಂಡಿ, ಅಕ್ಷತಾ ಮುಂತಾದ ವಿಚಿತ್ರ ಎಲಿಮೆಂಟುಗಳ ಸಾಲಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವಾತ ರಾಕೇಶ್!
ತಾನು ರೇಡಿಯೋ ಜಾಕಿ, ಮಹಾನ್ ಸಾಧಕ ಮತ್ತು ಅಖಂಡ ಇನ್ನೂರು ಹುಡುಗೀರನ್ನು ಮೇಂಟೇನು ಮಾಡಿದ ಸಾಧಕ ಅಂತ ಪುಂಗುತ್ತಲೇ ಬಿಗ್‌ಬಾಸ್ ಮನೆ ಸೇರಿಕೊಂಡವನು ರಾಕಿ. ಈತ ಎಂಥಾ ಮುಠ್ಠಾಳನೆಂದರೆ, ಇನ್ನೂರು ಹುಡುಗೀರ ಜೊತೆ ಚಕ್ಕಂದ ಆಡಿರೋದೇ ತನ್ನ ಜೀವಮಾನದ ಸಾಧನೆ ಎಂಬುದು ಇವನ ಮನಸ್ಥಿತಿ.
ಇಂಥಾ ರಾಕಿ ಬಿಗ್‌ಬಾಸ್ ಮನೆಯೊಳಗೂ ಕೂಡಾ ಮೆತ್ತಗೆ ಕೃಷ್ಣಾವತಾರ ಪ್ರದರ್ಶಿಸುತ್ತಿದ್ದಾನೆ. ಆರಂಭದಲ್ಲಿ ಈತನನ್ನು ಕಂಡವರು ಬೇರೆಲ್ಲ ಏನೇ ಇದ್ದರೂ ಗಟ್ಟಿ ಸ್ಪರ್ಧಿಯಾಗಿ ನೆಲೆ ಕಂಡುಕೊಳ್ಳುತ್ತಾನೆಂಬ ನಿರೀಕ್ಷೆ ಇತ್ತು. ಆದರೆ ಎರಡೇ ವಾರಕ್ಕೆ ಅಂಥಾ ನಿರೀಕ್ಷೆಗಳ ತಿಥಿಯಾಗಿದೆ. ಅದಕ್ಕೆ ಕಾರಣವಾಗಿರೋದು ಆತನ ವರ್ತನೆ!

ಯಾವುದೇ ಟಾಸ್ಕ್ ಅಂತ ಬಂದರೂ ರಾಕೇಶನ ಪಾಲ್ಗೊಳ್ಳುವಿಕೆ ಪರಿಣಾಮಕಾರಿಯಾಗಿರೋದಿಲ್ಲ. ಈತ ಸದ್ದು ಮಾಡೋದೇ ಪಾಂಡವಪುರದ ಡ್ರಾಮಾ ಕ್ವೀನ್ ಅಕ್ಷತಾ ಜೊತೆಗಿನ ರೊಮ್ಯಾನ್ಸಿನ ಕಾರಣಕ್ಕೆ. ತಾನು ಮದುವೆಯಾದವಳು, ತಮ್ಮ ಮಾತು ವರ್ತನೆ ಕೌಂಟ್ ಆಗುತ್ತಿರುತ್ತೆ ಎಂಬ ಕನಿಷ್ಠ ಜ್ಞಾನ ಅಕ್ಷತಾಗೂ ಇಲ್ಲ. ಓರ್ವ ಸಂಸಾರಸ್ಥೆಯ ಜೊತೆ ಹೀಗೆಲ್ಲ ವರ್ತಿಸಿದರೆ ಅದರ ಪರಿಣಾಮ ಹೇಗಿರುತ್ತೆ? ಬಿಗ್‌ಬಾಸ್ ಶೋ ಮುಗಿದ ನಂತರ ಅವಳ ಪಾಡೇಢನಾಗಬಹುದೆಂಬ ಮನುಷ್ಯತ್ವ ರಾಕಿಗೂ ಇದ್ದಂತಿಲ್ಲ. ಒಟ್ಟಾರೆಯಾಗಿ ಬಿಗ್‌ಬಾಸ್ ಮಂದಿ ಮಾತ್ರ ಇವರಿಬ್ಬರ ಗುಸುಗುಸು ಪಿಸುಪಿಸುಗಳಿಗೂ ಫೋಕಸ್ ಮಾಡಿ ಪ್ರೇಕ್ಷಕರನ್ನು ಸೆಳೆಯೇ ಕಸರತ್ತು ಮಾಡುತ್ತಿದ್ದಾರೆ.
ಈ ಪುಣ್ಯಾತ್ಮ ಕರ್ನಾಟಕದಲ್ಲಿ ರೇಡಿಯೋ ಜಾಕಿಯಾಗಿದ್ದವನಂತೆ. ಆದರೆ ಈತನ ಭೀಕರ ಕನ್ನಡದ ಮುಂದೆ ಈ ಹಿಂದೆ ಇದ್ದ ಆದಮ್ ಅದೆಷ್ಟೋ ವಾಸಿ. ಟಾಸ್ಕಿಗಿಂತಲೂ ಹುಡುಗಿಯೊಬ್ಬಳ ಸಾಮಿಪ್ಯಕ್ಕಾಗಿಯೇ ಬಕಪಕ್ಷಿಯಂತಾಡೋ ರಾಕಿ ಟಾಸ್ಕ್ ಆಟವೇ ಮುಖ್ಯ ಅಂತಾಗಿದ್ದರೆ ಖಂಡಿತಾ ಒಂದು ವಾರವೂ ಒಳಗಿರೋ ಯೋಗ್ಯತೆ ಇಲ್ಲದವನು!
#












































